
ದಕ್ಷಿಣದ ಸಿರಿಕ್ ಕೌಂಟಿಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ಮನೆಯೊಂದಕ್ಕೆ ಅಮೆರಿಕ ಬಾಂಬ್ ದಾಳಿ ನಡೆಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಗಂಭೀರ ಆರೋಪ ಮಾಡಿದೆ.
ಈ ಸಂಬಂಧ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಪ್ರತಿಕ್ರಿಯಿಸಿದ್ದು, ಕುಹೆಸ್ತಕ್ ನಗರದ ನಿವಾಸದ ಮೇಲೆ ನಡೆದ ಅಮೆರಿಕದ ಕ್ರೂರ ದಾಳಿಯಾಗಿದೆ. ಅಲ್ಲದೆ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಮನೆ ಮೇಲೆ ಬಾಂಬ್ ದಾಳಿ ನಡೆಸಿರುವುದು ಯುದ್ಧ ಅಪರಾಧ ಎಂದು ಹೇಳಿದ್ದಾರೆ.
ಅಮೆರಿಕ ತನ್ನ ವೈಫಲ್ಯ ಮರೆಮಾಚಲು ಹತಾಶೆಯಿಂದ ಇಂಥ ಅಯ್ಕೆ ಮಾಡಿಕೊಂಡಿದೆ. ಯುದ್ಧ ಸೈನ್ಯದೊಂದಿಗೆ ನಡೆಯಬೇಕೆ ಹೊರತು ನಾಗರಿಕರೊಂದಿಗೆ ಅಲ್ಲ. ಮದುವೆಯ ಸಮಾರಂಭ ನಡೆಯುವ ಮನೆಯ ಮೇಲೆ ಬಾಂಬ್ ದಾಳಿ ನಡೆಸಿರುವುದು ಅಮೆರಿಕದ ಕ್ರೂರತ್ವ ಜಗತ್ತಿಗೆ ತೋರಿಸಿದೆ ಎಂದಿದ್ದಾರೆ. ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನಿನ ರೆಡ್ ಕ್ರೆಸೆಂಟ್ ಸೊಸೈಟಿ (IRCS) ಪ್ರಕಟಿಸಿದ ದೃಶ್ಯಗಳಲ್ಲಿ ಗೋಡೆಗಳು ಮತ್ತು ಕಿಟಕಿಗಳು ಹಾರಿಹೋಗಿರುವ ಕಟ್ಟಡ ಮತ್ತು ನೆಲದ ಮೇಲೆ ಹರಡಿರುವ ಅವಶೇಷಗಳು ಕಂಡುಬಂದಿವೆ. ಜನರು ಆಸ್ಪತ್ರೆಗಳಲ್ಲಿ, ಆಂಬುಲೆನ್ಸ್‌ಗಳಲ್ಲಿ ರಕ್ತಸಿಕ್ತವಾಗಿ ಮಲಗಿ ಚಿಕಿತ್ಸೆ ಪಡೆಯುತ್ತಿರುವುದು ಕಂಡುಬಂದಿದೆ.
ದಕ್ಷಿಣ ಸಿರಿಕ್‌ನಲ್ಲಿ ಅಮೆರಿಕದ ಕ್ಷಿಪಣಿ ದಾಳಿಯ ನಂತರ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಐಆರ್‌ಸಿಎಸ್ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿರವುದು ಗಮನಿಸಿದರೆ, ಈ ಘಟನೆಯು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಅಡಿಯಲ್ಲಿ ಗಂಭೀರ ಆತಂಕ ಹುಟ್ಟುಹಾಕಿದೆ. ಈ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಇರಾನ್ ಆಗ್ರಹಿಸಿದೆ.
ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಾಯಾಳುಗಳೆಲ್ಲರನ್ನೂ ಹತ್ತಿರದ ಮಿನಾಬ್ ನಗರದ ಆಸ್ಪತ್ರೆಗೆ ಕರೆದೊಯ್ಯದು ಚಿಕಿತ್ಸೆ ನೀಡಲಾಗುತ್ತಿದೆ. ಆ ಸ್ಥಳಕ್ಕೆ ಬರುವ ಮೊದಲೇ ಫೈಟರ್ ಜೆಟ್‌ಗಳ ಸದ್ದು ಕೇಳಿದೆ ಎಂದು ಮಗು ವಿಡಿಯೋದವೊಂದರಲ್ಲಿ ಹೇಳಿರುವುದು ಬೆಚ್ಚಿಬಿಳಿಸಿದೆ.
ಮಗು ಹೇಳುವಂತೆ, ನಾವು ಅಲ್ಲಿಗೆ ತಲುಪಿದಾಗ, ಒಂದು ಸ್ಫೋಟ ಸಂಭವಿಸಿತು. ಅದು ತುಂಬಾ ತೀವ್ರವಾಗಿತ್ತು. ಇಟ್ಟಿಗೆಗಳು, ಕಲ್ಲುಗಳು ಮತ್ತು ಸಿಮೆಂಟ್ ನನ್ನ ಮುಖ ಮತ್ತು ತಲೆಗೆ ಬಿತ್ತು. ಈ ವೇಳೆ ಅನೇಕರು ಕಣ್ಮುಂದೆಯೇ ಗಂಭೀರವಾಗಿ ಗಾಯಗೊಂಡರು, ಗಾಯಗೊಂಡವರೆಲ್ಲರೂ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಮಾನ್ಯ ನಾಗರಿಕರು ಎಂದು ಹೇಳಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಈ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್ ಸೈತಾನ ಇದ್ದಂತೆ ಎಂದು ಟೀಕಿಸಿ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದು ಶಕ್ತಿಯು ಸೈತಾನನಂತೆ ವರ್ತಿಸಿದರೆ, ಸೈತಾನನಂತೆ ಗುರಿಗಳನ್ನು ಆರಿಸಿದರೆ ಮತ್ತು ಸೈತಾನನಂತೆ ಕೊಲ್ಲುತ್ತಿದ್ದರೆ, ಅದು ಸೈತಾನ ಅಲ್ಲದೇ ಮತ್ತೇನು ಅಲ್ಲ ಎಂದಿದ್ದೆರೆ.
ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗು ಸಾಗಣೆಯ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಡೆಸಿದ ದಾಳಿಯ ಬೆನ್ನಲ್ಲೇ ಅಮೆರಿಕ ಈ ದಾಳಿ ನಡೆಸಿದೆ. ಇರಾನ್ ವಾಯು ರಕ್ಷಣಾ ತಾಣಗಳು, ರಾಡಾರ್ ಸಿಸ್ಟಂಗಳು ಕಡಲ ಸ್ವತ್ತುಗಳು ಎಲ್ಲ ಮೂಲಭೂತ ಸೌಕರ್ಯಗಳ ಸೂಕ್ಷ್ಮ ಸ್ಥಳಗಳ ಮೇಲೆ ದಾಳಿ ನಡೆಸಿ ನಾಶ ಮಾಡಲಾಗಿದೆ ಎಂದು ಅಮೆರಿಕ ಹೇಳಿದೆ.
.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ