ಪಹಲ್ಗಾಂ ದಾಳಿಕೋರ ಉಗ್ರ ಸಂಘಟನೆಗೆ ಅಮೆರಿಕ ನಿರ್ಬಂಧ

Kannadaprabha News   | Kannada Prabha
Published : Jul 19, 2025, 05:59 AM IST
Donald Trump

ಸಾರಾಂಶ

ಪಹಲ್ಗಾಂ ದಾಳಿಯ ರೂವಾರಿಗಳ ಹೆಡೆಮುರಿಕಟ್ಟುವ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಪಾಕ್‌ ಮೂಲದ ಲಷ್ಕರ್‌-ಎ-ತೊಯ್ಬಾದ (ಎಲ್‌ಇಟಿ) ಸಹ ಸಂಘಟನೆ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್‌) ಮೇಲೆ ನಿರ್ಬಂಧ ಹೇರಿರುವ ಅಮೆರಿಕ

ನ್ಯೂಯಾರ್ಕ್‌/ವಾಷಿಂಗ್ಟನ್‌: ಪಹಲ್ಗಾಂ ದಾಳಿಯ ರೂವಾರಿಗಳ ಹೆಡೆಮುರಿಕಟ್ಟುವ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಈ ದಾಳಿಯ ಹೊಣೆ ಹೊತ್ತಿದ್ದ ಪಾಕ್‌ ಮೂಲದ ಲಷ್ಕರ್‌-ಎ-ತೊಯ್ಬಾದ (ಎಲ್‌ಇಟಿ) ಸಹ ಸಂಘಟನೆ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್‌ಎಫ್‌) ಮೇಲೆ ನಿರ್ಬಂಧ ಹೇರಿರುವ ಅಮೆರಿಕ, ಅದನ್ನು ವಿದೇಶಿ ಉಗ್ರ ಸಂಘಟನೆ ಎಂದು ಅಧಿಕೃತವಾಗಿ ಘೋಷಿಸಿದೆ.

‘ಅಮೆರಿಕದ ಈ ನಡೆ ದೇಶದ ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆ ಮತ್ತು ಉಗ್ರ ನಿಗ್ರಹ ಹಾಗೂ ಪಹಲ್ಗಾಂ ದಾಳಿಗೆ ನ್ಯಾಯ ಒದಗಿಸುವ ಟ್ರಂಪ್‌ ಅ‍ವರ ಬದ್ಧತೆ ಪ್ರದರ್ಶಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದೇ ವರ್ಷ ಏ.22ರಂದು 26 ಮಂದಿ ಬಲಿಪಡೆದಿದ್ದ ಪಹಲ್ಗಾಂ ದಾಳಿಯ ಹೊಣೆಯನ್ನು ದಿ ರೆಸಿಸ್ಟನ್ಸ್ ಫ್ರಂಟ್‌ ಹೊತ್ತುಕೊಂಡಿತ್ತು. ಆದರೆ ಈ ದಾಳಿ ವಿಚಾರವಾಗಿ ಭಾರತ ಮತ್ತು ಪಾಕ್‌ ನಡುವೆ ಸಂಘರ್ಷದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಉಲ್ಟಾ ಹೊಡೆದಿತ್ತು.

ಇದೀಗ ಅಮೆರಿಕವು ಟಿಆರ್‌ಎಫ್‌ ಅನ್ನು ವಿದೇಶಿ ಉಗ್ರ ಸಂಘಟನೆ (ಎಫ್‌ಟಿಒ) ಮತ್ತು ವಿಶೇಷವಾಗಿ ಘೋಷಿತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದೆ. ಇದರ ಜತೆಗೆ ಲಷ್ಕರ್‌-ಎ-ತೊಯ್ಬಾ ಕೂಡ ವಿದೇಶಿ ಉಗ್ರ ಸಂಘಟನೆ ಪಟ್ಟಿಯಲ್ಲಿರುವಂತೆ ನೋಡಿಕೊಂಡಿದೆ.

ಏನಿದು ನಿರ್ಬಂಧ?:

ನಿರ್ಧಾರದ ಅನ್ವಯ ಆ ಉಗ್ರ ಸಂಘಟನೆಗೆ ಹಣ ರವಾನಿಸುವ ಅಥವಾ ಪ್ರತ್ಯಕ್ಷ-ಪರೋಕ್ಷವಾಗಿ ಸಹಾಯ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಉಗ್ರ ಸಂಘಟನೆ ಜತೆ ವ್ಯವಹರಿಸಿದರೆ, ಅಂಥವರ ಮೇಲೂ ಅಮೆರಿಕ ಕ್ರಮ ಜರುಗಿಸಲಿದೆ.

2019ರಲ್ಲಿ ಸ್ಥಾಪನೆ:

ಟಿಆರ್‌ಎಫ್‌ ಲಷ್ಕರ್‌ ಪ್ರೇರಿತ ಉಗ್ರ ಸಂಘಟನೆಯಾಗಿದ್ದು 2019ರಲ್ಲಿ ಸ್ಥಾಪನೆ ಆಗಿತ್ತು. ಪಹಲ್ಗಾಂಗೂ ಮುನ್ನ ಕಾಶ್ಮೀರದಲ್ಲಿ ಅನೇಕ ದಾಳಿ ನಡೆಸಿತ್ತು.

ಭಾರತದಿಂದ ಸ್ವಾಗತ:

ಟಿಆರ್‌ಎಫ್‌ ಅನ್ನು ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಎಂದು ಘೋಷಿಸಿದ ಅಮೆರಿಕದ ನಡೆಯನ್ನು ಭಾರತ ಸ್ವಾಗತಿಸಿದೆ. ಈ ಕ್ರಮವು ಅಮೆರಿಕ ಮತ್ತು ಭಾರತದ ಭಯೋತ್ಪಾದನೆ ನಿಗ್ರಹ ಸಹಭಾಗಿತ್ವಕ್ಕೆ ಬಲಿಷ್ಟ ದೃಢೀಕರಣವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಬಣ್ಣಿಸಿದ್ದಾರೆ.

ಟಿಆರ್‌ಎಫ್‌, ಲಷ್ಕರ್ ನೆಲೆ ಶಿಫ್ಟ್‌?

ನವದೆಹಲಿ: ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ (ಎಫ್‌ಟಿಒ) ಘೋಷಿಸಿರುವ ಬೆನ್ನಲ್ಲೇ, ಲಷ್ಕರ್ ಎ ತೊಯ್ಬಾ ಹಾಗೂ ಟಿಆರ್‌ಎಫ್‌ ತಮ್ಮ ನೆಲೆಯನ್ನು ತಮ್ಮ ಪ್ರಧಾನ ಕಚೇರಿಯಾದ ಪಾಕಿಸ್ತಾನದ ಮುರೀದ್‌ಕೆಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ಬಹಾವಲ್ಪುರಕ್ಕೆ ಸ್ಥಳಾಂತರಿಸುತ್ತಿವೆ ಎಂದು ಮೂಲಗಳು ಹೇಳಿವೆ.

ಆಪರೇಷನ್ ಸಿಂದೂರ ಸಮಯದಲ್ಲಿ, ಭಾರತವು ಮುರೀದ್‌ಕೆಯಲ್ಲಿರುವ ಪ್ರಮುಖ ಲಷ್ಕರ್ ತಾಣದ ಮೇಲೆ ಮಾತ್ರವಲ್ಲದೆ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬಹಾವಲ್ಪುರದಲ್ಲಿರುವ ಜೈಷ್‌ ಭದ್ರಕೋಟೆಯ ಮೇಲೂ ನಿಖರವಾದ ದಾಳಿಗಳನ್ನು ನಡೆಸಿತ್ತು.

ಜ। ಆಸೀಂ ಮಕ್ಕಳ ಹತ್ಯೆಯಾದ್ರೆ ನೋವು ತಿಳಿಯುತ್ತೆ: ಲೆ. ನರ್ವಾಲ್ ತಂದೆ ಕಿಡಿ

ನವದೆಹಲಿ: ಪಹಲ್ಗಾಂ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡವರು ಇನ್ನು ಅದೇ ನೋವಿನಲ್ಲಿದ್ದು ಪುನಃ ನೋವು ತೋಡಿಕೊಂಡಿದ್ದಾರೆ. ‘ಪಾಕ್ ಸೇನಾ ಮುಖ್ಯಸ್ಥ ಜ. ಆಸೀಂ ಮುನೀರ್ ಮಗ ಅಥವಾ ಮಗಳನ್ನು ಯಾರಾದರೂ ಹೀಗೆ ಹತ್ಯೆ ಮಾಡಿದರೆ ಆಗ ಅವರಿಗೆ ನೋವು ತಿಳಿಯುತ್ತದೆ’ ಎಂದು ಪಾಕ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಲೆ. ವಿನಯ್‌ ನರ್ವಾಲ್ ತಂದೆ ರಾಜೇಶ್ ನರ್ವಾಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎನ್‌ಡಿಟೀವಿ ಜತೆ ಮಾತನಾಡಿದ ಅವರು, ‘ಯಾರಾದರೂ ಅವರ ಮಗ ಅಥವಾ ಮಗಳಿಗೆ ಘಾಸಿ ಮಾಡಿದ ದಿನ ಮಾತ್ರ ಅವರಿಗೆ (ಜ. ಆಸೀಮ್ ಮುನೀರ್‌) ನನ್ನ ನೋವು ಅರ್ಥವಾಗುತ್ತದೆ. ತನ್ನ ಮಗ ಅಥವಾ ಮಗಳು ಭಯೋತ್ಪಾದಕ ದಾಳಿಯಲ್ಲಿ ಹತ್ಯೆಯಾದರು ಎಂದು ತಿಳಿದ ದಿನವೇ ಅವರಿಗೆ ನೋವಿನ ಅರಿವಾಗುತ್ತದೆ. ನನಗೆ ಗನ್‌ ನೀಡಿ ಗುಂಡು ಹಾರಿಸಲು ಅವಕಾಶ ನೀಡಿದ್ದೇ ಆದರೆ ಹಾಗೂ ಅವರ ಮಗ ಮತ್ತು ಮಗಳು ಗುಂಡೇಟು ತಿಂದಿದ್ದೇ ಆದರೆ ಅವರಿಗೆ ಆ ಸಂಕಟ ತಿಳಿಯುತ್ತದೆ’ ಎಂದಿದ್ದಾರೆ.

ಜೈಷ್‌ ಕೇಂದ್ರ ಸ್ಥಾನದಿಂದ 1000 ಕಿ.ಮೀ. ದೂರದಲ್ಲಿ ಅಜರ್

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಜೈಷ್‌-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಗಿಲ್ಗಿಟ್-ಬಾಲ್ಟಿಸ್ತಾನ್‌ನ ಸ್ಕರ್ಡೂ ಎಂಬಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಇತ್ತೀಚೆಗೆ ಆಪರೇಷನ್‌ ಸಿಂದೂರದ ವೇಳೆ ದಾಳಿಗೊಳಗಾದ ಬಹಾವಲ್ಪುರದಲ್ಲಿನ ಜೈಷ್‌ ಕೇಂದ್ರ ಕಚೇರಿಯಿಂದ 1000 ಕಿ.ಮೀ. ದೂರದಲ್ಲಿದೆ ಎಂದು ಹೊಸ ಗುಪ್ತಚರ ಮಾಹಿತಿ ಲಭ್ಯವಾಗಿದೆ.

ಸ್ಕರ್ಡೂ ಪಟ್ಟಣದ ಸದ್ಪಾರಾ ರಸ್ತೆಯ ಬಳಿಯ ಮಸೀದಿಗಳು ಮತ್ತು ಗೆಸ್ಟ್‌ಹೌಸ್‌ಗಳಲ್ಲಿ ತಂಗಿದ್ದಾನೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ‘ಉಗ್ರ ಅಜರ್ ಅಫ್ಘಾನಿಸ್ತಾನದಲ್ಲಿರಬಹುದು, ಪಾಕಿಸ್ತಾನದಲ್ಲಂತೂ ಇಲ್ಲ. ಭಾರತವೇನಾದರೂ ಆತನ ಮಾಹಿತಿ ಕೊಟ್ಟರೆ ಹಸ್ತಾಂತರಿಸಲು ಪಾಕಿಸ್ತಾನ ಸಿದ್ಧವಿದೆ’ ಎಂದಿದ್ದರು. ಅದರ ಬೆನ್ನಲ್ಲೇ, ಪಿಒಕೆಯಲ್ಲಿ ಅಜರ್‌ನ ಚಲನವಲನ ಕಂಡುಬಂದಿದ್ದು, ಉಗ್ರಪೋಷಕ ಪಾಕಿಸ್ತಾನದ ಮುಖವಾಡ ಮತ್ತೊಮ್ಮೆ ಬಯಲಾಗಿದೆ.

ಸದ್ಯ ಅಜರ್‌ ನೆಲೆಸಿರುವ ಸ್ಕರ್ಡೂ ಪ್ರದೇಶ ಆತನ ಬಹಾವಲ್‌ಪುರ ಕೇಂದ್ರದಿಂದ 1,000 ಕಿ.ಮೀ. ದೂರದಲ್ಲಿದೆ. ಆಕರ್ಷಕ ಸರೋವರಗಳು ಮತ್ತು ರಮಣೀಯ ಪ್ರಕೃತಿಯಿಂದ ಕೂಡಿದ್ದು, ಉಗ್ರನೊಬ್ಬ ಅಡಗಿರಬಹುದು ಎಂಬ ಗುಮಾನಿಯೂ ಬರದ ರೀತಿಯಲ್ಲಿದೆ. ಹಾಗಾಗಿ ಈ ಪ್ರದೇಶವನ್ನು ಆಯ್ದುಕೊಂಡಿರುವ ಸಾಧ್ಯತೆಯಿದೆ. ಅತ್ತ, ಜೈಷ್‌ ಆನ್ಲೈನ್ ವೇದಿಕೆಗಳು ಆತನ ಬಗ್ಗೆ ನಿರಂತರವಾಗಿ ಸುಳ್ಳು ಮಾಹಿತಿಗಳನ್ನು ಬಿತ್ತರಿಸಿ, ಜಗತ್ತಿನ ದಿಕ್ಕು ತಪ್ಪಿಸಲು ಯತ್ನಿಸುತ್ತಿವೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ.

ಅಜರ್ 2001ರ ಸಂಸತ್ ದಾಳಿ, 2016ರ ಪಠಾಣ್‌ಕೋಟ್ ದಾಳಿ, 2019ರ ಬಾಲಕೋಟ್ ದಾಳಿ ಸೇರಿದಂತೆ ಹಲವು ಉಗ್ರಕೃತ್ಯಗಳ ಮಾಸ್ಟರ್‌ಮೈಂಡ್ ಆಗಿದ್ದಾನೆ. ಆಪರೇಷನ್ ಸಿಂದೂರದ ಸಮಯದಲ್ಲಿ ಭಾರತ ಬಹಾವಲ್ಪುರದ ಜೈಷ್‌ನ ಪ್ರಧಾನ ಕಚೇರಿಯನ್ನು ಧ್ವಂಸಗೊಳಿಸಿತ್ತು. ದಾಳಿಯಲ್ಲಿ ಅಜರ್‌ನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!