ಟ್ರಂಪ್ ವಿರುದ್ಧವೇ ಟ್ರಂಪ್‌ ಕಾರ್ಡ್‌

Kannadaprabha News   | Kannada Prabha
Published : Jan 28, 2026, 06:04 AM IST
Mother Of All Deal

ಸಾರಾಂಶ

ರಷ್ಯಾ ತೈಲ ಖರೀದಿ, ಗ್ರೀನ್‌ಲ್ಯಾಂಡ್ ವಶ ವಿಷಯದಲ್ಲಿ ಭಾರತ ಹಾಗೂ ಐರೋಪ್ಯ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ಯಾಕ್ಸ್‌ ವಾರ್‌ ನಡೆಸುತ್ತಿರುವ ಹೊತ್ತಿನಲ್ಲೇ, ಐತಿಹಾಸಿಕ ಮುಕ್ತ ತೆರಿಗೆ ವ್ಯಾಪಾರ ಒಪ್ಪಂದ ವನ್ನು ಭಾರತ ಮತ್ತು ಯುರೋಪಿಯನ್‌ ಒಕ್ಕೂಟಗಳು ಮಂಗಳವಾರ ಅಂತಿಮಗೊಳಿಸಿವೆ

ನವದೆಹಲಿ : ರಷ್ಯಾ ತೈಲ ಖರೀದಿ, ಗ್ರೀನ್‌ಲ್ಯಾಂಡ್ ವಶ ವಿಷಯದಲ್ಲಿ ಭಾರತ ಹಾಗೂ ಐರೋಪ್ಯ ದೇಶಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ಯಾಕ್ಸ್‌ ವಾರ್‌ ನಡೆಸುತ್ತಿರುವ ಹೊತ್ತಿನಲ್ಲೇ, ಐತಿಹಾಸಿಕ ಮುಕ್ತ ತೆರಿಗೆ ವ್ಯಾಪಾರ ಒಪ್ಪಂದ (ಎಫ್‌ಟಿಎ)ವನ್ನು ಭಾರತ ಮತ್ತು ಯುರೋಪಿಯನ್‌ ಒಕ್ಕೂಟಗಳು ಮಂಗಳವಾರ ಅಂತಿಮಗೊಳಿಸಿವೆ. 18 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ವ್ಯಾಪಾರ ಒಪ್ಪಂದ ಕ್ಷಿಪ್ರವೇಗದಲ್ಲಿ ಕಾರ್ಯರೂಪಕ್ಕೆ ಬರುವಲ್ಲಿ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟಿನ ಉದ್ದೇಶವೂ ಸ್ಪಷ್ಟವಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕವನ್ನು ಹೊರತುಪಡಿಸಿ ಉಭಯ ಬಣಗಳಿಗೂ ಪರ್ಯಾಯ ಮಾರುಕಟ್ಟೆ ಸೃಷ್ಟಿಸುವ ಈ ಒಪ್ಪಂದವನ್ನು ಮದರ್‌ ಆಫ್‌ ಡೀಲ್ಸ್‌ ಎಂದು ಬಣ್ಣಿಸಲಾಗಿದೆ. ಜೊತೆಗೆ ಅಮೆರಿಕದ ತೆರಿಗೆ ನೀತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತ ಮತ್ತು ಯುರೋಪಿಯನ್‌ ರಾಷ್ಟ್ರಗಳ ಆರ್ಥಿಕತೆಗೆ ಈ ಒಪ್ಪಂದ ನವಚೈತನ್ಯ ನೀಡುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ.

ದೆಹಲಿಯಲ್ಲಿ ನಡೆದ ಭಾರತ ಮತ್ತು ಯುರೋಪಿಯನ್‌ ಯೂನಿಯನ್‌ ಶೃಂಗದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಐರೋಪ್ಯ ಒಕ್ಕೂಟದ ಇಬ್ಬರು ಮುಖ್ಯಸ್ಥರ ಸಮ್ಮುಖದಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಹರ್ಷ ವ್ಯಕ್ತಪಡಿಸಿದ್ದಾರೆ.

ಬೃಹತ್‌ ವ್ಯಾಪ್ತಿ:

ವಿಶ್ವದ ಜಿಡಿಪಿಯ ಶೇ.25ರಷ್ಟು ವ್ಯಾಪ್ತಿ ಹೊಂದಿರುವ ಒಪ್ಪಂದ ಇದಾಗಲಿದ್ದು, ಭಾರತ ಹಾಗೂ ಯುರೋಪ್‌ ಒಕ್ಕೂಟದ 27 ದೇಶಗಳ 200 ಕೋಟಿ ಜನರಿಗೆ ಲಾಭ ತರುವ ನಿರೀಕ್ಷೆಯಿದೆ. ಯುರೋಪ್‌ಗೆ ಹೋಗುವ ಭಾರತದ ಶೇ.93 ವಸ್ತುಗಳು ಆಮದು ಸುಂಕ ಮುಕ್ತವಾಗಲಿವೆ. ಅದೇ ರೀತಿ ಯುರೋಪ್‌ನಿಂದ ಆಮದಾಗುವ ಕಾರು ಸೇರಿ ವಿವಿಧ ವಾಹನಗಳು, ವೈನ್‌, ಮದ್ಯ, ಔಷಧ, ವೈದ್ಯಕೀಯ ಸಾಮಗ್ರಿ, ಎಲೆಕ್ಟ್ರಾನಿಕ್‌ ಉಪಕರಣಗಳ ತೆರಿಗೆ ಕಡಿತವಾಗಲಿದೆ. ಒಪ್ಪಂದ ಅನುಷ್ಠಾನಕ್ಕೆ ಬಂದ ದಿನದಿಂದಲೇ 2.87 ಲಕ್ಷ ಕೋಟಿ ರು. ಮೌಲ್ಯದ ಭಾರತದ ವಸ್ತುಗಳು ಯುರೋಪ್‌ ಮಾರುಕಟ್ಟೆಯಲ್ಲಿ ಸುಂಕ ವಿನಾಯ್ತಿ ಗಿಟ್ಟಿಸಲಿವೆ.

ಯಾಕೆ ಈ ಎಫ್‌ಟಿಎ ಮಹತ್ವದ್ದು?:

ಅಮೆರಿಕವು ವಿಶ್ವದ ವಿವಿಧ ರಾಷ್ಟ್ರಗಳ ಮೇಲೆ ಹೇರಿರುವ ಏಕಪಕ್ಷೀಯ ತೆರಿಗೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ-ವಹಿವಾಟಿಗೆ ಭಾರೀ ಹೊಡೆತ ಬಿದ್ದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಮೇಲೆ ಅಮೆರಿಕವು ಅತಿ ಹೆಚ್ಚು ಅಂದರೆ ಶೇ.50ರಷ್ಟು ತೆರಿಗೆ ವಿಧಿಸಿದೆ. ಆದರೆ ಇದೀಗ ಯುರೋಪ್‌ ಮಾಡಿಕೊಳ್ಳುತ್ತಿರುವ ಎಫ್‌ಟಿಎ ಮೂಲಕ ಭಾರತ ತನ್ನ ಉತ್ಪನ್ನಗಳನ್ನು ಐರೋಪ್ಯ ಒಕ್ಕೂಟದ 27 ದೇಶಗಳಿಗೆ ಮುಕ್ತವಾಗಿ ರಫ್ತು ಮಾಡಲು ಅವಕಾಶ ಸಿಗಲಿದ್ದು, ಅಮೆರಿಕದ ತೆರಿಗೆ ಹೊಡೆತದ ಪರಿಣಾಮ ಕೊಂಚ ತಗ್ಗಲಿದೆ. ಇದರ ಜತೆಗೆ ಚೀನಾದ ಮೇಲಿನ ಮಿತಿಮೀರಿದ ಅವಲಂಬನೆಯೂ ಇಳಿಕೆಯಾಗಲಿದೆ. ಐರೋಪ್ಯ ಒಕ್ಕೂಟ ಕೂಡ ಅಮೆರಿಕದ ತೆರಿಗೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಎಫ್‌ಟಿಎಯಿಂದಾಗಿ ಯುರೋಪಿಯನ್‌ ರಾಷ್ಟ್ರಗಳ ರಫ್ತಿಗೂ ಉತ್ತೇಜನ ಸಿಗಲಿದೆ.

ಸದ್ಯ ಈ ಒಪ್ಪಂದದ ಕುರಿತು ಘೋಷಣೆ ಮಾಡಲಾಗಿದ್ದರೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇನ್ನೂ ಐದರಿಂದ ಆರು ತಿಂಗಳಷ್ಟು ಕಾಲಾವಕಾಶ ಬೇಕಾಗಬಹುದು. ಈ ಮೂಲಕ ವರ್ಷದೊಳಗೆ ಈ ಒಪ್ಪಂದ ಕಾರ್ಯರೂಪಕ್ಕೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ 2027ರಲ್ಲಿ ಈ ಒಪ್ಪಂದ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

2 ದಶಕಗಳ ಪ್ರಯತ್ನದ ಫಲ:

ಭಾರತ ಮತ್ತು ಯುರೋಪಿಯನ್‌ ಯೂನಿಯನ್‌ ನಡುವಿನ ಮಾತುಕತೆ ಆರಂಭವಾಗಿದ್ದು 2007ರಲ್ಲಿ. 2007ರಿಂದ 2013ರ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿತ್ತು. ಆದರೆ, ಕಾರ್ಮಿಕರು, ಸುಸ್ಥಿರ ಅಭಿವೃದ್ಧಿ, ಬೌದ್ಧಿಕ ಹಕ್ಕುಗಳು ಸೇರಿ ವಿವಿಧ ವಿಚಾರಗಳಿಂದಾಗಿ ಮಾತುಕತೆಗೆ ಹಿನ್ನಡೆಯಾಗಿತ್ತು. 2013ರಲ್ಲಿ ಅಟೋಮೊಬೈಲ್‌, ವೈನ್‌, ಸ್ಪಿರಿಟ್‌ಗಳು ಮತ್ತಿತರ ವಿಚಾರಗಳಿಗೆ ಸಂಬಂಧಿಸಿ ಏಕಾಭಿಪ್ರಾಯಕ್ಕೆ ಬರುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಮಾತುಕತೆ ಬಹುತೇಕ ನನೆಗುದಿಗೆ ಬಿದ್ದಿತ್ತು. ಮತ್ತೆ 2016 ಮತ್ತು 2020ರಲ್ಲಿ ಮಾತುಕತೆ ಪುನರಾರಂಭಿಸುವ ಪ್ರಯತ್ನ ನಡೆಯಿತಾದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ ಜೂನ್‌, 2022ರಲ್ಲಿ ಮತ್ತೆ ಮಾತುಕತೆ ಆರಂಭವಾಗಿ ಇದೀಗ ಟ್ರಂಪ್‌ ತೆರಿಗೆ ಗದ್ದಲದಿಂದಾಗಿ ಇದೀಗ ಅಂತಿಮಗೊಂಡಿದೆ.

ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ಯುರೋಪ್ ಒಪ್ಪಿಗೆ

- ಅಮೆರಿಕದ ತೆರಿಗೆ ಕಿರಿಕ್‌ಗೆ ಜಗತ್ತಿನ ಅತಿದೊಡ್ಡ ಆರ್ಥಿಕತೆಗಳ ತಿರುಗೇಟು

ಪರ್ಯಾಯ ಮಾರುಕಟ್ಟೆ ಸ್ಥಾಪನೆ- ಎನ್‌ಡಿಎದ 8ನೇ ಡೀಲ್‌

200 ಕೋಟಿ ಜನರಿಗೆ ಪರಿಣಾಮ

ಶೇ.25ರಷ್ಟು- ಭಾರತದ ಶೇ.93 ಉತ್ಪನ್ನಕ್ಕೆ ಯುರೋಪಲ್ಲಿ ಶೂನ್ಯ ತೆರಿಗೆ

ಭಾರತಕ್ಕೆಅಮೆರಿಕ ಹೊರತಾದ ಹೊಸ ಮಾರುಕಟ್ಟೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ವಿರುದ್ಧ ಕ್ಷಿಪ್ರಕ್ರಾಂತಿ ಯತ್ನ?
ಪ್ರಿಯಾಂಕಾ ಚೋಪ್ರಾ-ನಿಕ್ ಜೊನಾಸ್ ಜೋಡಿ ಡಿವೋರ್ಸ್ ಆಗದಿರಲು ಅದೊಂದೇ ಕಾರಣವಂತೆ.. ಫೈನಲೀ ಗೊತ್ತಾಯ್ತಲ್ಲ!