* ಬ್ರಿಟನ್‌ನಲ್ಲಿ ಕೊರೋನಾ ವೈರಸ್ ಅಬ್ಬರ
* ಎ.ವೈ 4.2 ಹೆಸರಿನ ಹೊಸ ತಳಿ ಪತ್ತೆ
* 52 ಸಾವಿರ ಕೇಸು 3 ತಿಂಗಳ ದಾಖಲು
ಲಂಡನ್(ಅ.23): ಬ್ರಿಟನ್‌ನಲ್ಲಿ(Britain) ಕೊರೋನಾ ವೈರಸ್‌ನ(Covid 19) ಮತ್ತೊಂದು ಎ.ವೈ 4.2 ಹೆಸರಿನ ಹೊಸ ತಳಿಯೊಂದು ಪತ್ತೆಯಾಗಿದೆ. ಇದರ ಪರಿಣಾಮ ಬ್ರಿಟನ್‌ನಲ್ಲಿ(Britain) ಶುಕ್ರವಾರ ಒಂದೇ ದಿನ 52 ಸಾವಿರಕ್ಕೂ ಹೆಚ್ಚು ಮಂದಿಗೆ ವೈರಸ್ ವ್ಯಾಪಿಸಿದೆ. ಇದೇ ವರ್ಷದ ಜು.17ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಈ ಪ್ರಮಾಣದ ವೈರಸ್ ಹಾವಳಿ ಕಂಡುಬಂದಿದೆ.
ಅಲ್ಲದೆ ನಿನ್ನೆ ಒಂದೇ ದಿನ 115 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಜತೆಗೆ ಯುರೋಪ್‌ನ(Europe) ಹಲವು ದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದಕ್ಕೆ ಬ್ರಿಟನ್ ಮೂಲ ಕಾರಣ ಎಂದು ಯುರೋಪ್‌ನ ಇತರೆ ರಾಷ್ಟ್ರಗಳು ದೂರಿವೆ.
ಕಳೆದ 2-3 ದಿನಗಳಿಂದ ಬ್ರಿಟನ್‌ನಲ್ಲಿ ನಿತ್ಯ 50 ಸಾವಿರದ ಆಸುಪಾಸು ಕೊರೋನಾ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇದು ಆತಂಕ ಹೆಚ್ಚಿಸಿದೆ.
ಲಾಕ್‌ಡೌನ್ ಇಲ್ಲ- ಕಾನ್ಸನ್: ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ‘ದೇಶದಲ್ಲಿ ಕೊರೋನಾ ವ್ಯಾಪಕವಾಗುತ್ತಿ ರುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಜತೆಗೆ ಪ್ರತೀ ದಿನದ ಕೋವಿಡ್ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಆದಾಗ್ಯೂ, ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡಲ್ಲ. ಆದರೆ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು
ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಮನೆಯಿಂದಲೇ ಕೆಲಸ ಸೇರಿದಂತೆ ಇನ್ನಿತರ ಕಠಿಣ ಲಾಕ್‌ಡೌನ್ ರೀತಿಯ ಕ್ರಮ ಅಗತ್ಯಕೈಗೊಳ್ಳಬೇಕು. ಜತೆಗೆ ಜನ ಸಾಮಾನ್ಯರು ಮನೆಯಿಂದ ಹೊರಬಂದಾಗ ಮುಖಕ್ಕೆ ಮಾಸ್‌ಕ್ ಧರಿಸಲೇಬೇಕು ಎಂದು ಸೂಚಿಸುವಂತೆ ವೈಜ್ಞಾನಿಕ ತುರ್ತು ಸಲಹಾ ಗುಂಪಿನ ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಆದಾಗ್ಯೂ, ತಜ್ಞರ ಸಲಹೆಯನ್ನು ಪ್ರಧಾನಿ ಜಾನ್ಸನ್ ಧಿಕ್ಕರಿಸಿದ್ದಾರೆ.
ಚೀನಾದಲ್ಲಿ ಮತ್ತೆ 32 ಹೊಸ ಕೋವಿಡ್ ಕೇಸ್‌ಗಳು ಪತ್ತೆ
ಕಳೆದೊಂದು ವಾರದಿಂದ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿರುವ ಚೀನಾದಲ್ಲಿ ಶುಕ್ರವಾರ ಮತ್ತೆ 32 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಕಳೆದ 2 ತಿಂಗಳುಗಳಿಗಿಂತ ಹೆಚ್ಚು ಶೂನ್ಯ ಪ್ರಕರಣಗಳನ್ನು ಹೊಂದಿದ್ದ ಬೀಜಿಂಗ್‌ನಲ್ಲಿ ಸತತ ನಾಲ್ಕು ದಿನಗಳಿಂದಲೂ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ.
ಇದು ಚೀನಾ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಸೋಂಕು ಇದ್ದರೂ ದೇಶಾದ್ಯಂತ ಪ್ರವಾಸ ಮಾಡಿದ ಶಾಂಘೈ ಮೂಲದ ಇಬ್ಬರು ಮಾಜಿ ನೌಕರಿಂದಲೇ ದೇಶದಲ್ಲಿ ಹೊಸದಾಗಿ ಸೋಂಕು ಉಲ್ಪಣಿಸುತ್ತಿದೆ ಎಂದು ಆರೋಪಿಸಲಾಗಿದೆ. ಹೊಸದಾಗಿ ಸೋಂಕು ಕಂಡುಬರುತ್ತಿರುವ ಚೀನಾದ ರಾಜಧಾನಿ ಬೀಜಿಂಗ್, ಒಳ ಮಂಗೋಲಿಯಾ, ಗನ್ಸು, ಶಾಂಕ್ಸಿ, ನಿಂಗ್‌ಕ್ಸಿಯಾ, ಘುಝುವಾ ಮತ್ತು ಕ್ವಿಂಘಾಯ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ.