Asianet Suvarna News Asianet Suvarna News

ತುಮಕೂರು : ಶೀಘ್ರವೇ ಕೊಬ್ಬರಿ ನೋಂದಣಿ ಕಾರ್ಯ ಆರಂಭಿಸಿ

ಕೊಬ್ಬರಿ ಖರೀದಿ ಕೇಂದ್ರ ನಫೆಡ್ ಆರಂಭಿಸಿ ನಂತರ ಮರು ನೋಂದಣಿ ಹೆಸರಲ್ಲಿ ಸ್ಥಗಿತಗೊಳಿಸಿ ಮತ್ತೆ ಆರಂಭಕ್ಕೆ ವಿಳಂಬ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ನಫೆಡ್ ಅರಂಭಿಸದಿದ್ದರೆ ಮಾರ್ಚ್ 11 ಕ್ಕೆ ಗುಬ್ಬಿಯ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ರೈತರು ನಡೆಸಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಎಚ್ಚರಿಕೆ ನೀಡಿದರು.

Tumkur Start coconut registration process soon snr
Author
First Published Mar 2, 2024, 11:06 AM IST

  ಗುಬ್ಬಿ :  ಕೊಬ್ಬರಿ ಖರೀದಿ ಕೇಂದ್ರ ನಫೆಡ್ ಆರಂಭಿಸಿ ನಂತರ ಮರು ನೋಂದಣಿ ಹೆಸರಲ್ಲಿ ಸ್ಥಗಿತಗೊಳಿಸಿ ಮತ್ತೆ ಆರಂಭಕ್ಕೆ ವಿಳಂಬ ಅನುಸರಿಸುತ್ತಿರುವುದು ಸರಿಯಲ್ಲ. ಕೂಡಲೇ ನಫೆಡ್ ಅರಂಭಿಸದಿದ್ದರೆ ಮಾರ್ಚ್ 11 ಕ್ಕೆ ಗುಬ್ಬಿಯ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ರೈತರು ನಡೆಸಲಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರೇ ಹೇಳಿಕೆ ನೀಡಿ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸುತ್ತೇವೆ ಎಂದು ಹೇಳಿ ಹತ್ತು ದಿನ ಕಳೆದರೂ ಇನ್ನೂ ಕೇಂದ್ರ ಆರಂಭಿಸಿಲ್ಲ. ಆದರೆ ರೈತರು ಕೊಬ್ಬರಿ ಸುಲಿಸಿಕೊಂಡು ಕಾದು ತಾಳ್ಮೆ ಕಳೆದುಕೊಂಡಿದ್ದಾರೆ. ಈ ಜೊತೆಗೆ ಕೊಬ್ಬರಿ ಸಹ ತೂಕ ಕಳೆದುಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಕೊಬ್ಬರಿ ಖರೀದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟು 13,500 ರು. ನೀಡುತ್ತಿರುವುದು ಅವೈಜ್ಞಾನಿಕವಾಗಿದೆ. ಈ ಹಿಂದಿನ ಸರ್ಕಾರ ಕೊಬ್ಬರಿ ಉತ್ಪನ್ನಕ್ಕೆ ತಗಲುವ ವೆಚ್ಚವನ್ನು ವೈಜ್ಞಾನಿಕವಾಗಿ ತೋಟಗಾರಿಕೆ ಇಲಾಖೆಯ ಮೂಲಕ ತೀರ್ಮಾನಿಸಿದೆ. ಆದರೆ ಇಲ್ಲಿ ಖರೀದಿ ಮಾಡುತ್ತಿರುವುದು ಸರಿಯಲ್ಲ. ಸ್ವಾಮಿನಾಥನ್ ವರದಿ ಅನ್ವಯ ಉತ್ಪನ್ನ ವೆಚ್ಚದ ಶೇ.50 ರಷ್ಟು ಆದಾಯ ಲಾಭವಾಗಿ ನೀಡಬೇಕಿದೆ. ಒಟ್ಟಾರೆ 25 ಸಾವಿರ ರು.ಗಳನ್ನು ಒಂದು ಕ್ವಿಂಟಲ್ ಕೊಬ್ಬರಿಗೆ ನೀಡಬೇಕು ಎಂದು ಒತ್ತಾಯಿಸಿದ ಅವರು ಓರ್ವ ರೈತನಿಂದ ಹದಿನೈದು ಕ್ವಿಂಟಲ್ ಕೊಬ್ಬರಿ ಖರೀದಿಗೆ ನಿಯಮ ಮಾಡಿದ ಸರ್ಕಾರ ವರ್ತಕರ ಹಾವಳಿಗೆ ಕಡಿವಾಣ ಹಾಕಿಲ್ಲ. 62 ಸಾವಿರ ಮೆಟ್ರಿಕ್ ಟನ್ ಖರೀದಿಗೆ ನಿರ್ಧರಿಸಲಾಗಿದೆ. ಆದರೆ ನಮ್ಮ ಜಿಲ್ಲೆಯಲ್ಲೇ 2.50 ಲಕ್ಷ ಟನ್ ಕೊಬ್ಬರಿ ಉತ್ಪತ್ತಿಯಾಗುತ್ತದೆ. ಎಲ್ಲವನ್ನೂ ವೈಜ್ಞಾನಿಕವಾಗಿ ಖರೀದಿಸಿ ಎಂದು ಹೇಳಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ, ಮರು ನೋಂದಣಿ ಕಾರ್ಯವನ್ನು ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ನಡೆಸುವುದು ಸೂಕ್ತ. ಹಾಗೆಯೇ ಕೊಬ್ಬರಿ ಖರೀದಿ ಕೇಂದ್ರ ತಾಲೂಕಿನಲ್ಲಿ ನಾಲ್ಕೈದು ಕೇಂದ್ರವಾಗಬೇಕು ಎಂದು ಒತ್ತಾಯಿಸಿದ ಅವರು ಒನ್ ಪಾಯಿಂಟ್ ಅಜೆಂಡಾ ಕೊಬ್ಬರಿ ಹೋರಾಟ ಮಾರ್ಚ್ 11 ರಂದು ನಡೆಸಲಾಗುವುದು. ಶೀಘ್ರ ನಫೆಡ್ ಕೊಬ್ಬರಿ ಖರೀದಿ ಕೇಂದ್ರ ಆರಂಭಿಸಿ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ. ಲೋಕೇಶ್, ಯುವ ಘಟಕದ ಜಗದೀಶ್, ಶಿವಕುಮಾರ್‌, ಸತ್ತಿಗಪ್ಪ, ಧರ್ಮೆಗೌಡ, ಎಂ.ಎಚ್. ಪಟ್ಟಣ ವೆಂಕಟೇಶ್, ಲಾಯರ್‌ ಸುರೇಶ್, ದಿವ್ಯಪ್ರಕಾಶ್ ಇತರರು ಇದ್ದರು.

Follow Us:
Download App:
  • android
  • ios