Asianet Suvarna News Asianet Suvarna News

ನಮ್ಮದು ಪ್ರಪಂಚದಲ್ಲೇ ಮಾದರಿ ಸರ್ಕಾರ: ಸಚಿವ ಕೃಷ್ಣ ಬೈರೇಗೌಡ

ನಮ್ಮ ಸರ್ಕಾರ ಇಡೀ ಪ್ರಪಂಚದಲ್ಲೇ ಮಾದರಿ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

Ours is a model government in the world Says Minister Krishna Byre Gowda gvd
Author
First Published Oct 22, 2023, 1:29 PM IST

ಚಾಮರಾಜನಗರ (ಅ.22): ನಮ್ಮ ಸರ್ಕಾರ ಇಡೀ ಪ್ರಪಂಚದಲ್ಲೇ ಮಾದರಿ ಸರ್ಕಾರ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಚಾಮರಾಜನಗರದ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಪ್ರಪಂಚದಲ್ಲೇ ಯಾವುದೇ ಸರ್ಕಾರಗಳು ನೀಡದ 5 ಗ್ಯಾರಂಟಿ ಯೋಜನೆಯನ್ನು ನಾವು ನೀಡಿದ್ದೇವೆ, ಎಲ್ಲವೂ ಕೂಡ ಸಾಮಾನ್ಯ ಜನರಿಗೆ, ನೈಜ ಫಲಾನುಭವಿಗಳಿಗೆ ತಲುಪುವ ಯೋಜನೆಗಳಾಗಿವೆ. ನಾವು ಅಂಬಾನಿ-ಅದಾನಿಗೆ ಕೊಡುತ್ತಿಲ್ಲ, ತಿಮ್ಮಣ್ಣ-ಬೊಮ್ಮಣ್ಣಗೆ ಕೊಡುತ್ತಿದ್ದೇವೆ ಎಂದರು. ನಮ್ಮದು ಪರ್ಸೇಂಟೇಜ್ ಇಲ್ಲದ ಯೋಜನೆಗಳು, ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗಲಿದೆ, ಒಂದು ಕುಟುಂಬಕ್ಕೆ ಏನಿಲ್ಲವೆಂದರೂ ತಿಂಗಳಿಗೆ 4-5 ಸಾವಿರ ರೂ. ಹಣ ಜಮೆಯಾಗುತ್ತಿದೆ, ನೊಬೆಲ್ ಪ್ರಶಸ್ತಿ ಪುರಸ್ಕೃತರು ನಮ್ಮ ಸರ್ಕಾರದ ಯೋಜನೆಗಳನ್ನು ಅಧ್ಯಯನ ಮಾಡಲು ಬರುತ್ತಿದ್ದಾರೆ ಎಂದರು.

ಇಂಡಿಯಾ ಒಕ್ಕೂಟಕ್ಕೆ ಒಲವು: ಕರ್ನಾಟಕದಲ್ಲಿ ಕಾಂಗ್ರೆಸ್ ನ ಅಭೂತಪೂರ್ವ ಯಶಸ್ಸು ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ತೆಲಂಗಾಣ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುವ ಎಲ್ಲಾ ಸಾಧ್ಯತೆ ಇದ್ದು ಲೋಕಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಪರ ಜನರ ನಿಲುವು ವ್ಯಕ್ತವಾಗುತ್ತಿದೆ ಎಂದರು. ನಮ್ಮ ಯೋಜನೆಗಳು ಜನರ ಬಳಿ ಹೋಗಿವೆ.ಅದನ್ನು ಕೊಟ್ಟಿದ್ದು ಕಾಂಗ್ರೆಸ್ ಎಂಬುದು ಜನರಿಗೆ ತಿಳಿಯಬೇಕು. ಲೋಕಸಭಾ ಚುನಾವಣೆಯಲ್ಲಿ ನಾವು ಉತ್ತಮ ಫಲಿತಾಂಶ ಪಡೆಯಲು ಕಾರ್ಯಕರ್ತರು ಶ್ರಮಿಸಬೇಕು ಎಂದರು. ಶಾಸಕರಾದ ಸಿ‌.ಪುಟ್ಟರಂಗಶೆಟ್ಟಿ, ಎ.ಆರ್‌.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌, ಪ್ರಧಾನ ಕಾರ್ಯದರ್ಶಿ ಚಿಕ್ಕ ಮಹದೇವ್‌ ಇತರೆ ಪದಾಧಿಕಾರಿಗಳು ಇದ್ದರು.

ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಈಶ್ವರಪ್ಪ ಕೊಡುಗೆಯೇನು: ಆಯನೂರು ಮಂಜುನಾಥ್‌

ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಿ: ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ ಕುರಿತ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಸಹಕರಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರಾಜ್ಯ ಈ ವರ್ಷ ಬರಗಾಲಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ .ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ ಎಂದು ಹೇಳಿದರು.

ದೆಹಲಿ ಗಣರಾಜ್ಯೋತ್ಸವಕ್ಕೆ ಬೀದಿ ಬದಿ ವ್ಯಾಪಾರಿಗಳು: ಚಾಮರಾಜನಗರದಿಂದ ಚಾಯ್‌ವಾಲಾ ಸಮೀವುಲ್ಲಾ ಆಯ್ಕೆ!

ಅಧಿಕಾರಿಗಳು ಚಾಮರಾಜನಗರದಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಿದ್ದೀರಿ. ಆದರೆ, 2015-16ರ ಸಮೀಕ್ಷೆಯಂತೆ ಜಿಲ್ಲೆಯಲ್ಲಿ 2.16 ಲಕ್ಷ ರೈತರು ಇದ್ದು, ಈವರೆಗೆ 1.8 ಲಕ್ಷ ರೈತರ ಮಾಹಿತಿಯನ್ನು ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಜಿಲ್ಲೆಯ ಎಲ್ಲಾ ರೈತರ ಮಾಹಿತಿಯನ್ನು ಸರಿಯಾಗಿ ತಂತ್ರಾಂಶದಲ್ಲಿ ನಮೂದಿಸಿದರೆ ಮಾತ್ರ ಅವರಿಗೆ ಸೂಕ್ತ ಪರಿಹಾರ ನೀಡುವುದು ಸಾಧ್ಯ. ಅಲ್ಲದೆ, ಬೆಳೆ ನಷ್ಟಕ್ಕೆ ರೈತರಿಗೆ 5 ಎಕರೆ ವರೆಗೆ ಪರಿಹಾರ ಸಿಗಲಿದೆ. ಒಮ್ಮೆ ಬೆಳೆ ಸಮೀಕ್ಷೆ ಮುಗಿಸಿದ ನಂತರ ಬಿಟ್ಟುಹೋದ ರೈತರ ಹೆಸರನ್ನು ಮತ್ತೆ ಪರಿಹಾರದ ಪಟ್ಟಿಗೆ ಸೇರಿಸುವುದು ಅಸಾಧ್ಯ. ನಗದಿನ ಮೂಲಕವೂ ಪರಿಹಾರ ನೀಡಿಕೆಗೆ ಅವಕಾಶ ಇಲ್ಲ. ಪರಿಹಾರದ ಹಣ ಬ್ಯಾಂಕ್ ಖಾತೆಗೆ ಸಂದಾಯವಾಗಲಿದೆ. ಹೀಗಾಗಿ ಅಧಿಕಾರಿಗಳು ಈಗಲೇ ಬೆಳೆ ಸಮೀಕ್ಷೆಯನ್ನು ಶೇ.೧೦೦ ರಷ್ಟು ದಕ್ಷತೆಯಿಂದ ಮುಗಿಸಬೇಕು ಎಂದು ಸಚಿವರು ಸೂಚಿಸಿದರು.

Follow Us:
Download App:
  • android
  • ios