Asianet Suvarna News Asianet Suvarna News

ಮಾನವೀಯ ನೆಲೆಗಟ್ಟಿನಲ್ಲಿ ಸಮ ಸಮಾಜ ಕಟ್ಟಲು ಕೈಜೋಡಿಸಿ : ಎಚ್‌.ಕೆ. ವಿವೇಕಾನಂದ

ಜಾತಿ, ಧರ್ಮ ಪ್ರದೇಶದ ಹೆಸರಿನಲ್ಲಿ ಜನ ಸಮುದಾಯಗಳನ್ನು ವಿಭಜನೆ ಮಾಡುವುದನ್ನು ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಸಮ ಸಮಾಜ ಕಟ್ಟಲು ಎಲ್ಲರೂ ಕೈ ಜೋಡಿಸಬೇಕು ಎಂದು ಎಚ್‌.ಕೆ. ವಿವೇಕಾನಂದ ಕರೆ ನೀಡಿದರು.

Join hands to build an equal society on humanitarian basis : HK. Vivekananda snr
Author
First Published Feb 16, 2024, 10:22 AM IST

ಮಧುಗಿರಿ :ಜಾತಿ, ಧರ್ಮ ಪ್ರದೇಶದ ಹೆಸರಿನಲ್ಲಿ ಜನ ಸಮುದಾಯಗಳನ್ನು ವಿಭಜನೆ ಮಾಡುವುದನ್ನು ಬಿಟ್ಟು ಮಾನವೀಯ ನೆಲೆಗಟ್ಟಿನಲ್ಲಿ ಸಮ ಸಮಾಜ ಕಟ್ಟಲು ಎಲ್ಲರೂ ಕೈ ಜೋಡಿಸಬೇಕು ಎಂದು ಎಚ್‌.ಕೆ. ವಿವೇಕಾನಂದ ಕರೆ ನೀಡಿದರು.

ತಾಲೂಕಿನ ಕೊಡಿಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ರೆಡ್ಡಿ ಹಳ್ಳಿ ಗ್ರಾಮದ ಅನುರಾಧ ಗಂಗಾಧರ್‌ ಅವರ ಮನೆಯಲ್ಲಿ ಅರಿವು ಭಾರತ ಸಂಸ್ಥೆ ಆಯೋಜಿಸಿದ್ದ ಸಮಾನತೆಗಾಗಿ ಸಹಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯ ಆಚರಣೆಗಳನ್ನು ಕೊನೆಗಾಣಿಸದ ಹೊರತು, ಸಮ ಸಮಾಜ ನಿರ್ಮಿಸಲು ಸಾಧ್ಯವಿಲ್ಲ. ನಮ್ಮಂತೆ ಅವರು ಸಹ ಮನುಷ್ಯರು ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಈ ಸದರ್ಭದಲ್ಲಿ ಕರ್ನಾಟಕ ಸರ್ಕಾರ ಸಮ ಸಮಾಜದ ಆಶಯದಿಂದ 12ನೆ ಶತಮಾನದ ಮಹಾ ದಾರ್ಶನಿಕ ಕ್ರಾಂತಿಕಾರಿ ವಚನಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಅಧಿಕೃತವಾಗಿ ಘೋಷಿಸಿರುವುದು ಸಂತಸದ ವಿಚಾರ ಎಂದರು.

ಅರಿವು ಭಾರತ ಸಂಸ್ಥಾಪಕ ಹಾಗೂ ಉಪನ್ಯಾಸಕ ಅರಿವು ಶಿವಪ್ಪ ಮಾತನಾಡಿ, ಅರಿವು ಭಾರತ ಸಂಸ್ಥೆ ಕಳೆದ 10 ವರ್ಷಗಳಿಂದ ಜಾತಿ ಮುಕ್ತ -ಅಸ್ರೃಶ್ಯತೆ ಕರ್ನಾಟಕದಾದ್ಯಂತ ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ ಎಂಬ ಘೋಷ ವಾಕ್ಯದೊಂದಿಗೆ ನಿರಂತರವಾಗಿ ಶ್ರಮಿಸುತ್ತಿದೆ. ಸವರ್ಣಿಯರ ಮನೆಗಳಿಗೆ ಶೋಷಿತ- ಅಸ್ಪೃಶ್ಯ ಸಮುದಾಯದವರನ್ನು ಪ್ರೀತಿ, ವಿಶ್ವಾಸ, ಗೌರವದೊಂದಿಗೆ ಆತ್ಮೀಯತೆಯಿಂದ ಆಹ್ವಾನಿಸಿ ಅವರೊಟ್ಟಿಗೆ ಉಪಹಾರ ಸೇವಿಸಿ ಚಹ ಸೇವಿಸುವುದರ ನಿಟ್ಟಿನಲ್ಲಿ ಸವರ್ಣಿಯರ ಜೊತೆ ಅಸ್ಪೃಶ್ಯ ಕಾಲೋನಿಗಳಿಗೆ ಭೇಟಿ ನೀಡಿದ್ದಲ್ಲದೆ ಅಲ್ಲಿನ ಜನರಲ್ಲಿ ಸಮ ಸಮಾಜ ನಿರ್ಮಾಣದ ಬ್ಗಗೆ ಜಾಗೃತಿ ಮೂಡಿಸಿ ದೇಗುಲಗಳ ಪ್ರವೇಶ, ಮನೆ ಪ್ರವೇಶ ಸೇರಿದಂತೆ ಹಲವು ಬದಲಾವಣೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ಧಗಂಗಯ್ಯ ಹೊಲತಾಳ್‌ ಮಾತನಾಡಿ, ಅಸ್ಪೃಶ್ಯತೆ ಕಡಿಮೆಯಾದಂತೆ ಕಂಡರೂ ಸಹ ಅದು ಹಳ್ಳಿಗಾಡಿನ ಪ್ರದೇಶದಲ್ಲಿ ದಟ್ಟವಾಗಿ ಹರಡಿದೆ. ಅದನ್ನು ಬೇರು ಸಮೇತ ಕಿತ್ತು ಹಾಕಲು ಹೊಸ ಬಗೆಯ ಅಲೋಚನೆಗಳು, ಗಟ್ಟಿ ಧ್ವನಿಗಳು ಹಾಗೂ ಸಂಘಟನಾತ್ಮಕ ದಿಟ್ಟ ಹೋರಾಟಗಳು ಬೇಕು ಎಂದರು.

ರೈತ ಸಂಘದ ಮುಖಂಡ ಅಬ್ಬಣ್ಣಿ ಶಿವಪ್ಪ ಮಾತನಾಡಿ, ಹಲವು ಮಹನೀಯರ ಆಶಯಗಳನ್ನು ಸಮಾಜದ ಮುನ್ನಲೆಗೆ ತಂದು ಸಮ ಸಮಾಜದ ಕನಸನ್ನು ಸಕಾರಗೊಳಿಸಬೇಕಿದೆ ಎಂದರು.

ಕನ್ನಡ ಉಪನ್ಯಾಸಕ ಎ. ರಾಮಚಂದ್ರಪ್ಪ ಮಾತನಾಡಿ, ನಮ್ಮ ನಡೆ-ನುಡಿಗಳ ವ್ಯತ್ಯಾಸದಲ್ಲಿ ಬದಲಾವಣೆ ಆಗುವುದರ ಜೊತೆಗೆ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಎಲ್ಲೋ ಒಂದು ಕಡೆ ಸಮ ಸಮಾಜ ಕಟ್ಟಲು ಸಾಧ್ಯವಾದೀತು ಎಂದರು.

ಸಾಮಾಜಿಕ ಹೋರಾಟಗಾರ ರಮಾಪುರ ಶ್ರೀರಂಗಾಚಾರ್‌, ದಲಿತ ಮುಖಂಡರಾದ ಜೀವಿಕ ನರಸಿಂಹಮೂರ್ತಿ, ರೆಡ್ಡಿಹಳ್ಳಿ ನರಸಿಂಹಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅರಿವು ಭಾರತ ಸಂಸ್ಥೆಯು ಅನುರಾಧ ಗಂಗಾಧರ್‌ ದಂಪತಿಗೆ ಗ್ರಾಮರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರೈತ ಮುಖಂಡ ಕೆ. ಆನಂದಕುಮಾರ್‌, ನಾರಾಯಣಪ್ಪ, ದಲಿತ ಮುಖಂಡರಾದ ದೇವರಾಜು, ಸುದ್ದೇಕುಂಟೆ ನಾಗರಾಜು, ಹನುಮಂತರಾಯಪ್ಪ, ಪುಟ್ಟರಾಜು ಹಾಗೂ ಮಹಿಳೆಯರು ಇದ್ದರು.

Follow Us:
Download App:
  • android
  • ios