* ಅಮೆರಿಕ ಸೆನೆಟ್‌ನಲ್ಲಿ ಐತಿಹಾಸಿಕ ಮಸೂದೆ ಅಂಗೀಕಾರ
* ಅಮೆರಿಕದಲ್ಲಿ ಗನ್‌ಗಳಿಗೆ ಲಗಾಮು
* ಶಾಲಾ ಶೂಟೌಟ್ ಪ್ರಕರಣಗಳಿಂದ ಎಚ್ಚೆತ್ತ ದೊಡ್ಡಣ್ಣ
ವಾಷಿಂಗ್ಟನ್(ಜೂ.25): ಶೈಕ್ಷಣಿಕ ಸಂಸ್ಥೆಗಳಲ್ಲಿ ಬಾಲಕರು ಅಮಾಯಕರನ್ನು ಗುಂಡಿಟ್ಟು ಕೊಲ್ಲುವ ಪ್ರಕರಣಗಳು ಆಗಿಂದಾಗ್ಗೆ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಕಡೆಗೂ ಎಚ್ಚೆತ್ತಿರುವ ಅಮೆರಿಕ, ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ಸಂಸತ್ತಿನ ಮೇಲ್ಮನೆಯಾದ ಸೆನೆಟ್‌ನಲ್ಲಿ ಐತಿಹಾಸಿಕ ಮಸೂದೆಯನ್ನು ಅಂಗೀಕರಿಸಿದೆ. ಗನ್ ಹಾವಳಿ ತಡೆಯುವುದಕ್ಕಾಗಿ 1 ಲಕ್ಷ ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದೆ.
ಬದ್ಧ ಎದುರಾಳಿಗಳಾದ ಆಡಳಿತಾರೂಢ ರಿಪಬ್ಲಿಕನ್ ಹಾಗೂ ಡೆಮೊಕ್ರಟಿಕ್ ಪಕ್ಷದ ಸದಸ್ಯರು ಒಗ್ಗೂಡಿ ಈ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದು, ಸಂಸತ್ತಿನ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್‌್ಸನ ಒಪ್ಪಿಗೆ ಬಾಕಿ ಇದೆ. ಮೊದಲಿನಿಂದಲೂ ಗನ್ ಸಂಸ್ಕೃತಿಗೆ ಲಗಾಮು ಹಾಕಬೇಕು ಎಂದು ಡೆಮೊಕ್ರಟ್ ಪಕ್ಷ ಆಗ್ರಹಿಸುತ್ತಲೇ ಬಂದಿತ್ತು. ರಿಪಬ್ಲಿಕನ್ ಪಕ್ಷ ವಿರೋಧಿಸಿಕೊಂಡು ಬರುತ್ತಿತ್ತು. ಆದರೆ ಕಳೆದ ತಿಂಗಳು ನ್ಯೂಯಾರ್ಕ್ ಹಾಗೂ ಟೆಕ್ಸಾಸ್‌ನಲ್ಲಿ ನಡೆದ ಕ್ರೂರ ಸಾಮೂಹಿಕ ಶೂಟೌಟ್‌ಗಳಿಂದಾಗಿ ರಿಪಬ್ಲಿಕನ್ ಪಕ್ಷದ ನಿಲುವೂ ಬದಲಾಗಿದೆ. ಈ ಎರಡೂ ಘಟನೆಗಳಲ್ಲಿ ಒಟ್ಟು 29 ಮಂದಿ ಬಲಿಯಾಗಿದ್ದರು.
ಮಸೂದೆಯಲ್ಲೇನಿದೆ?:
ಗನ್ ಖರೀದಿಸುವವರು 18ರಿಂದ 20 ವರ್ಷದೊಳಗಿನವರಾಗಿದ್ದರೆ ಅವರ ಬಾಲಾಪರಾಧ ಹಾಗೂ ಮಾನಸಿಕ ಸ್ಥಿತಿಯ ಹಿನ್ನೆಲೆ ಪರಿಶೀಲಿಸಬೇಕು. 10 ದಿನದಲ್ಲಿ ಈ ಕಾರ್ಯ ಮುಗಿಯಬೇಕು. ಅದಾಗದಿದ್ದರೆ ಗನ್ ಖರೀದಿಗೆ ಅಡ್ಡಿ ಇಲ್ಲ.
ಪ್ರೇಮ ಸಂಬಂಧ ಹೊಂದಿ ಸಂಗಾತಿಗೆ ಹಿಂಸೆ ನೀಡಿದ ಹಿನ್ನೆಲೆ ಹೊಂದಿದವರಿಗೆ ಗನ್ ಸಿಗುವುದಿಲ್ಲ. ಐದು ವರ್ಷಗಳ ಕಾಲ ಅಂತಹವರು ಯಾವುದೇ ಹಿಂಸಾ ಅಪರಾಧ ಮಾಡಿಲ್ಲ ಎಂಬುದು ಸಾಬೀತಾದರೆ ಬಳಿಕ ಅವರಿಗೆ ಗನ್ ಖರೀದಿಸಲು ಅನುಮತಿ ಕೊಡಲಾಗುತ್ತದೆ.
ಶಾಲೆಗಳಲ್ಲಿ ಮಕ್ಕಳ ಮಾನಸಿಕ ಆರೋಗ್ಯ, ಬಿಕ್ಕಟ್ಟು ನಿರ್ವಹಣೆ, ಹಿಂಸೆ ತಡೆ ಕಾರ್ಯಕ್ರಮ, ಮಾನಸಿಕ ಆರೋಗ್ಯ ತರಬೇತಿ, ಸುರಕ್ಷತೆಗೆ ಮಾಡಲಾಗುವ ವೆಚ್ಚ ಹೆಚ್ಚಳ ಮಾಡಲಾಗುತ್ತದೆ.