ಇರಾನ್‌ ಯುರೇನಿಯಂ ವಶಕ್ಕೆ ಟ್ರಂಪ್‌ 'ಮಾಸ್ಟರ್ ಪ್ಲ್ಯಾನ್‌': ವಿಶ್ವದ ಭೀಕರ ಸೀಕ್ರೆಟ್ ಆಪರೇಷನ್‌ಗೆ ಅಮೆರಿಕ ಸಜ್ಜು!

Published : Apr 03, 2026, 08:29 AM IST
Donald Trump

ಸಾರಾಂಶ

ಇರಾನ್ ಮೇಲೆ ದಾಳಿ ನಡೆಸಿ, ಅಲ್ಲಿರುವ ಸುಮಾರು 400 ಕೆ.ಜಿ. ಯುರೇನಿಯಂ ವಶಪಡಿಸಿಕೊಳ್ಳಲು ಅಮೆರಿಕ ಅಧ್ಯಕ್ಷ ಟ್ರಂಪ್ ರಹಸ್ಯ ಯೋಜನೆ ರೂಪಿಸಿದ್ದಾರೆ ಎಂದು ವರದಿಯಾಗಿದೆ. ಈ ಅಪಾಯಕಾರಿ ಕಾರ್ಯಾಚರಣೆಯು ವಿಕಿರಣ ಸೋರಿಕೆಯಂತಹ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದಾಗಿದೆ.

ವಾಷಿಂಗ್ಟನ್‌ (ಏ.3): ಇನ್ನು 2- 3 ವಾರ ಇರಾನ್ ಮೇಲೆ ಭೀಕರ ದಾಳಿ ನಡೆಸಿ ಬಳಿಕ ಯುದ್ಧ ಸ್ಥಗಿತಗೊಳಿಸುವ ಅಧ್ಯಕ್ಷ ಟ್ರಂಪ್‌ ಹೇಳಿಕೆ ಹಿಂದೆ, ಇರಾನ್‌ ಬಳಿ ಇರುವ ಯುರೇನಿಯಂ ವಶಪಡಿಸಿಕೊಳ್ಳುವ ಅತಿದೊಡ್ಡ ಪ್ಲ್ಯಾನ್‌ ಕೂಡಾ ಸೇರಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಅಣ್ವಸ್ತ್ರ ಇರಾನ್‌ ಕೈವಶ ಆಗುವುದನ್ನು ತಡೆಯಲು ಶತಾಯಗತಾಯ ಪ್ರಯತ್ನಿಸುತ್ತಿರುವ ಟ್ರಂಪ್‌, ಇದರ ಭಾಗವಾಗಿ ಇರಾನ್‌ನೊಳಗೆ ಸಾವಿರಾರು ಯೋಧರನ್ನು ನುಗ್ಗಿಸಿ, 400 ಕೆಜಿಯಷ್ಟಿರುವ ಅಪಾಯಕಾರಿ ಯುರೇನಿಯಂ ವಶಕ್ಕೆ ಆದೇಶಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಷಿಂಗ್ಟನ್‌ ಪೋಸ್ಟ್‌ ಸ್ಫೋಟಕ ವರದಿ ಪ್ರಕಟಿಸಿದೆ.

ಇರಾನ್‌ ಎಲ್ಲಿ ಯುರೇನಿಯಂ ಸಂಗ್ರಹಿಸಿದೆ? ಇರಾನ್‌ ಮೇಲೆ ಭೂದಾಳಿ ಮಾಡುವುದು ಹೇಗೆ? ಈ ವೇಳೆ ಇರಾನ್‌ ಪ್ರತಿದಾಳಿ ನಡೆಸಿದರೆ ಅದನ್ನು ಎದುರಿಸುವುದು ಹೇಗೆ? ಯುರೇನಿಯಂ ವಶ ಹೇಗೆ? ಈ ವೇಳೆ ಏನಾದರೂ ಅನಾಹುತ ಸಂಭವಿಸಿದರೆ ಆಗ ಪರ್ಯಾಯ ಮಾರ್ಗಗಳೇನು ಎಂಬುದರ ಬಗ್ಗೆ ಅಮೆರಿಕ ಸೇನೆ ವಿಸ್ತೃತ ವರದಿ ಸಿದ್ಧಪಡಿಸಿದ್ದು, ಅದಕ್ಕೆ ಟ್ರಂಪ್‌ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಇಂಥ ಕಾರ್ಯಾಚರಣೆ ಏನಾದರೂ ನಡೆದರೆ ಅದು ವಿಶ್ವಕಂಡ ಅತ್ಯಂತ ರೋಚಕ, ಸಾಹಸಮಯ ಮತ್ತು ಅತ್ಯಂತ ಅಪಾಯಕಾರಿ ಘಟನೆ ಎನ್ನಿಸಿಕೊಳ್ಳಲಿದೆ.

ವಿಕಿರಣ ಸೋರಿಕೆ ಅಪಾಯ

ಯುರೇನಿಯಂ ವಶ ಸಾಧ್ಯವಾಗದಿದ್ದರೆ ಅದರ ನಾಶ ಮಾಡುತ್ತೇವೆ ಎಂದು ಹೊರಟರೂ, ದೊಡ್ಡದೊಡ್ಡ ಟ್ಯಾಂಕ್‌ಗಳಲ್ಲಿ ಅನಿಲದ ರೂಪದಲ್ಲಿ ಶೇಖರಿಸಿಟ್ಟಿರುವ ಅದು ಗಾಳಿಯೊಂದಿಗೆ ಬೆರೆಯುವ ಅಪಾಯವಿದೆ. ಹೀಗೆ ಸೋರಿಕೆಯಾದ ವಿಕಿರಣದಿಂದ ಸುತ್ತಲಿನ ನೂರಾರು ಕಿ.ಮೀ. ಪ್ರದೇಶದಲ್ಲಿ ವಾಸವಿರುವವರ ಆರೋಗ್ಯದ ಮೇಲೆ ಗಂಭೀರ ಹಾಗೂ ದೀರ್ಘಕಾಲಿಕ ಪರಿಣಾಮ ಉಂಟಾಗುತ್ತದೆ. ಸಾಮೂಹಿಕ ಸಾವಿಗೂ ಈ ಮೂಲಕ ಮುನ್ನುಡಿ ಬರೆದಂತೆ.

ಅಪಾಯಕಾರಿ ಕಾರ್ಯಾಚರಣೆ

ವಾಯುದಾಳಿಯಿಂದಾಗುವ ಅಪಾಯ ತಪ್ಪಿಸಲು ಭೂದಾಳಿಗಿಳಿದರೆ, ಅದೂ ಸುಲಭವಿಲ್ಲ. ಕಾರಣ, ಇರಾನ್‌ ಯುರೇನಿಯಂಅನ್ನು ಇಸ್ಫಹಾನ್‌, ನಟಾನ್ಸ್‌ ಹಾಗೂ ಫೋರ್ಡೋದಲ್ಲಿರಿಸಿದೆ. ಇಸ್ಫಹಾನ್‌ ಒಂದರಲ್ಲಿ ಕಾರ್ಯಾಚರಣೆ ನಡೆಸಲು ಕನಿಷ್ಠ 1,000 ಸೈನಿಕರು ಬೇಕು. ಜತೆಗೆ ಸುರಂಗಗಳನ್ನು ತಲುಪಲು ವಿಶೇಷ ಸಲಕರಣೆಗಳನ್ನೂ ಹೊತ್ತೊಯ್ಯಬೇಕು. ಒಂದೊಮ್ಮೆ ಯುರೇನಿಯಂ ಸಿಕ್ಕರೂ ಅದನ್ನು ಅಮೆರಿಕಕ್ಕೆ ಹೊತ್ತೊಯ್ಯುವುದು ಬಹುದೊಡ್ಡ ಸವಾಲು.

ಯುರೇನಿಯಂ ವಶ ಉದ್ದೇಶವೇನು?

ತನ್ನ ಪರಮಾಣು ಯೋಜನೆಗಳು ಅಣ್ವಸ್ತ್ರ ತಯಾರಿಯ ಉದ್ದೇಶ ಹೊಂದಿಲ್ಲ ಎಂದು ಹೇಳಿಕೊಳ್ಳುವ ಇರಾನ್‌ ಬಳಿ ಶೇ.60ರಷ್ಟು ಸಂಸ್ಕರಿಸಿದ 440.9 ಕೆ.ಜಿ. ಯುರೇನಿಯಂ ಇದ್ದು, ಸಂಸ್ಕರಣೆ ಪ್ರಮಾಣ ಶೇ.90 ತಲುಪಬೇಕು, ಇದರಿಂದ 10 ಅಣುಬಾಂಬ್‌ಗಳನ್ನು ತಯಾರಿಸಬಹುದು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ(ಐಎಇಎ) ಹೇಳಿದೆ.

ಮಧ್ಯಪ್ರಾಚ್ಯದ ಅತಿ ಎತ್ತರದ ಕರಾಜ್‌ ಬ್ರಿಡ್ಜ್‌ ಮೇಲೆ ಭೀಕರ ದಾಳಿ

ಟೆಹ್ರಾನ್‌: ಮಧ್ಯಪ್ರಾಚ್ಯದಲ್ಲಿನ ಅತಿ ಎತ್ತರದ ಸೇತುವೆಯಾದ ಖರಾಜ್‌ನಲ್ಲಿನ ಬಿ1 ಸೇತುವೆ ಮೇಲೆ ಅಮೆರಿಕ-ಇಸ್ರೇಲ್‌ ಭೀಕರ ದಾಳಿ ನಡೆಸಿವೆ. ಪರಿಣಾಮ, 136 ಮೀ. ಎತ್ತರದ ಈ ಬ್ರಿಜ್ಡ್‌ನ ಬಳಿಯಿದ್ದ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಬಗ್ಗೆ ಟ್ರಂಪ್‌ ಪ್ರತಿಕ್ರಿಯಿಸಿದ್ದು, ‘ಇರಾನ್‌ನ ಅತಿದೊಡ್ಡ ಸೇತುವೆ, ಇನ್ನೆಂದೂ ಬಳಕೆಗೆ ಬರದಂತೆ ಕುಸಿದು ಬಿತ್ತು. ಇಂತಹ ಹಲವು ದಾಳಿಗಳು ನಡೆಯಲಿವೆ’ ಎಂದಿದ್ದಾರೆ. ಜತೆಗೆ, ‘ತುಂಬಾ ತಡವಾಗುವ ಮುನ್ನ ಒಪ್ಪಂದ ಮಾಡಿಕೊಳ್ಳಲು ಇರಾನ್‌ಗೆ ಇದು ಸೂಕ್ತ ಸಮಯ’ ಎಂದು ಎಚ್ಚರಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಮೆ ಹಣಕ್ಕಾಗಿ ಎವರೆಸ್ಟ್‌ ಚಾರಣಿಗರಿಗೆ ಶೆರ್ಪಾಗಳಿಂದ ‘ವಿಷ’
ಚಂದ್ರನತ್ತ 4 ಗಗನಯಾನಿಗಳ ಐತಿಹಾಸಿಕ ಪ್ರಯಾಣ ಆರಂಭ