ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಮಂಗಳವಾರ ಆರಂಭವಾಗಿದ್ದು, ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಫಲಿತಾಂಶ ಸ್ಪಷ್ಟಗೊಳ್ಳಲು 1-2 ದಿನಗಳು ಬೇಕಾಗಬಹುದು.
ವಾಷಿಂಗ್ಟನ್: ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮಂಗಳವಾರ (ಭಾರತೀಯ ಕಾಲಮಾನ ಸಂಜೆ 4.30ಕ್ಕೆ) ಆರಂಭವಾಗಿದೆ. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮಾಕ್ರೆಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ರೋಚಕ ಫಲಿತಾಂಶ ನಿರೀಕ್ಷಿಸಲಾಗಿದೆ. ಫಲಿತಾಂಶ ಸ್ಪಷ್ಟಗೊಳ್ಳಲು 1-2 ದಿನ ಹಿಡಿಯುವ ನಿರೀಕ್ಷೆ ಇದೆ.
ಸುಮಾರು 24 ಕೋಟಿ ಮತದಾರರು ಮತದಾನದ ಹಕ್ಕು ಪಡೆದಿದ್ದು, ಇ- ಮೇಲ್ ಮೂಲಕ ಮತದಾನಕ್ಕೆ ಮೊದಲೇ ಅವಕಾಶ ಇದ್ದ ಕಾರಣ ಈಗಾಗಲೇ ಸುಮಾರು 9 ಕೋಟಿ ಮಂದಿ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ಅಂತಿಮ ದಿನ ಇನ್ನೂ ಕೋಟ್ಯಂತರ ಮಂದಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾವಣೆ ಮಾಡುವ ಸಾಧ್ಯತೆ ಇದೆ. ಫ್ಲೋರಿಡಾದಲ್ಲಿ ಟ್ರಂಪ್ ಮತ ಹಾಕಿದರು. ಹೆಚ್ಚಿನ ಪೈಪೋಟಿ ಇರುವ ಕಾರಣ ಭಾರಿ ಪ್ರಮಾಣದ ಮತದಾನ ನಿರೀಕ್ಷಿಸಲಾಗಿದೆ. ಅಲ್ಲದೆ, ಅಮೆರಿಕದಲ್ಲಿ ಇವಿಎಂ ಇಲ್ಲ, ಮತಪತ್ರಗಳ ಮೂಲಕ ಮತದಾನ ನಡೆಯುವ ಕಾರಣ ಮತ ಎಣಿಕೆ ವಿಳಂಬ ಆಗುವ ಸಾಧ್ಯತೆ ಇದೆ. ಆದರೂ 1-2 ದಿನದಲ್ಲಿ ಯಾರು ಮುನ್ನಡೆಯಲ್ಲಿದ್ದಾರೆ ಎಂಬ ಟ್ರೆಂಡ್ ತಿಳಿದು ಬರುವ ನಿರೀಕ್ಷೆಯಿದೆ.
undefined
ಅಮೆರಿಕದಲ್ಲಿ ನೇರವಾಗಿ ಜನ ಅಧ್ಯಕ್ಷರನ್ನು ಆಯ್ಕೆ ಮಾಡಲ್ಲ, ಬದಲಾಗಿ ಟ್ರಂಪ್ ಅಥವಾ ಕಮಲಾ ಬೆಂಬಲಿಗರಾದ 538 ಎಲೆಕ್ಟೋರಲ್ ಕಾಲೇಜ್ ಪ್ರತಿನಿ ಧಿಗಳನ್ನು ಆಯ್ಕೆ ಮಾಡುತ್ತಾರೆ. ಇವರು ಅಧ್ಯಕ್ಷರನ್ನು ಅಧಿಕೃತವಾಗಿ ಆಯ್ಕೆಮಾಡಲಿದ್ದು, ಡಿಸೆಂಬರಲ್ಲಿ ಘೋಷಣೆ ಆಗಲಿದೆ. 270 ಪ್ರತಿನಿಧಿಗಳ ಬೆಂಬಲ ಪಡೆದವರು ಅಧ್ಯಕ್ಷ ಆಗಲಿದ್ದಾರೆ ಹಾಗೂ ಜನವರಿಯಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ.
ನ್ಯಾಯದಿಂದ ಚುನಾವಣೆ ನಡೆದರೆ ಸೋಲೊಪ್ಪುವೆ: ಟ್ರಂಪ್
ಮತ ಎಣಿಕೆಯಲ್ಲಿ ಹಿನ್ನಡೆ ಸಾಧಿಸಿದರೆ ಟ್ರಂಪ್ 2020ರಂತೆಯೇ, ಅಕ್ರಮದ ಆರೋಪ ಹೊರಿಸಿ ಕೋರ್ಟಿಗೆ ಹೋಗುವ ಸಾಧ್ಯತೆ ಇದೆ. ಆದರೆ ಈ ಬಗ್ಗೆ ಅವರು ಪ್ರತಿಕ್ರಿಯಿಸಿ, 'ನಾನು ಗೆಲ್ಲುವ ಸಾಧ್ಯತೆ ಇದೆ. ಇದು ನ್ಯಾಯಸಮ್ಮತ ಚುನಾವಣೆ ಆದರೆ ಮಾತ್ರ ಸೋಲು ಒಪ್ಪುವೆ' ಎಂದರು.
ಇಲ್ಲಿ ಕಮಲಾ-ಟ್ರಂಪ್ ಟೈ!
ವಾಷಿಂಗ್ಟನ್: ಅಮೆರಿಕ ಕುಗ್ರಾಮವಾದ ಡಿಕ್ಸ್ ವಿಲ್ಲೆ ನಾಟ್‌ನಲ್ಲಿ ಮಂಗಳವಾರ ಮತದಾನ ಆರಂಭವಾದ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಬಹಿರಂಗವಾಗಿದೆ. ಏಕೆಂದರೆ ಇದು ಅತಿ ಚಿಕ್ಕ ಕುಗ್ರಾಮವಾಗಿದ್ದು ಕೇವಲ 6 ಮತದಾರರನ್ನು ಹೊಂದಿದೆ. ಇಲ್ಲಿ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ತಲಾ 3 ಮತ ಪಡೆದಿದ್ದು, ಫಲಿತಾಂಶ ಟೈ ಆಗಿದೆ ಎಂಬ ಕುತೂಹಲದ ಮಾಹಿತಿ ಹೊರಬಿದ್ದಿದೆ.
ಟ್ರಂಪ್‌ಗೆ ಜಯ: ಥಾಯ್ ಮರಿ ನೀರಾನೆ ಭವಿಷ್ಯ
ಬ್ಯಾಂಕಾಕ್: ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಅವರ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುತ್ತಾರೆ ಎಂದು ಥಾಯ್ಲೆಂಡ್ ಪ್ರಸಿದ್ಧ ನೀರಾನೆ 'ಮೂ ಡೆಂಗ್', 'ಭವಿಷ್ಯ' ಹೇಳಿದೆ. ಥಾಯ್‌ನ ಖಾವೊ ಖೋವ್ ಓಪನ್ ಮೃಗಾಲಯದಲ್ಲಿ ಇರುವ ನೀರಾನೆಗೆ, ಟ್ರಂಪ್ ಹಾಗೂ ಕಮಲಾ ಹ್ಯಾರಿಸ್ ಎಂದು ಬರೆದಿದ್ದ 2 ಕಲ್ಲಂಗಡಿಗಳ ನಡುವೆ ಆಯ್ಕೆಯನ್ನು ನೀಡಿದಾಗ ಟ್ರಂಪ್ ಅವರ ಹೆಸರಿದ್ದ ಕಲ್ಲಂಗಡಿ ಆಯ್ಕೆ ಮಾಡಿಕೊಂಡಿದೆ.
ಕಮಲಾ ಗೆಲುವಿಗೆ ತವರಿನ ನಿವಾಸಿಗಳ ಪ್ರಾರ್ಥನೆ
ತಿರುವರೂರು (ತಮಿಳುನಾಡು): ಅಮೆರಿಕದ ಹಾಲಿ ಉಪಾಧ್ಯಕ್ಷೆಯೂ ಆಗಿರುವ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಗೆಲುವಿಗೆ ಅವರ ಪೂರ್ವಿಕರ ನೆಲೆಯಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮದ ನಿವಾಸಿಗಳು ಪೂಜೆ, ಪ್ರಾರ್ಥನೆ ಆರಂಭಿಸಿದ್ದಾರೆ. ಕಮಲಾ ಅವರ ಗೆಲುವಿಗೆ ಗ್ರಾಮಸ್ಥರು ವಿವಿಧ ದೇವರಿಗೆ ಮೊರೆ ಹೋಗಿದ್ದಾರೆ. ಮಂಗಳವಾರ ಮತದಾನದಲ್ಲಿ ಟ್ರಂಪ್ ಸೋಲಿಸಿ ಅಧ್ಯಕ್ಷ ಗದ್ದುಗೆ ಏರುವಂತೆ ಗ್ರಾಮದ ಶ್ರೀ ಧರ್ಮಶಾಸ್ತ್ರ ದೇಗುಲದಲ್ಲಿ ಪ್ರಾರ್ಥಿಸಿದರು. ಮದುರೈನಲ್ಲಿ ಕಮಲಾ ಅವರ ಭಾವಚಿತ್ರ ಬ್ಯಾನರ್‌ಗಳನ್ನು ಆಂಟಿಸಲಾಗಿದೆ.