Asianet Suvarna News Asianet Suvarna News

ಕಾಂಗ್ರೆಸ್ ಗ್ಯಾರಂಟಿಗಳೇ ಪಕ್ಷದ ಗೆಲುವಿಗೆ ಶ್ರೀರಕ್ಷೆ : ಡಿ.ಟಿ. ಶ್ರೀನಿವಾಸ್

ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿರುವುದರಿಂದ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಬಡವರ ಪಕ್ಷ ಎಂಬುದು ಮನದಟ್ಟಾಗಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಭವಿಷ್ಯ ನುಡಿದರು.

Congress guarantees Sriraksha for the party's victory: D.T. Srinivas snr
Author
First Published Feb 23, 2024, 10:14 AM IST

 ತುರುವೇಕೆರೆ :  ರಾಜ್ಯ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿರುವುದರಿಂದ ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಬಡವರ ಪಕ್ಷ ಎಂಬುದು ಮನದಟ್ಟಾಗಿದೆ. ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಭವಿಷ್ಯ ನುಡಿದರು.

ತಾಲೂಕಿನ ಹಲವಾರು ಶಾಲೆಗಳಲ್ಲಿರುವ ಶಿಕ್ಷಕರ ಮತಯಾಚನೆ ಮಾಡಿದ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಮತ್ತು ಬಿಜೆಪಿ ಅವರು ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಸಹ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪುಟ್ಟಣ್ಣ ಅವರು ಗೆಲುವು ಸಾಧಿಸಿರುವುದು ಹೆಮ್ಮೆಯ ಸಂಗತಿ. ಇದು ರಾಜ್ಯ ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಉತ್ತಮ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಕಳೆದ ಬಾರಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮಗೆ ಕೆಲವೇ ಮತಗಳ ಅಂತರದಿಂದ ಸೋಲಾಗಿತ್ತು. ತಮ್ಮನ್ನು ಸೋಲಿಸಿ ಗೆದ್ದಿದ್ದವರು ಶಿಕ್ಷಕರ ಹಿತವನ್ನೇ ಮರೆತರು. ಶಿಕ್ಷಕರ ಹತ್ತು ಹಲವಾರು ಸಮಸ್ಯೆಗಳನ್ನು ಈಡೇರಿಸಬಹುದಾಗಿತ್ತು. ಆಗ ಅವರ ಸರ್ಕಾರವೇ ಇತ್ತು. ಆದರೆ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ವಿಫಲರಾದರು. ಈಗ ಚುನಾವಣೆ ಹತ್ತಿರ ಬಂದಿರುವ ಈ ಹೊತ್ತಿನಲ್ಲಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಇದೊಂದು ಎಲೆಕ್ಷನ್ ಗಿಮಿಕ್. ಈ ಬಾರಿ ಅವರಿಗೆ ಶಿಕ್ಷಕರು ತಕ್ಕ ಶಾಸ್ತಿ ಮಾಡಲಿದ್ದಾರೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯರಾಗಿರುವ ವೈ.ಎ. ನಾರಾಯಣ ಸ್ವಾಮಿಯವರ ಹೆಸರನ್ನು ಹೇಳದೇ ಪರೋಕ್ಷವಾಗಿ ಟೀಕೆ ಮಾಡಿದರು.

ಕಳೆದ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ ಸಹ ಶಿಕ್ಷಕ ವೃಂದ ಹೆಚ್ಚು ಮತ ನೀಡುವ ಮೂಲಕ ಎರಡನೇ ಸ್ಥಾನವನ್ನು ಕಲ್ಪಿಸಿದ್ದರು. ಈ ಬಾರಿ ತಮ್ಮ ಬಗ್ಗೆ ಅನುಕಂಪವೂ ಇದ್ದು ತಮ್ಮನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವರು ಎಂಬ ವಿಶ್ವಾಸವಿದೆ ಎಂದರು.

ಬೇಡಿಕೆಗಳ ಈಡೇರಿಕೆ ಹೋರಾಟ:

ಹಲವು ವರ್ಷಗಳಿಂದ ಕ್ಷೇತ್ರದಲ್ಲಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರ ಮೂಲಭೂತ ಸಮಸ್ಯೆಗಳಾದ ನೂತನ ಪಿಂಚಣಿ ಯೋಜನೆಗೆ ಬದಲಾಗಿ ಹಳೆ ಪಿಂಚಣಿ ಜಾರಿ ಮಾಡುವುದು, ೭ ನೇ ವೇತನ ಆಯೋಗ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ತಾರತಮ್ಯ ನಿವಾರಣೆ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಮಕ್ಕಳು ೨೫:೨೫ ರ ಅನುಪಾತದಲ್ಲಿ ಮಾರ್ಪಾಡು ಮಾಡುವುದು, ೨೦೧೬ ರಿಂದ ಇಲ್ಲಿಯವರೆಗೆ ಖಾಲಿ ಇರುವ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ಸರ್ಕಾರಿ ನೌಕರರಂತೆ ಅನುದಾನಿತ ಶಾಲೆಗಳ ಶಿಕ್ಷಕರಿಗೂ ಆರೋಗ್ಯ ಸಂಜೀವಿನಿ ಯೋಜನೆಯನ್ನು ಒದಗಿಸುವುದು ಸೇರಿದಂತೆ ಸಾಕಷ್ಟು ಬೇಡಿಕೆಗಳ ಈಡೇರಿಕೆಗೆ ಶಿಕ್ಷಕರ ಪರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇನೆ ಎಂದು ಡಿ.ಟಿ. ಶ್ರೀನಿವಾಸ್ ಹೇಳಿದರು.

ಜೂನ್ ತಿಂಗಳಲ್ಲಿ ನಡೆಯುವ ಚುನಾವಣೆಯಲ್ಲಿ ಶಿಕ್ಷಕರು ತಮಗೆ ಮೊದಲ ಆದ್ಯತೆಯ ಮತವನ್ನು ನೀಡಿ ಸೇವೆ ಮಾಡಲು ಅವಕಾಶ ಮಾಡಿ ಕೊಡಬೇಕು ಎಂದು ಡಿ.ಟಿ.ಶ್ರೀನಿವಾಸ್ ವಿನಂತಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಳಾಲ ನಾಗರಾಜು, ಗುಡ್ಡೇನಹಳ್ಳಿ ಪ್ರಸನ್ನಕುಮಾರ್‌, ಮುಖಂಡರಾದ ಶಶಿಶೇಖರ್‌, ಯಜಮಾನ್ ಮಹೇಶ್, ಶ್ರೀನಿವಾಸ್, ಕೆಂಪರಾಜ್, ತ್ರೈಲೋಕಿ, ಮಾಳೆ ಕೃಷ್ಣಪ್ಪ, ತೋವಿನಕೆರೆ ರಂಗಸ್ವಾಮಿ, ನಂಜುಂಡಯ್ಯ, ಜೋಗಿಪಾಳ್ಯ ಶಿವರಾಜು, ಗುರುದತ್, ಗವಿರಂಗಪ್ಪ, ಪ್ರಕಾಶ್. ಮಹೇಂದ್ರ, ಪ್ರಕಾಶ್ ಇನ್ನಿತರರು ಇದ್ದರು.

Follow Us:
Download App:
  • android
  • ios