ವಿಯೆಟ್ನಾಂ(Vietnam) ಈಗ ತನ್ನ ದೇಶಕ್ಕೆ ಪ್ರವಾಸಿಗರನ್ನು ಸೆಳೆಯಲು ಹೊಸ ಆಕರ್ಷಣೆಯೊಂದನ್ನು ನಿರ್ಮಿಸಿದೆ. ಸೇತುವೆ ಮೇಲೆ ನಿಂತರೆ ನೆಲ ಕಾಣುವಂತಹ ಗಾಜಿನ ಸೇತುವೆಯೊಂದನ್ನು ನಿರ್ಮಿಸಿದೆ. ವಾಯುವ್ಯ ಸೊನ್ ಲಾ (Son La)ಪ್ರಾಂತ್ಯದ ಸೊಂಪಾದ ಕಾಡಿನ ಮೇಲೆ 150 ಮೀಟರ್ (490 ಅಡಿ) ಎತ್ತರದಲ್ಲಿ ಈ ಗಾಜಿನ ತಳದ ಸೇತುವೆಯನ್ನು ವಿಯೆಟ್ನಾಂ ಶುಕ್ರವಾರ (ಏ.29) ಲೋಕಾರ್ಪಣೆ ಮಾಡಿದ್ದು, ಇದು ಪ್ರವಾಸಿಗರಿಗೆ ಹೊಸ ಆಕರ್ಷಣೆ ಆಗಿದೆ.
ಫ್ರೆಂಚ್ ಉತ್ಪಾದಿಸುವ ಟೆಂಪರ್ಡ್ ಗ್ಲಾಸ್‌ನಿಂದ ಈ ಸೇತುವೆ ಮಾಡಲ್ಪಟ್ಟಿದೆ, ಸೇತುವೆಗೆ ಬ್ಯಾಚ್ ಲಾಂಗ್ ಎಂದು ಹೆಸರಿಡಲಾಗಿದ್ದು, ಬ್ಯಾಚ್ ಲಾಂಗ್ ಎಂದರೆ ವೈಟ್ ಡ್ರ್ಯಾಗನ್ ಎಂದರ್ಥ. ಸೇತುವೆಯ ಮೇಲೆ ಸಾಗುವ ಪ್ರವಾಸಿಗರಿಗೆ ಸೇತುವೆ ಕೆಳಭಾಗದ ಕಮರಿಯಲ್ಲಿ ಹಸಿರಿನ ಅದ್ಭುತ ನೋಟ ಉಣ ಬಡಿಸುತ್ತದೆ. ವರದಿಗಳ ಪ್ರಕಾರ, ಸೇತುವೆಯ ಒಟ್ಟು ಉದ್ದ 632 ಮೀಟರ್ (690 ಗಜಗಳು). ಎರಡು ಬೆಟ್ಟಗಳ ಮಧ್ಯೆ ಈ ಸೇತುವೆ ಸಂಪರ್ಕದಂತೆ ಇದೆ. ಈ ಸೇತುವೆಗೆ ತಲುಪುವ ಮೊದಲು ಸಾಗುವ ಹಾದಿಯಲ್ಲಿ ಸಿಗುವ ಬಂಡೆಗಳ ಸುತ್ತಲೂ ಹಾವುಗಳಿವೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ.
ಸೇತುವೆಯನ್ನು ನಿರ್ಮಿಸಲು ಫ್ರೆಂಚ್-ಉತ್ಪಾದಿತ ಟೆಂಪರ್ಡ್ ಗ್ಲಾಸ್ (tempered glass) ಅನ್ನು ಬಳಸಲಾಗಿದೆ. ಇದು ಏಕಕಾಲಕ್ಕೆ 450 ಜನರನ್ನು ಬೆಂಬಲಿಸುವಷ್ಟು ಸಧೃಡವಾಗಿದೆ. ಈ ಸೇತುವೆಯಲ್ಲಿ ಸಾಗುವ ಮೂಲಕ ಪ್ರವಾಸಿಗರು ಸೇತುವೆಯ ಕೆಳಭಾಗದಲ್ಲಿರುವ ಹಸಿರಿನ ಅದ್ಭುತ ನೋಟವನ್ನು ಪಡೆಯಬಹುದು. ಸೇತುವೆಯ ಮೇಲೆ ನಿಂತಾಗ, ಪ್ರಯಾಣಿಕರು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಸಾಧ್ಯವಾಗುತ್ತದೆ ಎಂದು ಸೇತುವೆಯ ನಿರ್ವಾಹಕರ ಪ್ರತಿನಿಧಿ ಹೋಂಗ್ ಮನ್ಹ್ ಡುಯ್ (Hoang Manh Duy) ಹೇಳಿರುವುದನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪತ್ನಿ ಮೇಲಿನ ಪ್ರೀತಿ: ರಾಫ್ಟಿಂಗ್ ಬೋಟ್‌ನಲ್ಲಿ ಥೈಲ್ಯಾಂಡ್‌ನಿಂದ ಮುಂಬೈಗೆ ಹೊರಟ ವ್ಯಕ್ತಿ
ಚೀನಾದ ಗುವಾಂಗ್‌ಡಾಂಗ್‌ನಲ್ಲಿರುವ (Guangdong) ಇದೇ ರೀತಿಯ ಗಾಜಿನ ಸೇತುವೆ 526 ಮೀಟರ್ ಉದ್ದವಿದೆ. ಆದರೆ ವಿಯೆಟ್ನಾಂನಲ್ಲಿ ಈಗ ನಿರ್ಮಾಣವಾಗಿರುವ ಗಾಜಿನ ಸೇತುವೆ 632 ಮೀಟರ್ ಉದ್ಧವಿದ್ದು, ವಿಶ್ವದ ಅತ್ಯಂತ ಉದ್ದದ ಗಾಜಿನ ಸೇತುವೆ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಸಮುದ್ರ ಮಟ್ಟದಿಂದ 3 ಸಾವಿರದ 500 ಅಡಿ ಎತ್ತರದ ಪಾರದರ್ಶಕ ಗಾಜಿನ ಸೇತುವೆ ಚೀನಾದ ಯುಂಟೈ ಪರ್ವತ ಪ್ರದೇಶದಲ್ಲಿ 2015ರಲ್ಲಿ ನಿರ್ಮಾಣಗೊಂಡು ಪ್ರವಾಸಿಗರ ಭೇಟಿಗೆ ಮುಕ್ತಗೊಳಿಸಲಾಗಿತ್ತು. ಇದು ಪ್ರವಾಸಿಗರಿಗೆ ಭೀಕರ ಮತ್ತು ರೋಮಾಂಚಕ ಅನುಭವವನ್ನು ಒಟ್ಟಿಗೆ ನೀಡುತ್ತದೆ. ಯುಂಟೈ ಪರ್ವತ ಭಾಗದ ಹೆನನ್ ಪ್ರಾಂತ್ಯದಲ್ಲಿ ಯು ಆಕಾರದಲ್ಲಿ ಈ ಸೇತುವೆಯಿದೆ. ಈ ಸೇತುವೆಯ ಅತ್ತಿತ್ತ ಎರಡು ಪದರಗಳಲ್ಲಿ ಬೇಲಿ ನಿರ್ಮಿಸಲಾಗಿದ್ದು, ಮೂರು ಪದರಗಳ ನಡೆದುಕೊಂಡು ಹೋಗುವ ನೆಲ ಭಾಗವನ್ನು ಹೊಂದಿದೆ. ಪ್ರತಿ ಚದರಡಿ ತುಂಡು ಗ್ಲಾಸಿನ ದಪ್ಪ 27 ಮಿಲಿ ಮೀಟರ್ ಇದ್ದು, ಸಾವಿರದ 700 ಪೌಂಡು ತೂಕವನ್ನು ಹೊಂದಿದೆ. ಆದರೂ ಕೂಡ ಕೆಲವರಿಗೆ ಇದರ ಮೇಲೆ ನಡೆದುಕೊಂಡು ಹೋಗುವುದೆಂದರೆ ಭಯ.
ಗುಜರಿಯಿಂದ ಬುಗ್ಗಾಟಿ ಸ್ಪೋರ್ಟ್ಸ್ ಕಾರು ನಿರ್ಮಿಸಿದ ವಿಯೆಟ್ನಾಂ ಸ್ನೇಹಿತರು... ವಿಡಿಯೋ ನೋಡಿ
ಸೇತುವೆಯ ಭದ್ರತೆ ಬಗ್ಗೆ ಪ್ರತಿದಿನ ತಪಾಸಣೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ