Chinaದಿಂದ ಯುದ್ಧೋತ್ಸಾಹ: ತೈವಾನ್‌ ವಶಕ್ಕೆ ಮಿಲಿಟರಿ ಬಳಸಲೂ ಹಿಂಜರಿಯುವುದಿಲ್ಲ ಎಂದ ಜಿನ್‌ಪಿಂಗ್‌

By Kannadaprabha NewsFirst Published Oct 17, 2022, 7:56 AM IST
Highlights

ತೈವಾನ್‌ ವಶಕ್ಕೆ ಮಿಲಿಟರಿ ಬಳಸಲು ಸಹ ಹಿಂಜರಿಯುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘೋಷಿಸಿದ್ದಾರೆ. ಈ ಹಿನ್ನೆಲೆ ಟಿಬೆಟ್‌, ಹಾಂಕಾಂಗ್ ಬಳಿಕ ಇನ್ನೊಂದು ದೇಶದ ಮೇಲೆ ಚೀನಾ ಕಣ್ಣಿಟ್ಟಿದೆ. 

ಬೀಜಿಂಗ್‌: ಟಿಬೆಟ್‌ (Tibet) ಹಾಗೂ ಹಾಂಕಾಂಗ್‌ಗಳನ್ನು (Hong Kong) ಸ್ವಾಧೀನಪಡಿಸಿಕೊಂಡ ನಂತರ ಇದೀಗ ತೈವಾನ್‌ (Taiwan) ದ್ವೀಪರಾಷ್ಟ್ರವನ್ನು ಕೂಡ ವಶಪಡಿಸಿಕೊಳ್ಳುವುದಾಗಿ ಚೀನಾ ಘೋಷಿಸಿದೆ. ಚೀನಾದ ಜೊತೆ ತೈವಾನ್‌ನ ಏಕೀಕರಣಕ್ಕಾಗಿ ನಾವು ಸೇನೆಯನ್ನು ಬಳಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಚೀನಾ (China) ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ (Xi Jinping) ಬಹಿರಂಗವಾಗಿ ಪ್ರಕಟಿಸಿದ್ದಾರೆ. ಇದಕ್ಕೆ ತೈವಾನ್‌ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ನಾವು ಹಿಂದೇಟು ಹಾಕುವುದಿಲ್ಲ, ಚೀನಾದ ಗುರಿ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದೆ. ಭಾನುವಾರ ಆರಂಭವಾದ ಒಂದು ವಾರದ ಕಮ್ಯುನಿಸ್ಟ್‌ ಪಕ್ಷದ 20ನೇ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಹಾಗೂ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಚೀನಾದಲ್ಲಿ ತೈವಾನನ್ನು ವಿಲೀನಗೊಳಿಸಲು ನಾವು ಎಲ್ಲಾ ಕ್ರಮ ಕೈಗೊಳ್ಳುತ್ತೇವೆ. ತೈವಾನ್‌ನಲ್ಲಿ ಯಾವುದೇ ರೀತಿಯ ಪ್ರತ್ಯೇಕತಾವಾದವನ್ನು ನಾವು ಒಪ್ಪುವುದಿಲ್ಲ. ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ನಮ್ಮ ಮಿಲಿಟರಿಯನ್ನು ಜಾಗತಿಕ ದರ್ಜೆಗೇರಿಸಿ ಇನ್ನಷ್ಟು ಆಧುನೀಕರಣಗೊಳಿಸುತ್ತೇವೆ ಎಂದು ಹೇಳಿದರು.

ತೈವಾನ್‌ ವಶಪಡಿಸಿಕೊಳ್ಳುವುದಾಗಿ ಕ್ಸಿ ಜಿನ್‌ಪಿಂಗ್‌ ಘೋಷಿಸಿದ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ 2,300ಕ್ಕೂ ಅಧಿಕ ಕಮ್ಯುನಿಸ್ಟ್‌ ಪಕ್ಷದ (Communist Party) ಪದಾಧಿಕಾರಿಗಳು ದೀರ್ಘ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ತೈವಾನ್‌ ತನ್ನನ್ನು ಸಾರ್ವಭೌಮ ದೇಶ ಎಂದು ಕರೆದುಕೊಳ್ಳುತ್ತದೆ. ಆದರೆ ಚೀನಾವು ತೈವಾನ್‌ ತನ್ನದೇ ಭಾಗವಾಗಿರುವ ದ್ವೀಪ ಪ್ರಾಂತ್ಯ ಎಂದು ಹೇಳಿಕೊಳ್ಳುತ್ತದೆ.

ಇದನ್ನು ಓದಿ: ಚೀನಾ ದಾಳಿ ಮಾಡಿದರೆ ನಾವು ತೈವಾನ್‌ ಪರ ನಿಲ್ಲುತ್ತೇವೆ: ಮಹತ್ವದ ಹೇಳಿಕೆ ನೀಡಿದ Joe Biden

China has also waged a major struggle against Taiwan separatism and is determined and able to oppose territorial integrity, Chinese President Xi Jinping said: Reuters https://t.co/HsE3SKC8ec

— ANI (@ANI)

ಒಂದು ದೇಶ, 2 ವ್ಯವಸ್ಥೆಗೆ ತೈವಾನ್‌ ವಿರೋಧ:
ಕ್ಸಿ ಜಿನ್‌ಪಿಂಗ್‌ ಹೇಳಿಕೆ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ತೈವಾನ್‌ ಅಧ್ಯಕ್ಷರ ಕಚೇರಿ, ‘ತೈವಾನ್‌ನ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವವನ್ನು ನಾವು ರಕ್ಷಿಸಿಕೊಳ್ಳುತ್ತೇವೆ. ನಮ್ಮ ಸಾರ್ವಭೌಮತೆಯನ್ನು ಸುರಕ್ಷಿತವಾಗಿರಿಸಿಕೊಳ್ಳಲು ನಾವು ಹಿಂದೇಟು ಹಾಕುವುದಿಲ್ಲ. ನಮ್ಮ ದೇಶದ ಜನರು ತೈವಾನ್‌ ವಿಷಯದಲ್ಲಿ ಬೀಜಿಂಗ್‌ ಹೊಂದಿರುವ ‘ಒಂದು ದೇಶ, ಎರಡು ವ್ಯವಸ್ಥೆ’ ನೀತಿಯನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ. ತೈವಾನ್‌ ಕೊಲ್ಲಿಯಲ್ಲಿ ಶಾಂತಿ ಕಾಪಾಡುವುದು ಎರಡೂ ಕಡೆಯ ಜವಾಬ್ದಾರಿಯಾಗಿದೆ. ಇದಕ್ಕೆ ಯುದ್ಧ ಒಂದು ಆಯ್ಕೆಯೇ ಅಲ್ಲ’ ಎಂದು ಹೇಳಿದೆ.

ಭಾರತದ ‘ಕ್ವಾಡ್‌’ ವಿರುದ್ಧ ಚೀನಾ ಕಿಡಿ
ಅಮೆರಿಕ (United States of America) , ಭಾರತ (India), ಆಸ್ಪ್ರೇಲಿಯಾ (Australia) ಹಾಗೂ ಜಪಾನ್‌ (Japan) ಪಾಲುದಾರಿಕೆಯ ‘ಕ್ವಾಡ್‌’ ಒಕ್ಕೂಟದ ವಿರುದ್ಧ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕಿಡಿಕಾರಿದ್ದು, ಇಂತಹ ಗುಂಪುಗಳನ್ನು ತಮ್ಮ ದೇಶ ವಿರೋಧಿಸುತ್ತದೆ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

ಇದನ್ನೂ ಓದಿ: ನ್ಯಾನ್ಸಿ ಪೆಲೋಸಿ ಭೇಟಿ ಬಳಿಕ ತೈವಾನ್‌ ಬಳಿ ಮಿಲಿಟರಿ ಕಸರತ್ತು ಆರಂಭಿಸಿದ ಚೀನಾ

ತೈವಾನ್‌ ಮೇಲೆ ಒಂದು ವೇಳೆ ಚೀನಾ ಆಕ್ರಮಣ ಮಾಡಿದರೆ, ಅಮೆರಿಕ ಪಡೆಗಳು (US Forces) ದ್ವೀಪ ರಾಷ್ಟ್ರವನ್ನು ರಕ್ಷಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿಕೆ ನೀಡಿದ್ದಾರೆ. ಈ ಮೂಲಕ ಈ ವಿಚಾರದ ಬಗ್ಗೆ ಈವರೆಗಿನ ಅತ್ಯಂತ ಸ್ಪಷ್ಟ ಹೇಳಿಕೆಯನ್ನು ವಿಶ್ವದ ದೊಡ್ಡಣ್ಣ ಕಳೆದ ತಿಂಗಳು ಘೋಷಣೆ ಮಾಡಿತ್ತು. 

click me!