* ಜಗತ್ತಿನಲ್ಲೇ ಅತಿಹೆಚ್ಚು ಸೋಂಕು, ಸಾವು ದಾಖಲಿಸಿದ ದೇಶದಲ್ಲಿ ಪರಿಸ್ಥಿತಿ ಬಹುತೇಕ ನಿಯಂತ್ರಣ
* ಅಮೆರಿಕ: ಲಸಿಕೆ ಪಡೆದವರಿಗೆ ಮಾಸ್ಕ್ ಬೇಡ, ಅಂತರ ಬೇಕಿಲ್ಲ!
* ಜೋ ಬೈಡೆನ್ 100 ದಿನಗಳ ಕಾರ‍್ಯಸೂಚಿ ಸಕ್ಸಸ್
ನ್ಯೂಯಾರ್ಕ್(ಮೇ.15): ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕು ಮತ್ತು ಸಾವು ದಾಖಲಿಸಿದ ಅಮೆರಿಕದಲ್ಲಿ ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿರುವ ಸುಳಿವು ಗೋಚರಿಸಿದ್ದು, ಎರಡೂ ಡೋಸ್ ಲಸಿಕೆ ಪಡೆದವರು ಇನ್ನು ಸಾರ್ವಜನಿಕ ಸ್ಥಳ ಮತ್ತು ಒಳಾಂಗಣದಲ್ಲಿ ಮಾಸ್ಕ್ ಧರಿಸಬೇಕಿಲ್ಲ, 6 ಅಡಿ ಅಂತರ ಕಾಪಾಡಿಕೊಳ್ಳುವ ನಿಯಮ ಪಾಲಿಸಬೇಕಿಲ್ಲ ಎಂದು ಸರ್ಕಾರವೇ ಘೋಷಿಸಿದೆ.
ಅಂದಾಜು 33 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ ಇದುವರೆಗೆ ಒಟ್ಟು ಜನಸಂಖ್ಯೆಯ ಶೇ.47ರಷ್ಟುಜನರಿಗೆ ಕನಿಷ್ಠ 1 ಡೋಸ್ ಮತ್ತು ಶೇ.37ರಷ್ಟುಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ. ಹೀಗಾಗಿ ಒಟ್ಟಾರೆ ಹೊಸ ಸೋಂಕಿನಲ್ಲಿ ಭಾರೀ ಇಳಿಕೆಯಾಗಿದ್ದು, ಸಾವಿನ ಪ್ರಮಾಣ ಕೂಡಾ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.
ಅದರ ಬೆನ್ನಲ್ಲೇ ಘೋಷಣೆಯೊಂದನ್ನು ಮಾಡಿರುವ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರವು (ಸಿಡಿಸಿ), 2 ಡೋಸ್ ಲಸಿಕೆ ಪಡೆದವರು ಇನ್ನು ಎಲ್ಲೆಡೆ ಮಾಸ್ಕ್ ಧರಿಸದೇ ಸಂಚರಿಸಬಹುದು, ಜೊತೆಗೆ 6 ಅಡಿ ಅಂತರ ಕಾಪಾಡಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅದರ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಪತ್ರಕರ್ತರ ಎದುರು ಮಾಸ್ಕ್ ಧರಿಸದೆಯೇ ಹಾಜರಾಗಿದ್ದರು. ಎರಡೂ ಡೋಸ್ ಪಡೆದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ತೀರಾ ತೀರಾ ಕಡಿಮೆ. ಹೀಗಾಗಿ ನೀವು ಮಾಸ್ಕ್ ಧರಿಸಬೇಕಿಲ್ಲ. ಇದೊಂದು ಸಾಧನೆಯ ಮೈಲುಗಲ್ಲು. ಇದೊಂದು ಐತಿಹಾಸಿಕ ದಿನ ಎಂದು ಬೈಡೆನ್ ಸಂಭ್ರಮ ವ್ಯಕ್ತಪಡಿಸಿದರು.
ಅಮೆರಿಕದಲ್ಲಿ ಈವರೆಗೆ 3.36 ಕೋಟಿ ಜನರಿಗೆ ಸೋಂಕು ತಗುಲಿ, 5.98 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಈಗಲೂ 63 ಲಕ್ಷ ಸಕ್ರಿಯ ಸೋಂಕಿತರು ಇದ್ದಾರೆ.
ಇದೊಂದು ಮೈಲುಗಲ್ಲು
ಎರಡೂ ಡೋಸ್ ಲಸಿಕೆ ಪಡೆದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ತೀರಾ ತೀರಾ ಕಡಿಮೆ. ಹೀಗಾಗಿ ನೀವು ಮಾಸ್ಕ್ ಧರಿಸಬೇಕಿಲ್ಲ. ಇದೊಂದು ಸಾಧನೆಯ ಮೈಲುಗಲ್ಲು. ಇದೊಂದು ಐತಿಹಾಸಿಕ ದಿನ.
- ಜೋ ಬೈಡೆನ್, ಅಮೆರಿಕದ ಅಧ್ಯಕ್ಷ
600ಕ್ಕಿಳಿದ ನಿತ್ಯ ಸಾವು: ಕಳೆದ 10 ತಿಂಗಳ ಕನಿಷ್ಠ
ನಿತ್ಯ 4000ಕ್ಕಿಂತ ಹೆಚ್ಚು ಸಾವು ದಾಖಲಾಗುತ್ತಿದ್ದ ಅಮೆರಿಕದಲ್ಲಿ ಈ ವಾರ ಸಾವಿನ ಪ್ರಮಾಣದಲ್ಲಿ ಭಾರೀ ಇಳಿಕೆ ದಾಖಲಾಗಿದೆ. ಕಳೆದ 5 ದಿನಗಳ ಸರಾಸರಿ ಸಾವಿನ ಪ್ರಮಾಣ ಕೇವಲ 600ಕ್ಕೆ ಇಳಿದಿದೆ. ಇದು ಕಳೆದ 10 ತಿಂಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ದೇಶದಲ್ಲಿ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಿದ ಬೆನ್ನಲ್ಲೇ ಸಾವಿನ ಪ್ರಮಾಣದಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ಇದುವರೆಗೆ ದೇಶದಲ್ಲಿ 5.98 ಲಕ್ಷ ಜನರು ಸೋಂಕಿಗೆ ಬಲಿಯಾಗಿದ್ದಾರೆ.
ಲಸಿಕೆ ಯಶೋಗಾಥೆ
ಶೇ.47 1 ಡೋಸ್ ಪಡೆದವರ ಸಂಖ್ಯೆ
ಶೇ.37 2 ಡೋಸ್ ಪಡೆದವರ ಸಂಖ್ಯೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona