ಆಫ್ಘನ್‌ಗೆ ಅಮೆರಿಕ ಬೈ ಬೈ: ತೆರಳುವ ಮುನ್ನ ಶಸ್ತ್ರಾಸ್ತ್ರ ಧ್ವಂಸ: ಉಗ್ರರಿಗೆ ಶಾಕ್!

By Suvarna NewsFirst Published Sep 1, 2021, 7:34 AM IST
Highlights

* 20 ವರ್ಷ ನಂತರ ಅಷ್ಘಾನಿಸ್ತಾನದಿಂದ ಅಮೆರಿಕ ಸೇನೆ ವಾಪಸ್‌

* ಇನ್ನು ಸಂಪೂರ್ಣ ತಾಲಿಬಾನ್‌ ಆಡಳಿತ

* ಕಂಡಕಂಡಲ್ಲಿ ಗುಂಡು ಹಾರಿಸಿ ಉಗ್ರರಿಂದ ಸಂಭ್ರಮ

* ವಿಮಾನ ನಿಲ್ದಾಣದಲ್ಲಿ ನಿಂತು ವಿಜಯ ಘೋಷಣೆ

ವಾಷಿಂಗ್ಟನ್‌(ಸೆ.01): ತಾಲಿಬಾನ್‌ ಉಗ್ರರನ್ನು ಸಂಹಾರ ಮಾಡುವ ವೀರಾವೇಶದೊಂದಿಗೆ 20 ವರ್ಷಗಳ ಹಿಂದೆ ಅಫ್ಘಾನಿಸ್ತಾನಕ್ಕೆ ಕಾಲಿಟ್ಟಿದ್ದ ಅಮೆರಿಕದ ಸೇನಾಪಡೆಗಳು ಸೋಮವಾರ ತಡರಾತ್ರಿ ಆ ದೇಶದಿಂದ ಸಂಪೂರ್ಣವಾಗಿ ಜಾಗ ಖಾಲಿ ಮಾಡಿವೆ. ಇದರೊಂದಿಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿದ ಸುದೀರ್ಘ 20 ವರ್ಷಗಳ ಸಮರಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ. ಯಾರನ್ನು ಸಂಹಾರ ಮಾಡಲು ಅಮೆರಿಕ ಆಫ್ಘನ್‌ ನೆಲಕ್ಕೆ ಬಂದಿಳಿದಿತ್ತೋ, ಅದೇ ಉಗ್ರರ ಕೈಗೆ ಅಫ್ಘಾನಿಸ್ತಾನ ಹಾಗೂ ಅದರ ಭವಿಷ್ಯವನ್ನು ಇಟ್ಟು ಮರಳಿರುವುದು ಇತಿಹಾಸದಲ್ಲಿ ಘೋರ ಕಪ್ಪುಚುಕ್ಕೆಯಾಗಿ ದಾಖಲಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ತಾಲಿಬಾನ್‌ ಉಗ್ರಗಾಮಿ ಸಂಘಟನೆ ಜತೆ ಮಾಡಿಕೊಂಡಿದ್ದ ಒಡಂಬಡಿಕೆಯಂತೆ ಆ.31ರ ಮಂಗಳವಾರದೊಳಗೆ ಆಫ್ಘನ್‌ ನೆಲದಿಂದ ಅಮೆರಿಕ ಯೋಧರು ಹೊರಡಬೇಕಿತ್ತು. ಆದರೆ ಒಂದು ದಿನ ಮೊದಲೇ ಅಂದರೆ ಸೋಮವಾರ ರಾತ್ರಿ 11.59ಕ್ಕೆ ಅಮೆರಿಕ ಯೋಧರನ್ನು ಹೊತ್ತ ಕೊನೆಯ ವಿಮಾನ ಆಫ್ಘನ್‌ನಿಂದ ಪ್ರಯಾಣ ಬೆಳೆಸಿತು. ಇದಾದ ಕೆಲವೇ ತಾಸಿನಲ್ಲಿ ಅಫ್ಘಾನಿಸ್ತಾನ ಸ್ವಾತಂತ್ರ್ಯ ಪಡೆದಿದೆ, ನಾವು 20 ವರ್ಷಗಳ ಸಮರ ಗೆದ್ದಿದ್ದೇವೆ ಎಂದು ಘೋಷಿಸಿದ ತಾಲಿಬಾನ್‌ ಉಗ್ರರು, ಹರ್ಷಚಿತ್ತರಾಗಿ ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಿದರು.

fighters enter a hangar in Airport and examine helicopters after leaves . pic.twitter.com/flJx0cLf0p

— Nabih (@nabihbulos)

ಕಳೆದ ಎರಡು ವಾರಗಳಿಂದ ಸಹಸ್ರಾರು ಆಫ್ಘನ್‌, ಅಮೆರಿಕನ್‌ ಹಾಗೂ ಇನ್ನಿತರೆ ದೇಶಗಳ ಪ್ರಜೆಗಳ ತೆರವು ಕಾರ್ಯಾಚರಣೆಯ ಉಸ್ತುವಾರಿ ಹೊತ್ತಿದ್ದ ಅಮೆರಿಕದ ಯೋಧರನ್ನು ಹೊತ್ತು ಅಫ್ಘಾನಿಸ್ತಾನದಿಂದ ಕೊನೆಯ ವಿಮಾನ ನಿರ್ಗಮಿಸಿತು. ಆದರೆ ಆಫ್ಘನ್‌ನಲ್ಲಿ ಇನ್ನೂ ನೂರಾರು ಅಮೆರಿಕನ್‌ ಪ್ರಜೆಗಳು ಉಳಿದುಕೊಂಡಿದ್ದು, ದೇಶ ತೊರೆಯಲು ಪರದಾಡುತ್ತಿದ್ದಾರೆ. ಮತ್ತೊಂದೆಡೆ ಅಫ್ಘಾನಿಸ್ತಾನದಲ್ಲಿ ನಮ್ಮ 20 ವರ್ಷಗಳ ಸೇನಾ ಉಪಸ್ಥಿತಿ ಅಧಿಕೃತವಾಗಿ ಮುಕ್ತಾಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಿಸಿದ್ದಾರೆ.

ಅನಿಶ್ಚಯತೆಯಲ್ಲಿ ಆಫ್ಘನ್‌:

2001ರ ಸೆ.11ರಂದು ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳ ಮೇಲೆ ಅಲ್‌ಖೈದಾ ಉಗ್ರರು ದಾಳಿ ನಡೆಸಿ, ಸಹಸ್ರಾರು ಮಂದಿಯ ಸಾವಿಗೆ ಕಾರಣವಾಗಿದ್ದರು. ಆ ಉಗ್ರರಿಗೆ ತಾಲಿಬಾನ್‌ ಆಶ್ರಯ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ 2001ರಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿ, ತಾಲಿಬಾನ್‌ ಸರ್ಕಾರವನ್ನು ಪದಚ್ಯುತಗೊಳಿಸಿತ್ತು. ಆನಂತರ ಅಫ್ಘಾನಿಸ್ತಾನದ ಪುನರ್‌ ನಿರ್ಮಾಣಕ್ಕೆ ಭಾರತ ಸೇರಿ ಹಲವಾರು ದೇಶಗಳು ಸಹಸ್ರಾರು ಕೋಟಿ ರು. ವ್ಯಯಿಸಿದ್ದವು. 20 ವರ್ಷಗಳ ಕಾಲ ಯುದ್ಧ ನಡೆದರೂ ತಾಲಿಬಾನ್‌ ಅನ್ನು ಸಂಪೂರ್ಣ ಮಟ್ಟಹಾಕುವಲ್ಲಿ ಅಮೆರಿಕ ಸೋತಿತ್ತು. 20 ವರ್ಷಗಳಲ್ಲಿ ಅಮೆರಿಕದ 2500 ಅಮೆರಿಕನ್‌ ಯೋಧರು ಹತರಾಗಿದ್ದರು. 4 ಅಧ್ಯಕ್ಷರ ಉಸ್ತುವಾರಿಯಲ್ಲಿ ಸಮರ ಮುಂದುವರೆದಿತ್ತು. ಕೊನೆಗೆ ಆಫ್ಘನ್‌ನಿಂದ ಸೇನೆ ವಾಪಸ್‌ ಕರೆಸಿಕೊಳ್ಳಲು ಅಮೆರಿಕ ಮುಂದಾಗಿತ್ತು. ಈ ಸಂಬಂಧ ತಾಲಿಬಾನ್‌ ಹಾಗೂ ಅಮೆರಿಕ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು.

ಆಫ್ಘನ್‌ನಿಂದ ಅಮೆರಿಕ ವಾಪಸಾಗುವುದು ಪಕ್ಕಾ ಆಗುತ್ತಿದ್ದಂತೆ ಕಳೆದ ಆ.15ರಂದು ಇಡೀ ದೇಶವನ್ನು ತಾಲಿಬಾನ್‌ ಉಗ್ರರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. 20 ವರ್ಷಗಳಿಂದ ಅಲ್ಪಸ್ವಲ್ಪ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಕಂಡಿದ್ದ ಆಫ್ಘನ್‌ ಪ್ರಜೆಗಳು ಅಮೆರಿಕದ ಬದಲಾದ ನಡೆಯಿಂದ ಅನಿಶ್ಚಯತೆಗೆ ದೂಡಲ್ಪಟ್ಟಿದ್ದಾರೆ. ದೇಶ ಮತ್ತೆ ತಾಲಿಬಾನ್‌ ಆಳ್ವಿಕೆಗೆ ಮರಳುವಂತಾಗಿದೆ.

ಉಗ್ರರ ಸಂಭ್ರಮಾಚರಣೆ:

ಅಮೆರಿಕದ ಕೊನೆಯ ಪಡೆಗಳು ವಿಮಾನದಲ್ಲಿ ಹಾರಿದ ಬೆನ್ನಲ್ಲೇ ತಾಲಿಬಾನ್‌ ಉಗ್ರರ ದಂಡು ವಿಮಾನ ನಿಲ್ದಾಣ ಪ್ರವೇಶಿಸಿತು. ಜೊತೆಗೆ ಇಡೀ ವಿಮಾನ ನಿಲ್ದಾಣವನ್ನು ಸುತ್ತಾಡಿ, ಅಮೆರಿಕನ್ನರು ಇಷ್ಟುವರ್ಷ ಹಿಡಿತಕ್ಕೆ ಇಟ್ಟುಕೊಂಡಿದ್ದ ಜಾಗ, ಬಿಟ್ಟುಹೋದ ಉಪಕರಣ, ವ್ಯವಸ್ಥೆಯನ್ನು ಪರಿಶೀಲಿಸಿತು.

ಈ ವೇಳೆಗೆ ಬಂದೂಕುಧಾರಿ ಉಗ್ರರ ಜತೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ತಾಲಿಬಾನ್‌ ಮುಖಂಡ ಹೆಕ್ಮತುಲ್ಲಾ ವಾಸಿಕ್‌, ಅಫ್ಘಾನಿಸ್ತಾನ ಈಗ ಸಂಪೂರ್ಣ ಸ್ವಾತಂತ್ರ್ಯ ಗಳಿಸಿದೆ. ಮಿಲಿಟರಿ ಹಾಗೂ ನಾಗರಿಕ ಬಳಕೆಯ ಎರಡೂ ವಿಮಾನ ನಿಲ್ದಾಣಗಳು ನಮ್ಮ ವಶದಲ್ಲಿವೆ. ಶೀಘ್ರದಲ್ಲೇ ಸಚಿವ ಸಂಪುಟ ರಚಿಸುತ್ತೇವೆ. ಎಲ್ಲವೂ ಶಾಂತಿಯುತವಾಗಿದೆ, ಸುರಕ್ಷಿತವಾಗಿದೆ. ಜನರು ಕೆಲಸಗಳಿಗೆ ಮರಳಬೇಕು. ತಾಳ್ಮೆಯಿಂದ ಇರಬೇಕು. ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಬರಲಿದೆ. ಆದರೆ ಸಮಯ ಹಿಡಿಯಲಿದೆ ಎಂದು ತಿಳಿಸಿದ್ದಾನೆ.

ನಮ್ಮ ತಾಂತ್ರಿಕ ತಂಡ ವಿಮಾನ ನಿಲ್ದಾಣವನ್ನು ಪರಿಶೀಲಿಸುತ್ತಿದೆ. ನಮ್ಮಿಂದಲೇ ಏರ್‌ಪೋರ್ಟ್‌ ಕಾರ್ಯಾರಂಭ ಮಾಡಬಹುದು ಎಂದರೆ ಮಾಡುತ್ತೇವೆ. ಹೆಚ್ಚುವರಿ ನೆರವು ಬೇಕಾದರೆ ಕತಾರ್‌ ಅಥವಾ ಟರ್ಕಿಯನ್ನು ಕೇಳುತ್ತೇವೆ ಎಂದು ಹೇಳಿದ್ದಾನೆ.

ಆಫ್ಘನ್‌ ತೊರೆದ ಕೊನೆಯ ಅಮೆರಿಕ ಯೋಧ ಕ್ರಿಸ್‌

ಅಷ್ಘಾನಿಸ್ತಾನದಿಂದ ಕಟ್ಟಕಡೆಯದಾಗಿ ವಿಮಾನ ಏರಿದ ಅಮೆರಿಕದ ಸೈನಿಕನ ಹೆಸರು ಕ್ರಿಸ್‌ ಡೊನಾಹ್ಯು. ಅಮೆರಿಕದ ಸೇನೆಯಲ್ಲಿ ಮೇಜರ್‌ ಜನರಲ್‌ ಆಗಿರುವ ಅವರು ಕೊನೆಯವರಾಗಿ ಸೋಮವಾರ ಸಿ-17 ವಿಮಾನ ಹತ್ತಿದರು.

click me!