
ಜಿನೆವಾ(ಜು.05): ವಿಶ್ವದಾದ್ಯಂತ 1 ಕೋಟಿಗೂ ಹೆಚ್ಚು ಜನರನ್ನು ಬಾಧಿಸಿ, 5.30 ಲಕ್ಷ ಜನರನ್ನು ಬಲಿ ಪಡೆದಿರುವ ಕೊರೋನಾ ಸೋಂಕಿನ ಮೂಲ ಚೀನಾ ಎಂಬ ಆರೋಪಗಳ ಬೆನ್ನಲ್ಲೇ, ಈ ಕುರಿತು ತನಿಖೆ ನಡೆಸಲು ಅಲ್ಲಿಗೆ ತಂಡವೊಂದನ್ನು ಕಳುಹಿಸಿಕೊಡಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿರ್ಧರಿಸಿದೆ. ಈ ನಡುವೆ ಕೊರೋನಾ ಸೋಂಕಿನ ಕುರಿತು ನಮಗೆ ಮೊದಲ ಮಾಹಿತಿ ಸಿಕ್ಕಿದ್ದು, ಚೀನಾ ಸರ್ಕಾರದಿಂದಲ್ಲ. ಬದಲಾಗಿ ಚೀನಾದಲ್ಲಿನ ನಮ್ಮ ಕಚೇರಿಯಿಂದ ಎಂದು ಡಬ್ಲ್ಯುಎಚ್‌ಒ ಹೇಳಿಕೊಂಡಿದೆ. ಇದರಿಂದಾಗಿ ಕೊರೋನಾ ವೈರಸ್ ವಿಷಯದಲ್ಲಿ ಕಪಟಿ ಚೀನಾ ಚೆಲ್ಲಾಟವಾಡಿತ್ತು ಎಂಬುದು ಖಚಿತವಾದಂತಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೋಸ್ ಆ್ಯಡನೋಮ್, ‘ಕೊರೋನಾದ ಮೂಲದ ಯಾವುದೆಂದು ತಿಳಿಯುವುದು ಅತ್ಯವಶ್ಯ ಎಂಬುದನ್ನು ನಾವು ಆರಂಭದಿಂದಲೂ ಹೇಳಿಕೊಂಡೇ ಬಂದಿದ್ದೇವೆ. ಇದು ವಿಜ್ಞಾನ, ಇದು ಸಾರ್ವಜನಿಕ ಆರೋಗ್ಯದ ವಿಷಯ. ವೈರಸ್‌ನ ಕುರಿತು ಎಲ್ಲಾ ಮಾಹಿತಿ ಸಿಕ್ಕರೆ ನಾವು ಅದರ ವಿರುದ್ಧ ಹೆಚ್ಚು ಉತ್ತಮ ರೀತಿಯಲ್ಲಿ ಹೋರಾಟ ನಡೆಸಬಹುದು. ಹೀಗಾಗಿಯೇ ಈ ಕುರಿತು ಪರಿಶೀಲನೆಗಾಗಿ ನಾವು ಮುಂದಿನ ವಾರ ಚೀನಾಕ್ಕೆ ತಂಡವೊಂದನ್ನು ಕಳುಹಿಸಿಕೊಡಲಿದ್ದೇವೆ. ಈ ತಂಡ ನಮಗೆ ಕೊರೋನಾದ ಉಗಮದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲು ಅವಕಾಶ ನೀಡುವ ಮತ್ತು ಭವಿಷ್ಯದಲ್ಲಿ ಅದಕ್ಕೆ ಸಂಬಂಧಿಸಿದಂತೆ ಸಿದ್ಧತೆ ನಡೆಸಲು ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.
ಮೊದಲ ಮಾಹಿತಿ ನಮ್ಮದೇ:
ಈ ನಡುವೆ ಕೊರೋನಾ ಸೋಂಕಿನ ಕುರಿತು ನಮಗೆ ಮೊದಲ ಮಾಹಿತಿ ಸಿಕ್ಕಿದ್ದು, ಚೀನಾ ಸರ್ಕಾರದಿಂದಲ್ಲ. ಬದಲಾಗಿ ಚೀನಾದಲ್ಲಿನ ನಮ್ಮ ಕಚೇರಿ ಎಂದು ಡಬ್ಲ್ಯುಎಚ್‌ಒ ಹೇಳಿಕೊಂಡಿದೆ. 2019ರ ಡಿ.31ರಂದೇ ಚೀನಾ ಮಾಧ್ಯಮಗಳನ್ನು ಉಲ್ಲೇಖಿಸಿ ಬೀಜಿಂಗ್‌ನಲ್ಲಿರುವ ನಮ್ಮ ಕಚೇರಿಯಿಂದ ನ್ಯುಮೋನಿಯಾ ಮಾದರಿಯ ಸೋಂಕು ಹರಡಿದ ಬಗ್ಗೆ ಮಾಹಿತಿ ರವಾನಿಸಲಾಗಿತ್ತು. ಈ ಬಗ್ಗೆ ನಾವು 2020ರ ಜ.1 ಮತ್ತು ಜ.2ರಂದು ಚೀನಾದಿಂದ ಮಾಹಿತಿ ಕೋರಿದ್ದೆವು. ಜ.3ರಂದು ಚೀನಾ ನಮಗೆ ಇಂಥದ್ದೊಂದು ಸೋಂಕಿನ ಮಾಹಿತಿ ರವಾನಿಸಿತ್ತು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.
ಈ ಹಿಂದೆ ಹಲವು ದೇಶಗಳು ಕೊರೋನಾ ಮೂಲ ಚೀನಾ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ನೇರಾನೇರ ಚೀನಾವೇ ವೈರಸ್ ಹುಟ್ಟುಹಾಕಿದ್ದು ಎಂದು ಆರೋಪಿಸಿದ್ದರು. ಅದಕ್ಕೆ ಚೀನಾ ವೈರಸ್ ಎಂದೇ ಕರೆದಿದ್ದರು. ಆದರೆ ಚೀನಾ ಮಾತ್ರ ಇಂಥ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕುತ್ತಲೇ ಬಂದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ