
ಕೀವ್(ಮೇ.02): ಉಕ್ರೇನ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿರುವ ರಷ್ಯಾ, ಇದೀಗ ಉಕ್ರೇನ್‌ಗೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ನೀಡಿದ್ದ ಶಸ್ತ್ರಾಸ್ತ್ರಗಳ ಮೇಲೆ ದಾಳಿ ನಡೆಸಿದೆ. ವಿದೇಶಗಳು ನೀಡಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡೇ ಉಕ್ರೇನಿ ಪಡೆಗಳು ತನ್ನ ದಾಳಿಯನ್ನು ತಡೆಯುತ್ತಿರುವ ಹಿನ್ನೆಲೆಯಲ್ಲಿ ರಷ್ಯಾ ವೈರಿ ದೇಶದ ಬೆನ್ನು ಮುರಿಯಲು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಮತ್ತೊಂದೆಡೆ ಉಕ್ರೇನಿನ ಒಡೆಸಾದಲ್ಲಿರುವ ಮಿಲಿಟರಿ ವಾಯುನೆಲೆಯ ರನ್‌ವೇಯನ್ನು ಧ್ವಂಸಗೊಳಿಸಿವೆ. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿಯನ್ನು ಅಮೆರಿಕದ ಸ್ಪೀಕರ್ ನಾನ್ಸಿ ಪೊಲೊಸಿ ಭೇಟಿ ಮಾಡಿ ಬೆಂಬಲವನ್ನು ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
‘ಅಲ್ಲದೇ ನಡುರಾತ್ರಿ ಖಾರ್ಕೀವ್‌ನಲ್ಲಿ ಉಕ್ರೇನಿನ ಸು-24ಎಂ ಬಾಂಬರ್‌ಗಳನ್ನು ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯನ್ನು ಹೊಡೆದುರುಳಿಸಿವೆ’ ಎಂದು ರಷ್ಯಾ ಹೇಳಿದೆ. ರಷ್ಯಾ ಬ್ಯಾಸ್ಟಿಯೊನ್ ಕ್ಷಿಪಣಿಯನ್ನು ಕ್ರಿಮಿಯಾದಿಂದ ಉಡಾವಣೆ ಮಾಡಿ ಒಡೆಸಾದ ವಾಯುನೆಲೆಯನ್ನು ಧ್ವಂಸಗೊಳಿಸಿದೆ ಎಂದು ಪ್ರಾಂತೀಯ ರಾಜ್ಯಪಾಲ ಮ್ಯಾಕ್ಸಿಮ್ ಮಾರ್ಚೆಂಕೊ ತಿಳಿಸಿದ್ದಾರೆ.
ನ್ಯಾಟೋ ರಾಷ್ಟ್ರಗಳು ಮೇ ತಿಂಗಳಿನಲ್ಲಿ ಸೇನಾ ಕವಾಯತು ನಡೆಸುವುದಾಗಿ ಘೋಷಿಸಿ ರಷ್ಯಾಕ್ಕೆ ಎಚ್ಚರಿಕೆ ನೀಡಿದ್ದವು. ಇದರ ಬೆನ್ನಲ್ಲೇ ರಷ್ಯಾ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್‌ನ ಉಕ್ಕಿನ ಘಟಕವನ್ನು ಹೊರತುಪಡಿಸಿ ಇಡೀ ನಗರವು ರಷ್ಯಾದ ತೆಕ್ಕೆಯಲ್ಲಿದೆ. ನೀರು, ಆಹಾರವಿಲ್ಲದೇ ಸತತ ಬಾಂಬ್, ಶೆಲ್ ದಾಳಿಯಿಂದಾಗಿ ಕಂಗೆಟ್ಟಸುಮಾರು 1000 ನಾಗರಿಕರು ಹಾಗೂ 2000ಕ್ಕೂ ಹೆಚ್ಚು ಉಕ್ರೇನಿನ ಯೋಧರು ಉಕ್ಕಿನ ಘಟಕದಲ್ಲಿ ನೆಲೆಸಿದ್ದಾರೆ. ವಿಶ್ವಸಂಸ್ಥೆಯು ಶೀಘ್ರ ಇವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಹತ್ಯೆಯಿಂದ ಜಸ್ಟ್ ಮಿಸ್ ಆದೆ: ಜೆಲೆನ್‌ಸ್ಕಿ
ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿಯನ್ನು ಯುದ್ಧ ಆರಂಭವಾದ ಮೊದಲ ಕೆಲವು ಗಂಟೆಗಳಲ್ಲೇ ಬಂಧಿಸಿ, ಹತ್ಯೆ ಮಾಡಲು ರಷ್ಯಾದ ಯೋಧರು ಸಂಚು ನಡೆಸಿದ್ದರು. ಕೂದಲೆಳೆ ಅಂತರದಲ್ಲಿ ಅವರು ಬಚಾವಾದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಖುದ್ದು ಜೆಲೆನ್‌ಸ್ಕಿ ಈ ವಿಷಯ ಬಹಿರಂಗಪಡಿಸಿದ್ದಾರೆ.
‘ರಷ್ಯಾ ಯುದ್ಧ ಘೋಷಿಸಿ ಉಕ್ರೇನಿನ ಮೇಲೆ ದಾಳಿ ಆರಂಭಿಸುವ ಕೆಲ ಹೊತ್ತು ಮೊದಲು (ಫೆ.24ರಂದು)ಪ್ಯಾರಾಶೂಟ್ ಮೂಲಕ ರಷ್ಯಾದ ಸೈನಿಕರು ರಾಜಧಾನಿ ಕೀವ್‌ಗೆ ಬಂದಿಳಿದಿದ್ದರು. ನನ್ನನ್ನು ಹಾಗೂ ಕುಟುಂಬದವರನ್ನು ಬಂಧಿಸಿ ಅವರನ್ನು ಹತ್ಯೆ ಮಾಡುವ ಉದ್ದೇಶ ಇರಿಸಿಕೊಂಡಿದ್ದರು. ಆದರೆ ಗುಪ್ತಚರರ ಮೂಲಕ ಮಾಹಿತಿ ಲಭಿಸಿತು. ಹಾಗೂ ನನ್ನ ಅಧ್ಯಕ್ಷೀಯ ನಿವಾಸವನ್ನು ಭದ್ರತಾಪಡೆಗಳು ಸುತ್ತುವರಿದು ಸರ್ಪಗಾವಲು ಏರ್ಪಡಿಸಿದವು. ಹೀಗಾಗಿ ಕೂದಲೆಳೆ ಅಂತರದಲ್ಲಿ ನಾನು ಪಾರಾದೆ’ ಎಂದು ಜೆಲೆನ್‌ಸ್ಕಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜೆಲೆನ್‌ಸ್ಕಿ ಹಾಗೂ ಅವರ ಕುಟುಂಬದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅಮೆರಿಕ ಹಾಗೂ ಬ್ರಿಟನ್ ಸೇನೆ ನೆರವು ನೀಡುವುದಾಗಿ ಹೇಳಿತ್ತು. ಆದರೆ ಜೆಲೆನ್‌ಸ್ಕಿ ತಾವು ಯುದ್ಧದ ಸಂದರ್ಭದಲ್ಲಿ ದೇಶದಲ್ಲೇ ಇದ್ದು ಹೋರಾಟ ನಡೆಸುವುದಾಗಿ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ