Asianet Suvarna News Asianet Suvarna News

ನೀರಿಲ್ಲದೆ ಬಳ್ಳಾರಿಯ 20 ಜೀನ್ಸ್‌ ಯೂನಿಟ್‌ ಬಂದ್..!

ಬಳ್ಳಾರಿ ನಗರ ಹೊರವಲಯದಲ್ಲಿ 60 ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಕಳೆದ ನಾಲ್ಕೈದು ದಿನಗಳಲ್ಲಿ 20 ಯೂನಿಟ್‌ಗಳನ್ನು ನೀರಿಲ್ಲದೆ ಬಂದ್ ಮಾಡಲಾಗಿದೆ. ಉಳಿದವು ಟ್ಯಾಂಕರ್ ನೀರಿನ ಮೇಲೆ ಉಸಿರಾಡುತ್ತಿವೆ. ಯೂನಿಟ್‌ಗಳಿಗೆ ನೀರು ಪೂರೈಕೆಯಾಗುವ ಮುಂಡ್ರಗಿ ಪ್ರದೇಶದ ಬಳಿಯ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ಉಳಿದ ಘಟಕಗಳೂ ಬಂದ್ ಆಗುವ ಸಾಧ್ಯತೆಯಿದೆ.

20 Jeans Units Shut Down Due to No Water in Ballari grg
Author
First Published Apr 4, 2024, 7:28 AM IST

ಕೆ.ಎಂ.ಮಂಜುನಾಥ

ಬಳ್ಳಾರಿ(ಏ.04):  ಉತ್ಕೃಷ್ಟ ಗುಣಮಟ್ಟದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಕಂಡುಕೊಂಡ ಬಳ್ಳಾರಿ ಜೀನ್ಸ್‌ಗೂ ಈ ಬಾರಿ ಬರದ ಛಾಯೆ ಆವರಿಸಿದೆ. ಇಲ್ಲಿನ ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳಿಗೆ ನೀರಿನ ಅಭಾವ ತಲೆದೋರಿದೆ. ಕೆಲವು ಘಟಕಗಳು ಬಂದ್ ಆಗಿವೆ. ಕೆಲವು ಟ್ಯಾಂಕರ್ ನೀರನ್ನು ಆಶ್ರಯಿಸಿವೆ. ಇನ್ನು ಕೆಲವೇ ದಿನಗಳಲ್ಲಿ ಭಾಗಶಃ ಜೀನ್ಸ್ ಯೂನಿಟ್‌ಗಳು ಸ್ಥಗಿತಗೊಳ್ಳುವ ಸ್ಥಿತಿಯಲ್ಲಿವೆ.

ಬಳ್ಳಾರಿ ಜೀನ್ಸ್‌ ಉಡುಪುಗಳಿಗೆ ದಕ್ಷಿಣ ಭಾರತ ಸೇರಿದಂತೆ ವಿದೇಶಗಳಲ್ಲೂ ಬೇಡಿಕೆಯಿದೆ. ಇಲ್ಲಿನ ಜೀನ್ಸ್‌ ಉದ್ಯಮ ಎಷ್ಟರ ಮಟ್ಟಿಗೆ ಖ್ಯಾತಿ ಹೊಂದಿದೆಯೋ ಅಷ್ಟೇ ಶಾಪಗ್ರಸ್ಥ ಸ್ಥಿತಿಯನ್ನೂ ಎದುರಿಸುತ್ತಿದೆ. ಪ್ರಮುಖವಾಗಿ ಬೇಸಿಗೆಯಲ್ಲಿ ಜೀನ್ಸ್ ಯೂನಿಟ್‌ಗಳಿಗೆ ಅಗತ್ಯ ನೀರು ಪೂರೈಕೆಯಾಗುವುದಿಲ್ಲ. ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಬಾರಿಯಂತೂ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಟ್ಯಾಂಕರ್ ನೀರು ಖರೀದಿಗೂ ಆಸ್ಪದವಾಗುತ್ತಿಲ್ಲ ಎಂದು ಜೀನ್ಸ್‌ ಯೂನಿಟ್ ಮಾಲೀಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಜನತೆ ಎಚ್ಚೆತ್ತುಕೊಳ್ಳದಿದ್ದರೆ ಜಲಕಂಟಕ ಖಚಿತ..!

ಬತ್ತಿದ ಬೋರ್‌ವೆಲ್‌ಗಳು: 

ನಗರ ಹೊರವಲಯದಲ್ಲಿ 60 ಜೀನ್ಸ್‌ ವಾಷಿಂಗ್‌ ಯೂನಿಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಕಳೆದ ನಾಲ್ಕೈದು ದಿನಗಳಲ್ಲಿ 20 ಯೂನಿಟ್‌ಗಳನ್ನು ನೀರಿಲ್ಲದೆ ಬಂದ್ ಮಾಡಲಾಗಿದೆ. ಉಳಿದವು ಟ್ಯಾಂಕರ್ ನೀರಿನ ಮೇಲೆ ಉಸಿರಾಡುತ್ತಿವೆ. ಯೂನಿಟ್‌ಗಳಿಗೆ ನೀರು ಪೂರೈಕೆಯಾಗುವ ಮುಂಡ್ರಗಿ ಪ್ರದೇಶದ ಬಳಿಯ ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ಉಳಿದ ಘಟಕಗಳೂ ಬಂದ್ ಆಗುವ ಸಾಧ್ಯತೆಯಿದೆ.
ಟ್ಯಾಂಕರ್ ನೀರು ದುಬಾರಿಯಾಗಿರುವುದರಿಂದ ಹೊರಗಡೆಯಿಂದ ನೀರು ಖರೀದಿಸಿದರೆ, ವಾಷಿಂಗ್ ಯೂನಿಟ್ ನಿರ್ವಹಣೆ ಕಷ್ಟ ಎನ್ನುವ ಜೀನ್ಸ್ ಉದ್ಯಮಿಗಳು, ಜೀನ್ಸ್ ಯೂನಿಟ್‌ಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯ ಎನ್ನುತ್ತಾರೆ.

ಹೆಚ್ಚಿದ ನೀರಿನ ಸಮಸ್ಯೆ:

ಬಳ್ಳಾರಿಯ ಜೀನ್ಸ್‌ ಯೂನಿಟ್‌ಗಳು ಪ್ರತಿಬಾರಿ ಬೇಸಿಗೆಯಲ್ಲೂ ನೀರಿನ ಸಮಸ್ಯೆ ಎದುರಿಸುತ್ತವೆ. ಆದರೆ, ಈ ಬಾರಿ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಅಭಾವ ಮತ್ತಷ್ಟು ಹೆಚ್ಚಿದೆ. ಕೆಲವು ಜೀನ್ಸ್ ಉದ್ಯಮಿಗಳು, ದೂರದ ಪ್ರದೇಶಗಳಿಂದ ಬೋರ್‌ವೆಲ್ ನೀರನ್ನು ತರಲು ಪೈಪ್‌ಲೈನ್ ಮಾಡಿಕೊಂಡಿದ್ದಾರೆ. ಆದರೆ, ಬರದ ತೀವ್ರತೆಯಿಂದಾಗಿ ಬಹುತೇಕ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು: ಕುಡಿಯುವ ನೀರಲ್ಲಿ ವಾಹನ ತೊಳೆದ 22 ಮಂದಿಗೆ ದಂಡ

ಕಳೆದ ವರ್ಷದ ಯುಗಾದಿಗೆ ಹೋಲಿಸಿದರೆ ಈ ಬಾರಿ ಜೀನ್ಸ್‌ ಉಡುಪುಗಳ ವ್ಯಾಪಾರ ಚೇತರಿಕೆ ಕಂಡಿದೆ. ಆದರೆ, ಬೇಡಿಕೆಯಷ್ಟು ಪೂರೈಕೆ ಮಾಡಲು ನಮ್ಮಲ್ಲಿ ಮಾಲ್‌ ಇಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಿಂದ ಜೀನ್ಸ್‌ ಉಡುಪುಗಳಿಗೆ ಭಾರೀ ಬೇಡಿಕೆಯಿದೆಯಾದರೂ ಉತ್ಪಾದನೆ ಸ್ಥಗಿತಗೊಂಡಿರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಎನ್ನುತ್ತಾರೆ ಇಲ್ಲಿನ ಜೀನ್ಸ್ ಉದ್ಯಮಿಗಳು.

ನೀರಿಲ್ಲದೆ ಈಗಾಗಲೇ 20 ಜೀನ್ಸ್ ಯೂನಿಟ್‌ಗಳು ಬಂದ್ ಆಗಿವೆ. ಕೆಲವು ಯೂನಿಟ್‌ಗಳು ಟ್ಯಾಂಕರ್ ನೀರನ್ನು ಆಶ್ರಯಿಸಿವೆ. ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಉಳಿದ ಯೂನಿಟ್‌ಗಳು ಬಂದ್ ಆಗಲಿವೆ ಎಂದು ಜೀನ್ಸ್ ಉದ್ಯಮಿ ಪೋಲ್ಯಾಕ್ಸ್‌ ಮಲ್ಲಿಕಾರ್ಜುನ ತಿಳಿಸಿದ್ದಾರೆ.

Follow Us:
Download App:
  • android
  • ios