ಅಮೆರಿಕ ಅಧ್ಯಕ್ಷ ಯಾರು?: ಇಂದು ಚಿತ್ರಣ| ಅಂತಿಮ ಹಂತದಲ್ಲಿ ಬಿರುಸಿನ ಮತದಾನ| 120 ವರ್ಷದ ದಾಖಲೆ ನಿರೀಕ್ಷೆ| 23.9 ಕೋಟಿ ಮತದಾರರು| 16 ಕೋಟಿ ದಾಟಿದರೆ ದಾಖಲೆ ಮತದಾನ
ವಾಷಿಂಗ್ಟನ್(ನ.04): ಇಡೀ ವಿಶ್ವವೇ ಕುತೂಹಲದಿಂದ ಗಮನಿಸುತ್ತಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ಮಂಗಳವಾರ (ಭಾರತೀಯ ಕಾಲಮಾನ ರಾತ್ರಿ) ಆರಂಭವಾಗಿದೆ. ಹಲವು ರಾಜ್ಯಗಳಲ್ಲಿ ತುರುಸಿನ ಪೈಪೋಟಿ ಇರುವ ಕಾರಣ ರೋಚಕ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ.
ಅಮೆರಿಕದಲ್ಲಿ ಒಟ್ಟು 23.9 ಕೋಟಿ ಮತದಾರರು ಇದ್ದಾರೆ. ಕೊರೋನಾ ವೈರಸ್ ತಾಂಡವವಾಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ 10 ಕೋಟಿ ಮಂದಿ ಮೊದಲೇ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮತದಾನದ ಅಂತಿಮ ದಿನವಾದ ಮಂಗಳವಾರ ಇನ್ನು 6 ಕೋಟಿ ಮಂದಿ ಮತದಾನ ಮಾಡಿದರೂ ಅದು 120 ವರ್ಷಗಳ ದಾಖಲೆಯಾಗಲಿದೆ. 1900ನೇ ಇಸ್ವಿಯಿಂದ ಯಾವುದೇ ಅಧ್ಯಕ್ಷೀಯ ಚುನಾವಣೆಯಲ್ಲೂ 16 ಕೋಟಿ ಮಂದಿ ಮತದಾನ ಮಾಡಿದ ನಿದರ್ಶನವೇ ಇಲ್ಲ.
ಹೆಚ್ಚಿನ ಪೈಪೋಟಿ ಇರುವುದು ಹಾಗೂ ಈ ಬಾರಿ ದಾಖಲೆಯ ಪ್ರಮಾಣದಲ್ಲಿ ಮತದಾನದ ದಿನಕ್ಕಿಂತಲೂ ಮೊದಲೇ ಅಧಿಕ ಮಂದಿ ಹಕ್ಕು ಚಲಾವಣೆ ಮಾಡಿರುವುದರಿಂದ ಎಣಿಕೆ ವಿಳಂಬವಾಗಬಹುದು ಎನ್ನಲಾಗುತ್ತಿದೆ. 2016ರ ಚುನಾವಣೆಯಲ್ಲಿ 5 ಕೋಟಿ ಮಂದಿ ಮತದಾನದ ದಿನಕ್ಕೂ ಮೊದಲೇ ಮತ ಹಾಕಿದ್ದರು. ಆದರೆ ಈ ಬಾರಿ 10 ಕೋಟಿಗೆ ಏರಿಕೆಯಾಗಿರುವುದು ಗಮನಾರ್ಹ.
ಕೆಲವು ದೇಶಗಳಿಗೂ ಎದೆಬಡಿತ ಹೆಚ್ಚಳ:
ಅಮೆರಿಕ ಅಧ್ಯಕ್ಷೀಯ ಚುನಾವಣೆ ವಿಶ್ವಕ್ಕೇ ಮಹತ್ವದ್ದಾದರೂ ಕೆಲವು ದೇಶಗಳಿಗಂತೂ ತೀರಾ ಮಹತ್ವದ್ದು. ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾದ ಬಳಿಕ ಚೀನಾ, ರಷ್ಯಾ ಜತೆಗೆ ಅಮೆರಿಕದ ಸಂಬಂಧ ಸಂಪೂರ್ಣ ಹಾಳಾಗಿದೆ. ಜತೆಗೆ ಉತ್ತರ ಕೊರಿಯಾ, ಇರಾನ್‌ನಂತಹ ದೇಶಗಳ ಜತೆಗೂ ಟ್ರಂಪ್ ಸಂಬಂಧ ಹಳಸಿದೆ. ಹೀಗಾಗಿ ಇಂತಹ ದೇಶಗಳು ಈ ಚುನಾವಣೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿರುವುದಂತೂ ದಿಟ.y
ಟ್ರಂಪ್, ಬೈಡೆನ್ ಭವಿಷ್ಯ ರಾತ್ರಿ ವೇಳೆಗೆ ನಿಚ್ಚಳ?
ಅಮೆರಿಕದ ವಿವಿಧೆಡೆ ಸಮಯವಲಯ ಬದಲಾಗುತ್ತದೆ. ಹೀಗಾಗಿ ಆಯಾ ಭಾಗದ ಸಮಯಕ್ಕೆ ಅನುಗುಣವಾಗಿ ಬೆಳಗ್ಗೆ 6ರಿಂದಲೇ ಮತದಾನ ಆರಂಭವಾಗಿದೆ. ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ. ರಾತ್ರಿ (ಭಾರತೀಯ ಕಾಲಮಾನ ಬೆಳಗಿನ ಜಾವ) ಮುಕ್ತಾಯವಾಗಲಿದೆ. ಕೂಡಲೇ ಮತ ಎಣಿಕೆ ಆರಂಭವಾಗಲಿದ್ದು, ಬುಧವಾರ ಮಧ್ಯಾಹ್ನದ ವೇಳೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರು ಎಂಬ ಚಿತ್ರಣ ಲಭಿಸುವ ನಿರೀಕ್ಷೆ ಇದೆ.