Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಜಾಸ್ತಿ: ಸಚಿವ ದರ್ಶನಾಪೂರ

ಕಾಂಗ್ರೆಸ್ ಪಕ್ಷವು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಂಬಿದೆ. ಕಾಂಗ್ರೆಸ್‌ನ ಕೊಡುಗೆ ಮತ್ತು ಮೋದಿಯವರ ವೈಫಲ್ಯದ ಕುರಿತು ಶ್ರೀಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದ ಸಚಿವ ಶರಣಬಸಪ್ಪಗೌಡ ದರ್ಶನಾಪೂರ 

Minister Sharanabasappa Darshanapur Talks Over Congress grg
Author
First Published Feb 9, 2024, 9:45 PM IST

ಶಹಾಪುರ(ಫೆ.09): ಪಕ್ಷಕ್ಕೆ ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇದೆ. ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳ ಬಗ್ಗೆ, ಕೋಮು ಸೌಹಾರ್ದತೆಯ ಸಂದೇಶ ಪ್ರತಿ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲರೂ ಹುಮ್ಮಸ್ಸಿನಿಂದ ಪ್ರತಿಬೂತನಲ್ಲು ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.

ನಗರದ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಎಸ್.ಸಿ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಯುವ ಮುಖಂಡ ಭೀಮರಾಯ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಹಾಪುರ: ಸೂರು ವಂಚಿತ ಅಜ್ಜಿ ಮೊಮ್ಮಗನಿಗೆ ವಸತಿ ಭಾಗ್ಯ..!

ಕಾಂಗ್ರೆಸ್ ಪಕ್ಷವು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ನಂಬಿದೆ. ಕಾಂಗ್ರೆಸ್‌ನ ಕೊಡುಗೆ ಮತ್ತು ಮೋದಿಯವರ ವೈಫಲ್ಯದ ಕುರಿತು ಶ್ರೀಸಾಮಾನ್ಯರಿಗೆ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಸಿದ್ರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸರಕಾರದಿಂದ ಜಾರಿಗೊಳಿಸಲಾದ ಜನಪ್ರಿಯ ಯೋಜನೆಗಳ ಕುರಿತಾಗಿ ಬೂತ್‌ ಮಟ್ಟದ ಒಬ್ಬ ಸದಸ್ಯರು ತಲಾ 20 ಮನೆಗಳಿಗೆ ತೆರಳಿ ಜನತೆಗೆ ತಿಳಿಸುವ ಮೂಲಕ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಾದ ಜನೋಪಯೋಗಿ ಕಾರ್ಯಕ್ರಮಗಳ ಕುರಿತು ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಅನುದಾನ ನೀಡುವಲ್ಲಿ ತಾರತಮ್ಯ ಮಾಡುವ ಕೇಂದ್ರ ಸರ್ಕಾರ, ನಮ್ಮ ಪಾಲಿನ ತೆರಿಗೆಯ ಹಣ ನೀಡದ ಕಾರಣ ದೆಹಲಿಯ ಜಂತಮಂತರನಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ಎಂದಿಗೂ ದಲಿತರ ಮತ್ತು ಅಲ್ಪಸಂಖ್ಯಾತರ ಏಳಿಗೆಯನ್ನು ಬಯಸುವುದಿಲ್ಲ. ಅಭಿವೃದ್ಧಿ ಕಾರ್ಯಗಳ ಹೆಸರು ಹೇಳಿ ಮತ ಕೇಳುವುದಿಲ್ಲ. ಏನಿದ್ದರೂ ಭಾವನಾತ್ಮಕ ವಿಷಯ ಹುಟ್ಟು ಹಾಕಿ ಆ ಮೂಲಕ ಮತಗಳಿಕೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಆ ಕಾರಣಕ್ಕೆ ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು. ಕಾಂಗ್ರೆಸ್ ಕಾರ್ಯಕರ್ತರ ವಿವಿಧ ಘಟಕಗಳ ಪ್ರಮುಖರು ಒಗ್ಗಟ್ಟಾಗಿ ಗ್ಯಾರಂಟಿ ಯೋಜನೆಗಳ ಕುರಿತು ಮನೆ ಮನೆಗೆ ತೆರಳಿ ಮಾಹಿತಿ ಪಡೆದುಕೊಂಡು ರಾಜ್ಯ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಲಾಭ ಕುರಿತು ಮನವರಿಕೆ ಮಾಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಭೀಮರಾಯ ಕಾಂಗ್ರೆಸ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ಬರಗಾಲ ಬಿದ್ದರೂ ಬಾಯಿ ಬಿಚ್ಚದ ಸಂಸದರು: 

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರಾಜ್ಯ ಬರಗಾಲದಿಂದ ತತ್ತರಿಸಿತು. ಆಗ ಕೇಂದ್ರದಿಂದ ಬರಗಾಲ ಅಧ್ಯಯನ ತಂಡ ಆಗಮಿಸಿ ಪರಿಶೀಲನೆ ಮಾಡಿ ಹೋಯಿತು. ಇದುವರೆಗೂ ಬರ ಪರಿಹಾರ ನೀಡುವ ಕೆಲಸ ಕೇಂದ್ರದ ಬಿಜೆಪಿ ಸರ್ಕಾರ ಮಾಡಲೇ ಇಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಕೇಂದ್ರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಧಾರ್ಮಿಕ ವಿಚಾರ ಮುಂದಿಟ್ಟು ಬಿಜೆಪಿ ಅಧಿಕಾರಕ್ಕೆ ಯತ್ನ: ಮುಖ್ಯಮಂತ್ರಿ ಚಂದ್ರು

ಬಿಜೆಪಿ ಜಾತಿ-ಜಾತಿ ನಡುವೆ ಜಗಳ ಹಚ್ಚುವ ಮೂಲಕ ಭಾವನಾತ್ಮಕ ವಿಷಯಗಳನ್ನು ಕೈಗೆತ್ತಿಕೊಂಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಎಂದಿಗೂ ದೀನ-ದಲಿತರನ್ನು, ಬಡವರಿಗೆ ಮತ್ತು ರೈತಾಪಿ ಜನಪರ ಕೆಲಸ ಮಾಡುವಂತಹದ್ದಲ್ಲ, ಕೊರೋನಾ ವೇಳೆ ಕಾರ್ಪೋರೇಟ್ ಸಂಸ್ಥೆಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿದ ಮೋದಿ ರೈತರ ಸಾಲ ಮನ್ನಾ ಮಾಡಲಿಲ್ಲ ಎಂದು ಆರೋಪಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನೀಲಕಂಠ ಬಡಿಗೇರ, ಮುಖಂಡ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿದರು.

ಮುಖಂಡರಾದ ಆರ್. ಚನ್ನಬಸವ ವನದುರ್ಗಾ, ಗಿರೆಪ್ಪಗೌಡ ಬಾಣತಿಹಾಳ, ಅಯ್ಯಣ್ಣ ಕನ್ಯಾಕೋಳೂರ, ಸಣ್ಣ ನಿಂಗಪ್ಪ ನಾಯ್ಕೋಡಿ, ಇಬ್ರಾಹಿಂಸಾಬ ಶಿರವಾಳ, ಶಾಂತಪ್ಪ ಕಟ್ಟಿಮನಿ, ಮಹಾದೇವಪ್ಪ ಸಾಲಿಮನಿ, ಗೌಡಪ್ಪಗೌಡ ಆಲ್ದಾಳ ಇದ್ದರು. ಜಿಲ್ಲಾ ವಕ್ತಾರ ಮಲ್ಲಪ್ಪ ಉಳ್ಳಂಡಗೇರಿ ಸ್ವಾಗತಿಸಿದರು. ವೆಂಕಟೇಶ ಆಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಸದಸ್ಯ ಶಿವಕುಮಾರ ತಳವಾರ ನಿರೂಪಿಸಿದರು. ಈರಗಪ್ಪ ಹೋತಪೇಟ್ ವಂದಿಸಿದರು.

Follow Us:
Download App:
  • android
  • ios