Asianet Suvarna News Asianet Suvarna News

ಚುನಾವಣೆಯಲ್ಲಿ ಠೇವಣಿ ಕಳಕೊಂಡ ದ್ವಾರಕೀಶ್‌ರನ್ನು 'ಆಪ್ತಮಿತ್ರ' ವಿಷ್ಣುವರ್ಧನ್ ಗೆಲ್ಲಿಸಿದ್ರು!

ಕಿಟ್ಟುಪುಟ್ಟು ಸಿನಿಮಾದಿಂದ ಶುರುವಾದ ವಿಷ್ಣುವರ್ಧನ್ ಹಾಗು ದ್ವಾರಕೀಶ್ ಸ್ನೇಹದಲ್ಲಿ ಮಧ್ಯೆ ಒಮ್ಮೆ ಬಿರುಕು ಮೂಡಿದ್ದರೂ ಮತ್ತೆ ಮುಂದುವರೆದಿತ್ತು. ದ್ವಾರಕೀಶ್ ಅವರು ತಮ್ಮ ಸ್ನೇಹಿತನ ನೆನಪಿಗಾಗಿ 'ವಿಷ್ಣುವರ್ಧನ' ಹೆಸರಿನ ಚಿತ್ರವನ್ನು ನಿರ್ಮಾಣ ಮಾಡಿ ಸಕ್ಸಸ್..

Flashback Sandalwood Actor Director Dwarakish contest election from Kannada nadu party and lost deposit srb
Author
First Published Apr 17, 2024, 5:22 PM IST

ಸಿನಿಮಾದಲ್ಲಿ ಠೇವಣಿ ಕಳೆದುಕೊಂಡಿದ್ದ ದ್ವಾರಕೀಶ್ (Dwarakish)ಅವರು ಚುನಾವಣೆಗೂ ಸ್ಪರ್ಧಿಸಿ ಸೋತಿದ್ದರು. ವಿಜಯ್ ಸಂಕೇಶ್ವರ್ (Vijay Sankeshwar)ಅವರು ತಮ್ಮದೇ ಆದ ಪ್ರಾದೇಶಿಕ ಪಕ್ಷ 'ಕನ್ನಡ ನಾಡು (Kannada Nandu Party)'ಕಟ್ಟಿದ್ದರು. ಅದಕ್ಕೆ ಕಾರಣ, ಬಿಜೆಪಿಯಲ್ಲಿ ತಮಗೆ ಅನ್ಯಾಯವಾಗುತ್ತಿದೆ ಎಂಬ ಸಂಕೇಶ್ವರ್ ಅವರಿಗಿದ್ದ ಮನಸ್ಥಿತಿ. 224 ವಿಧಾನಸಭಾ ಕ್ಷೇತ್ರಗಳಲ್ಲೂ ವಿಜಯ್ ಸಂಕೇಶ್ವರ್ ನೇತೃತ್ವದ ಕನ್ನಡ ನಾಡು ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಸಮಯದಲ್ಲಿ ನಟ-ನಿರ್ಮಾಪಕ ದ್ವಾರಕೀಶ್ ಅವರು ಆಪ್ತಮಿತ್ರ (Apthamitra Movie)ಚಿತ್ರದ ನಿರ್ಮಾಣಕಾರ್ಯದಲ್ಲಿ ಬ್ಯುಸಿಯಾಗಿದ್ದರು. ಆದರೂ ಸಹ ಕನ್ನಡ ನಾಡು ಪಕ್ಷದ ಮೂಲಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 

ಭಾರೀ ಬಿರುಸಿನ ಪ್ರಚಾರದ ನಡುವೆಯೂ ನಟ ದ್ವಾರಕೀಶ್ ಗೆಲ್ಲಲಿಲ್ಲ. ಅಷ್ಟೇ ಅಲ್ಲ, ಠೇವಣಿ ಕಳೆದುಕೊಂಡರು. ಅದಿರಲಿ, ಸ್ವತಃ ಪಕ್ಷದ ಸಂಸ್ಥಾಪಕರಾದ ವಿಜಯ್ ಸಂಕೇಶ್ವರ್ ಅವರು ಹುಬ್ಬಳ್ಳಿ ಗ್ರಾಮೀಣ ಪ್ರದೇಶದಿಂದ ನಿಂತು ಸೋತುಹೋದರು. ಕನ್ನಡನಾಡು ಪಕ್ಷದಿಂದ ಗೆದ್ದವರು ಒಬ್ಬರೇ, ಅವರು ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಿಂದ ನರಸಿಂಹ ನಾಯಕ್. ಸಿನಿಮಾದಲ್ಲಿ ಅದೇ ಕಾಲದಲ್ಲಿ ಸೋತು ಸುಣ್ಣವಾಗಿ ಕಂಗಾಲಾಗಿದ್ದ ದ್ವಾರಕೀಶ್ ಅವರು ಚುನಾವಣೆಯಲ್ಲೂ ಸೋಲುವ ಮೂಲಕ ಡಬಲ್ ಸೋಲುಂಡು ಹತಾಶರಾಗಿದ್ದರು ಎನ್ನಲಾಗಿದೆ. 

ಆದರೆ, ಚುನಾವಣೆಯಲ್ಲಿ ಸೋತರೇನಂತೆ, ದ್ವಾರಕೀಶ್ ನಿರ್ಮಾಣದ ಆಪ್ತಮಿತ್ರ ಚಿತ್ರವು ಸೂಪರ್ ಹಿಟ್ ದಾಖಲಿಸಿತು. ನಿರ್ಮಾಪಕರಾಗಿದ್ದ ದ್ವಾರಕೀಶ್ ಅವರಿಗೆ ಬಹಳಷ್ಟು ಹಣ ಹರಿದುಬಂತು. ಆದರೆ, ನಟಿ ಸೌಂದರ್ಯ ಅವರು ದುರಂತ ಸಾವು ಕಂಡು ಆಪ್ತಮಿತ್ರ ಚಿತ್ರಕ್ಕೊಂದು ದುರಂತದ ಛಾಯೆ ಆವರಿಸಿತು. ಆದರೆ ಎಲ್ಲವನ್ನೂ ಮೀರಿನಿಂತು ಆಪ್ತಮಿತ್ರ ಚಿತ್ರವು ಬ್ಲಾಕ್‌ಬಸ್ಟರ್‌ ಚಿತ್ರವಾಗಿ ದ್ವಾರಕೀಶ್ ಅವರು ಮತ್ತೆ ಮೇಲೆದ್ದು ನಿಂತರು. ಬಳಿಕ, ಅವರ ಮಗ ಯೋಗೇಶ್ ದ್ವಾರಕೀಶ್ ಕೂಡ ತಂದೆಯಂತೆ ನಿರ್ಮಾಪಕರಾದರು. 

ಕಿಟ್ಟುಪುಟ್ಟು ಸಿನಿಮಾದಿಂದ ಶುರುವಾದ ವಿಷ್ಣುವರ್ಧನ್ ಹಾಗು ದ್ವಾರಕೀಶ್ ಸ್ನೇಹದಲ್ಲಿ ಮಧ್ಯೆ ಒಮ್ಮೆ ಬಿರುಕು ಮೂಡಿದ್ದರೂ ಮತ್ತೆ ಮುಂದುವರೆದಿತ್ತು. ದ್ವಾರಕೀಶ್ ಅವರು ತಮ್ಮ ಸ್ನೇಹಿತನ ನೆನಪಿಗಾಗಿ 'ವಿಷ್ಣುವರ್ಧನ (Vishnuvardhana)ಹೆಸರಿನ ಚಿತ್ರವನ್ನು ನಿರ್ಮಾಣ ಮಾಡಿ ಸಕ್ಸಸ್ ಕಂಡಾಗ ಆ ಬಗ್ಗೆ ಟೀಕೆ ಮಾಡಿದ್ದರು. ಫ್ರೆಂಡ್‌ಶಿಪ್ಅನ್ನು ಎನ್‌ಕ್ಯಾಶ್ ಮಾಡಿಕೊಂಡರು ಎಂದು ಹಲವರು ಟೀಕೆ ಮಾಡಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದರೆ, ಅವೆಲ್ಲವೂ ಸ್ವಲ್ಪ ದಿನಗಳಲ್ಲಿ ತಣ್ಣಗಾಗಿ ಮತ್ತೆ ದ್ವಾರಕೀಶ್ ಮೊದಲಿನಂತೆ ಸಿನಿಮಾ ನಿರ್ಮಾಣದ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. 

ಒಟ್ಟನಲ್ಲಿ, ಸಿನಿಮಾ ಜತೆಗೆ ರಾಜಕೀಯದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು ದ್ವಾರಕೀಶ್. ಸಿನಿಮಾದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದ ದ್ವಾರಕೀಶ್ ಅವರು ರಾಜಕೀಯದಲ್ಲಿ ಕಾಲಿಡಲು ಸಹ ಸಾಧ್ಯವಾಗಲಿಲ್ಲ ಎಂಬುದು ವಿಪರ್ಯಾಸ ಎನಿಸಿದರೂ ಸತ್ಯ ಸಂಗತಿ!

Follow Us:
Download App:
  • android
  • ios