ಅಮೆರಿಕ-ಇರಾನ್‌ ನಡುವೆ ಮತ್ತೊಂದು ಸುತ್ತಿನ ಭೀಕರ ಕದನ, ಹೋರ್ಮುಜ್‌ ಮತ್ತೆ ಬಂದ್‌

Published : Jul 13, 2026, 08:02 AM IST
iran hormuz attack indian crew missing mea container ship us iran tensions

ಸಾರಾಂಶ

ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ಜಲಸಂಧಿಯನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ನೆಲೆಗಳ ಮೇಲೆ ದಾಳಿ ನಡೆಸಿದ್ದು, ನಂತರ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

ದುಬೈ (ಜು.13): ಅಮೆರಿಕ-ಇರಾನ್‌ ನಡುವೆ ಶಾಂತಿ ಸಂಧಾನ ಯತ್ನದ ಹೊರತಾಗಿಯೂ ಎರಡೂ ದೇಶಗಳು ಭಾನುವಾರ ಹೊಸ ಸುತ್ತಿನ ಕಾದಾಟ ನಡೆಸಿದ್ದು ಪರಸ್ಪರ ತೀವ್ರ ದಾಳಿ-ಪ್ರತಿದಾಳಿ ನಡೆಸಿವೆ. ಇದು ಹೋರ್ಮುಜ್ ಜಲಸಂಧಿ ಮುಚ್ಚಲು ನಾಂದಿ ಹಾಡಿದ್ದು, ಕದನ ವಿರಾಮದಿಂದ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದ ಜಾಗತಿಕ ವ್ಯಾಪಾರ ವಹಿವಾಟಿಗೆ ಮತ್ತೆ ಪೆಟ್ಟು ನೀಡುವ ಆತಂಕ ಸೃಷ್ಟಿಸಿದೆ.

ಅನಧಿಕೃತ ಸಂಚಾರದಲ್ಲಿ ತೊಡಗಿದೆ ಎಂದು ಆರೋಪಿಸಿ ಭಾನುವಾರ ಬೆಳಗ್ಗೆ 11 ಭಾರತೀಯ ಸಿಬ್ಬಂದಿ ಇದ್ದ ಹಡಗೊಂದರ ಮೇಲೆ ಇರಾನ್‌ ದಾಳಿ ಮಾಡಿ, ವಿಶ್ವದ ತೈಲ ಪೂರೈಕೆಯ ಪ್ರಮುಖ ಕೊಂಡಿ ಆಗಿರುವ ಹೋರ್ಮುಜ್‌ ಜಲಸಂಧಿಯನ್ನು ಮುಚ್ಚಿದೆ. ಇದರಿಂದ ಕ್ರುದ್ಧಗೊಂಡ ಅಮೆರಿಕ, ಇರಾನ್‌ನ 140 ನೆಲೆಗಳ ಮೇಲೆ ಭೀಕರ ದಾಳಿ ನಡೆಸಿ, ‘ನಮ್ಮ ಉದ್ದೇಶ ಈಡೇರಿದೆ. ಹೊಸ ಸುತ್ತಿನ ದಾಳಿ ಅಂತ್ಯಗೊಳಿಸಿದ್ದೇವೆ’ ಎಂದಿದೆ. ಇದಾದ ನಂತರ ಬಹ್ರೈನ್‌, ಕುವೈತ್, ಕತಾರ್‌ ಮತ್ತು ಒಮಾನ್‌ ಮೇಲೆ ಇರಾನ್‌ ಭೀಕರ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

ನೌಕೆ ಮೇಲೆ ಇರಾನ್‌ ಎಚ್ಚರಿಕೆಯ ದಾಳಿ

ಹೋರ್ಮುಜ್‌ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಇರಾನ್ ಮಾರ್ಗವೊಂದನ್ನು ಅನುಮೋದಿಸಿತ್ತು. ಆದರೆ ಹಲವು ಹಡಗುಗಳು ಅದರ ಎಚ್ಚರಿಕೆ ಮತ್ತು ಸೂಚನೆಗಳನ್ನು ನಿರ್ಲಕ್ಷ್ಯಿಸಿ ಬೇರೆ ಮಾರ್ಗದಲ್ಲಿ ಸಂಚರಿಸಿವೆ. ಹೀಗಾಗಿ ಸೈಪ್ರಸ್‌ ಧ್ವಜ ಹೊತ್ತ 11 ಭಾರತೀಯ ಸಿಬ್ಬಂದಿ ಇದ್ದ ಕಂಟೈನರ್‌ ಹಡಗೊಂದರ ಮೇಲೆ ಇರಾನ್‌ ಪಡೆಗಳು ಭಾನುವಾರ ನಸುಕಿನಲ್ಲಿ ಎಚ್ಚರಿಕೆಯ ದಾಳಿ ನಡೆಸಿವೆ. ಈ ವೇಳೆ ಹಡಗಿನ ಎಂಜಿನ್‌ ರೂಂಗೆ ತೀವ್ರ ಹಾನಿಯಾಗಿದ್ದು, ಬೆಂಕಿ ಹೊತ್ತಿಕೊಂಡಿದೆ.

ಇರಾನ್‌ನ 140 ನೆಲೆಗಳು ಉಡೀಸ್‌

ಹಡಗಿನ ಮೇಲೆ ಇರಾನ್‌ ದಾಳಿ ಬೆನ್ನಲ್ಲೇ ಅಮೆರಿಕ ಇರಾನ್‌ನ ಸುಮಾರು 140 ನೆಲೆಗಳ ಮೇಲೆ ಭೀಕರ ವಾಯುದಾಳಿ ನಡೆಸಿದೆ. ಇದರಲ್ಲಿ ಕ್ಷಿಪಣಿ ಮತ್ತು ಡ್ರೋನ್‌ ಲಾಂಚ್‌ ಸೈಟ್‌ಗಳು, ಗನ್‌ಪೌಡರ್‌ ಡಂಪ್‌ಗಳು, ಸಂವಹನ ಕೇಂದ್ರಗಳು ಹಾಗೂ ಇತರ ಸೇನಾ ನೆಲೆಗಳು ಸೇರಿವೆ. ಹೋರ್ಮುಜ್‌ನಲ್ಲಿ ನಾಗರಿಕ ಹಡಗುಗಳು ಮತ್ತು ವಾಣಿಜ್ಯ ನೌಕೆಗಳ ಮೇಲೆ ಇರಾನ್‌ನ ದಾಳಿಯ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಉದ್ದೇಶದಿಂದ ಈ ದಾಳಿ ನಡೆಸಿದ್ದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ. ಇದು ಈ ವಾರದಲ್ಲಿ ಇರಾನ್‌ ಮೇಲಿನ ಅಮೆರಿಕದ 3ನೇ ಸುತ್ತಿನ ದಾಳಿ.

ಅಮೆರಿಕ ಮಿತ್ರರಾಷ್ಟ್ರಗಳಿಗೆ ಇರಾನ್‌ ಬಾಂಬ್

ಅಮೆರಿಕದ ದಾಳಿಗೆ ಪ್ರತಿಯಾಗಿ, ಅದರ ಕೊಲ್ಲಿ ಮಿತ್ರರಾಷ್ಟ್ರಗಳಾದ ಬಹ್ರೈನ್‌, ಕುವೈತ್, ಕತಾರ್‌ ಮತ್ತು ಒಮಾನ್‌ ಮೇಲೆ ಇರಾನ್‌ ಭೀಕರ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ. ಕುವೈತ್‌ ಮೇಲೆ ಇರಾನ್‌ ಗುಂಡಿನ ಮಳೆಗರೆಯುತ್ತಿದ್ದು, ಅವುಗಳನ್ನು ಹೊಡೆದುರುಳಿಸುತ್ತಿರುವುದಾಗಿ ಕುವೈತ್‌ ಸೇನೆ ತಿಳಿಸಿದೆ. ಕತಾರ್‌ನ ಹಲವೆಡೆ ಸ್ಫೋಟಗಳಾಗಿವೆ. ಯುಎಇನಲ್ಲಿ ಸೈರನ್‌ಗಳು ಮೊಳಗಿವೆ. ಆದರೆ ಶತ್ರು ಕ್ಷಿಪಣಿಗಳು ಗಡಿ ದಾಟಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದೆ. ಇರಾನ್ ಡ್ರೋನ್‌ಗಳು ಹೋರ್ಮುಜ್‌ ಪ್ರದೇಶದ ಈಶಾನ್ಯ ಒಮಾನ್‌ನಲ್ಲಿ ಮೇಲೆ ದಾಳಿ ಮಾಡಿವೆ ಎಂದು ಒಮಾನ್‌ನ ಸರ್ಕಾರಿ ಸುದ್ದಿ ಸಂಸ್ಥೆಯೂ ವರದಿ ಮಾಡಿದೆ.

ಹೋರ್ಮುಜ್‌ ಬಂದ್‌ನಿಂದ ಮತ್ತೆ ಆತಂಕ

ಹೋರ್ಮುಜ್‌ ಜಲಸಂಧಿ ಜಾಗತಿಕ ವ್ಯಾಪಾರ ವಹಿವಾಟಿಗೆ ಬಹುಮುಖ್ಯವಾದ ಮಾರ್ಗ. ವಿಶ್ವ ತೈಲ ವ್ಯಾಪಾರದ ಸುಮಾರು ಶೇ.20 ಮತ್ತು ನೈಸರ್ಗಿಕ ಅನಿಲದ ಶೇ.25ರಷ್ಟು ಹೋರ್ಮುಜ್‌ ಮೂಲಕವೇ ಸಾಗುತ್ತದೆ. ಪ್ರತಿದಿನ ಸರಾಸರಿ 2 ಕೋಟಿ ಬ್ಯಾರೆಲ್ ತೈಲ ಇಲ್ಲಿಂದ ಹಾದುಹೋಗುತ್ತದೆ. ಭಾರತ ತನ್ನ ಶೇ.80-85 ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಇರಾಕ್, ಇರಾನ್‌ನ ತೈಲ ರಫ್ತು ಹೋರ್ಮುಜ್‌ ಮೇಲೆಯೇ ಅವಲಂಬಿತವಾಗಿದೆ.

ಈ ಹಿಂದೆ ಹೋರ್ಮುಜ್‌ ಜಲಸಂಧಿ ಬಂದ್‌ ಆಗಿದ್ದಾಗ ವಿಶ್ವ ತೈಲ ಪೂರೈಕೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಯುದ್ಧದ ಸಮಯದಲ್ಲಿ ಬ್ಯಾರೆಲ್‌ಗೆ 120 ಡಾಲರ್‌ವರೆಗೂ ಕಚ್ಚಾತೈಲದ ಬೆಲೆ ಏರಿತ್ತು. ಆದರೆ ಕದನ ವಿರಾಮದ ಬಳಿಕ ಬೆಲೆ ಕಡಿಮೆಯಾಗಿತ್ತು. ಈಗ ಪುನಃ ಹೋರ್ಮುಜ್‌ ಬಂದ್‌ ಆಗಿರುವುದರಿಂದ ಮತ್ತೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಮೂಲಕ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರಿ ಅಸ್ಥಿರತೆ, ತೈಲ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ.

‘ಇರಾನ್‌ ಕೆಟ್ಟ ಆಯ್ಕೆಯನ್ನು ಮಾಡಿಕೊಂಡಿದೆ. ಈಗ ಅವರು ಬೆಲೆ ತೆರಲಿದ್ದಾರೆ’ ಎಂದು ಅಮೆರಿಕ ರಕ್ಷಣಾ ಸಚಿವ ಪೀಟ್‌ ಹೆಗ್ಸೆತ್‌ ಗುಡುಗಿದರೆ, ‘ಏಕಪಕ್ಷೀಯ ಒಪ್ಪಂದಗಳ ಯುಗ ಮುಗಿದಿದೆ. ನಿಮ್ಮ ಮಾತನ್ನು ಉಳಿಸಿಕೊಳ್ಳಿ ಅಥವಾ ಪರಿಣಾಮವನ್ನು ಎದುರಿಸಿ ಎಂದು ನಾವು ನಿಮಗೆ ಮೊದಲೇ ಹೇಳಿದ್ದೆವು. ಈಗ ವಾಸ್ತವವು ಬಾಗಿಲು ಬಡಿಯುತ್ತಿದೆ’ ಎಂದು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಘೇರ್‌ ಘಾಲಿಬಾಫ್‌ ಕಟು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ, ಇರಾನ್‌ ಹಾಗೂ ಅಮೆರಿಕ ಸಂಯಮ ವಹಿಸಿ ಕದನ ನಿಲ್ಲಿಸಬೇಕು ಎಂದು ಹಿಂದಿನ ಕದನವಿರಾಮದ ಮಧ್ಯವರ್ತಿ ದೇಶಗಳು ಇರಾನ್‌ ಹಾಗೂ ಅಮೆರಿಕ ಆಗ್ರಹಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Operation entebbe: ಎಂಟೆದೆಯ ಎಂಟೆಬ್ಬೆಗೆ ಈಗ 50! ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್‌ ಕಾರ್ಯಾಚರಣೆ!
7 ನಿಮಿಷಗಳ ಕಾಲ ಸತ್ತೇ ಹೋಗಿದ್ದ ಯಶಸ್ವಿ ಕ್ರೀಡಾ ಟೀಂನ ಕೋಚ್‌; ವೈದ್ಯಕೀಯ ಜಗತ್ತೇ ಘೋಷಿಸಿದ್ದ ಘಟನೆಯಿದು!