
ವಾಷಿಂಗ್ಟನ್ (ಮಾರ್ಚ್ 28, 2023): ಅಮೆರಿಕದಲ್ಲಿ ಬಂದೂಕು ಇಟ್ಟುಕೊಳ್ಳಲು ನಿರ್ಬಂಧವೇ ಇಲ್ಲ. ಇದರ ಪರಿಣಾಮ ಅಲ್ಲಿನ ಜನಸಂಖ್ಯೆಗಿಂತ ಅಧಿಕೃತವಾಗಿ ಬಂದೂಕುಗಳ ಸಂಖ್ಯೆಯೇ ಆ ದೇಶದಲ್ಲಿ ಹೆಚ್ಚಿದೆ. ಈ ಹಿನ್ನೆಲೆ ಅಮೆರಿಕದ ಟೆನ್ನೆಸ್ಸೀ ನಗರದ ನ್ಯಾಶ್‌ವಿಲ್ಲೆಯಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಮೂವರು ಮಕ್ಕಳು ಹಾಗೂ ಮೂವರು ಸಿಬ್ಬಂದಿ ಸೇರಿ 6 ಜನ ಬಲಿಯಾಗಿದ್ದಾರೆ.
ಅಲ್ಲದೆ, ಈ ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಮಂಗಳಮುಖಿ ಎಂದು ಗುರುತಿಸಲಾಗಿದ್ದು, ಅಲ್ಲದೆ ಅವರು ಆ ಶಾಲೆಯ ಮಾಜಿ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಕೊವೆನೆಂಟ್ ಶಾಲೆಯ ಮೂವರು ವಿದ್ಯಾರ್ಥಿಗಳು 9 ವರ್ಷಗಳಿಗಿಂತ ಸಣ್ಣ ವಯಸ್ಸಿನ ವಿದ್ಯಾರ್ಥಿಗಳಾಗಿದ್ದಾರೆ. ಅವರನ್ನು ಎವೆಲಿನ್ ಡಿಕ್ಹೌಸ್, ಹ್ಯಾಲಿ ಸ್ಕ್ರಗ್ಸ್ ಮತ್ತು ವಿಲಿಯಂ ಕಿನ್ನೆ ಎಂದು ಪೊಲೀಸರು ಗುರುತಿಸಿದ್ದಾರೆ. ಹಾಗೆ, ಮೃತ ಶಾಲೆಯ ಸಿಬ್ಬಂದಿಯನ್ನು ಸಿಂಥಿಯಾ ಪೀಕ್, 61, ಕ್ಯಾಥರೀನ್ ಕೂನ್ಸ್, 60, ಮತ್ತು ಮೈಕ್ ಹಿಲ್, 61 ಎಂದು ಹೆಸರಿಸಲಾಗಿದೆ.
ಇದನ್ನು ಓದಿ: ಅಮೆರಿಕದಲ್ಲಿ 113 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಸುಂಟರಗಾಳಿ: ಕನಿಷ್ಠ 26 ಜನ ಬಲಿ
ಅಮೆರಿಕದ ನ್ಯಾಶ್ವಿಲ್ಲೆಯ ಈ ಖಾಸಗಿ ಕ್ರೈಸ್ತ ಶಾಲೆಯಲ್ಲಿ ಸುಮಾರು 200 ವಿದ್ಯಾರ್ಥಿಗಳಿದ್ದು, ಮೂರು ವರ್ಷದಿಂದ ಸುಮಾರು 12 ರವರೆಗಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತದೆ. ಸಿಂಥಿಯಾ ಪೀಕ್ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಬದಲಿ ಶಿಕ್ಷಕಿಯಾಗಿದ್ದರೆ, ಮೈಕ್ ಹಿಲ್ ದ್ವಾರಪಾಲಕರಾಗಿದ್ದರು ಮತ್ತು ಕ್ಯಾಥರೀನ್ ಕೂನ್ಸ್ ಅವರನ್ನು ಶಾಲೆಯ ಮುಖ್ಯಸ್ಥರೆಂದು ವಿವರಿಸಲಾಗಿದೆ.
ಆರೋಪಿಯನ್ನು 28 ವರ್ಷದ ಮಂಗಳಮುಖಿ ಆಡ್ರೆ ಹೇಲ್ ಎಂದು ಪೊಲೀಸರು ತಿಳಿಸಿದ್ದಾರೆ. ಆಡ್ರೆ ಹೇಲ್ ಅರೆ-ಸ್ವಯಂಚಾಲಿತ ರೈಫಲ್ ಸೇರಿದಂತೆ ಮೂರು ಬಂದೂಕುಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು ಮತ್ತು ಪೊಲೀಸರು ಇವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದೂ ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ಸ್ಥಳೀಯ ಸಮಯ 10:13 ಕ್ಕೆ ಈ ಘಟನೆಯ ಬಗ್ಗೆ ಪೊಲೀಸರಿಗೆ ಮೊದಲು ಕರೆ ಬಂದಿತ್ತು.
ಇದನ್ನೂ ಓದಿ: ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್ ಜೈಲಿಗೆ ಹೋಗ್ತಾರೆಂದು ಕೇಳಿ ಎಕ್ಸೈಟ್ ಆದ ಖ್ಯಾತ ನೀಲಿ ತಾರೆ..!
ಆರೋಪಿಯು ಹೋಂಡಾ ಫಿಟ್‌ನಲ್ಲಿ ಶಾಲೆಗೆ ಹೋಗಿದ್ದು ಮತ್ತು ಶಾಲೆಯ ಬಾಗಿಲೊಂದಕ್ಕೆ ಗುಂಡು ಹಾರಿಸಿ ಒಳಗೆ ಪ್ರವೇಶಿಸಿದ್ದಾರೆ. ನಂತರ, ಕಟ್ಟಡದ ಎರಡನೇ ಮಹಡಿಗೆ ತೆರಳುವ ಮೊದಲು ಆಡ್ರೆ ಹೇಲ್ ನೆಲ ಮಹಡಿಯಲ್ಲಿ ಸುಮ್ಮನೇ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ಕಾರುಗಳು ಆಗಮಿಸುತ್ತಿದ್ದಂತೆ, ಆರೋಪಿ ಎರಡನೇ ಮಹಡಿಯಿಂದ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಜಿನಿಂದ ಒಡೆದ ಪರಿಣಾಮ ಓರ್ವ ಅಧಿಕಾರಿ ಗಾಯಗೊಂಡಿದ್ದು, ಪೊಲೀಸರು ಒಳಗೆ ಧಾವಿಸಿ ಶಂಕಿತನನ್ನು 10:27 ಕ್ಕೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ನ್ಯೂಸ್ ಓದುತ್ತಲೇ ದಿಢೀರ್ ಕುಸಿದು ಬಿದ್ದ US ಸುದ್ದಿ ನಿರೂಪಕಿ: ಶಾಕಿಂಗ್ ವಿಡಿಯೋ ನೋಡಿ..
ಆರೋಪಿ ಶಾಲೆಯ ಬಗ್ಗೆ ನಕ್ಷೆ ಹೊಂದಿದ್ದರು. ಹಾಗೂ, ದಾಳಿಯ ಯೋಜನೆ ವೇಳೆ ಶೂಟರ್ ಕಣ್ಗಾವಲು ನಡೆಸಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಮಧ್ಯೆ, ಗುಂಡಿನ ದಾಳಿಯಿಂದ ತನ್ನ ಮಗ ಆಘಾತಕ್ಕೊಳಗಾಗಿದ್ದಾನೆ ಎಂದು ಶಾಲೆಯ ವಿದ್ಯಾರ್ಥಿಯೊಬ್ಬರ ತಾಯಿ ಹೇಳಿಕೊಂಡಿದ್ದಾರೆ.
ಜೋ ಬೈಡೆನ್ ಖಂಡನೆ
ಅಮೆರಿಕದ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಬಗ್ಗೆ ಅಧ್ಯಕ್ಷ ಜೋ ಬೈಡೆನ್ಖಂಡಿಸಿದ್ದು, ಈ ಶೂಟಿಂಗ್ ಅನ್ನು "ಕುಟುಂಬದ ಕೆಟ್ಟ ದುಃಸ್ವಪ್ನ" ಎಂದು ಕರೆದಿದ್ದಾರೆ. ಅಲ್ಲದೆ, ಬಂದೂಕು
ಹಿಂಸಾಚಾರವನ್ನು ನಿಲ್ಲಿಸಲು ನಾವು ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಅವರು ಮತ್ತೊಮ್ಮೆ ಕಾಂಗ್ರೆಸ್‌ಗೆ ಗನ್ ನಿಯಂತ್ರಣ ಕಾನೂನುಗಳನ್ನು ಜಾರಿಗೆ ತರಲು ಕರೆ ನೀಡಿದರು. ಇದು ನಮ್ಮ ಸಮುದಾಯಗಳನ್ನು ನಾಶ ಮಾಡುತ್ತಿದೆ ಮತ್ತು ಈ ರಾಷ್ಟ್ರದ ಆತ್ಮವನ್ನು ನಾಶ ಮಾಡುತ್ತಿದೆ ಎಂದೂ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ