
ದುಬೈ: ಕೆಂಪು ಸಮುದ್ರದ ಮೂಲಕ ಹಾದುಹೋಗಿರುವ ಭಾರತದ ಟಾಟಾ ಕಮ್ಯುನಿಕೇಷನ್ಸ್‌ನ ಕೇಬಲ್ ಸೇರಿ ಎರಡು ಕಂಪನಿಗಳು ನಿರ್ವಹಿಸುತ್ತಿರುವ ಫೈಬರ್ ಕೇಬಲ್‌ಗಳು ಕಡಿತಗೊಂಡು ಭಾರತ, ಪಾಕಿಸ್ತಾನ ಸೇರಿ ಪಶ್ಚಿಮ ಏಷ್ಯಾದ ಹಲವು ದೇಶಗಳಲ್ಲಿ ಇಂಟರ್ನೆಟ್ ಸೇವೆ ವ್ಯತ್ಯಯವಾಗಿದೆ ಎಂದು ಹೇಳಲಾಗುತ್ತಿದೆ.
ತಕ್ಷಣಕ್ಕೆ ಘಟನೆಗೆ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಆದರೆ, ಇದರ ಹಿಂದೆ ಯೆಮೆನ್‌ನ ಹೌತಿ ಬಂಡುಕೋರರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಹೌತಿಗಳ ವಿರುದ್ಧ ಈ ರೀತಿಯ ಆರೋಪ ಕೇಳಿಬಂದಿತ್ತು.
ಇಂಟರ್ನೆಟ್ ಸಂಪರ್ಕದ ಮೇಲೆ ಕಣ್ಗಾವಲು ಇಡುವ ನೆಟ್‌ಬ್ಲಾಕ್ಸ್ ಸಂಸ್ಥೆಯು ಸೌದಿ ಅರೇಬಿಯಾದ ಜೆಡ್ಡಾ ಸಮೀಪ ಎಸ್‌ಎಂಡಬ್ಲ್ಯು4 ಮತ್ತು ಐಎಂಡಬ್ಲ್ಯುಇ ಕೇಬಲ್ ವ್ಯವಸ್ಥೆಯಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದೆ. ಆಗ್ನೇಯ ಏಷ್ಯಾ-ಮಧ್ಯ ಏಷ್ಯಾ ಹಾಗೂ ಪಶ್ಚಿಮ ಯುರೋಪ್ ಅನ್ನು ಸಂಪರ್ಕಿಸುವ ಎಸ್‌ಎಂಡಬ್ಲ್ಯು4 ಕೇಬಲ್‌ಗಳನ್ನು ಭಾರತದ ಟಾಟಾ ಕಮ್ಯುನಿಕೇಷನ್ಸ್ ನಿರ್ವಹಿಸುತ್ತದೆ. ಇನ್ನು ಐಎಂಡಬ್ಲ್ಯುಇ ಕೇಬಲ್ ಅನ್ನು ಆಲ್ಕಟೆಲ್-ಲುಸೆಂಟ್ ಜಂಟಿಯಾಗಿ ನಿರ್ವಹಿಸುತ್ತಿದೆ. ಎರಡೂ ಸಂಸ್ಥೆಗಳು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುವುದು ಅನುಮಾನ ಎನ್ನಲಾಗಿದೆ.
ಮೈಕ್ರೋಸಾಫ್ಟ್ ಕಂಪನಿ ಕೂಡ ಪಶ್ಚಿಮ ಏಷ್ಯಾವು ಆಳಸಮುದ್ರದ ಫೈಬರ್ ಕೇಬಲ್ ಕಡಿತದಿಂದಾಗಿ ಇಂಟರ್ನೆಟ್ ಸೇವೆಯಲ್ಲಿ ಕೊಂಚ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ