
ವಿಶ್ವದ ದಕ್ಷಿಣ ಭಾಗದೊಂದಿಗೆ ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಅಟ್ಲಾಂಟಿಕ್‌ನಾದ್ಯಂತ ಭಾರತದ ಪಾಲುದಾರಿಕೆಗಳನ್ನು ಬಲಪಡಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ಐದು ದೇಶಗಳ ಪ್ರವಾಸ ಆರಂಭಿಸಿದ್ದಾರೆ. ಇಂದಿನಿಂದ ಜುಲೈ 9 ರವರೆಗೆ ನಿಗದಿಯಾಗಿರುವ ಈ ಭೇಟಿಯಲ್ಲಿ ಪ್ರಧಾನಿ ದಕ್ಷಿಣ ಆಫ್ರಿಕಾದ ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಗೆ ಭೇಟಿ ನೀಡಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಈ ಬಗ್ಗೆ ಪ್ರಧಾನಿ ಪ್ರವಾಸ ಆರಂಭಕ್ಕೂ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಿದ್ದು, ಐದು ದೇಶಗಳಿಗೆ ನನ್ನ ಭೇಟಿ ಜಾಗತಿಕ ದಕ್ಷಿಣದಾದ್ಯಂತ ನಮ್ಮ ಸ್ನೇಹದ ಬಂಧಗಳನ್ನು ಬಲಪಡಿಸುತ್ತದೆ. ಅಟ್ಲಾಂಟಿಕ್‌ನ ಎರಡೂ ಬದಿಗಳಲ್ಲಿ ನಮ್ಮ ಪಾಲುದಾರಿಕೆಗಳನ್ನು ಬಲಪಡಿಸುತ್ತದೆ ಮತ್ತು ಬ್ರಿಕ್ಸ್(BRICS),ಆಫ್ರಿಕನ್ ಯೂನಿಯನ್, ECOWAS ಮತ್ತು CARICOM ನಂತಹ ಬಹುಪಕ್ಷೀಯ ವೇದಿಕೆಗಳಲ್ಲಿ ನಮ್ಮ ಸಹಭಾಗಿತ್ವವನ್ನು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಟ್ವಿಟ್ ಮಾಡಿದ್ದಾರೆ.
ಪ್ರಧಾನಿಯವರು ಒಟ್ಟು ಐದು ದೇಶಗಳಿಗೆ ಭೇಟಿ ನೀಡಲಿದ್ದು, ಯಾವ ದೇಶದಲ್ಲಿ ಯಾವ ರೀತಿಯ ಒಪ್ಪಂದಗಳನ್ನು ಮಾಡಲಿದ್ದಾರೆ ಹಾಗೂ ಇದರ ಪರಿಣಾಮಗಳು ಏನು ಎಂಬುದನ್ನು ಇಲ್ಲಿ ನೋಡೊಣ.
ಘಾನಾ ದೇಶಕ್ಕೆ ಪ್ರಧಾನಿ ಭೇಟಿ:
ಘಾನಾ ದೇಶವೂ ಪಶ್ಚಿಮ ಆಫ್ರಿಕಾದ ಪ್ರಮುಖ ಪಾಲುದಾರ ರಾಷ್ಟ್ರ ಹೀಗಾಗಿ ಪ್ರಧಾನಿ ಮೊದಲು ಘಾನ ದೇಶಕ್ಕೆ ಭೇಟಿ ನೀಡಲಿದ್ದಾರೆ. ಇಂದು ಘಾನಾ ತಲುಪಲಿರುವ ಪ್ರಧಾನಿಗೆ ಅಲ್ಲಿನ ಅಧ್ಯಕ್ಷ ಜಾನ್ ಡ್ರಾಮಾನಿ ಮಹಾಮ ಅವರು ಆತಿಥ್ಯ ನೀಡಲಿದ್ದಾರೆ. ಈ ಭೇಟಿಯು ಹೂಡಿಕೆ, ಇಂಧನ, ಆರೋಗ್ಯ, ಭದ್ರತೆ ಮತ್ತು ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸುವತ್ತ ಗಮನ ಹರಿಸಲಿದೆ.
ಘಾನಾವನ್ನು ಜಾಗತಿಕ ದಕ್ಷಿಣದಲ್ಲಿ ಮೌಲ್ಯಯುತ ಪಾಲುದಾರ ಎಂದು ಕರೆದಿರುವ ಮೋದಿ, ಆಫ್ರಿಕನ್ ಒಕ್ಕೂಟ ಮತ್ತು ಪಶ್ಚಿಮ ಆಫ್ರಿಕಾದ ರಾಜ್ಯಗಳ ಆರ್ಥಿಕ ಸಮುದಾಯ (ECOWAS)ದಲ್ಲಿ ಅದರ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದ್ದಾರೆ. ಜೊತೆಗೆ ಪ್ರಧಾನಿ ಘಾನಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನು ಸಹ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿ ಎರಡೂ ದೇಶಗಳಿಗೆ ಸಿಕ್ಕ ಗೌರವ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಜೂನ್ 3ಕ್ಕೆ ಇಲ್ಲಿಂದ ಪ್ರಧಾನಿ ಟ್ರಿನಿಡಾಡ್‌ಗೆ ತೆರಳಲಿದ್ದಾರೆ.
ಟ್ರಿನಿಡಾಡ್ ಮತ್ತು ಟೊಬಾಗೋ
ಜುಲೈ 3 ರಿಂದ 4 ರವರೆಗೆ ಪ್ರಧಾನಿ ಮೋದಿ ಟ್ರಿನಿಡಾಡ್ ಮತ್ತು ಟೊಬಾಗೋದಲ್ಲಿ ಇರಲಿದ್ದಾರೆ. ಈ ಕೆರಿಬಿಯನ್ ರಾಷ್ಟ್ರವು ಭಾರತದ ಜೊತೆ ಆಳವಾಗಿ ಬೇರೂರಿರುವ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಜನರ ಸಂಪರ್ಕ ಹೊಂದಿರುವ ರಾಷ್ಟ್ರವಾಗಿದ್ದು, ಈ ವರ್ಷ ಈ ದೇಶಕ್ಕೆ ಮೊದಲ ಭಾರತೀಯರು ಆಗಮಿಸಿ 180 ವರ್ಷಗಳನ್ನು ಪೂರೈಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಅಲ್ಲದೇ ಪ್ರಧಾನಿ ಮೋದಿಯವರು ಅಲ್ಲಿನ ಅಧ್ಯಕ್ಷೆ ಕ್ರಿಸ್ಟೀನ್ ಕಾರ್ಲಾ ಕಂಗಲೂ ಮತ್ತು ಇತ್ತೀಚೆಗೆ ತಮ್ಮ ಎರಡನೇ ಅವಧಿಯನ್ನು ಆರಂಭಿಸಿದ ಪ್ರಧಾನಿ ಕಮಲಾ ಪರ್ಸಾದ್-ಬಿಸ್ಸೆಸ್ಸರ್ ಅವರನ್ನು ಭೇಟಿ ಮಾಡಲಿದ್ದಾರೆ. ಇವರ ಜೊತೆಗಿನ ಈ ಭೇಟಿಯು ನಮ್ಮನ್ನು ಒಂದುಗೂಡಿಸುವ ಪೂರ್ವಜರು ಮತ್ತು ರಕ್ತಸಂಬಂಧದ ವಿಶೇಷ ಬಂಧಗಳನ್ನು ಮರುಸ್ಥಾಪಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಮೋದಿ ಹೇಳಿಕೊಂಡಿದ್ದಾರೆ.
ಅರ್ಜೆಂಟೀನಾಗೆ ಪ್ರಧಾನಿ ಭೇಟಿ :ತೈಲ, ಅನಿಲ ವ್ಯವಹಾರಗಳ ಮೇಲೆ ಗಮನ
ಪ್ರಧಾನಿ ಮೋದಿಯವರ ಮುಂದಿನ ಭೇಟಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ ಆಗಿದ್ದು, 57 ವರ್ಷಗಳಲ್ಲಿಯೇ ಭಾರತೀಯ ಪ್ರಧಾನಿಯೊಬ್ಬರು ಅರ್ಜೆಂಟೀನಾಕ್ಕೆ ನೀಡುವ ಮೊದಲ ದ್ವಿಪಕ್ಷೀಯ ಭೇಟಿ ಇದಾಗಿದೆ. ಅರ್ಜೆಂಟೀನಾವನ್ನು ಲ್ಯಾಟಿನ್ ಅಮೆರಿಕಾದಲ್ಲಿ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಜಿ 20 ನಲ್ಲಿ ಸಕ್ರಿಯ ಸಹಯೋಗಿಯಾಗಿ ನೋಡಲಾಗುತ್ತದೆ. ಹೀಗಾಗಿ ಇಲ್ಲಿ ಪ್ರಧಾನಿ ಮೋದಿ ಕೃಷಿ, ಇಂಧನ, ವ್ಯಾಪಾರ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳಂತಹ ಕ್ಷೇತ್ರಗಳ ಬಗ್ಗೆ ಅಧ್ಯಕ್ಷ ಜೇವಿಯರ್ ಮಿಲೀ ಅವರೊಂದಿಗೆ ಮಾತುಕತೆ ನಡೆಸುವ ನಿರೀಕ್ಷೆಯಿದೆ.
ಆಹಾರ ಮತ್ತು ಇಂಧನ ಭದ್ರತೆಯ ಕ್ಷೇತ್ರಗಳಲ್ಲಿ ಅರ್ಜೆಂಟೀನಾ ಭಾರತಕ್ಕೆ ಪ್ರಮುಖ ಪಾಲುದಾರನಾಗುತ್ತಿದೆ. ಭಾರತವು ಅರ್ಜೆಂಟೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಆದರೆ ದೇಶದ ತೈಲ ಮತ್ತು ಅನಿಲ ನಿಕ್ಷೇಪಗಳಲ್ಲಿ ಆಸಕ್ತಿ ಸ್ಥಿರವಾಗಿ ಬೆಳೆಯುತ್ತಿದೆ. ಈ ಸಹಕಾರವನ್ನು ಬಲಪಡಿಸಲು, ಭಾರತೀಯ ಮತ್ತು ಅರ್ಜೆಂಟೀನಾದ ಇಂಧನ ಕಂಪನಿಗಳು ಎಲ್‌ಎನ್‌ಜಿ ಮತ್ತು ಇತರ ಹೈಡ್ರೋಕಾರ್ಬನ್ ವಲಯಗಳಲ್ಲಿ ಸಂಭಾವ್ಯ ಸಹಯೋಗದ ಮೇಲೆ ಕೇಂದ್ರೀಕರಿಸಿದ ತಿಳುವಳಿಕೆ ಒಪ್ಪಂದಗಳಿಗೆ (ಎಂಒಯು) ಸಹಿ ಹಾಕಿವೆ.
ಬ್ರೆಜಿಲ್ ಪ್ರವಾಸ
ಬ್ರೆಜಿಲ್ ಪ್ರವಾಸದ ನಡುವೆ ಪ್ರಧಾನಿ ಮೋದಿ ಜುಲೈ 6 ಹಾಗೂ 7 ರಂದು ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿಯೂ ಭಾಗವಹಿಸಲಿದ್ದಾರೆ. ನಂತರ ಬ್ರೆಸಿಲಿಯಾದಲ್ಲಿ ಪ್ರಧಾನಿ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರನ್ನು ಭೇಟಿ ಮಾಡಲಿದ್ದಾರೆ. ಸುಮಾರು ಆರು ದಶಕಗಳಲ್ಲಿ ಭಾರತೀಯ ಪ್ರಧಾನಿಯೊಬ್ಬರು ಬ್ರೆಜಿಲ್ ರಾಜಧಾನಿಗೆ ನೀಡಿದ ಮೊದಲ ಭೇಟಿ ಇದಾಗಿರಲಿದೆ.
ಕೊನೆಯದಾಗಿ ನಮಿಬೀಯಾಗೆ ಭೇಟಿ ನೀಡುವುದರೊಂದಿಗೆ ಪ್ರಧಾನಿ ಮೋದಿಯವರ 5 ದಿನಗಳ ಪ್ರವಾಸ ಕೊನೆಗೊಳ್ಳಲಿದೆ. ನಮೀಬಿಯಾದಲ್ಲಿ ಪ್ರಧಾನಿ ಅಧ್ಯಕ್ಷ ನೆಟುಂಬೊ ನಂದಿ-ದೈತ್ವಾ ಅವರನ್ನು ಭೇಟಿಯಾಗಲಿದ್ದಾರೆ. ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ ವಸಾಹತುಶಾಹಿ ವಿರೋಧಿ ಹೋರಾಟದ ಇತಿಹಾಸವನ್ನು ಪ್ರತಿಬಿಂಬಿಸುತ್ತದೆ.
ಈ ಭೇಟಿ ವೇಳೆ ಮೋದಿ ಅವರು ನಮೀಬಿಯಾ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಜಾಗತಿಕ ದಕ್ಷಿಣದಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸಲು, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಾದ್ಯಂತ ಕಾರ್ಯತಂತ್ರದ ಸಂಬಂಧಗಳನ್ನು ಹೆಚ್ಚಿಸಲು ಮತ್ತು ಉದಯೋನ್ಮುಖ ಆರ್ಥಿಕತೆಗಳನ್ನು ಪ್ರತಿನಿಧಿಸುವ ಬಹುಪಕ್ಷೀಯ ವೇದಿಕೆಗಳಲ್ಲಿ ಆವೇಗವನ್ನು ಹೆಚ್ಚಿಸಲು ಪ್ರಧಾನ ಮಂತ್ರಿಯವರ ಈ ಐದು ರಾಷ್ಟ್ರಗಳ ಪ್ರವಾಸವನ್ನು ಪ್ರಮುಖ ರಾಜತಾಂತ್ರಿಕ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ