ತಾಲಿಬಾನಿಗಳಿಂದ ಮತ್ತಷ್ಟು ನಿಷೇಧ: ಟೀವಿಗಳಲ್ಲಿ ಮಹಿಳೆಯರ ಧ್ವನಿ ಬಿತ್ತರಕ್ಕೆ ನಿರ್ಬಂಧ!

By Kannadaprabha NewsFirst Published Aug 30, 2021, 7:48 AM IST
Highlights

* ಆಫ್ಘನ್‌ ಟೀವಿಗಳಲ್ಲಿ ಮಹಿಳೆಯರ ಧ್ವನಿ ಬಿತ್ತರಕ್ಕೆ ನಿರ್ಬಂಧ

* ತಾಲಿಬಾನಿಗಳಿಂದ ಮತ್ತಷ್ಟು ನಿಷೇಧ ಜಾರಿ

* ಟೀವಿ, ರೇಡಿಯೋಗಳಲ್ಲಿನ ಸಂಗೀತಕ್ಕೂ ನಿಷೇಧ

* ಸಹಶಿಕ್ಷಣ ನಿಷೇಧ ಜಾರಿಗೆ ತಂದ ತಾಲಿಬಾನ್‌

ಕಾಬೂಲ್‌(ಆ.30): ಅಫ್ಘಾನಿಸ್ತಾನದಲ್ಲಿ ಮಹಿಳಾ ಸ್ವಾತಂತ್ರ್ಯದ ಮೇಲೆ ಮತ್ತಷ್ಟುನಿರ್ಬಂಧ ಹೇರಿರುವ ತಾಲಿಬಾನ್‌, ಈಗ ದೇಶದ ಟೀವಿ ಚಾನೆಲ್‌ಗಳು ಹಾಗೂ ರೇಡಿಯೋ ಚಾನೆಲ್‌ಗಳಲ್ಲಿ ಮಹಿಳೆಯರ ಧ್ವನಿ ಬಿತ್ತರವಾಗಕೂಡದು ಎಂಬ ಆದೇಶ ಹೊರಡಿಸಿದೆ. ಇದರ ಜತೆಗೆ ಟೀವಿ ಹಾಗೂ ರೇಡಿಯೋಗಳಲ್ಲಿ ಸಂಗೀತವನ್ನೂ ನಿಷೇಧಿಸಿದೆ.

ಇತ್ತೀಚೆಗೆ ಮಹಿಳಾ ನಿರೂಪಕರು ಟೀವಿಯಲ್ಲಿ ಕಾಣಿಸಕೂಡದು ಎಂಬ ನಿರ್ಬಂಧವನ್ನು ಅದು ಹೊರಡಿಸಿತ್ತು. ಹಲವು ಮಹಿಳಾ ನಿರೂಪಕರನ್ನು ಕೆಲಸದಿಂದ ವಜಾ ಮಾಡಿತ್ತು. ಅದರ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಮಹಿಳೆಯರು ದೈನಂದಿನ ಜೀವನವನ್ನು ನಿರಾಳವಾಗಿ ನಡೆಸಲು ತಾಲಿಬಾನ್‌ ಬಿಡುತ್ತಿಲ್ಲ ಎಂದು ವರದಿಗಳು ತಿಳಿಸಿವೆ.

ಸಂಗೀತ ಹಾಗೂ ಮಹಿಳೆಯರ ಮುಖದರ್ಶನವು ಇಸ್ಲಾಂ ಪ್ರಕಾರ ಮಹಾಪಾಪ ಎಂಬುದು ತಾಲಿಬಾನ್‌ನ ಹೇಳಿಕೆಯಾಗಿದೆ.

ಸಹಶಿಕ್ಷಣವೂ ನಿಷೇಧ:

ಇನ್ನೊಂದೆಡೆ, ಸಹಶಿಕ್ಷಣವನ್ನು ಇತ್ತೀಚೆಗೆ ನಿಷೇಧಿಸಿದ್ದ ತಾಲಿಬಾನ್‌ ಈಗ, ಈ ಆದೇಶವನ್ನು ಜಾರಿಗೆ ತಂದಿದೆ.

‘ಬಾಲಕ-ಬಾಲಕಿಯರು ಇನ್ನು ಅಫ್ಘಾನಿಸ್ತಾನ ವಿಶ್ವವಿದ್ಯಾಲಯ ಹಾಗೂ ಶಾಲಾ-ಕಾಲೇಜುಗಳಲ್ಲಿ ಒಟ್ಟಿಗೇ ಕುಳಿತು ಪಾಠ ಆಲಿಸಲು ಆಗದು. ಇಸ್ಲಾಮಿಕ್‌ ನಿಯಮದ ಪ್ರಕಾರ ಪ್ರತ್ಯೇಕ ತರಗತಿಗಳನ್ನು ಆರಂಭಿಸಲಾಗಿದೆ’ ಎಂದು ಆಫ್ಘನ್‌ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದಾರೆ.

click me!