
ಕೇಪ್ ಕ್ಯಾನವೆರಲ್: 50 ವರ್ಷಗಳ ಬಳಿಕ ಚಂದ್ರನ ಬಳಿಗೆ ಹೋಗುವ ಹುಮ್ಮಸ್ಸಿನಲ್ಲಿ ನಾಲ್ವರು ಗಗನಯಾನಿಗಳನ್ನು ಹೊತ್ತ ಓರಿಯನ್ ಕ್ಯಾಪ್ಸ್ಯೂಲ್ ಜತೆ 33 ಅಡಿಯ ಎಸ್‌ಎಲ್‌ಎಸ್ ರಾಕೆಟ್ ಗುರುವಾರ ಮುಂಜಾನೆ 4.05ಕ್ಕೆ(ಭಾರತೀಯ ಕಾಲಮಾನ) ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. 2023ರಲ್ಲೇ ಇದರ ಉಡಾವಣೆಯ ಯೋಜನೆಯಿತ್ತಾದರೂ, ಕಾರಣಾಂತರಗಳಿಂದ ವಿಳಂಬವಾಗಿ, ಈಗ 10 ದಿನಗಳ ಈ ಪ್ರಯಾಣ ಸಾಕಾರವಾಗಿದೆ.
ಉಡ್ಡಯನವಾದ 5 ನಿಮಿಷಗಳ ಬಳಿಕ ಅದರ ಸಾರಥ್ಯ ವಹಿಸಿರುವ ಕಮಾಂಡರ್ ರೀಡ್ ವೈಸ್‌ಮನ್, ‘ನಾವು ಸುಂದರ ಚಂದ್ರೋದಯವನ್ನು ಕಾಣುತ್ತಿದ್ದೇವೆ. ಅದರತ್ತಲೇ ಹೊರಟಿದ್ದೇವೆ’ ಎಂದು ಸಂತಸದ ಸಂದೇಶವನ್ನು ರವಾನಿಸಿದರು. ಅವರೊಂದಿಗೆ ಪೈಲಟ್ ವಿಕ್ಟರ್ ಗ್ಲೋವರ್(ಚಂದಿರನಲ್ಲಿಗೆ ಹೋಗುತ್ತಿರುವ ಪ್ರಥಮ ಕಪ್ಪುವರ್ಣೀಯ), ಕ್ರಿಸ್ಟಿನಾ ಕೋಚ್(ಚಂದ್ರನತ್ತ ಹೊರಟ ಮೊದಲ ಮಹಿಳೆ), ಕೆನಡಾದ ಜೆರೆಮಿ ಹ್ಯಾನ್ಸೆನ್ ಇದ್ದರು.
26 ಲಕ್ಷ ಲೀ. ಹೈಡ್ರೋಜನ್ ಇಂಧನವನ್ನು ರಾಕೆಟ್‌ಗೆ ತುಂಬಲಾಗಿದೆ.
ಉಡಾವಣೆಯಾದ ಬಳಿಕದ ಮೊದಲೆರಡು ದಿನ ಭೂಕಕ್ಷೆಯಲ್ಲೇ ಉಳಿಯುವ ಕ್ಯಾಪ್ಸ್ಯೂಲ್‌ನ ಪರೀಕ್ಷೆ ನಡೆಸಲಾಗುವುದು. ಬಳಿಕ ಚಂದ್ರನತ್ತ ಪ್ರಯಾಣ ಆರಂಭವಾಗುತ್ತದೆ. ಅದಕ್ಕೊಂದು ಸುತ್ತು ಹಾಕಿದ ಬಳಿಕ ಮತ್ತೆ 4,000 ಮೈಲಿ ಮೇಲೆ ಹಾರಲಾಗುತ್ತದೆ. ಇಷ್ಟು ಎತ್ತರವನ್ನು ಈವರೆಗೆ ಮಾನವರು ತಲುಪಿದ ಇತಿಹಾಸವಿಲ್ಲ. ಅಲ್ಲಿಂದ ಚಂದ್ರನ ಕುಳಿಗಳ ಫೋಟೋ ಸೆರೆಹಿಡಿಯುವುದು ಸೇರಿದಂತೆ ಹಲವು ಉದ್ದೇಶಿತ ಪರೀಕ್ಷೆಗಳನ್ನು ಸಿಬ್ಬಂದಿ ನಡೆಸುತ್ತಾರೆ. ಜತೆಗೆ ಅಲ್ಲಿ ರಾಕೆಟ್‌ನಿಂದ ಕ್ಯಾಪ್ಸ್ಯೂಲ್‌ಅನ್ನು ಬೇರ್ಪಡಿಸಿ, ಯಾನಿಗಳೇ ಅದನ್ನು ಕೆಲಕಾಲ ಚಾಲನೆ ಮಾಡುತ್ತಾರೆ. ಈ ವೇಳೆ ಅರ್ಧ ಗಂಟೆಗೂ ಹೆಚ್ಚು ಕಾಲ ನಾಸಾದೊಂದಿಗಿನ ಅವರ ಸಂಪರ್ಕ ಕಡಿತವಾಗಿರುತ್ತದೆ. ಬಳಿಕ ಮಾತೃಗ್ರಹದ ಕಡೆಗಿನ ಪಯಣ ಶುರುವಾಗುತ್ತದೆ.
ಆರ್ಟಿಮಿಸ್ 3ರಲ್ಲಿ ಮತ್ತೆ ಇದೇ ರಾಕೆಟ್‌ನಲ್ಲಿ ನಭಕ್ಕೆ ಜಿಗಿಯಲಿರುವ ಯಾನಿಗಳು, ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ಮತ್ತು ಬ್ಲೂ ಒರಿಜಿನ್‌ನ ಬ್ಲೂಮೂನ್‌ನಂತಹ ಲ್ಯಾಂಡರ್‌ಗಳ ಜತೆ ಡಾಕಿಂಗ್(ಕೂಡಿಕೊಳ್ಳುವ) ಪರೀಕ್ಷೆ ಮಾಡಲಾಗುತ್ತದೆ. ಇದು, ಚಂದ್ರನ ಮೇಲಿಳಿಯುವ ಆರ್ಟಿಮಿಸ್ 4ರ ಪೂರ್ವತಯಾರಿಯಾಗಿದೆ. 4ನೇ ಹಂತದಲ್ಲಿ ಯಾನಿಗಳು ನೇರವಾಗಿ ಚಂದ್ರನ ಅಂಗಳಕ್ಕೇ ಕಾಲಿಡುತ್ತಾರೆ. ಅಲ್ಲೊಂದು ಕೇಂದ್ರವನ್ನು ನಿರ್ಮಿಸುವ ಗುರಿಯಿದ್ದು, ಮುಂದೆ ಮಂಗಳನ ಅಂಗಳಕ್ಕೆ ಹೋಗಲು ಇದನ್ನು ಲಾಂಚ್ ಪ್ಯಾಡ್ ಆಗಿ ಬಳಸುವ ಯೋಜನೆಯಿದೆ.
ಐಫೋನ್ ಒಯ್ಯೋದ್ಯಾಕೆ?:
ಚಂದ್ರನತ್ತ ಹೊರಟಿರುವ ಯಾನಿಗಳ ಕೈಗೆ ಐಫೋನ್‌ಗಳನ್ನು ಕೊಡಲಾಗಿದೆ. ಏರೋಪ್ಲೇನ್ ಮೋಡ್‌ನಲ್ಲಿ ರಾಟೆಕ್ ಒಳಗೆ ಕುಳಿತು ಸಾಗುವ ಇವನ್ನು, ಅಲ್ಲಿ ಫೋಟೋ, ವಿಡಿಯೋಗಳನ್ನು ಸೆರೆಹಿಡಿಯಲು ಬಳಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ