
ಪ್ಯಾರಿಸ್: ಗ್ರೀನ್‌ಲ್ಯಾಂಡ್ ವಶ ಕುರಿತು ದಾವೋಸ್ ಶೃಂಗದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪುನರುಚ್ಚಾರ ಮಾಡಿದ ಬೆನ್ನಲ್ಲೇ, ಅಮೆರಿಕ ಜೊತೆಗಿನ ವ್ಯಾಪಾರ ಒಪ್ಪಂದ ಮಾತುಕತೆ ಸ್ಥಗಿತಗೊಳಿಸಲು ಯುರೋಪಿಯನ್ ಸಂಸತ್ ನಿರ್ಧರಿಸಿದೆ. ಇದರೊಂದಿಗೆ ಅಮೆರಿಕ ಮತ್ತು ಯುರೋಪ್ ನಡುವೆ ಹೊಸ ತೆರಿಗೆ ಸಮರ ಆರಂಭವಾದಂತೆ ಆಗಿದೆ. ಗ್ರೀನ್‌ಲ್ಯಾಂಡ್ ವಶಕ್ಕೆ ವಿರೋಧ ವ್ಯಕ್ತಪಡಿಸಿದ ಯುರೋಪ್‌ನ 8 ದೇಶಗಳ ಮೇಲೆ ಫೆ.1ರಿಂದ ಜಾರಿಗೆ ಬರುವಂತೆ ಶೇ.10ರಷ್ಟು ತೆರಿಗೆ ಘೋಷಣೆ ಮಾಡಿದ್ದರು. ಅದರ ಬೆನ್ನಲ್ಲೇ ಇದೀಗ ಯುರೋಪ್ ಕೂಡಾ ತಿರುಗೇಟು ನೀಡಿದೆ.
ದಾವೋಸ್‌ನಲ್ಲಿ ಟ್ರಂಪ್ ಭಾಷಣದ ಬೆನ್ನಲ್ಲೇ, ಆ ದೇಶದೊಂದಿಗಿನ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಯುರೋಪ್ ಸಂಸತ್ ಅಮಾನತುಗೊಳಿಸಿದೆ. ಇಯು ಸಂಸತ್ತಿನ ವ್ಯಾಪಾರ ಸಮಿತಿಯು ವ್ಯಾಪಾರ ಒಪ್ಪಂದದ ನಿಮಿತ್ತ ನಡೆಯಲಿದ್ದ ಮತದಾನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ.
ಈ ಬಗ್ಗೆ ಮಾತನಾಡಿರುವ ವ್ಯಾಪಾರ ಸಮಿತಿಯ ಅಧ್ಯಕ್ಷ ಬರ್ನ್ಡ್ ಲ್ಯಾಂಗ್, ‘ಅಮೆರಿಕವು ಸುಂಕವನ್ನು ಅಸ್ತ್ರವಾಗಿ ಬಳಸಿಕೊಂಡು ಇಯು ಸದಸ್ಯ ರಾಷ್ಟ್ರದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಬೆದರಿಕೆ ಹಾಕುತ್ತಿದೆ. ಇದು ಅವರೊಂದಿಗಿನ ವ್ಯಾಪಾರ ಮಾತುಕತೆಯನ್ನು ದುರ್ಬಲಗೊಳಿಸಿದೆ. ಆದ್ದರಿಂದ ಬೇರೆ ದಾರಿಯಿಲ್ಲದೆ ಈ ಕ್ರಮ ಕೈಗೊಂಡಿದ್ದೇವೆ’ ಎಂದು ಹೇಳಿದರು.
ಈ ಮೊದಲು ಫ್ರಾನ್ಸ್ ಅಧ್ಯಕ್ಷ ಇಮಾನ್ಯುವಲ್ ಮ್ಯಾಕ್ರಾನ್, ಇಯು ರಾಷ್ಟ್ರಗಳೊಂದಿಗೆ ವ್ಯಾಪಾರ ಮಾಡುವ ರಾಷ್ಟ್ರಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸುವ ಟ್ರೇಡ್ ಬಜೂಕಾ ಜಾರಿ ಮಾಡುವ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಲ್ಲೇ ಈ ಬದಲಾವಣೆಯಾಗಿದೆ.
ಒಂದು ವೇಳೆ 2026ರ ಫೆ.1ರೊಳಗೆ ಅಮೆರಿಕದ ಜೊತೆಗಿನ ಒಪ್ಪಂದ ಜಾರಿಯಾಗದೆ ಹೋದಲ್ಲಿ ಅಮೆರಿಕದ ಉತ್ಪನ್ನಗಳ ಮೇಲೆ ಯುರೋಪ್ ಒಕ್ಕೂಟ 8 ಲಕ್ಷ ಕೋಟಿ ರು. ಮೌಲ್ಯದ ತೆರಿಗೆ ಹೇರಲಿದೆ.
ವ್ಯಾಪಾರ ಒಪ್ಪಂದ ಮಾತುಕತೆ ಸ್ಥಗಿತಗೊಳಿಸಿದ ಯುರೋಪ್ ದೇಶಗಳ ಕ್ರಮ ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಗಳ ಮೇಲೆ ಮತ್ತೆ ಹೆಚ್ಚುವರಿ ತೆರಿಗೆ ಹೇರಿಕೆ ಸಾಧ್ಯತೆಯೂ ಇಲ್ಲದಿಲ್ಲ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ