
ವಾಷಿಂಗ್ಟನ್ (ಏ.2): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಜಿಟ್ ಅವರ ಕುರಿತು ಲೇವಡಿ ಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ. ಕಳೆದ ಬುಧವಾರ ನಡೆದ ಖಾಸಗಿ ಭೋಜನಕೂಟದಲ್ಲಿ ಟ್ರಂಪ್ ಈ ಮಾತುಗಳನ್ನಾಡಿದ್ದು, ಈ ವಿಡಿಯೋ ವೈಟ್‌ಹೌಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಲ್ಪಕಾಲ ಕಾಣಿಸಿಕೊಂಡಿದ್ದು ನಂತರ ತೆಗೆದುಹಾಕಲಾಯಿತು.
"ಮ್ಯಾಕ್ರನ್ ಇನ್ನೂ ಕೆನ್ನೆಯ ಮೇಲೆ ಬಿದ್ದ ಏಟಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿ ಅವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ" ಎಂದು ಟ್ರಂಪ್ ವ್ಯಂಗ್ಯವಾಡಿದ್ದಾರೆ. ಕಳೆದ ವರ್ಷ ಮೇ 25 ರಂದು ವಿಯೆಟ್ನಾಂನ ಹನೋಯ್ ವಿಮಾನ ನಿಲ್ದಾಣದಲ್ಲಿ ಬ್ರಿಜಿಟ್ ಮ್ಯಾಕ್ರನ್ ಅವರು ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಕೆನ್ನೆಗೆ ಬಾರಿಸಿದ್ದರು ಎನ್ನಲಾದ ವಿಡಿಯೋವನ್ನು ಉಲ್ಲೇಖಿಸಿ ಟ್ರಂಪ್ ಈ ಅಣಕವಾಡಿದ್ದಾರೆ. ಆದರೆ, ಮ್ಯಾಕ್ರನ್ ಆ ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿ, ಮಾಧ್ಯಮಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿವೆ ಎಂದು ಹೇಳಿದ್ದರು.
ಟ್ರಂಪ್ ಅವರ ಈ ಅಣಕದ ಬಗ್ಗೆ ಪ್ರತಿಕ್ರಿಯಿಸಿರುವ ಮ್ಯಾಕ್ರನ್, "ನಾವು ಗಂಭೀರವಾಗಿರಬೇಕು. ಒಂದು ದಿನ ಒಂದು ಮಾತು, ಮತ್ತೊಂದು ದಿನ ಇನ್ನೊಂದು ಮಾತು ಹೇಳಬಾರದು. ನಿತ್ಯವೂ ಇಂತಹ ಹೇಳಿಕೆಗಳನ್ನು ನೀಡುವ ಬದಲು, ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಶ್ವತ ಶಾಂತಿಯತ್ತ ಗಮನ ಹರಿಸುವುದು ಉತ್ತಮ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇರಾನ್ ವಿರುದ್ಧದ ಯುದ್ಧದಲ್ಲಿ ಫ್ರಾನ್ಸ್ ಬೆಂಬಲ ನೀಡದಿರುವುದಕ್ಕೆ ಟ್ರಂಪ್ ಕೆಂಡಾಮಂಡಲರಾಗಿದ್ದಾರೆ. "ಗಲ್ಫ್ ವಲಯದಲ್ಲಿ ಸಹಾಯ ಮಾಡಿ ಮತ್ತು ಹಡಗುಗಳನ್ನು ಕಳುಹಿಸಿ" ಎಂದು ತಾವು ಕೇಳಿದ್ದಕ್ಕೆ ಮ್ಯಾಕ್ರನ್ ನಿರಾಕರಿಸಿದರು. ಮ್ಯಾಕ್ರನ್ ಅವರನ್ನು ಅನುಕರಿಸುತ್ತಾ ಟ್ರಂಪ್, "ಬೇಡ ಡೊನಾಲ್ಡ್, ನಾವು ಅದನ್ನು ಮಾಡಲು ಸಾಧ್ಯವಿಲ್ಲ. ನಾವು ಯುದ್ಧ ಗೆದ್ದ ಮೇಲೆ ಅದನ್ನು ಮಾಡುತ್ತೇವೆ" ಎಂದು ಮ್ಯಾಕ್ರನ್ ಹೇಳಿದ್ದಾಗಿ ತಿಳಿಸಿದರು. ಅದಕ್ಕೆ ಟ್ರಂಪ್, "ನನಗೆ ಗೆದ್ದ ನಂತರ ಯಾರ ಸಹಾಯವೂ ಬೇಕಿಲ್ಲ" ಎಂದು ತಿರುಗೇಟು ನೀಡಿದ್ದಾಗಿ ಹೇಳಿಕೊಂಡಿದ್ದಾರೆ.
ಇದೇ ವೇಳೆ, ನ್ಯಾಟೋ (NATO) ಸಂಘಟನೆಯನ್ನು 'ಪೇಪರ್ ಟೈಗರ್' ಎಂದು ಕರೆದ ಟ್ರಂಪ್, ದೊಡ್ಡ ಯುದ್ಧ ಬಂದರೆ ನ್ಯಾಟೋ ನಿಷ್ಪ್ರಯೋಜಕವಾಗಲಿದೆ ಎಂದರು. ಅಮೆರಿಕಕ್ಕೆ ತಮ್ಮ ಸೇನಾ ನೆಲೆಗಳನ್ನು ಬಳಸಲು ಅವಕಾಶ ನೀಡದಿರುವ ಯುರೋಪಿಯನ್ ರಾಷ್ಟ್ರಗಳ ಕ್ರಮಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕವನ್ನು ನ್ಯಾಟೋದಿಂದ ಹೊರತರುವ ಬಗ್ಗೆಯೂ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಬ್ರಿಜಿಟ್ ಮ್ಯಾಕ್ರನ್ ಅವರು ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗಿಂತ 24 ವರ್ಷ ದೊಡ್ಡವರು. ಇವರ ಪ್ರೇಮಕಥೆ ಬಹಳ ರೋಚಕವಾಗಿದೆ. 1992ರಲ್ಲಿ 15 ವರ್ಷದ ವಿದ್ಯಾರ್ಥಿಯಾಗಿದ್ದ ಮ್ಯಾಕ್ರನ್, ಅಮಿನ್ಸ್‌ನ ಲಾ ಪ್ರಾವಿಡೆನ್ಸ್ ಹೈಸ್ಕೂಲ್‌ನಲ್ಲಿ 39 ವರ್ಷದ ಬ್ರಿಜಿಟ್ ಅವರನ್ನು ಭೇಟಿಯಾದರು. ಆಗ ಬ್ರಿಜಿಟ್ ಅಲ್ಲಿ ಫ್ರೆಂಚ್ ಮತ್ತು ಡ್ರಾಮಾ ಶಿಕ್ಷಕಿಯಾಗಿದ್ದರು.
ಡ್ರಾಮಾ ಕ್ಲಬ್‌ನಲ್ಲಿ ಕೆಲಸ ಮಾಡುವಾಗ ಇವರ ಬಾಂಧವ್ಯ ಬೆಳೆಯಿತು. ವಿಷಯ ಶಾಲೆಯಲ್ಲೆಲ್ಲಾ ಹರಡಿದಾಗ, ಮ್ಯಾಕ್ರನ್ ಅವರ ಪೋಷಕರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ, ಬ್ರಿಜಿಟ್‌ನಿಂದ ದೂರವಿಡಲು ಮ್ಯಾಕ್ರನ್ ಅವರನ್ನು ಪ್ಯಾರಿಸ್‌ಗೆ ಕಳುಹಿಸಿದ್ದರು. ದೂರವಿದ್ದರೂ ಇಬ್ಬರೂ ಪತ್ರಗಳ ಮೂಲಕ ಮತ್ತು ಫೋನ್ ಮೂಲಕ ಸಂಪರ್ಕದಲ್ಲಿದ್ದರು. "ನಾನು ಎಷ್ಟೇ ಅಡೆತಡೆಗಳಿದ್ದರೂ ಬ್ರಿಜಿಟ್‌ನನ್ನೇ ಮದುವೆಯಾಗುತ್ತೇನೆ" ಎಂದು ಮ್ಯಾಕ್ರನ್ ಪಣತೊಟ್ಟಿದ್ದರು.
2006ರಲ್ಲಿ ಬ್ರಿಜಿಟ್ ತನ್ನ ಮೊದಲ ಪತಿ ಆಂಡ್ರೆ-ಲೂಯಿಸ್ ಔಜಿಯೆರ್ ಅವರಿಗೆ ವಿಚ್ಛೇದನ ನೀಡಿದರು. ನಂತರ 2007ರಲ್ಲಿ, ಮ್ಯಾಕ್ರನ್ 29 ವರ್ಷದವರಿದ್ದಾಗ 54 ವರ್ಷದ ಬ್ರಿಜಿಟ್ ಅವರನ್ನು ವಿವಾಹವಾದರು.
ಬ್ರಿಜಿಟ್ ಅವರು ಮ್ಯಾಕ್ರನ್ ಅವರ ರಾಜಕೀಯ ಜೀವನದ ಬೆಂಬಲವಾಗಿ ನಿಂತಿದ್ದಾರೆ. ಶಿಕ್ಷಕ ವೃತ್ತಿಯನ್ನು ತೊರೆದು ಮ್ಯಾಕ್ರನ್ ಅವರ ರಾಜಕೀಯ ಅಭಿಯಾನಗಳಲ್ಲಿ ಸಕ್ರಿಯರಾಗಿದ್ದಾರೆ. ವಿವಾಹದ ನಂತರ, ಬ್ರಿಜಿಟ್ ಅವರ ಮಕ್ಕಳನ್ನು ಮ್ಯಾಕ್ರನ್ ತಮ್ಮದೇ ಮಕ್ಕಳಂತೆ ಸ್ವೀಕರಿಸಿ ಸುಖೀ ಕುಟುಂಬ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ