ಡೇಂಜರಸ್‌ ಕೋವಿಡ್‌ ರೂಪಾಂತರಿ ಪತ್ತೆ: ಲಸಿಕೆ ಸುರಕ್ಷೆಯನ್ನು ಭೇದಿಸುವ ತಳಿ!

By Kannadaprabha NewsFirst Published Aug 31, 2021, 7:48 AM IST
Highlights

* ಶರವೇಗದಲ್ಲಿ ಹಬ್ಬುವ, ಲಸಿಕೆ ಸುರಕ್ಷೆಯನ್ನು ಭೇದಿಸುವ ‘ಸಿ.1.2’ ತಳಿ

* ಡೇಂಜರಸ್‌ ಕೋವಿಡ್‌ ರೂಪಾಂತರಿ ಪತ್ತೆ

* ದಕ್ಷಿಣ ಆಫ್ರಿಕಾದಲ್ಲಿ ಮೊದಲು ಗೋಚರ

* ಈಗ ಹಲ ದೇಶದಲ್ಲಿ ದೃಢ

ನವದೆಹಲಿ(ಆ.31): ಡೆಲ್ಟಾಹಾಗೂ ಡೆಲ್ಟಾಪ್ಲಸ್‌ ರೂಪಾಂತರಿ ವೈರಾಣುಗಳು ಜಗತ್ತಿನ ನಿದ್ರೆಗೆಡಿಸಿರುವಾಗಲೇ ಕೊರೋನಾ ವೈರಸ್‌ನ ಅತ್ಯಂತ ಅಪಾಯಕಾರಿ ರೂಪಾಂತರಿಯೊಂದು ಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಶರವೇಗದಲ್ಲಿ ಪಸರಿಸುವ ಈ ಕೋವಿಡ್‌ ರೂಪಾಂತರಿ ವೈರಸ್‌, ಲಸಿಕೆಗಳು ಒದಗಿಸುವ ಸುರಕ್ಷತೆಯನ್ನೂ ಭೇದಿಸುವ ಶಕ್ತಿಯನ್ನು ಹೊಂದಿದೆ.

‘ಸಿ.1.2’ ಎಂಬ ಈ ರೂಪಾಂತರಿ ವೈರಾಣು ಈ ವರ್ಷದ ಮೇ ತಿಂಗಳಿನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿತ್ತು. ಆ.13ರ ವೇಳೆಗೆ ಈ ವೈರಸ್‌ ಚೀನಾ, ಕಾಂಗೋ, ಮಾರಿಷಸ್‌, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಪೋರ್ಚುಗಲ್‌, ಸ್ವಿಜರ್ಲೆಂಡ್‌ನಲ್ಲೂ ದೃಢಪಟ್ಟಿದೆ.

ದಕ್ಷಿಣ ಆಫ್ರಿಕಾದಲ್ಲಿ ಮೊದಲ ಅಲೆಯಲ್ಲಿ ಭಾರಿ ಸಮಸ್ಯೆ ತಂದೊಡ್ಡಿದ್ದ ‘ಸಿ.1’ಗಿಂತ ಸಿ.1.1 ಹಲವು ಬಾರಿ ರೂಪಾಂತರಗೊಂಡಿದೆ. ವಿಶ್ವದಲ್ಲಿ ಇರುವ ಎಲ್ಲ ರೂಪಾಂತರಿ ಕೊರೋನಾ ವೈರಸ್‌ಗಿಂತ ಹೆಚ್ಚು ಹೆಚ್ಚು ರೂಪಾಂತರವನ್ನು ಹೊಂದುವ ಗುಣವನ್ನು ಈ ವೈರಸ್‌ ಹೊಂದಿದೆ ಎಂದು ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆ ಹಾಗೂ ಕ್ವಾಜುಲು-ನೇಟಲ್‌ ರೀಸಚ್‌ರ್‍ ಇನ್ನೋವೇಷನ್‌ ಅಂಡ್‌ ಸೀಕ್ವೆನ್ಸಿಂಗ್‌ ಪ್ಲಾಟ್‌ಫಾಮ್‌ರ್‍ನ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಸಿ.1.2 ವೈರಾಣು ವರ್ಷಕ್ಕೆ 41.8 ಬಾರಿ ರೂಪಾಂತರಗೊಳ್ಳುತ್ತದೆ. ಸದ್ಯ ವಿಶ್ವದಲ್ಲಿ ವೇಗವಾಗಿ ಹಬ್ಬುತ್ತಿರುವ ವೈರಾಣುಗಳ ರೂಪಾಂತರ ದರ ಇದಕ್ಕಿಂತ ಅರ್ಧದಷ್ಟುಇದೆ. ಈ ವೈರಾಣುವಿನ ರೂಪಾಂತರ ಪೈಕಿ ಶೇ.52ರಷ್ಟುಕೊರೋನಾ ವೈರಸ್‌ನ ಸ್ಪೈಕ್‌ ಪ್ರೊಟೀನ್‌ ಬಳಿಯೇ ಆಗುತ್ತದೆ. ಸ್ಪೈಕ್‌ ಪ್ರೊಟಿನ್‌ನಿಂದಲೇ ಕೊರೋನಾ ವೈರಸ್‌ ಮಾನವರ ಜೀವಕೋಶವನ್ನು ಪ್ರವೇಶಿಸುತ್ತದೆ ಎಂಬುದು ಗಮನಾರ್ಹ.

click me!