Watch: 'ಆಡುವಷ್ಟು ದಿನ ನನ್ನ ಸರ್ವಸ್ವವನ್ನೂ ನೀಡ್ತೇನೆ..' ಭಾವುಕ ವಿಡಿಯೋದಲ್ಲಿ ನಿವೃತ್ತಿಯ ಸೂಚನೆ ನೀಡಿದ್ರಾ ಕಿಂಗ್ ಕೊಹ್ಲಿ!
ಆರ್‌ಸಿಬಿಯ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ತಮ್ಮ ನಿವೃತ್ತಿ ನಂತರದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು (ಮೇ.16): ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ನಿವೃತ್ತಿಯ ಸೂಚನೆ ನೀಡಿದ್ದಾರೆ. ತಮ್ಮ ಭಾವುಕ ಮಾತಿನಲ್ಲಿ ನಿವೃತ್ತಿ ನಂತರದ ದಿನಗಳು ಹೇಗಿರಲಿದೆ ಎನ್ನುವ ಬಗ್ಗೆ ಕೊಹ್ಲಿ ತಿಳಿಸಿದ್ದಾರೆ. ಹಾಗೇನಾದರೂ ಕ್ರಿಕೆಟ್‌ಗೆ ನಿವೃತ್ತಿ ನೀಡಿದರೆ, ಮತ್ತೆಂದೂ ನೀವು ನನ್ನನ್ನು ಕಾಣಲು ಸಾಧ್ಯವಿಲ್ಲ ಎಂದು 35 ವರ್ಷದ ಬಲಗೈ ಬ್ಯಾಟ್ಸ್‌ಮನ್ ಹೇಳಿದ್ದಾರೆ. ಅದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇರುವಷ್ಟು ದಿನ ನನ್ನ ಸರ್ವಸ್ವವನ್ನೂ ನೀಡಿ ಆಡುತ್ತೇನೆ ಎನ್ನುವ ಮೂಲಕ ನಿವೃತ್ತಿ ನಂತರ ಯಾವುದಾದರೂ ಐಪಿಎಲ್ ತಂಡದ ಭಾಗವಾಗುವ, ಕೋಚ್ ಅಥವಾ ಮೆಂಟರ್ ಆಗುವ ಎಲ್ಲಾ ಸಾಧ್ಯತೆಗಳನ್ನು ಅವರು ತಳ್ಳಿಹಾಕಿದ್ದಾರೆ. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು ಮಾತ್ರವಲ್ಲ, ಕಳೆದೊಂದು ದಶಕದಲ್ಲಿ ಟೀಮ್ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಕ್ರಿಕೆಟ್‌ನಲ್ಲಿ ಯಾರೂ ಅಳಿಸಲಾಗದಂಥ ಛಾಪು ಮೂಡಿಸಿರುವ ವಿರಾಟ್ ಕೊಹ್ಲಿ ತಮ್ಮ ಕ್ರೀಡಾ ಮನೋಭಾವದ ಮೂಲಕ ವಿಶ್ವದಾದ್ಯಂತ ಗೌರವವನ್ನು ಪಡೆದುಕೊಂಡಿದ್ದಾರೆ.
ಆರ್‌ಸಿಬಿ ಸೋಶಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಅಪ್‌ಲೋಡ್ ಆಗಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ತಮ್ಮ ಬಳಿ ಇನ್ನು ಹೆಚ್ಚಿನ ಸಮಯವಿಲ್ಲ ಎನ್ನುವುದು ಅರ್ಥವಾಗಿದೆ ಎಂದಿದ್ದಲ್ಲದೆ, ಇಲ್ಲಿಯವರೆಗೂ ಯಾವ ವಿಚಾರಗಳಿಗೂ ನನ್ನಲ್ಲಿ ಬೇಸರ ಉಳಿದುಕೊಂಡಿಲ್ಲ ಎಂದಿದ್ದಾರೆ.
ಒಬ್ಬ ಕ್ರೀಡಾಪಟುವಾಗಿ ನಮಗೂ ಒಂದು ಕೊನೆಯ ದಿನ ಅಂತಾ ಇರುತ್ತದೆ. ನಾನು ಇದರ ಬಗ್ಗೆಯೇ ಕೆಲಸ ಮಾಡುತ್ತಿದ್ದೇನೆ. ಯಾವತ್ತೂ ಒಬ್ಬ ಕ್ರೀಡಾಪಟು ಶಾಶ್ವತವಾಗಿ ಆಟವನ್ನು ಆಡಲು ಸಾಧ್ಯವಿಲ್ಲ. ಹಾಗಂತ ನಿವೃತ್ತಿಯಾಗುವ ದಿನದಲ್ಲಿ ಯಾವುದೇ ಕೊರಗು ಕೂಡ ಇರಬಾರದು. ಅಂಥದ್ದೊಂದು ಕೊರಗು ನನಗೆ ಖಂಡಿತಾ ಇರೋದಿಲ್ಲ. ಆದರೆ, ಒಮ್ಮೆ ಕ್ರಿಕೆಟ್ ಆಟ ಆಡೋದನ್ನ ನಿಲ್ಲಿಸಿದರೆ, ನಾನು ಇಲ್ಲೆಂದೂ ಕಾಣೋದಿಲ್ಲ. ಖಂಡಿತವಾಗಿ ಕೆಲವೊಂದು ವರ್ಷಗಳ ಕಾಲ ನೀವು ನನ್ನ ಕಾಣೋಕೆ ಸಾಧ್ಯವಿಲ್ಲ. ಹಾಗಾಗಿ ನನ್ನ ಆಡುವ ದಿನಗಳಲ್ಲಿ ಏನು ಸಾಧ್ಯವೋ ಎಲ್ಲವನ್ನೂ ನಾನು ನೀಡುತ್ತೇನೆ. ಅದೇ ಈಗ ನನ್ನ ಆಟಕ್ಕೆ ಸ್ಫೂರ್ತಿಯಾಗಿ ನಿಂತಿದೆ' ಎಂದು ಕೊಹ್ಲಿ ಹೇಳಿದ್ದಾರೆ.
' ಚಿಕು' ವಿರಾಟ್ ಕೊಹ್ಲಿಗೆ ಈ ಅಡ್ಡ ಹೆಸರು ಬಂದಿದ್ದೇಕೆ?
ಹಾಲಿ ಐಪಿಎಲ್‌ನಲ್ಲಿ 11 ಪಂದ್ಯಗಳಿಂದ 661 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೊಂದಿದ್ದಾರೆ. ಪ್ರತಿ ಪಂದ್ಯದಲ್ಲಿ 66.10ರಂತೆ ಅವರು ರನ್ ಬಾರಿಸಿದ್ದಾರೆ. ರಾಜಸ್ಥಾನ ವಿರುದ್ಧ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಕೂಡ ಬಾರಿಸಿದ್ದರು. ಆರ್‌ಸಿಬಿ ಆರಂಭದ ಏಳು ಪಂದ್ಯಗಳಲ್ಲಿ 1 ಗೆಲುವು ಕಂಡಿದ್ದರೆ, ನಂತರದ ಐದೂ ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ತಿರುಗೇಟು ನೀಡಿದೆ. ಅದರೊಂದಿಗೆ ಪ್ಲೇ ಆಫ್ ಸ್ಥಾನದ ನಿರೀಕ್ಷೆಯಲ್ಲೂ ಇದೆ. ಶನಿವಾರ ಆರ್‌ಸಿಬಿ ಹಾಗೂ ಚೆನ್ನೈ ನಡುವೆ ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದೆ.
Watch: ಬೆಂಗಳೂರು ಆಗಿ ಬದಲಾದ ಬ್ಯಾಂಗಲೂರ್, 'ಇದು ಆರ್‌ಸಿಬಿ ಹೊಸ ಅಧ್ಯಾಯ' ಎಂದು ಕನ್ನಡದಲ್ಲೇ ಹೇಳಿದ ಕೊಹ್ಲಿ!