ಈಗ ಬಾಹ್ಯಾಕಾಶಕ್ಕೆ ಹಾರಿದವರು ಯಾರ್‍ಯಾರು? ಅವರ ಕೆಲಸವಾದರೂ ಏನು?

Published : Jun 27, 2025, 07:33 AM IST
Shubanshu Shukla

ಸಾರಾಂಶ

ಇತಿಹಾಸದಲ್ಲಿ ಅತ್ಯಂತ ಅನುಭವಿ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಅಮೆರಿಕ ಮೂಲದ ಪೆಗ್ಗಿ ವಿಟ್ಸನ್‌, ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ, ತಿಬೋರ್ ಕಾಪು  ಬಾಹ್ಯಾಕಾಶಕ್ಕೆ

 4 ದಶಕಗಳ ಬಳಿಕ ಬಾಹ್ಯಾಕಾಶಕ್ಕೆ ಹಾರಿರುವ ಭಾರತದ ಶುಭಾಂಶು ಶುಕ್ಲಾ ಮೂಲ ಉತ್ತರಪ್ರದೇಶದ ಲಖನೌ. 1985ರಲ್ಲಿ ಜನಿಸಿದ ಇವರು, 1999ರಲ್ಲಿ ನಡೆದ ಕಾರ್ಗಿಲ್‌ ಯುದ್ಧದಿಂದ ಪ್ರಭಾವಿತರಾಗಿ ಸೇನೆ ಸೇರಿದರು. ಸೇನೆ ಸೇರಲು ಅಗತ್ಯವಾದ ಎನ್‌ಡಿಎ ಪರೀಕ್ಷೆಗೆ ಅರ್ಜಿ ಹಾಕಿದ್ದ ವಿಷಯವನ್ನು ಶುಕ್ಲಾ ಮನೆಯಲ್ಲಿ ಹೇಳಿರಲಿಲ್ಲ. ದುರದೃಷ್ಟವೆಂದರೆ ಎನ್‌ಡಿಎ ಪರೀಕ್ಷೆ ದಿನವೇ ಅವರ ಅಕ್ಕನ ಮದುವೆ ನಿಗದಿಯಾಗಿತ್ತು. ಆದರೂ ಯಾರಿಗೂ ಹೇಳದ ಶುಕ್ಲಾ, ಮದುವೆಗೆ ಚಕ್ಕರ್ ಹೊಡೆದು ಪರೀಕ್ಷೆ ಬರೆದು ಬಂದಿದ್ದರು. ಪರೀಕ್ಷೆ ಉತ್ತೀರ್ಣರಾದ ಬಳಿಕವೇ ಮನೆಯಲ್ಲಿ ಈ ವಿಷಯ ತಿಳಿಸಿದ್ದರು.

ಹೀಗೆ ಎನ್‌ಡಿಎ ಪರೀಕ್ಷೆ ಉತ್ತೀರ್ಣರಾದ ಶುಕ್ಲಾ ಬಳಿಕ 2005ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಿಂದ ಕಂಪ್ಯೂಟರ್ಸ್‌ ಸೈನ್ಸ್‌ನಲ್ಲಿ ಪದವಿ ಪಡೆದರು.

ಬಳಿಕ ಬೆಂಗಳೂರಿನ ಐಐಎಸ್‌ಸಿಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್‌ ಆಫ್‌ ಟೆಕ್ನಾಲಜಿ ಪದವಿ ಪಡೆದರು. ಬಳಿಕ ಸೇನೆಯಲ್ಲಿ ಫ್ಲೈಯಿಂಗ್‌ ಬ್ರ್ಯಾಂಚ್‌ಗೆ ಸೇರಿದ ಶುಕ್ಲಾರನ್ನು ತರಬೇತಿ ಬಳಿಕ, 2006ರಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಪೈಲಟ್‌ ಆಗಿ ನೇಮಿಸಲಾಯಿತು. 2000 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಇವರು ಸುಖೋಯ್‌ 30 ಎಂಕೆಐ, ಮಿಗ್ಗ್ 21, ಮಿಗ್‌ 29, ಜಾಗ್ವಾರ್‌, ಹಾಕ್‌, ಡೋರ್ನಿಯರ್‌ 228, ಎನ್‌ 32 ವಿಮಾನ ಹಾರಿಸಿದ ಅನುಭವ ಹೊಂದಿದ್ದಾರೆ. 2019ರಲ್ಲಿ ಶುಕ್ಲಾ ಸೇರಿದಂತೆ ಹಲವರನ್ನು ಗಗನಯಾನಕ್ಕೆ ಆಯ್ಕೆ ಮಾಡಲಾಗಿತ್ತು. 2020ರಲ್ಲಿ ಅಂತಿಮ ನಾಲ್ವರ ಪಟ್ಟಿಯಲ್ಲಿ ಸ್ಥಾನ ಪಡೆದ ಶುಕ್ಲಾ, ಐಎಸ್‌ಎಸ್‌ಗೆ ಪ್ರಯಾಣ ಬೆಳೆಸಲಿರುವವರು ಎಂದು 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ ಅವರೀಗ ಆಕ್ಸಿಯೋಂ-4ರ ಪೈಲಟ್‌ ಆಗಿದ್ದಾರೆ.

ದೇಸೀ ಖಾದ್ಯಗಳೊಂದಿಗೆ ಅಂತರಿಕ್ಷಕ್ಕೆ

ಜೂ.25ರಂದು 3 ವಿದೇಶಿ ಗಗನಯಾತ್ರಿಗಳೊಂದಿಗೆ ನಭಕ್ಕೆ ನೆಗೆದ ಶುಕ್ಲಾ, ತಮ್ಮೊಂದಿಗೆ ಮೈಸೂರಿನ ಸಿಎಫ್‌ಟಿಆರ್‌ಐ ತಯಾರಿಸಿದ ಹಲ್ವಾ ಕೊಂಡೊಯ್ದಿದ್ದರು. ಜತೆಗೆ ಭಾರತದ ಹೆಸರುಕಾಳು ಹಲ್ವಾ, ಮೊಸರನ್ನ, ಮಾವಿನ ರಸವನ್ನೂ ತಮ್ಮೊಂದಿಗೆ ಕೊಂಡೊಯ್ದಿದು, ತವರಿನ ಸವಿಯನ್ನು ಸಹೋದ್ಯೋಗಿಗಳಿಗೆ ಉಣಿಸಲಿದ್ದಾರೆ.

ಪೆಗ್ಗಿ ವಿಟ್ಸನ್

ಇತಿಹಾಸದಲ್ಲಿ ಅತ್ಯಂತ ಅನುಭವಿ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಗೆ ಪಾತ್ರರಾಗಿರುವ ಅಮೆರಿಕ ಮೂಲದ ಪೆಗ್ಗಿ ವಿಟ್ಸನ್‌(65) ಅವರು ಆಕ್ಸಿಯೋಂ-4 ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾಸಾದ ನಿವೃತ್ತ ಗಗನಯಾತ್ರಿ ಆಗಿರುವ ಇವರು, ಈ ತಂಡದಲ್ಲಿರುವ ಹಿರಿಯ, ಅನುಭವಸ್ಥ ಹಾಗೂ ಏಕೈಕ ಮಹಿಳೆಯಾಗಿದ್ದಾರೆ. ಐಎಸ್‌ಎಸ್‌ಗೆ ತೆರಳಲಿರುವ ಮೊದಲ ಮಹಿಳಾ ಕಮಾಂಡರ್‌ ಕೂಡ ಆಗಿದ್ದಾರೆ. ಇವರು ಜೀವರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಈಗಾಗಲೇ 675 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿರುವ ಇವರು, ಇತರೆ ಅಮೆರಿಕನ್ನರಿಗಿಂತ ಹೆಚ್ಚು ಸಮಯವನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. 10 ಬಾರಿ(60 ಗಂಟೆ 21 ನಿಮಿಷ) ಬಾಹ್ಯಾಕಾಶ ನಡಿಗೆ ಮಾಡಿರುವ ಇವರು, ಸುದೀರ್ಘ ಬಾಹ್ಯಾಕಾಶ ನಡಿಗೆ ಕೈಗೊಂಡವರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.

ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ

ಪೋಲೆಂಡ್‌ ಮೂಲದ ಸ್ಲಾವೋಸ್ಜ್ ಉಜ್ನಾನ್ಸ್ಕಿ ವಿಸ್ನಿಯೆವ್ಸ್ಕಿ(41) ಅವರು, 2022ರಿಂದ ಯುರೋಪ್‌ ಬಾಹ್ಯಾಕಾಶ ಸಂಸ್ಥೆಯ ಸದಸ್ಯರಾಗಿದ್ದಾರೆ. ಎಲೆಕ್ಟ್ರಾನಿಕ್ಸ್‌ ವಿಷಯದ ತಜ್ಞರಾಗಿರುವ ಇವರು, ವಿಕಿರಣ ಪರಿಣಾಮಗಳ ಕುರಿತು ಪುಸ್ತಕವನ್ನೂ ಬರೆದಿದ್ದಾರೆ. ವಿಸ್ನಿಯೆವ್ಸ್ಕಿ ಬಾಲ್ಯದಿಂದಲೇ ಬಾಹ್ಯಾಕಾಶಾಸಕ್ತರಾಗಿದ್ದು, ಅಂತರಿಕ್ಷಕ್ಕೆ ಪ್ರವೇಶಿಸುತ್ತಿರುವ ಪೋಲೆಂಡ್‌ನ 2ನೇ ವ್ಯಕ್ತಿ ಎನಿಸಿಕೊಂಡಿದ್ದಾರೆ.

ತಿಬೋರ್ ಕಾಪು

ಹಂಗೇರಿಯ ತಿಬೋರ್‌ ಕಾಪು(33) ಅವರು ತಮ್ಮ ದೇಶದಿಂದ ಬಾಹ್ಯಾಕಾಶಕ್ಕೆ ಹೋದ 2ನೆಯವರಾಗಿದ್ದಾರೆ. ವೃತ್ತಿಯಲ್ಲಿ ಅಭಿವೃದ್ಧಿ ಅಭಿಯಂತರ(ಡೆವಲಪ್‌ಮೆಂಟ್‌ ಎಂಜಿನಿಯರ್‌) ಆಗಿರುವ ಇವರು, ಔಷಧಗಳು, ಲಾಜಿಸ್ಟಿಕ್ಸ್ ಮತ್ತು ಏರೋಸ್ಪೇಸ್ ಕ್ಷೇತ್ರಗಳಲ್ಲಿ ನಿಪುಣರಾಗಿದ್ದಾರೆ. ಈ ಮೊದಲು, ಹೈಬ್ರಿಡ್ ಕಾರುಗಳಿಗೆ ಬ್ಯಾಟರಿಗಳು ಮತ್ತು ಗಗನಯಾತ್ರಿಗಳು ವಿಕಿರಣದಿಂದ ರಕ್ಷಣೆಗಾಗಿ ಬಳಸುವ ಔಷಧೀಯ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ 2023ರಲ್ಲಿ, ‘ಹಂಗೇರಿಯಿಂದ ಕಕ್ಷೆಗೆ’ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಆಯ್ಕೆಯಾದ 4 ಹಂಗೇರಿ ಪ್ರಜೆಗಳಲ್ಲಿ ಒಬ್ಬರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!