
ಕೀವ್(ಮಾ.20): ಕಳೆದ 23 ದಿನಗಳಿಂದ ತನ್ನ ಮೇಲೆ ಯುದ್ಧ ಸಾರಿರುವ ರಷ್ಯಾ ಸೇನೆ, ಇದೀಗ ತನ್ನ ವಶದಲ್ಲಿರುವ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆ ತಡೆಯುವ ಮೂಲಕ ಪರೋಕ್ಷವಾಗಿ ‘ಹಸಿವಿನ ದಾಳಿ’ ನಡೆಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಆರೋಪಿಸಿದ್ದಾರೆ. ಆದರೆ ಇಂಥ ಯತ್ನಗಳ ಹೊರತಾಗಿಯೂ ಉಕ್ರೇನ್ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ‘ಒಂದು ವೇಳೆ ರಷ್ಯಾ ಯುದ್ಧ ನಿಲ್ಲಿಸದೇ ಹೋದಲ್ಲಿ ಅದು ಮುಂದಿನ ಒಂದಿಡೀ ತಲೆಮಾರು ಪರಿಣಾಮ ಎದುರಿಸುವಂತೆ ಮಾಡಬೇಕಾಗಿ ಬರಲಿದೆ’ ಎಂದು ಎಚ್ಚರಿಸಿದ್ದಾರೆ.
ಉಕ್ರೇನ್ ಮೇಲೆ 2014ರಲ್ಲಿ ದಾಳಿ ಮಾಡಿ ಕ್ರೆಮಿಯಾವನ್ನು ವಶಪಡಿಸಿಕೊಂಡ ಸಂಭ್ರಮಾಚರಣೆಗಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ರಾಜಧಾನಿ ಮಾಸ್ಕೋದಲ್ಲಿ ಬೃಹತ್ ರಾರಯಲಿ ಆಯೋಜಿಸಿದ್ದರು. ಇದರಲ್ಲಿ ರಷ್ಯಾ ಸಾರ್ವಭೌಮತ್ವ ಸಾರುವ ಹಲವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉಕ್ರೇನ್ ವಿರುದ್ಧ ಕ್ರಿಮಿಯಾ ಅಸ್ತ್ರವನ್ನು ಪ್ರಯೋಗಿಸ್ತಿದ್ಯಾ ರಷ್ಯಾ?
ಅದರ ಬೆನ್ನಲ್ಲೇ ತಡರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ, ‘ರಷ್ಯಾ ಸೇನೆ ತನ್ನ ಹಿಡಿತದಲ್ಲಿರುವ ಪ್ರದೇಶಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತಡೆಯೊಡ್ಡುತ್ತಿದೆ. ಈ ಮೂಲಕ ಹಸಿವಿನ ದಾಳಿ ನಮ್ಮ ಮೇಲೆ ಒತ್ತಡ ಹೇರುವ ಮೂಲಕ ಗುರಿ ಈಡೇರಿಸಿಕೊಳ್ಳುವ ತಂತ್ರ ರೂಪಿಸಿದೆ. ಆದರೆ ರಷ್ಯಾದ ಇಂಥ ತಂತ್ರ ಅತಿದೊಡ್ಡ ಮಾನವೀಯ ದುರಂತಕ್ಕೆ ಸಾಕ್ಷಿಯಾಗಬಲ್ಲದು. ಜೊತೆಗೆ ಇಂತ ಕುತಂತ್ರಕ್ಕೆ ಅದು ದೊಡ್ಡ ಬೆಲೆ ತೆರಬೇಕಾಗಿ ಬರಲಿದೆ. ಹೀಗಾಗಿ ಈಗಲಾದರೂ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧ ನಿಲ್ಲಿಸಿ ನೇರ ನನ್ನ ಜೊತೆ ಮಾತುಕತೆಗೆ ಬರಬೇಕು. ಇದು ಪ್ರಾದೇಶಿಕ ಸಮಗ್ರತೆ ಮತ್ತು ಉಕ್ರೇನ್‌ಗೆ ನ್ಯಾಯ ಒದಗಿಸುವ ಸಮಯ. ಇಲ್ಲದೇ ಹೋದಲ್ಲಿ ಮುಂದಿನ ಹಲವು ತಲೆ ಮಾರು ಕಳೆದರೂ ನೀವು ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪುತ್ತೀರಿ’ ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.
Russia Ukraine War ಉಕ್ರೇನ್ ಮೇಲೆ Kinzhal ಬ್ರಹ್ಮಾಸ್ತ್ರ ಪ್ರಯೋಗಿಸಿದ ರಷ್ಯಾ!
ಜೆಲೆನ್‌ಸ್ಕಿಗೆ ನೊಬೆಲ್ ಶಾಂತಿ ಪ್ರಶಸ್ತಿ: ಯುರೋಪ್ ನಾಯಕರ ಆಗ್ರಹ
ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ಅವರಿಗೆ 2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಬೇಕು ಎಂದು ಯುರೋಪ್‌ನ ಹಲವು ದೇಶಗಳ ಹಾಲಿ ಮತ್ತು ಮಾಜಿ ರಾಜಕಾರಣಿಗಳು ನಾರ್ವೆಯ ನೊಬೆಲ್ ಸಮಿತಿಯನ್ನು ಒತ್ತಾಯಿಸಿದ್ದಾರೆ. ಇದಕ್ಕಾಗಿ ಈ ವರ್ಷದ ನೊಬೆಲ್ ನಾಮನಿರ್ದೇಶನದ ದಿನಾಂಕವನ್ನು ಮಾ.31ರವರೆಗೆ ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ.
‘ಈ ಬಾರಿಯ ನೊಬೆಲ್ ಪ್ರಶಸ್ತಿಯ ನಾಮನಿರ್ದೇಶನ ದಿನಾಂಕವನ್ನು ವಿಸ್ತರಿಸಬೇಕು ಮತ್ತು ಪಟ್ಟಿಯನ್ನು ಮರುಪರಿಶೀಲನೆ ನಡೆಸಬೇಕು. 2022ರ ನೊನೆಲ್ ಶಾಂತಿ ಪ್ರಶಸ್ತಿಯನ್ನು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಮತ್ತು ಉಕ್ರೇನಿನ ಜನರಿಗೆ ನೀಡಬೇಕು’ ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.ಈ ವರ್ಷದ ನೊಬೆಲ್ ಪ್ರಶಸ್ತಿಗಳನ್ನು ಅ.3ರಿಂದ 10ರವರೆಗೆ ನೀಡಲಾಗುತ್ತದೆ. ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳು ಅರ್ಜಿ ಸಲ್ಲಿಸಿವೆ.
ಸಹಾಯ ಮಾಡಿ: ಅಮೆರಿಕಕ್ಕೆ ಜೆಲೆನ್‌ಸ್ಕಿ ಮೊರೆ
ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನ್‌ಸ್ಕಿ ರಷ್ಯಾದ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನಿಗೆ ಮತ್ತಷ್ಟುಸಹಾಯ ನೀಡುವಂತೆ ಅಮೆರಿಕದ ಸಂಸತ್ತು ಕಾಂಗ್ರೆಸ್ಸಿಗೆ ಬುಧವಾರ ಆನ್‌ಲೈನ್‌ನಲ್ಲಿ ನಡೆಸಿದ ಭಾಷಣದಲ್ಲಿ ಮನವಿ ಮಾಡಿದ್ದಾರೆ.ಸಂಸತ್ತಿನಲ್ಲಿ ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಾದ ಭಾರೀ ಹಾನಿ ಹಾಗೂ ಉಕ್ರೇನಿನ ಜನತೆಯು ಅನುಭವಿಸುತ್ತಿರುವ ಸಂಕಷ್ಟಗಳ ವಿಡಿಯೋವನ್ನು ಪ್ರದರ್ಶಿಸಿದ ಜೆಲೆನ್‌ಸ್ಕಿ ನೋ ಫ್ಲೈಜೋನ್ ಘೋಷಿಸಬೇಕಾಗಿ ವಿನಂತಿಸಿಕೊಂಡರು. ಈ ವೇಳೆ ಪಲ್‌ರ್ ಹಾರ್ಬರ್ ಮೇಲೆ ದಾಳಿ ಹಾಗೂ ಅಮೆರಿಕದ ವಲ್ಡ್‌ರ್ ಟ್ರೇಡ್ ಸೆಂಟರಿನ ಮೇಲೆ ಅಲಖೈದಾ ಉಗ್ರರು ನಡೆಸಿದ ಸೆ. 11, 2001ರ ದಾಳಿಯನ್ನು ಅವರು ಉಲ್ಲೇಖಿಸಿ, ಉಕ್ರೇನ್ ಪರಿಸ್ಥಿತಿ ಕೂಡ ಇದೇ ರೀತಿಯಾಗಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ