ಕಾಬೂಲ್‌ ಏರ್‌ಪೋರ್ಟ್‌ ಮೇಲೆ ಮತ್ತೆ ರಾಕೆಟ್‌ ದಾಳಿ ಯತ್ನ: ವಿಫಲಗೊಳಿಸಿದ ಅಮೆರಿಕ ಪಡೆ!

By Suvarna NewsFirst Published Aug 31, 2021, 9:05 AM IST
Highlights

* ಕಾರಿನಲ್ಲಿ ರಾಕೆಟ್‌ ಲಾಂಚರ್‌ ಇಟ್ಟು ಉಡಾಯಿಸಿದ್ದ ಉಗ್ರರು

* ಕ್ಷಿಪಣಿ ನಿರೋಧಕ ವ್ಯವಸ್ಥೆಯಿಂದ ರಾಕೆಟ್‌ ನಾಶ

* ಏರ್‌ಪೋರ್ಟ್‌ ಪಕ್ಕದ ಪ್ರದೇಶಕ್ಕೆ ಅಲ್ಪ ಹಾನಿ

* ಕಾಬೂಲ್‌ ಏರ್‌ಪೋರ್ಟ್‌ ಮೇಲೆ ಮತ್ತೆ ರಾಕೆಟ್‌ ದಾಳಿ ಯತ್ನ

* ಐಸಿಸ್‌-ಕೆ ಮೇಲೆ ಗುಮಾನಿ

ಕಾಬೂಲ್‌(ಆ.31): ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳು ನಿರ್ಗಮಿಸಲು ಕೇವಲ ಒಂದು ದಿನ ಉಳಿದಿರುವಾಗ, ಕಾಬೂಲ್‌ ವಿಮಾನ ನಿಲ್ದಾಣದ ಮೇಲೆ ರಾಕೆಟ್‌ ದಾಳಿ ನಡೆಸಲು ಐಸಿಸ್‌-ಕೆ ಉಗ್ರರು ಯತ್ನಿಸಿದ ಘಟನೆ ನಡೆದಿದೆ. ಆದರೆ ದಾಳಿಯನ್ನು ಅಮೆರಿಕ ವಿಫಲಗೊಳಿಸಿದ್ದು, ರಾಕೆಟ್‌ಗಳು ವಿಮಾನ ನಿಲ್ದಾಣದ ಮೇಲೆ ಬೀಳದೇ ಪಕ್ಕದ ಪ್ರದೇಶದಲ್ಲಿ ಬಿದ್ದಿವೆ.

ಏರ್‌ಪೋರ್ಟ್‌ನತ್ತ ನುಗ್ಗಿ ಬರುತ್ತಿದ್ದ ರಾಕೆಟ್‌ಗಳನ್ನು ಅಮೆರಿಕ ಪಡೆಗಳ ಕ್ಷಿಪಣಿ ನಿರೋಧಕ ವ್ಯವಸ್ಥೆ ತಡೆದಿದ್ದರಿಂದ ವಿಮಾನ ನಿಲ್ದಾಣದಲ್ಲಿ ನಡೆದಿರುವ ತೆರವು ಕಾರಾರ‍ಯಚರಣೆ ಅಬಾಧಿತವಾಗಿ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಕೂಡ ಇಂಥದ್ದೇ ರಾಕೆಟ್‌ ದಾಳಿ ಕಾಬೂಲ್‌ನಲ್ಲಿ ನಡೆದಿತ್ತು. ಎರಡೂ ದಾಳಿಯ ಹೊಣೆಯನ್ನು ಐಸಿಸ್‌-ಕೆ ಹೊತ್ತುಕೊಂಡಿದೆ.

ಉಗ್ರರು ಏರ್‌ಪೋರ್ಟ್‌ ಪಕ್ಕದ ಪ್ರದೇಶವಾದ ಚಹರ್‌-ಎ- ಶಹೀದ್‌ ಪ್ರದೇಶದಲ್ಲಿ ಕಾರಿನ ಹಿಂಭಾಗದ ಸೀಟುಗಳನ್ನು ತೆಗೆದು ಅಲ್ಲಿ ರಾಕೆಟ್‌ ಲಾಂಚರ್‌ ಅಳವಡಿಸಿದ್ದರು. ಅಲ್ಲಿಂದಲೇ ಈ ರಾಕೆಟ್‌ ಹಾರಿಸಿರಬಹುದು ಎಂದು ಹೇಳಲಾಗಿದೆ. ರಾಕೆಟ್‌ ಹಾರಿಸಿದ ಹೊಡೆತಕ್ಕೆ ಕಾರು ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿಯುತ್ತಿತ್ತು. ಅದನ್ನು ವೀಕ್ಷಿಸಲು ಸ್ಥಳೀಯರು ಜಮಾಯಿಸಿದ್ದರು. ಈ ರೀತಿ ಕಾರಿನ ಹಿಂದೆ ಲಾಂಚರ್‌ ಇರಿಸುವುದು ಐಸಿಸ್‌-ಕೆ ಉಗ್ರರ ತಂತ್ರವಾಗಿದೆ.

ತಾಲಿಬಾನ್‌ ಅಧಿಕಾರಿಯೊಬ್ಬ ಮಾತನಾಡಿ, 5 ರಾಕೆಟ್‌ಗಳನ್ನು ಹಾರಿಸಲಾಗಿದೆ ಎಂದು ನಮಗೆ ತಿಳಿದುಬಂದಿದೆ. ಎಲ್ಲ ರಾಕೆಟ್‌ಗಳನ್ನು ಅಮೆರಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಹೇಳಿದ್ದಾನೆ.

 

click me!