
ಯಾರಾದರೂ ನಿಮಗೆ 1.5 ಲಕ್ಷ ರೂಪಾಯಿಗಳನ್ನು ಕೊಡುತ್ತಾರೆ ಎಂದರೆ ನೀವು ಮನೆಯಲ್ಲಿ ಜಿರಳೆಗಳನ್ನು ಬಿಟ್ಟುಕೊಳ್ಳುತ್ತೀರಾ? ಅಯ್ಯೋ ಇದೇನಿದು ವಿಚಿತ್ರ ಬೇಡಿಕೆ ಅನಿಸುತ್ತದೆ ಅಲ್ಲವಾ? ಆದರೆ ಸತ್ಯವಾಗಲೂ ಅಮೆರಿಕಾದ ಸಂಸ್ಥೆಯೊಂದು ಮನೆಯಲ್ಲಿ ನೂರು ಜಿರಳೆಗಳನ್ನು ಬಿಟ್ಟುಕೊಂಡರೆ ರೂ. 1.5 ಲಕ್ಷ ಕೊಡುತ್ತದೆ. ಪೆಸ್ಟ್ ಕಂಟ್ರೋಲ್ ಸಂಸ್ಥೆ ಈ ಆಫರ್ ಅನ್ನು ಗ್ರಾಹಕರಿಗೆ ನೀಡಿದೆ. ಸಂಸ್ಥೆ ಈ ಬಗ್ಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಿದ್ದು, ನೂರು ಜಿರಳೆಗಳನ್ನು ಮನೆಯೊಳಗೆ ಬಿಡಲಾಗುತ್ತದೆ. ನಂತರ ಸಂಸ್ಥೆಯಿಂದ ಪೆಸ್ಟ್ ಕಂಟ್ರೋಲ್ ಸೇವೆ ನೀಡಲಾಗುತ್ತದೆ. ಇದು ಜಿರಳೆಗಳ ಮೇಲೆ ಎಷ್ಟು ಪ್ರಭಾವಿಯಾಗಲಿದೆ ಎಂಬುದನ್ನು ತಿಳಿಯಲು ಈ ಆಫರ್ ನೀಡಿರುವುದಾಗಿ ಸಂಸ್ಥೆ ತಿಳಿಸಿದೆ.
ಐದರಿಂದ ಏಳು ಮನೆಗಳಿಗೆ ಈ ಆಫರ್ ನೀಡಲಾಗುತ್ತಿದ್ದು, ನಂತರ ಮನೆಯ ವಿಡಿಯೋ ಮಾಡಲಾಗುತ್ತದೆ. ಇದಕ್ಕೆ ಅವಕಾಶ ಕೊಡುವ ಮಾಲಿಕರಿಗೆ ಮಾತ್ರ ಈ ಆಫರ್ ಅನ್ವಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಜಿರಳೆಗಳನ್ನು ಸಂಪೂರ್ಣವಾಗಿ ಮನೆಯಿಂದ ಹೊರಹಾಕುವ ಪ್ರಕ್ರಿಯೆಯ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಸಂಸ್ಥೆಯ ಪ್ರಾಡಕ್ಟ್ ಪರೀಕ್ಷೆ ಮಾಡಿದಂತಾಗುತ್ತದೆ. ಈ ಕಾರಣಕ್ಕಾಗಿಯೇ ಸಂಸ್ಥೆ ಈ ಪ್ರಯೋಗವನ್ನು ಆರಂಭಿಸಿದೆ. ಮನೆಯ ಮಾಲಿಕ ಒಪ್ಪಂದಕ್ಕೆ ಸಹಿ ಹಾಕಬೇಕು ಮತ್ತು ಕನಿಷ್ಟ 21 ವರ್ಷ ವಯಸ್ಕರಾಗಿರಬೇಕು ಎಂದೂ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಶಾಲೆಯ ಪ್ರಿನ್ಸಿಪಲ್, ಟೀಚರ್, ಸೂಪರ್‌ವೈಸರ್ ಮತ್ತು ವಿದ್ಯಾರ್ಥಿನಿ ಎಲ್ಲರಿಗೂ ಒಬ್ಬನೇ ಗಂಡ!
ಒಂದು ತಿಂಗಳ ಪ್ರಯೋಗದ ಸಮಯದಲ್ಲಿ ಮನೆಯ ಮಾಲೀಕರು ಬೇರೆ ಯಾವುದೇ ಪೆಸ್ಟ್ ಕಂಟ್ರೋಲ್ ಔಷದಿ ಬಳಸುವಂತಿಲ್ಲ ಎಂದೂ ಸಂಸ್ಥೆ ತಾಕೀತು ಮಾಡಿದೆ. ಮೂವತ್ತು ದಿನಗಳಲ್ಲಿ ಜಿರಳೆಗಳನ್ನು ಓಡಿಸಲಾಗದಿದ್ದರೆ, ವಿನೂತನ ಪ್ರಯತ್ನ ಕೈಬಿಟ್ಟು, ಹಳೆಯ ಮೆಥಡ್‌ನಲ್ಲೇ ಪೆಸ್ಟ್ ಕಂಟ್ರೋಲ್ ಮಾಡಿಕೊಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಪೆಸ್ಟ್ ವಲ್ಡ್ ಪ್ರಕಾರ ಅಮೆರಿಕಾದ ಜಿರಳೆಗಳನ್ನು ಸುಲಭವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಅವು ಅತಿ ವೇಗವಾಗಿ ಮರಿಗಳನ್ನು ಹಾಕುತ್ತವೆ ಮತ್ತು ಸಾಮಾನ್ಯ ಔಷಧಿಗಳಿಂದ ಅವುಗಳನ್ನು ಸಾಯಿಸಲು ಕೂಡ ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ: Weird Marriage: ಮದುಮಗನ್ನಲ್ಲ, ಅವನ ತಂಗಿಯನ್ನ ಮದುವೆ ಆಗ್ತಾಳೆ ಮದುಮಗಳು
ಅಮೆರಿಕಾದ ಪೆಸ್ಟೆಕ್ ಸಂಸ್ಥೆಯ ಪ್ರಕಾರ, ಅಮೆರಿಕಾದ ಹೆಣ್ಣು ಜಿರಳೆಗಳು ವಾರವೊಂದಕ್ಕೆ 32 ಮೊಟ್ಟೆಗಳನ್ನು ಇಡುತ್ತವೆ. ಮತ್ತು 24ರಿಂದ 38 ದಿನಗಳೊಳಗೆ ಅವು ಮರಿಯಾಗುತ್ತವೆ. ಅಂದರೆ ಒಂದು ವಾರ ಇಟ್ಟ ಮೊಟ್ಟೆ ಮರಿಯಾಗುವ ಹೊತ್ತಿಗೆ ಇನ್ನೂ ಐದಾರು ಬಾರಿ ಮೊಟ್ಟೆ ಇಟ್ಟಿರುತ್ತದೆ. ಇದರಿಂದ ಜಿರಳೆಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಕಷ್ಟ ಎಂದು ಸಂಸ್ಥೆ ಅಭಿಪ್ರಾಯ ಪಡುತ್ತದೆ.
ಈ ರೀತಿಯ ವಿಚಿತ್ರ ಆಫರ್‌ಗಳು ಆಗಾಗ ನಮ್ಮ ಕಿವಿಗೆ ಬೀಳುತ್ತಲೇ ಇರುತ್ತವೆ. ಹಾರಾರ್ ಸಿನೆಮಾ ಒಬ್ಬರೇ ವೀಕ್ಷಿಸಿದರೆ ಇಷ್ಟು ಕೊಡುತ್ತೀವಿ, ತಿನ್ನಲಾರದಷ್ಟು ಆಹಾರವಿಟ್ಟು ತಿಂದರೆ ಇಷ್ಟು ಕೊಡುತ್ತೀವಿ, ಎಂಬೆಲ್ಲಾ ವಿಚಿತ್ರ ಆಫರ್‌ಗಳ ಬಗ್ಗೆ ನೀವೂ ಆಗಾಗ ಕೇಳಿರುತ್ತೀರಿ. ಅದೇ ರೀತಿಯ ಆಫರ್ ಇದಾಗಿದ್ದು, ಅಮೆರಿಕಾದಲ್ಲಿ ಮಾತ್ರ ಇದು ಅನ್ವಯವಾಗಲಿದೆ. ಅಮೆರಿಕಾದ ಕಾಂಟಿನೆಂಟ್‌ನಲ್ಲಿರುವ ಯಾವುದೇ ಮನೆಯ ಮಾಲೀಕರು ಈ ಆಫರ್ ಲಾಭ ಪಡೆಯಬಹುದು. ಆದರೆ ಸಂಪೂರ್ಣವಾಗಿ ಜಿರಳೆಗಳು ಮನೆ ಖಾಲಿ ಮಾಡಲಿಲ್ಲ ಎಂದರೆ, ಮತ್ತೆ ಲಕ್ಷಾಂತರ ಖರ್ಚು ಮಾಡಿ ಪೆಸ್ಟ್ ಕಂಟ್ರೋಲ್ ಸೇವೆ ಪಡೆಯಬೇಕು. ಮಾಲೀಕರು ಮುಂದೆ ಬರುತ್ತಾರ, ಅಥವಾ ಸಹವಾಸವೇ ಬೇಡ ಎಂದು ಸುಮ್ಮನಾಗುತ್ತಾರ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ