
ಟೆಲ್ ಅವಿವ್: ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಯುದ್ಧ ಸಾರಿದ ನಂತರ ಇದೇ ಮೊದಲ ಬಾರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು, ಪರಮಮಿತ್ರ ದೇಶವಾದದ ಇಸ್ರೇಲ್‌ಗೆ ಆಗಮಿಸಿದ್ದಾರೆ. ಯುದ್ಧದಲ್ಲಿ ಇಸ್ರೇಲ್‌ಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಇದೇ ವೇಳೆ, ಗಾಜಾ ಪಟ್ಟಿಯಲ್ಲಿ ಮಂಗಳವಾರ ಆಸ್ಪತ್ರೆಯೊಂದರ ಮೇಲೆ ನಡೆದ ವಾಯುದಾಳಿಯಲ್ಲಿ 800ಕ್ಕೂ ಹೆಚ್ಚು ಜನರು ಮೃತರಾದ ಬಗ್ಗೆಯೂ ಪ್ರತಿಕ್ರಿಯೆ ನೀಡಿರುವ ಬೈಡೆನ್, ಈ ಕೃತ್ಯಕ್ಕೆ ಅನ್ಯ ತಂಡವೇ (ಹಮಾಸ್) ಹೊಣೆ. ಹಮಾಸ್ ಉಗ್ರರು ಇಡೀ ಮಧ್ಯಪ್ರಾಚ್ಯದ ಉದ್ವಿಗ್ನತೆ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೈಡೆನ್, ‘ನಾನು ಇಸ್ರೇಲ್ ಜನರ ಜತೆಗೆ ಇರುತ್ತೇನೆ. ಹಮಾಸ್ ದೌರ್ಜನ್ಯ ಎಲ್ಲೆ ಮೀರಿದೆ. ಹಮಾಸ್ ದುಷ್ಕೃತ್ಯಗಳನ್ನು ಗಮನಿಸದರೆ ಐಸಿಸ್ ಕೊಂಚ ತರ್ಕಬದ್ಧ ಎಂದು ಕಾಣುತ್ತದೆ. ಹಮಾಸ್ ಎಲ್ಲಾ ಪ್ಯಾಲೆಸ್ತೀನ್ ಜನರನ್ನು ಪ್ರತಿನಿಧಿಸುವುದಿಲ್ಲ. ಉಗ್ರರ ನಡೆ ಪ್ಯಾಲೆಸ್ತೀನೀಯರ ಕಷ್ಟ ಇಮ್ಮಡಿಸಿದೆ’ ಎಂದು ಕಿಡಿಕಾರಿದರು.
ಗಾಜಾದಲ್ಲಿ ಅನಸ್ತೇಶಿಯಾ ಇಲ್ಲದೇ ಶಸ್ತ್ರಚಿಕಿತ್ಸೆ: ಗಾಯಾಳುಗಳ ಉಳಿಸಲು ವೈದ್ಯರ ಹರಸಾಹಸ
ಅಲ್ಲದೆ, ‘ನಿನ್ನೆ ಗಾಜಾದ ಆಸ್ಪತ್ರೆಯಲ್ಲಿ ನಡೆದ ಸ್ಫೋಟದಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಮತ್ತು ಆಕ್ರೋಶಗೊಂಡಿದ್ದೇನೆ. ನಾನು ಗಮನಿಸಿದ ಪ್ರಕಾರ ಆಸ್ಪತ್ರೆ ಮೇಲೆ ದಾಳಿಯನ್ನು ಇನ್ನೊಂದು ತಂಡ (ಹಮಾಸ್) ನಡೆಸಿದೆ. ನೀವಲ್ಲ’ ಎಂದು ನೆತನ್ಯಾಹು ಉದ್ದೇಶಿಸಿ ಹೇಳಿದರು. ಈ ಮುಂಚೆ ಇಸ್ರೇಲ್‌ಗೆ ಅಮೆರಿಕ ವಿದೇಶಾಂಗ ಹಾಗೂ ರಕ್ಷಣಾ ಸಚಿವರು ಭೇಟಿ ನೀಡಿ ಬೆಂಬಲ ಪ್ರಕಟಿಸಿದ್ದರು. ಆದರೆ ಇಸ್ರೇಲ್‌ಗೆ ಅಮೆರಿಕ ಪರಮ ಮಿತ್ರ ಆಗಿರುವ ಕಾರಣ ಖುದ್ದು ಬೈಡೆನ್ ಅವರೇ ಬಂದಿದ್ದಾರೆ. ಈ ಮುಂಚೆ ತನ್ನ ನೌಕಾಪಡೆಯನ್ನು ಮೆಡಿಟರೇನಿಯನ್ ಸಮುದ್ರಕ್ಕೆ ಅಮೆರಿಕ ಕಳಿಸಿಕೊಟ್ಟು, ಇಸ್ರೇಲ್‌ಗೆ ಬೆಂಬಲವಾಗಿ ನಿಲ್ಲುವುದಾಗಿ ಘೋಷಿಸಿತ್ತು.
ಹಮಾಸ್, ಇತರೆ ಉಗ್ರರ ಮೇಲೆ ಅಮೆರಿಕ ನಿರ್ಬಂಧ
ಮತ್ತೊಂದೆಡೆ ಅಮೆರಿಕಾ ಮಧ್ಯ ಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡ ಹೊತ್ತಲ್ಲೇ ಹಮಾಸ್ ಮತ್ತು ಇತರೆ ಕೆಲ ದೇಶಗಳಲ್ಲಿನ ಉಗ್ರ ಸಂಘಟನೆಗಳು ಮತ್ತು ಕೆಲ ವ್ಯಕ್ತಿಗಳ ವಿರುದ್ಧ ನಿರ್ಬಂಧ ಹೇರಿದೆ. ಹಮಾಸ್ ಉಗ್ರ ಸಂಘಟನೆಗೆ ಇರುವ ಎಲ್ಲ ಹಣದ ಜಾಲವನ್ನು ನಾವು ನಿರ್ಬಂಧಿಸಲು ಕ್ರಮ ಕೈಗೊಳ್ಲುತ್ತಿದ್ದೇವೆ. ಇವರಿಗೆ ಮಧ್ಯಪ್ರಾಚ್ಯ ದೇಶಗಳಾದ ಇರಾನ್, ಟರ್ಕಿ, ಸೂಡಾನ್ ಮುಂತಾದ ದೇಶಗಳಿಂದ ಹಣದ ಹರಿವು ಆಗುತ್ತಿದೆ ಎಂಬ ಮಾಹಿತಿಯಿದ್ದು, ಅದನ್ನು ಆಪರೇಷನ್ ಆಲ್-ಅಕ್ಸಾ ಎಂಬ ಕಾರ್ಯಾಚರಣೆಯಲ್ಲಿ ಸಂಪೂರ್ಣ ನಿಯಂತ್ರಿಸುತ್ತೇವೆ ಎಂದು ಅಮೆರಿಕ ಹೇಳಿದೆ.
ಗಾಜಾದ ಆಸ್ಪತ್ರೆ ಮೇಲೆ ದಾಳಿ: ಇಸ್ರೇಲ್ ಆರೋಪಿಸುತ್ತಿರುವ ಈ ಇಸ್ಲಾಮಿಕ್ ಜಿಹಾದ್ ಸಂಘಟನೆ ಯಾವುದು?
ಇಸ್ರೇಲ್ ಮೇಲೆ ನಿರ್ಬಂಧ: ಒಐಸಿಗೆ ಇರಾನ್ ಆಗ್ರಹ
ಟೆಹ್ರಾನ್: ಪ್ಯಾಲೆಸ್ತೀನ್ ಮೇಲಿನ ದಾಳಿ ಮತ್ತು ಗಾಜಾದಲ್ಲಿನ 500 ಜನರ ಸಾವಿಗೆ ಕಾರಣವಾದ ಘಟನೆ ಸಂಬಂಧ ಇಸ್ರೇಲ್‌ಗೆ ಎಲ್ಲಾ ಇಸ್ಲಾಮಿಕ್ ದೇಶಗಳು ತೈಲ ಪೂರೈಕೆ ಸ್ಥಗಿತ ಮಾಡಬೇಕು. ಜೊತೆಗೆ ತಮ್ಮ ದೇಶಗಳಿಂದ ಇಸ್ರೇಲ್‌ನ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಬೇಕು ಮತ್ತು ಸಾಧ್ಯವಿರುವ ಎಲ್ಲಾ ನಿರ್ಬಂಧಗಳನ್ನು ಹೇರಬೇಕು ಎಂದು ಇರಾನ್‌ನ ವಿದೇಶಾಂಗ ಸಚಿವ ಹೊಸ್ಸೇನ್ ಅಮಿರಬ್ದೊಲ್ಲಾಹಿಯನ್ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ