Asianet Suvarna News Asianet Suvarna News

ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಲ್ಲಲು ಸಂವಿಧಾನ ಕಾರಣ : ಮುರುಳೀಧರ ಹಾಲಪ್ಪ

ನೂರಾರು ಜಾತಿ, ಹತ್ತಾರು ಧರ್ಮಗಳು, ವಿವಿಧ ಆಚಾರ, ವಿಚಾರಗಳನ್ನು ಹೊಂದಿ, ವಿವಿಧೆತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಂತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ನೀಡಿದ ಸಂವಿಧಾನವೇ ಕಾರಣ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.

Constitution is the reason why democracy is firmly established: Murulidhara Halappa snr
Author
First Published Feb 26, 2024, 10:55 AM IST

  ತುಮಕೂರು :  ನೂರಾರು ಜಾತಿ, ಹತ್ತಾರು ಧರ್ಮಗಳು, ವಿವಿಧ ಆಚಾರ, ವಿಚಾರಗಳನ್ನು ಹೊಂದಿ, ವಿವಿಧೆತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿರುವ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆ ನಿಂತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬ್ ಅಂಬೇಡ್ಕರ್‌ ನೀಡಿದ ಸಂವಿಧಾನವೇ ಕಾರಣ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಅಭಿಪ್ರಾಯಪಟ್ಟಿದ್ದಾರೆ.

ನಗರದ ಟೌನ್‌ಹಾಲ್ (ಬಿಜಿಎಸ್) ವೃತ್ತದಲ್ಲಿ ಸಮಾಜ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ ಸಹಯೋಗ ದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಸುಮಾರು ಎರಡುವರೆ ವರ್ಷಗಳ ಕಾಲ ಪ್ರಪಂಚದ ವಿವಿಧ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಭಾರತಕ್ಕೆ ಹೊಂದು ವಂತಹ ಸಂವಿಧಾನವನ್ನು ರಚಿಸಿ, ಅದಕ್ಕೆ ಅಳವಡಿ ಕೊಳ್ಳುವಂತೆ ಮಾಡಿದ ಅವರ ಬುದ್ಧಿವಂತಿಕೆ ಹಾಗೂ ದೇಶಪ್ರೇಮ ಈ ನಾಡಿನ ಪ್ರತಿಯೊಬ್ಬ ಯುವಜನರಿಗೂ ಮಾದರಿಯಾಗಬೇಕು ಎಂದರು.

ಪ್ರಪಂಚದ ಬೃಹತ್ ಲಿಖಿತ ಸಂವಿಧಾನ ಭಾರತದ್ದಾಗಿದೆ. ೫೦೦ಕ್ಕೂ ಹೆಚ್ಚು ಕಲಂಗಳನ್ನು ಹೊಂದಿ, ಈ ದೇಶದ ಪ್ರತಿಯೊಬ್ಬ ಪ್ರಜೆಯೂ ಜಾತಿ, ಧರ್ಮ, ಭಾಷೆ, ಪ್ರದೇಶ, ಲಿಂಗ ತಾರತಮ್ಯದಿಂದ ಅವಕಾಶ ವಂಚಿತನಾಗಬಾರದು ಎಂಬ ಮಹದಾಸೆಯನ್ನು ಹೊಂದಿರುವ ಭಾರತದ ಸಂವಿಧಾನದ ಪೀಠಿಕೆಯಲ್ಲಿಯೇ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಘೋಷವಾಕ್ಯ ಹೊಂದಿದೆ.ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ನೂರಕ್ಕೂ ಹೆಚ್ಚು ತಿದ್ದುಪಡಿಗಳು ಆಗಿರುವುದು, ಆಯಾಯ ಕಾಲಘಟ್ಟಕ್ಕೆ ಅಗತ್ಯ ಮಾರ್ಪಾಡುಗಳನ್ನು ಮಾಡಲಾಗಿದೆಯೇ ಹೊರತು, ಸಂಪೂರ್ಣ ಬದಲಾವಣೆ ಆಸಾಧ್ಯ. ಆದರೆ ಕೆಲವರು ನಾವು ಸಂವಿಧಾನ ಬದಲಾಯಿಸಲೇ ಬಂದಿದ್ದೇವೆ ಎಂಬ ಮಾತುಗಳನ್ನಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹವರಿಗೆ ಜನತೆ ತಕ್ಕ ಪಾಠ ಕಲಿಸಬೇಕೆಂದು ಮುರುಳೀಧರ ಹಾಲಪ್ಪ ನುಡಿದರು.

ಭಾರತ ಸಂವಿಧಾನಕ್ಕೆ 75 ವರ್ಷಗಳಾದರೂ ಅದರ ಬಗ್ಗೆ ಜಾಗೃತಿ ಮೂಡಿಸುವ ಪರಿಸ್ಥಿತಿ ಬಂದೊದಗಿರುವುದು ನಿಜಕ್ಕೂ ವಿಪರ್ಯಾಸ. ಯುವಜನರು ಮೊದಲು ಸಂವಿಧಾನವನ್ನು ಓದಬೇಕು. ಕೇವಲ ನ್ಯಾಯವಾದಿಗಳೇ ಓದಬೇಕು ಎಂಬುದಿಲ್ಲ. ಸಂವಿಧಾನದಲ್ಲಿ ಎಲ್ಲವೂ ಅಡಕವಾಗಿದೆ. ಹಾಗೂ ಪ್ರತಿಯೊಬ್ಬರು ಸಂವಿಧಾನವನ್ನು ಓದಿ ತಿಳಿದುಕೊಳ್ಳಬೇಕಿದೆ ಎಂದರು.

ಬ್ಲಾಕ್ ಕ್ರಾಂಗೆಸ್ ಮಹಿಳಾ ಘಟಕದ ಮುಖಂಡರಾದ ಗೀತಾ ಮಾತನಾಡಿ, ಭಾರತದ ರಾಜ ಮಹಾರಾಜರ ಕಾಲದಲ್ಲಿ ಎರಡನೇ ಪ್ರಜೆಯಾಗಿದ್ದ ಮಹಿಳೆಯರಿಗೆ, ಸಮಾನ ಅವಕಾಶ ಕಲ್ಪಿಸಿಕೊಟ್ಟಿದ್ದು, ನಮ್ಮ ಸಂವಿಧಾನ. ಮಹಿಳೆಯರಿಗೆ ಶಿಕ್ಷಣ, ಮತದಾನದ ಹಕ್ಕು ನೀಡಿದವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ ಅವರು, ಇಡೀ ದೇಶದ ಮಹಿಳೆಯರು, ಹಕ್ಕು ಭಾದ್ಯತೆಗಳಿಗೆ ವರವಾಗಿರುವ ಸಂವಿಧಾನವನ್ನು ಮಹಿಳೆಯರು ಹೆಚ್ಚಾಗಿ ಓದಿ, ಅರ್ಥೈಸಿಕೊಂಡು, ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕೆಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣ್ಣಸಿದ್ದಯ್ಯ, ಸಿದ್ದಲಿಂಗೇಗೌಡ, ನಟರಾಜ್ ಶೆಟ್ಟಿ, ನಾಗಮಣಿ, ಬಿ.ಜಿ. ಲಿಂಗರಾಜು ಸೇರಿದಂತೆ ಹಲವರು ಸಂವಿಧಾನ ಜಾಗೃತಿ ಜಾಥಾ ಕುರಿತು ಮಾತನಾಡಿದರು. ಈ ವೇಳೆ ಮಹಿಳಾ ಮುಖಂಡರಾದ ಕಾವ್ಯಾ, ಟಿ.ಕೆ. ಆನಂದ್, ಸಂಜೀವ ಕುಮಾರ್‌, ಶಿವಾಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Follow Us:
Download App:
  • android
  • ios