ಅಫ್ಘನ್ ತೊರೆಯಲು ನಾಳೆ ಕಡೆಯ ದಿನ, ಬಳಿಕ ದೇಶ ಪೂರ್ಣ ಉಗ್ರರ ಹಿಡಿತಕ್ಕೆ!

By Suvarna NewsFirst Published Aug 30, 2021, 8:25 AM IST
Highlights

* ಎಲ್ಲಾ ವಿದೇಶಿ ಪಡೆಗಳಿಗೆ ಈಗಾಗಲೇ ತಾಲಿಬಾನ್‌ ಗಡುವು

* ಬಳಿಕ ಅಷ್ಘಾನಿಸ್ತಾನ ಸಂಪೂರ್ಣವಾಗಿ ತಾಲಿಬಾನ್‌ ಹಿಡಿತಕ್ಕೆ

ಕಾಬೂಲ್‌(ಆ.30): ಕಳೆದ 20 ವರ್ಷಗಳಿಂದ ಅಷ್ಘಾನಿಸ್ತಾನವನ್ನು ಬಹುತೇಕ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಮೆರಿಕ ಮತ್ತು ನ್ಯಾಟೋ ಪಡೆಗಳ ಅಧಿಪತ್ಯ ಮಂಗಳವಾರಕ್ಕೆ ಕೊನೆಗೊಳ್ಳಲಿದೆ. ತಾಲಿಬಾನ್‌ ಜೊತೆ ಅಮೆರಿಕ ಮಾಡಿಕೊಂಡ ಒಪ್ಪಂದ ಅನ್ವಯ, ಆ.31ರೊಳಗೆ ಎಲ್ಲಾ ವಿದೇಶಿ ಪಡೆಗಳು ದೇಶ ತೊರೆಯಬೇಕಿದೆ. ಈ ಒಪ್ಪಂದಕ್ಕೆ ಬದ್ಧ ಎಂದು ಅಮೆರಿಕ ಕೂಡಾ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಕೆಲ ವರ್ಷಗಳ ಹಿಂದಿನವರೆಗೂ 40 ದೇಶಗಳ ಸೈನಿಕರ ಹೋರಾಟದ ನೆಲೆಯಾಗಿದ್ದ ಅಷ್ಘಾನಿಸ್ತಾನ ಪೂರ್ಣವಾಗಿ ವಿದೇಶಿ ಸೇನೆಯಿಂದ ಮುಕ್ತವಾಗಲಿದೆ. ಇದರರ್ಥ, ದೇಶ ಪೂರ್ಣವಾಗಿ ಮತ್ತೆ ತಾಲಿಬಾನಿ ಉಗ್ರರ ತೆಕ್ಕೆಗೆ ಬರಲಿದೆ.

ಈಗಾಗಲೇ ಬಹುತೇಕ ದೇಶಗಳು ಅಷ್ಘಾನಿಸ್ತಾನದಿಂದ ಜಾಗ ಖಾಲಿ ಮಾಡಿದ್ದು, ಅಮೆರಿಕದ 4800 ಸೈನಿಕರು ಮತ್ತು ಅಂದಾಜು 1000 ನಾಗರಿಕರು ಇದ್ದಾರೆ. ಅವರನ್ನು ಸೋಮವಾರ ಅಥವಾ ಮಂಗಳವಾರದೊಳಗೆ ಖಾಲಿ ಮಾಡುವ ಮೂಲಕ ಅಮೆರಿಕ ಪಡೆಗಳು ಕಡೆಯದಾಗಿ ಅಷ್ಘಾನಿಸ್ತಾನಕ್ಕೆ ವಿದಾಯ ಹೇಳಲಿವೆ.

20 ವರ್ಷದ ಬಳಿಕ ಸೇನೆ ವಾಪಸ್‌:

ವಿಶ್ವ ವಾಣಿಜ್ಯ ಕಟ್ಟಡಗಳ ಮೇಲೆ 9/11ರಂದು ನಡೆದ ದಾಳಿಯ ಬಳಿಕ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದ ಅಮೆರಿಕದ ಅಷ್ಘಾನಿಸ್ತಾನಕ್ಕೆ ತನ್ನ ಸೇನೆಯನ್ನು ರವಾನಿಸಿತ್ತು. ಅಮೆರಿಕಕ್ಕೆ ನ್ಯಾಟೋ ಪಡೆಗಳು ಕೂಡ ಸಾಥ್‌ ನೀಡಿದ್ದವು. ಬ್ರಿಟನ್‌, ಆಸ್ಪ್ರೇಲಿಯಾ ಸೇರಿದಂತೆ 40 ದೇಶಗಳ ಪಡೆಗಳು ಅಷ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದವು. 2011ರ ವೇಳೆಗೆ ಅಷ್ಘಾನಿಸ್ತಾನದಲ್ಲಿದ್ದ ನ್ಯಾಟೋ ಪಡೆಯ ಸೈನಿಕರ ಸಾಮರ್ಥ್ಯ 140,000ಕ್ಕೆ ತಲುಪಿತ್ತು. 2012ರ ಬಳಿಕ ನ್ಯಾಟೋ ಪಡೆಗಳನ್ನು ವಾಪಸ್‌ ಕರೆಸಿಕೊಳ್ಳುವ ಪ್ರಕ್ರಿಯೆಗಳು ಆರಂಭವಾಗಿದ್ದವು.

ಅಮೆರಿಕ- ತಾಲಿಬಾನ್‌ ಒಪ್ಪಂದ:

ಕೊನೆಗೆ ಯುದ್ಧ ಪೀಡಿತ ಅಷ್ಘಾನಿಸ್ತಾನದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವ ಕುರಿತಂತೆ 2020 ಫೆ.29ರಂದು ಅಮೆರಿಕ ಮತ್ತು ತಾಲಿಬಾನ್‌ ಮಧ್ಯೆ ದೋಹಾದಲ್ಲಿ ರಹಸ್ಯ ಒಪ್ಪಂದ ಏರ್ಪಟ್ಟಿತ್ತು. ಅದರಂತೆ 14 ತಿಂಗಳಲ್ಲಿ ಸೇನೆಯ ವಾಪಸ್‌ ಕರೆಸಿಕೊಳ್ಳುವುದಕ್ಕೆ ಅಮೆರಿಕ ಒಪ್ಪಿಗೆ ಸೂಚಿಸಿತ್ತು. ಇದಕ್ಕೆ ಪ್ರತಿಯಾಗಿ ಅಷ್ಘಾನಿಸ್ತಾನವನ್ನು ಅಲ್‌ ಖೈದಾ ಹಾಗೂ ಇತರ ಉಗ್ರಗಾಮಿ ಸಂಘಟನೆಗಳು ಭಯೋತ್ಪಾದಕ ಚುಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ನೀಡುವುದಿಲ್ಲ ಎಂದು ತಾಲಿಬಾನ್‌ ವಾಗ್ದಾನ ಮಾಡಿತ್ತು. ಅಮೆರಿಕ ಅಷ್ಘಾನಿಸ್ತಾನದಿಂದ ವಾಪಸ್‌ ಆಗುವ ದಿನಗಳು ಹತ್ತಿರ ಆಗುತ್ತಿದ್ದಂತೆ ಒಂದೊಂದೇ ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದ ತಾಲಿಬಾನ್‌ ಆ.15ರಂದು ಕಾಬೂಲ್‌ ಅನ್ನು ಪ್ರವೇಶಿಸಿತ್ತು. ಅದಾದ ಬಳಿಕ ಗಡುವಿನ ಒಳಗಾಗಿ ಸೇನೆಯನ್ನು ವಾಪಸ್‌ ಕರೆಸಿಕೊಳ್ಳುವಂತೆ ತಾಲಿಬಾನ್‌ ಅಮೆರಿಕ್ಕೆ ಎಚ್ಚರಿಕೆ ನೀಡಿತ್ತು. ಇದೀಗ ಗಡುವಿನ ಒಳಗಾಗಿ ವಿದೇಶಿ ಪಡೆಗಳು ವಾಪಸ್‌ ಆಗುತ್ತಿವೆ.

ಕಳೆದ 20 ವರ್ಷಗಳ ನಿರಂತರ ಯುದ್ಧಲ್ಲಿ 1.75 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಅವರಲ್ಲಿ 51,613 ಮಂದಿ ನಾಗರಿಕರು, 69,000 ಸೇನಾ ಪಡೆಯ ಸಿಬ್ಬಂದಿ, 51,000 ತಾಲಿಬಾನ್‌ ಉಗ್ರರು ಹತರಾಗಿದ್ದಾರೆ.

click me!