Asianet Suvarna News Asianet Suvarna News

ಜನಸಾಮಾನ್ಯರ ಮೇಲೆ ಕೇಂದ್ರ ಸರ್ಕಾರ ತೆರಿಗೆ ಸವಾರಿ: ಸಚಿವ ಕೃಷ್ಣ ಬೈರೇಗೌಡ

ದೇಶದಲ್ಲಿನ ಶ್ರೀಮಂತರು, ಕುಬೇರರಿಗೆ ಅನುಕೂಲವಾಗುವಲ್ಲಿ ತೆರಿಗೆ ಕಡಿತಗೊಳಿಸಿ, ಬಡವರು ಮತ್ತು ಸಾಮಾನ್ಯ ವರ್ಗದವರಿಗೆ ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ ಆರ್ಥಿಕ ಹೊರೆಯಾಗುವಂತೆ ಕೇಂದ್ರ ಸರ್ಕಾರ ತೆರಿಗೆ ಸವಾರಿ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.

Minister Krishna Byre Gowda Slams On Central Govt At Gadag gvd
Author
First Published Mar 4, 2024, 3:00 AM IST

ರೋಣ (ಮಾ.04): ದೇಶದಲ್ಲಿನ ಶ್ರೀಮಂತರು, ಕುಬೇರರಿಗೆ ಅನುಕೂಲವಾಗುವಲ್ಲಿ ತೆರಿಗೆ ಕಡಿತಗೊಳಿಸಿ, ಬಡವರು ಮತ್ತು ಸಾಮಾನ್ಯ ವರ್ಗದವರಿಗೆ ದಿನಬಳಕೆ ವಸ್ತುಗಳ ಮೇಲೆ ತೆರಿಗೆ ಹೆಚ್ಚಿಸಿ ಆರ್ಥಿಕ ಹೊರೆಯಾಗುವಂತೆ ಕೇಂದ್ರ ಸರ್ಕಾರ ತೆರಿಗೆ ಸವಾರಿ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು. ಅವರು ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ವತಿಯಿಂದ ಜರುಗಿದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೆರಿಗೆ ಏರಿಕೆಯಿಂದ ಸಾಮಾನ್ಯ ಜನರಿಗೆ, ಬಡವರಿಗೆ ಆರ್ಥಿಕ ಹೊರೆ ಬೀಳುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುಂಚೆ ದೇಶದ ಕುಬೇರರ ಮೇಲೆ ಶೇ. 33 ತೆರಿಗೆ ಇತ್ತು. ಸದ್ಯ ಕುಬೇರರು ಕಟ್ಟುವ ತೆರಿಗೆಯನ್ನು ಶೇ. 27 ಕ್ಕೆ ಇಳಿಸಿದರು. ಈಗ ಅದಕ್ಕಿಂತಲೂ ಕಡಿಮೆ ಮಾಡಿದ್ದಾರೆ. ಶ್ರೀಮಂತರ ಮೇಲಿನ ತೆರಿಗೆ ಕಿತ್ತು ಬಡವರ ಮೇಲೆ ಹಾಕಿದರು. ಇದರಿಂದ ಬಡವರಿಗೆ, ಸಾಮಾನ್ಯ ಜನರಿಗೆ ಆರ್ಥಿಕ ಹೊರೆ ಬೀಳತೊಡಗಿತು. ಈ ಹೊರೆ ನಿವಾರಿಸಲು ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತು ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ್ದ ಓಪಿಎಸ್‌ ಜಾರಿಗೆ ಬದ್ಧ: ಸಚಿವ ಸಂತೋಷ್‌ ಲಾಡ್‌

ಶ್ರೀಮಂತರಿಗೆ ನೀವು ತೆರಿಗೆ ಇಳಿಕೆ ಕೊಡುಗೆ ಕೊಟ್ರೆ ಅದು ಬಿಟ್ಟಿ ಅಲ್ವಾ? ಜನರಿಗೆ ಅನುಕೂಲ ಕಲ್ಪಿಸುವಲ್ಲಿ ಗ್ಯಾರಂಟಿ ಯೋಜನೆಯನ್ನು ನಾವು ಕೊಟ್ರೆ, ಅದನ್ನು ಬಿಟ್ಟಿ ಭಾಗ್ಯ ಎನ್ನುತ್ತಿದ್ದರಲ್ಲ? ಬಡವರು ಕಟ್ಟುವ ತೆರಿಗೆ ಹಣವನ್ನು ವಾಪಸ್‌ ಗ್ಯಾರಂಟಿ ಯೋಜನೆ ಮೂಲಕ ಕೊಟ್ಟು ಬಡವರಿಗೆ ಶಕ್ತಿ ತುಂಬುತ್ತಿದ್ದೇವೆ ಎಂದು ಸಚಿವರು ಸಮರ್ಥಿಸಿಕೊಂಡರು. ಗ್ಯಾರಂಟಿ ಯೋಜನೆ ಜನರಿಗೆ ತಲುಪಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಸ್ವಾಭಿಮಾನಿಗಳಾಗಿ ಜೀವನ ಸಾಗಿಸಲು ಗೃಹಲಕ್ಷ್ಮೀ, ಗೃಹಜ್ಯೋತಿ, ನಾರಿ ಶಕ್ತಿ ಯೋಜನೆ ತರಲಾಗಿದೆ ಎಂದರು.

ದೇಶದಲ್ಲಿ ಕಥೆ ಹೇಳಿ ಓಟು ಹಾಕಿಸಿಕೊಳ್ಳುವವರು ನಾವಲ್ಲ. ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ನಾವು. ಗ್ಯಾರಂಟಿ ಯೋಜನೆಯನ್ನು ಬಿಟ್ಟಿ ಭಾಗ್ಯ ಎನ್ನುವ ಬಿಜೆಪಿಯವರ ಮನಸ್ಥಿತಿಗೆ ಜನತೆ ತಕ್ಕ‌ ಪಾಠ. ಕಲಿಸಬೇಕು. ಪ್ರತಿ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ ನಾಲ್ಕೈದು ಸಾವಿರ ಬರುತ್ತಿದೆ. ಕುಟುಂಬಕ್ಕೆ ಕನಿಷ್ಠ ಉದ್ಯೋಗ ಖಾತ್ರಿ ಕೊಡುವ ನಿಟ್ಟಿನಲ್ಲಿ ನಾವು ಈ ಗ್ಯಾರಂಟಿ ಯೋಜನೆಗಳನ್ನು ತಂದಿದ್ದೇವೆ ಎಂದರು. ಯಲಬುರ್ಗಾ ಶಾಸಕ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿ, 1985ರ ನಂತರ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂತು. ಆಗ ₹ 2ಗೆ ಕಿಲೋ ಅಕ್ಕಿ ಕೊಡಲಾಗುತ್ತಿತ್ತು. 

ಹಸಿವುಮುಕ್ತ ಭಾರತ ನಿರ್ಮಾಣಕ್ಕೆ ಪ್ರಧಾನಮಂತ್ರಿಯಾಗಿದ್ದ ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶಾದ್ಯಂತ ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ ಇಂದಿಗೂ ಯಶಸ್ವಿ ಕಂಡಿದೆ. ರಾಜ್ಯದಲ್ಲಿ 1 ಕೋಟಿ 27 ಲಕ್ಷ ಕುಟುಂಬಗಳ ಪೈಕಿ 4.27 ಕೋಟಿ ಜನಕ್ಕೆ ಅನ್ನಭಾಗ್ಯ ಅಕ್ಕಿ ವಿತರಿಸಲಾಗುತ್ತಿದೆ. ರು. 2340 ಕೋಟಿ ಪ್ರತಿ ತಿಂಗಳು ಗೃಹಲಕ್ಷ್ಮೀಗೆ ಖರ್ಚಾಗುತ್ತಿದೆ. ರು. 30 ಸಾವಿರ ಕೋಟಿ 5 ಗ್ಯಾರಂಟಿಗೆ ಕೊಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ಒಂದು ಪೈಸೆಯೂ ಕೊಟ್ಡಿಲ್ಲ. ಗ್ಯಾರಂಟಿಗೆ ಹಣವಿಲ್ಲ, ಸರ್ಕಾರ ದಿವಾಳಿಯಾಗಿದೆ ಎಂದು ಅಪ್ರಚಾರ ಮಾಡುವ ವಿರೋಧ ಪಕ್ಷಕ್ಕೆ ಕೇವಲ ಟೀಕೆ ಮಾಡುವುದು ಮಾತ್ರ ಗೊತ್ತಿದೆ. ವಾಸ್ತವ ಅರಿಯಲು ಅವರಿಗೆ ಆಗುತ್ತಿಲ್ಲ. ಟೀಕೆ ಮಾಡುವವರಿಗೆ ಉತ್ತರವೇ ಪಲಾನುಭವಿಗಳ ಸಮಾವೇಶ. ಜನರನ್ನಾದರೂ ವಿರೋಧ ಪಕ್ಷದವರು ಕೇಳಿ ತಿಳಿದುಕೊಳ್ಳಲಿ. 

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಅಗತ್ಯ ಬಿದ್ದರೆ ಮಾತ್ರ ಎನ್‌ಐಎ ತನಿಖೆಗೆ: ಸಿಎಂ ಸಿದ್ದರಾಮಯ್ಯ

ಜನರ ಪರವಾಗಿ ಮಾಡುವ ಕೆಲಸಕ್ಕೆ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ ಎಂಬುದನ್ನು ನೆನಸಿಕೊಂಡರೆ ನನಗೆ ಬೇಸರ ಆಗುತ್ತಿದೆ. ಜನರೇ ಇಂತವರಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಪಾಟೀಲ, ಖನಿಜ ಅಭಿವೃದ್ಧಿ ನಿಗಮ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ, ಮಿಥುನ‌ ಪಾಟೀಲ, ದಶರಥ ಗಾಣಿಗೇರ, ಪರಶುರಾಮ ಅಳಗವಾಡಿ, ವ್ಹಿ.ಬಿ. ಸೋಮನಕಟ್ಟಿಮಠ, ಎಸಿ ವೆಂಕಟೇಶ ನಾಯಕ, ಎಡಿಸಿ ಅನ್ನಪೂರ್ಣ ಮುದಕಮ್ಮನವರ, ಎಸ್ಪಿ ಬಿ.ಎಸ್. ನೇಮಗೌಡ್ರ, ತಹಸೀಲ್ದಾರ್‌ ನಾಗರಾಜ.ಕೆ., ರೋಣ ತಾಪಂ ಇಒ. ರವಿ ಎ.ಎನ್., ಗಜೇಂದ್ರಗಡ ಇಒ ಡಾ.ಡಿ.ಮೋಹನ, ಪ್ರಶಾಂತ ವರಗಪ್ಪನವರ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸ್ವಾಗತಿಸಿದರು.

Follow Us:
Download App:
  • android
  • ios