Asianet Suvarna News Asianet Suvarna News

ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾದದು : ಡಾ. ಸಿ. ಸೋಮಶೇಖರ್

ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾದುದುದಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು

Sharan s life is ideal for all time: Dr. C. Somashekhar snr
Author
First Published May 1, 2024, 6:14 AM IST

 ಮೈಸೂರು :  ಶರಣರ ಬದುಕು ಸರ್ವಕಾಲಕ್ಕೂ ಆದರ್ಶವಾದುದುದಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹೇಳಿದರು.

ಊಟಿಯ ತೀಟಕಲ್ನ ಜೆಎಸ್.ಎಸ್. ಪಬ್ಲಿಕ್ ಶಾಲಾ ಆವರಣದಲ್ಲಿ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಸುತ್ತೂರು ಕ್ಷೇತ್ರ, ಜೆಎಸ್.ಎಸ್. ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಏ. 29 ರಿಂದ ಮೇ 4 ರವರೆಗೆ ಸಾರ್ವಜನಿಕರಿಗಾಗಿ ಆಯೋಜಿಸಿರುವ ಜೀವನೋತ್ಸಾಹ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಡೆ-ನುಡಿಗಳಲ್ಲಿ ಅಂತರವಿರದ ಜೀವನ ಶರಣರದಾಗಿತ್ತು. ಶರಣರು ಕರ್ಮ ಸಿದ್ದಾಂತವನ್ನು ಕಾಯಕ ಸಿದ್ದಾಂತವಾಗಿಸಿದವರು. ಅವರ ನಡೆನುಡಿಗಳಲ್ಲಿ ಸಮನ್ವಯವಿತ್ತು. ಅರಿವು ಆಚಾರದ ಬದುಕು ಅವರದಾಗಿತ್ತು. ಅವರ ವಚನಗಳು ಅಂತರಂಗದ ಅನುಭಾವದ ನುಡಿಗಳಾಗಿವೆ. ಜನವಾಣಿಯನ್ನು ದೇವವಾಣಿಯನ್ನಾಗಿಸಿದುದು ಶರಣ ಸಂಸ್ಕೃತಿ. ಕಾಯಕದಲ್ಲಿ ನಿರತನಾದಡೆ ಗುರುದರ್ಶನವಾದರು ಮರೆಯಬೇಕು, ಲಿಂಗ ಪೂಜೆಯಾದರೂ ಮರೆಯಬೇಕು ಎಂದು ಹೇಳುವ ಶರಣರ ಮಾತುಗಳು ಕಾಯಕಕ್ಕೆ ಅವರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತದೆ ಎಂದು ಹೇಳಿದರು.

ಪತ್ರಕರ್ತ ರವೀಂದ್ರ ಭಟ್ಟ ಮಾತನಾಡಿ, ಪತ್ರಕರ್ತರಾದವರು ಸಾಮಾಜಿಕ ಬದ್ದತೆಯನ್ನು ಹೊಂದಿರಬೇಕು. ಹಿಂದೆ ಪತ್ರಕರ್ತರ ಜವಾಬ್ದಾರಿ ಬಹಳ ಹೆಚ್ಚಾಗಿತ್ತು, ಅದನ್ನೆ ಧರ್ಮವನ್ನಾಗಿಸಿಕೊಂಡಿದ್ದರು, ಆದರೆ ಈಗ ಉದ್ಯಮವಾಗಿದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಜನರ ಮನೋಭಾವ ಮತ್ತು ಜೀವನ ಪದ್ದತಿಯು ಬದಲಾಗಿದೆ. ಮುದ್ರಣ ಮಾಧ್ಯಮಕ್ಕಿಂತ ದೃಶ್ಯ ಮಾಧ್ಯಮ ಬಹಳ ಪರಿಣಾಮಕಾರಿಯಾಗಿ ಬೆಳೆದಿದೆ. ಪತ್ರಕರ್ತರಾದವರು ಸಕಾರಾತ್ಮಕ ಲೇಖನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಗ್ರಂಥಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪತ್ರಿಕಾ ಧರ್ಮವನ್ನು ಪತ್ರಕರ್ತರಾದವರು ಯಾವಾಗಲೂ ಪಾಲಿಸಬೇಕು ಎಂದು ತಿಳಿಸಿದರು.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೇಗುಣಸಿಯ ವಿರಕ್ತಮಠದ ಡಾ. ಶ್ರೀ ಮಹಾಂತ ಪ್ರಭುಸ್ವಾಮಿಗಳು ಮನಸ್ಸನ್ನು ಪರಿಶುದ್ದಗೊಳಿಸಿಕೊಂಡಲ್ಲಿ ನಿಶ್ಚ್ಚಿಂತ ಬದುಕು ಸಾಧ್ಯ ಎಂದು ತಿಳಿಸಿದರು. ಮಾನವನು ನೆಮ್ಮದಿಯ ಜೀವನವನ್ನು ನಡೆಸಲು ಚಿಂತೆಯಿಂದ ವಿಮುಕ್ತನಾಗಬೇಕು. ಸದಾ ಪರಮಾತ್ಮನನ್ನು ಕುರಿತು ಆಲೋಚನೆ ಮಾಡುತ್ತಿದ್ದಲ್ಲಿ ಸಂತೋಷವನ್ನು ಕಾಣಲು ಸಾಧ್ಯವಾಗುತ್ತದೆ. ನಾವು ಜಗತ್ತಿನಲ್ಲಿರುವ ಸಕಲ ಜೀವ ರಾಶಿಗಳ ಮೇಲೆ ಪ್ರೇಮವನ್ನಿಟ್ಟುಕೊಳ್ಳುವುದೆ ತಪಸ್ಸಾಗಿದೆ. ನಿರ್ಮಲ ಮನಸ್ಸು ನಿಶ್ಚಿಂತ ಜೀವನಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ-ಧ್ಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಸಂಜೆ ದೇಸಿ ಆಟಗಳನ್ನು ಆಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು ಶಿಬಿರದಲ್ಲಿ ಸಾಂಗ್ಲಿ ಜಿಲ್ಲೆ, (ಮಹಾರಾಷ್ಟ್ರ) ಕಲಬುರಗಿ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರಾವಾಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಂದ 230ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

Follow Us:
Download App:
  • android
  • ios