ಹಂದಿ ಜ್ವರಕ್ಕಿಂತ ಕೊರೋನಾ 10 ಪಟ್ಟು ಮಾರಣಾಂತಿಕ| ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ
ಜಿನೆವಾ(ಏ.14): ವಿಶ್ವದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿರುವ ಕೊರೋನಾ ವೈರಸ್ 2009ರಲ್ಲಿ ಕಾಣಿಸಿಕೊಂಡ ಹಂದಿ ಜ್ವರ (ಎಚ್1ಎನ್1)ಗಿಂತ 10 ಪಟ್ಟು ಮಾರಣಾಂತಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೋನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಇದು ಅತ್ಯಂತ ಮಾರಣಾಂತಿಕ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧಾನೋಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ವಿಶ್ವದಲ್ಲಿ 1.14 ಲಕ್ಷ ಮಂದಿಯನ್ನು ಬಲಿ ಪಡೆದಿರುವ ಕೊರೋನಾವನ್ನು ಹರಡುವುದನ್ನು ಸಂಪೂರ್ಣವಾಗಿ ತಡೆಯಲು ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆಯ ಅಗತ್ಯವಿದೆ. ಇಡೀ ವಿಶ್ವ ಪರಸ್ಪರ ಸಂಪರ್ಕ ಹೊಂದಿದೆ. ಇದರಿಂದಾಗಿ ಕೊರೋನಾ ವೈರಸ್ ಮತ್ತೆ ಕಾಣಿಸಿಕೊಳ್ಳುವ ಅಪಾಯವಿದೆ ಎಂದು ಅವರು ಹೇಳಿದ್ದಾರೆ.