
ಜಿನೇವಾ(ಅ.07): ಮಕ್ಕಳಿಗಾಗಿ ತಯಾರಿಸಲಾಗಿರುವ ವಿಶ್ವದ ಮೊದಲ ಮಲೇರಿಯಾ ಲಸಿಕೆಗೆ(Malaria Vaccine) ವಿಶ್ವ ಆರೋಗ್ಯ ಸಂಸ್ಥೆ(World Health Organisation) ಬುಧವಾರ ಅನುಮೋದನೆ ನೀಡಿದೆ. ‘ವಿಜ್ಞಾನ, ಮಕ್ಕಳ ಆರೋಗ್ಯ ಮತ್ತು ಮಲೇರಿಯಾ ನಿಯಂತ್ರಣ’ ಎನ್ನುವ ಯೋಜನೆಯಂತೆ ಈ ಲಸಿಕೆ ಮಾನ್ಯತೆ ನೀಡಲಾಗಿದೆ.
ಈ ಲಸಿಕೆ ನೀಡಿಕೆಯನ್ನು ಪ್ರಾಯೋಗಿಕ ಯೋಜನೆಯನ್ನಾಗಿ ಆಫ್ರಿಕಾದ ದೇಶಗಳಾದ ಘಾನಾ, ಕೀನ್ಯಾ ಮತ್ತು ಮಲಾವಿಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ 2019ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆ ಯಶಸ್ವಿಯಾದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ಲಸಿಕೆಗೆ ಮಾನ್ಯತೆ ನೀಡಿದೆ.
‘ಇದು ಕೋವಿಡ್ ಲಸಿಕೆಯಂತೆ ಶಕ್ತಶಾಲಿಯಾದ ಲಸಿಕೆಯಾಗಿದ್ದು, ಮಲೇರಿಯಾ ವಿರುದ್ಧ ಹೋರಾಡಲು ಸಹಕಾರಿಯಾಗಲಿದೆ. ಆದರೆ ಸಂಪೂರ್ಣವಾಗಿ ಮಲೇರಿಯಾವನ್ನು ಹೋಗಲಾಡಿಸಲು ಕೇವಲ ಲಸಿಕೆ ಸಾಕಾಗುವುದಿಲ್ಲ. ಸೊಳ್ಳೆ ಪರದೆಗಳನ್ನು ಬಳಸುವುದು ಮುಂತಾದ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
5 ವರ್ಷದ ಕೆಳಗಿನ ಮಕ್ಕಳಿಗೆ ಮಲೇರಿಯಾ ಬಹುವಾಗಿ ಕಾಡುತ್ತದೆ. ವರ್ಷಕ್ಕೆ ಸುಮಾರು 4 ಲಕ್ಷ ಮಂದಿ ಮಲೇರಿಯಾಗೆ ಬಲಿಯಾಗುತ್ತಾರೆ.
ಏನಿದು ಮಲೇರಿಯಾ? ಹೇಗೆ ಹರಡುತ್ತೆ?
ಮಲೇರಿಯಾ ಜ್ವರ ಕೇವಲ ನಮ್ಮ ಭಾರತ ದೇಶದ ಸಮಸ್ಯೆಯಲ್ಲ. ಇದು ಇಡೀ ವಿಶ್ವದಾದ್ಯಂತ ಅತ್ಯಂತ ಮಾರಕ ಕಾಯಿಲೆ ಎಂಬ ಕುಖ್ಯಾತಿ ಪಡೆದಿದೆ. ವಿಶೇಷವಾಗಿ ಉಷ್ಣವಲಯ ಪ್ರದೇಶಗಳಲ್ಲಿ ಇದು ಜನರಲ್ಲಿ ನಡುಕ ಹುಟ್ಟಿಸಿದೆ. ಆಶ್ಚರ್ಯ ಎಂದರೆ ಅನಾಫಿಲಿಸ್ ಹೆಣ್ಣು ಸೊಳ್ಳೆ ಪ್ಲಾಸ್ಮೊಡಿಯಂ ಎಂಬ ಪ್ಯಾರಾಸೈಟ್ ನಿಂದ ತಾನೂ ಸೋಂಕಿಗೆ ಒಳಗಾಗಿ ಮನುಷ್ಯರಿಗೂ ಸೋಂಕನ್ನು ಹತ್ತಿಸುತ್ತದೆ.
ಒಂದು ಸಲ ಈ ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುವುದು ಮತ್ತು ಕೆಂಪು ರಕ್ತದ ಕಣಗಳನ್ನು ನಾಶ ಪಡಿಸುವುದು. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ವಿಪರೀತ ಜ್ವರ, ಹಲ್ಲು ಕಚ್ಚಿಕೊಳ್ಳುವಷ್ಟು ಚಳಿ ಜೊತೆಗೆ ಮೈ ಕೈನೋವು ಇವರಿಗೆ ಸಾಮಾನ್ಯ ಸಮಸ್ಯೆಗಳಾಗಿ ಕಾಡುತ್ತವೆ. ಮೊದಲೇ ಇವುಗಳ ಬಗ್ಗೆ ಅರಿತು ಚಿಕಿತ್ಸೆ ಒದಗಿಸಿದರೆ ವಿಪರೀತ ಕಾಯಿಲೆ ಬಿದ್ದು ಹಾಸಿಗೆ ಹಿಡಿದು ಕೊನೆಗೆ ಸಾವು ಸಂಭವಿಸುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ