ಏರ್ ಇಂಡಿಯಾ ಸಂಚಾರ ನಾಳೆ ಸಂಪೂರ್ಣ ಸಹಜ: ಆದರೂ 75 ವಿಮಾನ ಹಾರಾಟ ರದ್ದು
ಸಿಬ್ಬಂದಿಯ ಸಾಮೂಹಿಕ ರಜೆ ಕಾರಣ ಸಂಕಷ್ಟದಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಂಸ್ಥೆ ನಿಧಾನವಾಗಿ ಸಹಯಸ್ಥಿತಿಯತ್ತ ಮರಳುತ್ತಿದೆ. ಭಾನುವಾರ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ.
ಮುಂಬೈ/ನವದೆಹಲಿ (ಮೇ.11): ಸಿಬ್ಬಂದಿಯ ಸಾಮೂಹಿಕ ರಜೆ ಕಾರಣ ಸಂಕಷ್ಟದಲ್ಲಿ ಸಿಲುಕಿದ್ದ ಏರ್ ಇಂಡಿಯಾ ಸಂಸ್ಥೆ ನಿಧಾನವಾಗಿ ಸಹಯಸ್ಥಿತಿಯತ್ತ ಮರಳುತ್ತಿದೆ. ಭಾನುವಾರ ಸಂಪೂರ್ಣ ಸಹಜ ಸ್ಥಿತಿಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ರಜೆ ಪಡೆದಿದ್ದ 300 ಸಿಬ್ಬಂದಿ ಪೈಕಿ ಅನೇಕರು ಕೆಲಸಕ್ಕೆ ಶುಕ್ರವಾರ ಮರಳಿದ್ದಾರೆ. ಆದರೂ ಶುಕ್ರವಾರ 75 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಭಾನುವಾರ ಇದು ಸಂಪೂರ್ಣ ಸರಿ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರದಿಂದ ನಡೆಯುತ್ತಿರುವ ಈ ಸಿಬ್ಬಂದಿ ಮುಷ್ಕರದಿಂದಾಗಿ ಎಕ್ಸ್‌ಪ್ರೆಸ್ ಈಗಾಗಲೇ 170ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಶನಿವಾರವೂ ಸಹ 45 - 50 ವಿಮಾನ ರದ್ದಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮುಷ್ಕರದಿಂದಾಗಿ ಸಂಸ್ಥೆಗೆ 30 ಕೋಟಿ ರು.ನಷ್ಟವಾಗಿದೆ. ಗುರುವಾರ ಏರಿಂಡಿಯಾ ತನ್ನ ಮುಷ್ಕರನಿರತ 25 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಬಳಿಕ ತನ್ನ ಆದೇಶ ವಾಪಸು ಪಡೆದಿತ್ತು.
ಏರಿಂಡಿಯಾ ಎಕ್ಸ್‌ಪ್ರೆಸ್ ಬಿಕ್ಕಟ್ಟು ಅಂತ್ಯ: ವೇತನ ಸೇರಿದಂತೆ ಇತರೆ ವಿಷಯ ಮುಂದಿಟ್ಟುಕೊಂಡು ಅನಾರೋಗ್ಯದ ನೆಪವೊಡ್ಡಿ ಸಾಮೂಹಿಕ ರಜೆ ಹಾಕಿದ್ದ ಏರಿಂಡಿಯಾ ಏಕ್ಸ್‌ಪ್ರೆಸ್‌ನ 300ಕ್ಕೂ ಹೆಚ್ಚು ಸಿಬ್ಬಂದಿ ತಮ್ಮ ಅಘೋಷಿತ ಮುಷ್ಕರ ಕೈಬಿಟ್ಟು ಗುರುವಾರ ಕೆಲಸಕ್ಕೆ ಮರಳಿದ್ದಾರೆ. ಹೀಗಾಗಿ ಕಳೆದ 2 ದಿನಗಳಿಂದ ಬಿಕ್ಕಟ್ಟು ಕೊನೆಗೂ ಸುಖಾಂತ್ಯವಾದಂತೆ ಆಗಿದೆ. ಸಿಬ್ಬಂದಿಗಳ ಬೇಡಿಕೆ ಕುರಿತು ಪರಿಶೀಲಿಸುವುದಾಗಿ ಏರಿಂಡಿಯಾ ಆಡಳಿತ ಮಂಡಳಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮತ್ತು 30 ಸಿಬ್ಬಂದಿಗಳ ವಜಾ ಆದೇಶ ಹಿಂಪಡೆಯುವ ಭರವಸೆ ನೀಡಿದ ಬೆನ್ನಲ್ಲೇ ಮುಷ್ಕರ ನಿರತ ಸಿಬ್ಬಂದಿ ಕರ್ತವ್ಯಕ್ಕೆ ಮರಳಿದ್ದಾರೆ.
ಹೇಳದೇ ಕೇಳದೇ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗೆ ಪರ್ಮನೆಂಟ್ ರಜೆ ನೀಡಿದ ಏರ್ ಇಂಡಿಯಾ..!
ಇದಕ್ಕೂ ಮೊದಲು ಗುರುವಾರ ಬೆಳಗ್ಗೆ 30 ಸಿಬ್ಬಂದಿಗಳನ್ನು ವಜಾ ಮಾಡಲಾಗಿತ್ತು. ಉಳಿದವರಿಗೆ ಕರ್ತವ್ಯಕ್ಕೆ ಮರಳಲು ಸಂಜೆ 4 ಗಂಟೆಯ ಗಡುವು ನೀಡಲಾಗಿತ್ತು. ಅದರ ಬೆನ್ನಲ್ಲೇ ಪ್ರಕರಣ ಸುಖಾಂತ್ಯವಾಗಿದೆ. ಕಳೆದ 2 ದಿನಗಳಲ್ಲಿ ಏರಿಂಡಿಯಾ ಎಕ್ಸ್‌ಪ್ರೆಸ್‌ನ 160ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾದ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಾವಿರಾರು ಪ್ರಯಾಣಿಕರು ಸಮಸ್ಯೆಗೆ ತುತ್ತಾಗಿದ್ದರು. ಏರಿಂಡಿಯಾದಲ್ಲಿ ವಿಲೀನ ಬಳಿಕ ತಮಗೆ ವೇತನ ಸೇರಿದಂತೆ ನಾನಾ ವಿಷಯದಲ್ಲಿ ತಾರತಮ್ಯ ಮಾಡಲಾಗಿದೆ ಎಂದು 300ಕ್ಕೂ ಹೆಚ್ಚು ಸಿಬ್ಬಂದಿ ಮಂಗಳವಾರ ರಾತ್ರಿಯಿಂದಲೇ ಸಾಮೂಹಿಕ ರಜೆ ಹಾಕಿ, ಮೊಬೈಲ್ ಸ್ವಿಚಾಫ್ ಮಾಡಿಕೊಂಡಿದ್ದರು.