Asianet Suvarna News Asianet Suvarna News

ಧರ್ಮದ ಹೆಸರಲ್ಲಿ ರಾಜಕೀಯ ಮಾಡೋದನ್ನು ಜನ ಒಪ್ಪಲ್ಲ: ಯತೀಂದ್ರ ಸಿದ್ದರಾಮಯ್ಯ

ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿಗೆ ಸಿದ್ರಾಮುಲ್ಲಾಖಾನ್ ಎಂಬ ಹೇಳಿಕೆ ವಿಚಾರಕ್ಕೆ ಆಕ್ರೋಶಗೊಂಡ ಯತೀಂದ್ರ ಸಿದ್ದರಾಮಯ್ಯ ಅವರು, ಯಾರು ಎಲ್ಲ ಸಮುದಾಯಕೋಸ್ಕರ ಕೆಲಸ ಮಾಡುತ್ತಾರೆಯೋ ಅವರನ್ನು ಒಂದು ಸಮುದಾಯದ ಪರ ಎಂದು ಬಿಂಬಿಸುತ್ತಾರೆ. ಇದು ಬಿಜೆಪಿಗರ ಹಳೆಯ ಟ್ಯಾಕ್ಟಿಕ್ಸ್ ಎಂದರು.

People do not Agree with doing Politics in the name of Religion Says Dr Yathindra Siddaramaiah grg
Author
First Published Feb 26, 2024, 4:30 AM IST

ಗದಗ(ಫೆ.26):  ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರನ್ನು ಜನ ಎಂದಿಗೂ ಒಪ್ಪುವುದಿಲ್ಲ, ಯಾರು ಕೆಲಸ ಮಾಡಿದ್ದಾರೋ ಅವರಿಗೆ ಜನ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಅವರು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗದಗ ನಗರಕ್ಕೆ ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಸಂಸದ ಅನಂತಕುಮಾರ ಹೆಗಡೆ, ಮುಖ್ಯಮಂತ್ರಿಗೆ ಸಿದ್ರಾಮುಲ್ಲಾಖಾನ್ ಎಂಬ ಹೇಳಿಕೆ ವಿಚಾರಕ್ಕೆ ಆಕ್ರೋಶಗೊಂಡ ಅವರು, ಯಾರು ಎಲ್ಲ ಸಮುದಾಯಕೋಸ್ಕರ ಕೆಲಸ ಮಾಡುತ್ತಾರೆಯೋ ಅವರನ್ನು ಒಂದು ಸಮುದಾಯದ ಪರ ಎಂದು ಬಿಂಬಿಸುತ್ತಾರೆ. ಇದು ಬಿಜೆಪಿಗರ ಹಳೆಯ ಟ್ಯಾಕ್ಟಿಕ್ಸ್ ಎಂದರು.ಅನಂತಕುಮಾರ ಹೆಗಡೆ 5 ವರ್ಷ ಏನೂ ಕೆಲಸ ಮಾಡಿಲ್ಲ, ಅವರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. 5 ವರ್ಷ ಜನರ ಮುಂದೆ ಬರಲಿಲ್ಲ, ಪಾರ್ಲಿಮೆಂಟ್‌ನಲ್ಲಿ ಒಂದೂ ಪ್ರಶ್ನೆ ಕೇಳಲಿಲ್ಲ, ಈಗ ಎಲೆಕ್ಷನ್ ಬಂದಿದೆ ಎಂದು ಹಿಂದೂ -ಮುಸ್ಲಿಂ ಮಧ್ಯೆ ಭಿನ್ನಾಭಿಪ್ರಾಯ ತರಲು ಯತ್ನಿಸುತ್ತಿದ್ದಾರೆ. ಕರ್ನಾಟಕದ ಜನರ ಪರ ಒಂದೇ ಒಂದು ಪ್ರಶ್ನೆ ಕೇಳದ ಅನಂತಕುಮಾರ್ ಅವರಿಗೆ ಜನರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಅಯೋಧ್ಯೆ ರೈಲಿಗೆ ಬೆಂಕಿ ಹಚ್ತೀನೆಂದ ಮುಸ್ಲಿಂ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ರೈಲ್ವೆ ಇಲಾಖೆ ನೌಕರ

ಧಾರ್ಮಿಕ ದತ್ತಿ ವಿಧೇಯಕ ವಿಷಯ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ದೇವಸ್ಥಾನದ ಹುಂಡಿಗೆ ಸರ್ಕಾರ ಕೈ ಹಾಕಿದೆ ಅನ್ನೋದು ಫೇಕ್ ನ್ಯೂಸ್. ಸರ್ಕಾರ ಮತ್ತು ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ದೇವಾಲಯದ ಹಣ ದೇವಾಲಯಕ್ಕೇ ಬಳಕೆಯಾಗುತ್ತದೆ. ಸ್ಪಷ್ಟೀಕರಣ ಕೊಟ್ಟರೂ ಸೋಷಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂದರು.

ತಪ್ಪು ಮಾಹಿತಿ ಹರಡುತ್ತಿರುವ ಬಿಜೆಪಿ ನಾಯಕರು, ಬೆಂಬಲಿಗರ ಮೇಲೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸದನದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಸದನದಲ್ಲಿ ಸಂವಿಧಾನ ಬದ್ಧವಾಗಿ ಮಾತನಾಡಬೇಕು. ಆದರೂ ಸದನದಲ್ಲಿ ಘೋಷಣೆ ಕೂಗಿ ಸದನದ ಗಾಂಭೀರ್ಯತೆ ಹಾಳು ಮಾಡಿದ್ದಾರೆ ಬೇಸರ ವ್ಯಕ್ತ ಪಡಿಸಿದರು.

ಮುಖ್ಯಮಂತ್ರಿ ನಿವಾಸಕ್ಕೆ ಖರ್ಚಾಗಿರುವ ಹಣದ ಕುರಿತು ಚರ್ಚೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬದಲಾದಾಗ ಕೆಲವು ರಿಪೇರಿ ನಡೆಯುವುದು ಹೊಸತಲ್ಲ. ಖರ್ಚಾಗೋದು ಸರ್ಕಾರಿ ನಿವಾಸಕ್ಕೆ ಸ್ವಂತ ನಿವಾಸಕ್ಕಲ್ಲ, ಮುಂದೆ ಸಿಎಂ ಆಗುವವರೂ ಆ ಸವಲತ್ತು ಪಡೆಯುತ್ತಾರೆ. ಈ ಹಿಂದೆ ಸಿಎಂ ಆದವರೂ ಸಾಕಷ್ಟು ಖರ್ಚು ಮಾಡಿದ್ದಾರೆ. ತಂದೆಯವರು ಸಿಎಂ ಆಗಿದ್ದಾಗ ಆ ಮನೆಯಲ್ಲಿ ಲಿಫ್ಟ್ ಇರಲಿಲ್ಲ. ನಂತರದ ಮುಖ್ಯಮಂತ್ರಿಗಳು ಅಲ್ಲಿ ಲಿಫ್ಟ್ ಹಾಕಿಸಿದ್ದಾರೆ. ಸರಿ ಸುಮಾರು 75 ವರ್ಷ ಮೇಲಾಗಿರುವ ನಿವಾಸಗಳು ರಿಪೇರಿ ವರ್ಕ್ ಅತ್ಯವಶ್ಯ, ಅನಿವಾರ್ಯವಾದ ಖರ್ಚು, ದುಂದುವೆಚ್ಚವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನಕ್ಕೆ ಅಪ್ಪನ ಮನೆಯ ಹಣ ಅಲ್ಲ ಎಂಬ ಅನಂತಕುಮಾರ್ ಹೆಗಡೆ ಹೇಳಿಕೆ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಕರ್ನಾಟಕದಿಂದ ಕಟ್ಟಿರುವ ತೆರಿಗೆ, ಕೇಂದ್ರದ ಅಪ್ಪನ ಮನೆಯದ್ದಲ್ಲ ಅಂತಾ ನಾವೂ ಮಾತನಾಡುತ್ತೇವೆ. ಕೇಂದ್ರ ಸರ್ಕಾರ ಎಲ್ಲರಿಗೂ ನ್ಯಾಯಯುತ ಹಂಚಿಕೆ ಮಾಡಿ ಅಂತಾ ಹೇಳುತ್ತಿದ್ದೇವೆ. ನಾವು ಕಟ್ಟಿದ ಅಷ್ಟೂ ತೆರಿಗೆ ನಮಗೆ ಕೊಡಿ ಅಂತಾ ಕೇಳುತ್ತಿಲ್ಲ ಎಂದರು.

₹4 ಲಕ್ಷ ಕೋಟಿಯಷ್ಟು ತೆರಿಗೆ ಸಂಗ್ರಹಣವಾಗುತ್ತಿದೆ, ರುಪಾಯಿ ಕೊಟ್ಟರೆ 12 ಪೈಸೆ ವಾಪಸ್ ಬರ್ತಿದೆ, ಹಿಂದುಳಿದ ರಾಜ್ಯಗಳಿಗೆ ಕೊಡಲಿ, ಬೇಡ ಎನ್ನುವುದಿಲ್ಲ, ನಮಗ್ಯಾಕೆ ಅನ್ಯಾಯ ಮಾಡುತ್ತಿದ್ದೀರಿ. ಒಂದು ರುಪಾಯಿಗೆ 12 ಪೈಸೆ ಬದಲು 20ರಿಂದ 25 ಪೈಸೆ ಕೊಡಿ ಅಂತಿದೀವಿ. ಅನ್ಯಾಯ ಸರಿ ಪಡಿಸಲು ಕೇಳಿದ್ದೇವೆ ಎಂದರು.

ಗದಗ ತೋಂಟದಾರ್ಯ ಮಠ V/s ಶಿರಹಟ್ಟಿ ಫಕೀರೇಶ್ವರ ಮಠ: ಏನಿದು ಭಾವೈಕ್ಯತೆ, ಕರಾಳದಿನ ಸಂಘರ್ಷ?

ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ವಿಚಾರದ ಹಿಂದೆ ಕಾಂಗ್ರೆಸ್ ಕೈವಾಡ ಎನ್ನುವ ಆರೋಪ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಗೋ ಬ್ಯಾಕ್ ಅಭಿಯಾನದ ಹಿಂದೆ ನಮ್ಮ ಪಕ್ಷದ ಕೈವಾಡ ಹೇಗೆ ಇರೋದಕ್ಕೆ ಸಾಧ್ಯ? ಅವರ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತು ಆ ರೀತಿ ಮಾಡಿದ್ದಾರೆ ಅಷ್ಟೇ ಎಂದರು.

ಲೋಕಸಭೆ ಚುನಾವಣೆಯಲ್ಲಿ ಇಷ್ಟೇ ಸ್ಥಾನ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ, ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದ್ದೇವೆ. ಜನರ ಪರವಾಗಿ ಕೆಲಸ ಮಾಡಿದವರ ಪರವಾಗಿ ಜನ ಹೆಚ್ಚಿನ ಸೀಟ್ ಬರುತ್ತದೆ ಎನ್ನುವ ವಿಶ್ವಾಸವಿದೆ ಎಂದರು. ಸ್ಥಳೀಯ ಮುಖಂಡರು, ಕುರುಬರ ಸಮಾಜದ ಹಿರಿಯರು ಹಾಜರಿದ್ದರು.

Follow Us:
Download App:
  • android
  • ios