ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!

Published : Mar 04, 2025, 11:03 PM ISTUpdated : Mar 04, 2025, 11:05 PM IST
ಟ್ರಂಪ್ ಜೂಜಾಟ: ಯುರೋಪ್ ಮತ್ತು ಜೆಲೆನ್ಸ್‌ಕಿ ವಿಧಿಯನ್ನೇ ಬದಲಿಸಬಲ್ಲದು ಅಮೆರಿಕಾದ ಆಟ!

ಸಾರಾಂಶ

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರನ್ನು ಉದ್ದೇಶಪೂರ್ವಕವಾಗಿ ಕೆಣಕಲು ಪ್ರಯತ್ನ ಪಟ್ಟರೇ, ಅಥವಾ ಅವರ ವ್ಯಕ್ತಿತ್ವಗಳಲ್ಲಿನ ವ್ಯತ್ಯಾಸಗಳ ಕಾರಣದಿಂದಾಗಿ ಸಹಜವಾಗಿಯೇ ಅವರ ನಡುವೆ ಜಗಳಕ್ಕೆ ಹಾದಿ ಮಾಡಿಕೊಟ್ಟಿತೇ? ಆದರೆ ಈ ಭೇಟಿ, ಜಗಳ, ಉಕ್ರೇನ್ ಹಾಗೂ ಜೆಲೆನ್ಸಿಕಿ ವಿಧಿಯನ್ನೇ ಬದಲಿಸಬಲ್ಲದು.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕೆಲವೊಂದು ಬಾರಿ ಇತಿಹಾಸ ನಮ್ಮ ಗ್ರಹಿಕೆಗೇ ಬರದ ರೀತಿಯಲ್ಲಿ ಸ್ವಲ್ಪ ಸ್ವಲ್ಪವಾಗಿಯೇ ಬದಲಾವಣೆ ಹೊಂದುತ್ತದೆ. ಮೇಲ್ನೋಟಕ್ಕೆ ಕಾಣದಿದ್ದರೂ, ಒಳಗಡೆ ಪ್ರಮುಖ ಶಕ್ತಿಗಳು ಕಾರ್ಯಾಚರಿಸುತ್ತಾ, ನಿಧಾನವಾಗಿ ನಮ್ಮ ಭವಿಷ್ಯವನ್ನು ರೂಪಿಸುತ್ತಿರುತ್ತವೆ. ಆದರೆ ಕೆಲವು ಬಾರಿ ಈ ಬದಲಾವಣೆಗಳು ಅತ್ಯಂತ ಕ್ಷಿಪ್ರವಾಗಿ ನಡೆದು, ವಾಯುವ್ಯ ಮಾರುತದ ರೀತಿಯಲ್ಲಿ ಇದ್ದಕ್ಕಿದ್ದಂತೆ ತಲೆದೋರುತ್ತವೆ. ದೀರ್ಘ ಕಾಲದಿಂದಲೂ ಒತ್ತಡ ಸೃಷ್ಟಿಯಾಗುತ್ತಾ ಬಂದಿದ್ದು, ಆ ಬಳಿಕ, ನೆಲವನ್ನೇ ಅದುರಿಸುವ ಭೂಕಂಪದ ರೀತಿಯಲ್ಲಿ ಕೆಲವೊಂದು ಭಾರೀ ಪ್ರಮಾಣದ ಘಟನೆಗಳು ನಡೆದುಬಿಡುತ್ತವೆ. ಇಂತಹ ಕ್ಷಣಗಳಲ್ಲಿ, ಎಲ್ಲವೂ ಏಕಾಏಕಿ ಬದಲಾಗುವಂತೆ ಗೋಚರಿಸುತ್ತದೆ.

ಫೆಬ್ರವರಿ 28, ಶುಕ್ರವಾರದಂದು ಶ್ವೇತ ಭವನದ ಓವಲ್ ಆಫೀಸಿನಲ್ಲಿ ನಡೆದ ಘಟನೆಯೂ ನಾವು ಕ್ಷಿಪ್ರ ಮತ್ತು ಮಹತ್ವದ ಬದಲಾವಣೆಗಳು ಘಟಿಸುವ ಕಾಲಘಟ್ಟದಲ್ಲಿ ಜೀವಿಸುತ್ತಿದ್ದೇವೆ ಎನ್ನುವುದಕ್ಕೆ ಇನ್ನೊಂದು ಸಂಕೇತ ನೀಡಿತ್ತು.

ಪರ್ಸುಯೇಷನ್ ನಿಯತಕಾಲಿಕೆಯ ಸ್ಥಾಪಕ ಸಂಪಾದಕರು ಮತ್ತು ದ ಐಡೆಂಟಿಟಿ ಟ್ರ್ಯಾಪ್ ಕೃತಿಯ ಲೇಖಕರಾದ ಯಶ್ಚಾ ಮೌಂಕ್ ಅವರು ತಾನು ಇತ್ತೀಚೆಗೆ ಸಾರ್ವಜನಿಕ ಟೀಕೆಗಳಿಗೆ ಸಂಬಂಧಿಸಿದ ವೇದಿಕೆಗಳಿಗೆ ಸೇರುವ ಕುರಿತು ಹೆಚ್ಚು ಜಾಗರೂಕವಾಗಿರುವುದಾಗಿ ಹೇಳಿದ್ದಾರೆ. ಇಂತಹ ಟೀಕೆಗಳ ಕುರಿತು ತಾನು ಸಹಮತಿ ಹೊಂದಿದ್ದರೂ, ಆ ಸಂದೇಶ ಮತ್ತು ಅದರ ಹಿಂದಿನ ಭಾವನೆಗಳು ತನಗೆ ಒಪ್ಪಿತವಾದರೂ ತಾನು ಈ ನಿಲುವು ತಳೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಕೆಲವೊಂದು ಜನರು ಜನಪ್ರಿಯ ಅಭಿಪ್ರಾಯಗಳನ್ನು ಮರು ರೂಪಿಸುವುದರಲ್ಲಿ ತನಗಿಂತ ಉತ್ತಮರಿದ್ದಾರೆ ಎಂದು ಅವರು ಹೇಳಿದ್ದಾರೆ. ತನ್ನ ಅನುಭವದ ಪ್ರಕಾರ ಹೇಳುವುದಾದರೆ, ಬಹುಮತದೊಡನೆ ನಾವೂ ಸಹಮತ ತೋರಿದರೆ, ಅದರಿಂದ ಈಗಾಗಲೇ ಒಂದು ವಿಚಾರದ ಕುರಿತು ನಂಬಿಕೆ ಹೊಂದಿರುವವರಿಗೆ ಇನ್ನಷ್ಟು ಆತ್ಮವಿಶ್ವಾಸ ಮೂಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ಅದರಿಂದ ಖಚಿತ ಅಭಿಪ್ರಾಯ ಹೊಂದಿರದ ಮತ್ತು ಬೇರೆ ರೀತಿಯಾಗಿ ಆಲೋಚಿಸುವವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ.

ಟ್ರಂಪ್ ಜೊತೆ ಉದ್ವಿಗ್ನ ಸಭೆ ಮುಗಿಸಿದ ಜೆಲೆನ್ಸ್‌ಕಿ: ಕ್ಷೀಣಿಸಿದ ಕದನ ವಿರಾಮದ ಸಾಧ್ಯತೆ!

ತನ್ನ ದೇಶದ ಮೇಲೆ ಆಕ್ರಮಣ ನಡೆದಿರುವ ಸಂದರ್ಭದಲ್ಲಿ, ಅದನ್ನು ಎದುರಿಸಿ ಉಳಿಯಲು ಹೋರಾಟ ನಡೆಸುತ್ತಿರುವ ದೇಶವೊಂದರ ಮುಖ್ಯಸ್ಥನನ್ನು ಅಮೆರಿಕಾ ಸರ್ಕಾರ ಕಟುವಾಗಿ ಟೀಕಿಸಿರುವುದು ಅವಮಾನಕರ ಸಂಗತಿ. ರಷ್ಯಾದ ತನಿಖೆಯ ಸಂದರ್ಭದಲ್ಲಿ ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಷ್ಟು ಕಷ್ಟಪಟ್ಟಿರಬಹುದು ಎಂಬ ಕುರಿತು ಮರುಗಿದ್ದ ಟ್ರಂಪ್, ಈ ಬಾರಿ ಪ್ರಧಾನವಾಗಿ ಕೇವಲ ತನ್ನ ಕುರಿತು ಮಾತ್ರವೇ ಚಿಂತಿಸುತ್ತಿದ್ದರು. ಆದರೆ, ಉಕ್ರೇನ್ ಅಧ್ಯಕ್ಷರ ಜೊತೆ ಈ ರೀತಿ ಬಹಿರಂಗವಾಗಿ ನಿರಾಕರಣೆ ಪ್ರದರ್ಶಿಸುವ ಮೂಲಕ, ಉಕ್ರೇನ್ ಪಾಲಿಗೂ ಒಪ್ಪಿಗೆಯಾಗುವಂತಹ ಶಾಂತಿ ಒಪ್ಪಂದ ನಡೆಸುವುದು ನಿಜಕ್ಕೂ ಕಷ್ಟಕರವಾಗಲಿದೆ.

ಒಂದು ವೇಳೆ ಡೊನಾಲ್ಡ್ ಟ್ರಂಪ್ ಮತ್ತು ಜೆಡಿ ವ್ಯಾನ್ಸ್ ಅವರು ಉದ್ದೇಶಪೂರ್ವಕವಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್‌ಕಿ ಅವರನ್ನು ಉದ್ದೇಶಪೂರ್ವಕವಾಗಿ ಕೆಣಕಲು ಪ್ರಯತ್ನ ಪಟ್ಟರೇ, ಅಥವಾ ಅವರ ವ್ಯಕ್ತಿತ್ವಗಳಲ್ಲಿನ ವ್ಯತ್ಯಾಸಗಳ ಕಾರಣದಿಂದಾಗಿ ಸಹಜವಾಗಿಯೇ ಅವರ ನಡುವೆ ಜಗಳಕ್ಕೆ ಹಾದಿ ಮಾಡಿಕೊಟ್ಟಿತೇ ಎನ್ನುವುದು ಸರಿಯಾಗಿ ಅರ್ಥವಾಗಬೇಕಾದರೆ ಹಲವಾರು ವರ್ಷಗಳು, ಅಥವಾ ದಶಕಗಳೇ ಬೇಕಾಗಬಹುದೇನೋ. ತನ್ನ ದೇಶದ ಒಳಿತಿಗೋಸ್ಕರವಾದರೂ ಜೆಲೆನ್ಸ್‌ಕಿ ಕೇವಲ ಮುಂದಿನ ಮೂವತ್ತು ನಿಮಿಷಗಳ ಕಾಲವಾದರೂ ತಾಳ್ಮೆ ವಹಿಸಿಕೊಂಡು, ಟ್ರಂಪ್ ಮತ್ತು ವ್ಯಾನ್ಸ್ ಅವರನ್ನು ಕೋಪ ಬರಿಸದಿರಲು ಪ್ರಯತ್ನಿಸಬೇಕಿತ್ತು ಎಂದು ಹಲವು ಜನರು ವಾದಿಸುತ್ತಿದ್ದಾರೆ.

ಬಹಳಷ್ಟು ಜನರು ಗಮನಿಸದಿದ್ದರೂ, ಓರ್ವ ರಾಜಕಾರಣಿಯ ಶಕ್ತಿ ಮತ್ತು ದೌರ್ಬಲ್ಯಗಳೆರಡೂ ಸಾಮಾನ್ಯವಾಗಿ ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುತ್ತವೆ. ಒಬ್ಬ ರಾಜಕಾರಣಿಯನ್ನು ಯಶಸ್ವಿಯಾಗಿಸುವ ಅವೇ ಗುಣಗಳು ಆತನಿಗೆ ಸವಾಲುಗಳನ್ನೂ ಸೃಷ್ಟಿಸಬಲ್ಲವು. ಉದಾಹರಣೆಗೆ, ಓರ್ವ ಆತ್ಮವಿಶ್ವಾಸ ಹೊಂದಿರುವ ಮತ್ತು ನಿರ್ಣಾಯಕ ಗುಣಗಳನ್ನು ಹೊಂದಿರುವ ರಾಜಕಾರಣಿ ಆತನ ನಾಯಕತ್ವ ಗುಣಕ್ಕೆ ಶ್ಲಾಘಿಸಲ್ಪಟ್ಟರೂ, ಆತ ದುರಹಂಕಾರಿ, ಇತರರ ಮಾತುಗಳನ್ನು ಕೇಳಿಸಿಕೊಳ್ಳಲು ಸಿದ್ಧವಿಲ್ಲ ಎಂಬಂತಹ ಟೀಕೆಗಳನ್ನೂ ಕೇಳಿಸಿಕೊಳ್ಳಬೇಕಾಗುತ್ತದೆ.

ಅದೇ ರೀತಿ, ಸಂಬಂಧಗಳನ್ನು ಬೆಳೆಸುವ ಕೌಶಲ ಹೊಂದಿರುವ, ಹೊಂದಾಣಿಕೆ ಮಾಡಿಕೊಳ್ಳುವ ರೀತಿಯ ನಾಯಕನನ್ನು ಆತನ ರಾಜತಾಂತ್ರಿಕತೆಗೆ ಮೆಚ್ಚಿಕೊಂಡರೂ, ಆತ ನಿರ್ಣಾಯಕ ನಿಲುವುಗಳನ್ನು ತಳೆಯುವುದಿಲ್ಲ, ಇತರರ ಮಾತಿನಿಂದ ಬೇಗ ಪ್ರಭಾವಿತನಾಗುತ್ತಾನೆ ಎಂದು ಟೀಕಿಸುವವರಿರುತ್ತಾರೆ. ಈ ರೀತಿ ಓರ್ವ ರಾಜಕಾರಣಿಯ ಬಹುದೊಡ್ಡ ಸಾಮರ್ಥ್ಯಗಳೇ ಕೆಲವೊಂದು ಸಂದರ್ಭದಲ್ಲಿ ಪರಿಸ್ಥಿತಿ ಮತ್ತು ಸಾರ್ವಜನಿಕ ಗ್ರಹಿಕೆಯ ಅನುಗುಣವಾಗಿ ಆತನ ಬಹುದೊಡ್ಡ ಹಿನ್ನಡೆಗಳೂ ಆಗಬಹುದು.

ಸಮಾಧಾನದ ಮನಸ್ಥಿತಿಯಲ್ಲಿ ಉಳಿದು, ತರ್ಕಬದ್ಧವಾಗಿ ನಿರ್ಧಾರ ಕೈಗೊಳ್ಳಬಲ್ಲ ರಾಜಕಾರಣಿಗೆ ಬಹುಶಃ ಇಂತಹ ಗೋಜಲು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗಬಹುದು. ಜೆಲೆನ್ಸ್‌ಕಿ ಭೇಟಿಯ ಹಿಂದಿನ ದಿನ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅಂತಹ ಮನೋಭಾವವನ್ನು ಪ್ರದರ್ಶಿಸಿ, ತನ್ನ ದೇಶಕ್ಕೆ ನೆರವಾಗುವಂತೆ ಮಾಡಿದರು. ಆದರೆ, ಅದಕ್ಕಾಗಿ ಸ್ಟಾರ್ಮರ್ ತನ್ನ ವೈಯಕ್ತಿಕ ಹೆಮ್ಮೆ, ತನ್ನ ಸ್ವಂತ ಭಾವನೆಗಳು, ಅಹಂಕಾರಗಳು ಮತ್ತು ಸ್ವಗೌರವಗಳನ್ನು ಬದಿಗಿಟ್ಟು, ತನ್ನ ದೇಶಕ್ಕೆ ಏನು ಒಳಿತೋ, ಆ ಕ್ರಮವನ್ನು ಕೈಗೊಂಡರು.

ಆದರೆ, ಯಾವಾಗಲೂ ಶಾಂತವಾಗಿ ಉಳಿದು, ತರ್ಕಬದ್ಧವಾಗಿ ಕ್ರಮ ಕೈಗೊಳ್ಳುವ ನಾಯಕ ಫೆಬ್ರವರಿ 2022ರಲ್ಲಿ ಜೆಲೆನ್ಸ್‌ಕಿ ಪ್ರದರ್ಶಿಸಿದ ದಿಟ್ಟ ಧೈರ್ಯವನ್ನು ಪ್ರದರ್ಶಿಸುತ್ತಿದ್ದರು ಎನ್ನಲು ಸಾಧ್ಯವಿಲ್ಲ. ರಷ್ಯಾದ ವಿರುದ್ಧದ ಯುದ್ಧ ತೀವ್ರವಾಗಿ, ಅದನ್ನು ಗೆಲ್ಲುವುದು ಉಕ್ರೇನ್ ಕೈಯಲ್ಲಿ ಬಹುತೇಕ ಸಾಧ್ಯವಿಲ್ಲ ಎಂಬಂತಾಗಿ, ಜೆಲೆನ್ಸ್‌ಕಿ ಪ್ರಾಣಕ್ಕೆ ಅಪಾಯವಿದ್ದರೂ ಆತ ರಾಜಧಾನಿ ಕೀವ್‌ನಲ್ಲೇ ಉಳಿಯುವ ನಿರ್ಧಾರ ಕೈಗೊಂಡಿದ್ದರು. ಇಂತಹ ನಿರ್ಧಾರಕ್ಕೆ ಬರಬೇಕಾದರೆ ಆ ವ್ಯಕ್ತಿ ಬೇರೆಯೇ ರೀತಿಯ ನಾಯಕತ್ವದ ಗುಣಗಳನ್ನು ಹೊಂದಿರಬೇಕು ಮತ್ತು ತನಗೆ ಸರಿ ಎನಿಸಿದ್ದು ಅವಾಸ್ತವಿಕ, ಅಪಾಯಕಾರಿ ಎಂಬಂತೆ ತೋರಿದರೂ ಅದನ್ನು ಕೈಗೊಳ್ಳುವ ಗುಂಡಿಗೆ ಹೊಂದಿರಬೇಕು. ಸಮಾಜಶಾಸ್ತ್ರಜ್ಞ ಮ್ಯಾಕ್ಸ್ ವೆಬರ್ ಅವರು ಇದನ್ನು 'ಎಥಿಕ್ ಆಫ್ ಅಲ್ಟಿಮೇಟ್ ಎಂಡ್ಸ್' ಎಂದಿದ್ದು, ಇದು ಓರ್ವ ನಾಯಕ ಪರಿಣಾಮ ಏನಾಗಬಹುದು ಎಂಬ ಕುರಿತು ಹೆದರದೆ, ತನ್ನ ಮೌಲ್ಯಗಳು ಮತ್ತು ನೀತಿಗಳನ್ನು ಅನುಸರಿಸುತ್ತಾನೆ ಎಂಬ ಅರ್ಥವನ್ನು ಪ್ರತಿನಿಧಿಸುತ್ತದೆ.

ಎರಡನೇ ಮಹಾಯುದ್ಧ ಮುಕ್ತಾಯಗೊಂಡ ಬಳಿಕ ಅಮೆರಿಕಾ ಪಾಲಿಸಿಕೊಂಡು ಬಂದ ವಿದೇಶಾಂಗ ನೀತಿಯನ್ನು ಈಗ ಟ್ರಂಪ್ ಬದಲಾಯಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಹಿಂದಿನ ನಾಯಕರು ದಶಕಗಳ ಕಾಲ ಪಾಲಿಸಿಕೊಂಡು ಬಂದ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುವ ಬದಲು, ಅಮೆರಿಕಾ ಹೇಗೆ ಇತರ ದೇಶಗಳೊಡನೆ ವ್ಯವಹರಿಸಬೇಕು ಎಂಬ ಕುರಿತು ಬೇರೆಯದೇ ಮಾರ್ಗವನ್ನು ಪಾಲಿಸುತ್ತಿದ್ದಾರೆ. ಟ್ರಂಪ್ ಜಗತ್ತನ್ನು ನೋಡುವ ವಿಧಾನ 1945ರ ಬಳಿಕ ಪ್ರತಿಯೊಬ್ಬ ಅಮೆರಿಕಾದ ಅಧ್ಯಕ್ಷರು ಜಾಗತಿಕವಾಗಿ ಅಮೆರಿಕಾದ ಪಾತ್ರ ಹೇಗಿರಬೇಕು ಎಂದು ಭಾವಿಸಿದ್ದರಿಂದ ಎರಡು ವಿಚಾರಗಳಲ್ಲಿ ವಿರುದ್ಧವಾಗಿದೆ. ಹಾಗೆಂದು ಹಿಂದಿನ ಅಧ್ಯಕ್ಷರುಗಳ ಆಲೋಚನೆಗಳೂ ಒಬ್ಬರಿಂದ ಒಬ್ಬರಿಗೆ ಭಿನ್ನ, ವಿರುದ್ಧವಾಗಿದ್ದವು. ಆದರೆ, ವಿದೇಶಾಂಗ ನೀತಿಯ ವಿಚಾರಕ್ಕೆ ಬಂದಾಗ, ಅವರೆಲ್ಲರೂ ಬಹುತೇಕ ಒಂದೇ ವಿಧಾನವನ್ನು ಅನುಸರಿಸುತ್ತಾ ಬಂದಿದ್ದರು. ಆದರೆ ಟ್ರಂಪ್ ನಡೆಯುತ್ತಿರುವ ಹಾದಿ ಮಾತ್ರ ಅಮೆರಿಕಾದ ಸಾಂಪ್ರದಾಯಿಕ ನೀತಿಗೆ ಸವಾಲು ಹಾಕುವಂತೆ ತೋರುತ್ತಿದೆ.

ಟ್ರಂಪ್ ಇಂದು ಜಗತ್ತನ್ನೇ ಒಂದು ಸ್ಪರ್ಧೆಯಾಗಿ ಪರಿಗಣಿಸಿದ್ದು, ಇದರಲ್ಲಿ ಒಂದು ಬದಿ ಗೆದ್ದರೆ, ಇನ್ನೊಂದು ಬದಿ ಸೋಲುತ್ತದೆ ಎಂದು ಭಾವಿಸಿದ್ದಾರೆ. ಹಿಂದಿನ ಸಮಯದಲ್ಲಿ, ಅಮೆರಿಕಾ ಜಪಾನ್ ಮತ್ತು ಯುನೈಟೆಡ್ ಕಿಂಗ್‌ಡಮ್ ನಂತಹ ಸಹಯೋಗಿಗಳ ಜೊತೆ ಕಾರ್ಯಾಚರಿಸುವುದರಿಂದ ಪರಸ್ಪರ ಪ್ರಯೋಜನ ಲಭಿಸಲಿದೆ ಎಂಬ ಭಾವನೆಯಿಂದ ಕಾರ್ಯಾಚರಿಸುತ್ತಿತ್ತು. ಅಮೆರಿಕಾ ತನ್ನ ಸಹಯೋಗಿಗಳಿಗೆ ಭದ್ರತೆ ಮತ್ತು ರಕ್ಷಣೆ ಒದಗಿಸುವ ಮೂಲಕ, ಅವುಗಳನ್ನು ಕಾಪಾಡುವ ಭರವಸೆ ನೀಡಿತ್ತು. ಅಮೆರಿಕಾಗೆ ಜಗತ್ತು ಸ್ಥಿರವಾಗಿರುವುದರಿಂದ ಪ್ರಯೋಜನ ಲಭಿಸಿ, ಮುಕ್ತ ವ್ಯಾಪಾರ ಮತ್ತು ಜಾಗತಿಕ ನೀತಿಗಳು ಮತ್ತು ನಿರ್ಧಾರಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲು ಅವಕಾಶ ಸಿಗುತ್ತಿತ್ತು.

ಆದರೆ, ಟ್ರಂಪ್ ಅನುಸರಿಸುತ್ತಿರುವ ವಿಧಾನ ಬಹಳಷ್ಟು ಭಿನ್ನವಾಗಿದೆ. ಅವರು ಅಂತಾರಾಷ್ಟ್ರೀಯ ಸಹಯೋಗವನ್ನು ಒಂದು ಆಟದಂತೆ ಭಾವಿಸಿದ್ದು, ಇದರಲ್ಲಿ ಒಂದು ದೇಶಕ್ಕೆ ಲಾಭವಾಗಬೇಕಾದರೆ ಇನ್ನೊಂದು ದೇಶಕ್ಕೆ ನಷ್ಟವಾಗಬೇಕು ಎಂದು ಭಾವಿಸಿರುವಂತೆ ಕಾಣುತ್ತಿದೆ. ಯುರೋಪ್ ಮತ್ತು ಪೂರ್ವ ಏಷ್ಯಾದ ದೇಶಗಳು (ಉದಾಹರಣೆಗೆ ಚೀನಾ, ಜಪಾನ್, ಮತ್ತು ದಕ್ಷಿಣ ಕೊರಿಯಾ) ಅಮೆರಿಕಾದ ಜೊತೆಗಿನ ತಮ್ಮ ಒಪ್ಪಂದಗಳಿಂದ ಖುಷಿಯಾಗಿವೆ ಎಂದು ಟ್ರಂಪ್ ಗಮನಿಸಿದ್ದಾರೆ. ಅವುಗಳು ಸಮಾಧಾನ ಹೊಂದಿದ್ದಾವೆ ಎಂದರೆ, ಈ ಒಪ್ಪಂದಗಳು ಅಮೆರಿಕಾ ಪಾಲಿಗೆ ನಷ್ಟದಾಯಕವಾಗಿರಬಹುದು ಎಂದು ಟ್ರಂಪ್ ಊಹಿಸಿದ್ದಾರೆ. ಟ್ರಂಪ್ ತನ್ನದೇ ಯೋಚನಾ ಲಹರಿಯನ್ನು ಹೊಂದಿದ್ದು, ಆ ದೇಶಗಳಿಗೆ ಲಾಭವಾಗುತ್ತಿದೆ ಎಂದರೆ, ಅದರಿಂದ ಖಂಡಿತವಾಗಿಯೂ ಅಮೆರಿಕಾಗೆ ನಷ್ಟ ಉಂಟಾಗುತ್ತಿದೆ, ಅಥವಾ ಅಮೆರಿಕಾವನ್ನು ಅವುಗಳು ನ್ಯಾಯಯುತವಾಗಿ ಪರಿಗಣಿಸುತ್ತಿಲ್ಲ ಎಂಬ ಅಭಿಪ್ರಾಯ ರೂಪಿಸಿಕೊಂಡಿದ್ದಾರೆ.

ಈ ಕಾರಣದಿಂದಲೇ ಟ್ರಂಪ್ ಅಮೆರಿಕಾದ ದೀರ್ಘಕಾಲೀನ ಸಹಯೋಗಿಗಳ ಮೇಲೂ ಅಮೆರಿಕಾದ ಅಧಿಕಾರವನ್ನು ಪ್ರದರ್ಶಿಸಿ, ಆ ಮೂಲಕ ಸಾಧ್ಯವಾದಷ್ಟು ಪ್ರಯೋಜನಗಳನ್ನು ತಕ್ಷಣವೇ ಪಡೆದುಕೊಳ್ಳಬೇಕು ಎಂಬತ್ತ ಗಮನ ಹರಿಸುತ್ತಿದ್ದಾರೆ. ಯುರೋಪಿಯನ್ನರು ಟ್ರಂಪ್ ನಡೆಯನ್ನು ರಕ್ಷಣೆಗಾಗಿ ಹಣ ಕೇಳುವ ಮಾಫಿಯಾ ಬಾಸ್‌ಗಳ ನಡವಳಿಕೆಯಂತೆ ಭಾವಿಸಿದ್ದಾರೆ. ಆದರೆ, ಟ್ರಂಪ್ ತನ್ನನ್ನು ತಾನು ಅಮೆರಿಕಾಗೆ ನ್ಯಾಯ ಒದಗಿಸುವ ಸಲುವಾಗಿ ಹಳೆಯ ಒಪ್ಪಂದಗಳನ್ನು ಸರಿಪಡಿಸುವ ಉದ್ಯಮಿ ಎಂದು ಪರಿಗಣಿಸಿದ್ದಾರೆ!

ವಿದೇಶಾಂಗ ನೀತಿಯ ಕುರಿತು ಟ್ರಂಪ್ ನಡೆಯ ಹಿಂದಿರುವ ಎರಡನೇ ಸಾಧ್ಯತೆ ಎಂದರೆ, ಬಹುಶಃ ಟ್ರಂಪ್ ಶಕ್ತಿಶಾಲಿ ದೇಶಗಳು ಕೆಲವೊಂದು ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಬೇಕು, ಮತ್ತು ಅದು ಸಹಜ ಎಂದು ಭಾವಿಸಿದ್ದಾರೆ. ಜಗತ್ತು ಸ್ಥಿತವಾಗಿರುವಂತೆ ಮಾಡಲು ಇದು ಸರಿಯಾದ ಮಾರ್ಗ ಎಂದು ಟ್ರಂಪ್ ಅಭಿಪ್ರಾಯ ಹೊಂದಿರುವ ಸಾಧ್ಯತೆಗಳಿವೆ. ಅಮೆರಿಕಾದ ಬಹುತೇಕ ಎಲ್ಲ ಹಿಂದಿನ ಅಧ್ಯಕ್ಷರುಗಳು ಪ್ರತಿಯೊಂದು ದೇಶವೂ ತನ್ನ ಭವಿಷ್ಯದ ಕುರಿತು ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಹೊಂದಿರಬೇಕು ಎಂಬ ನಂಬಿಕೆ ಹೊಂದಿದ್ದರು. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಯಾವುದೇ ದೇಶ ಅಮೆರಿಕಾವನ್ನು ಸಹಯೋಗಿಯಾಗಿ ಪರಿಗಣಿಸುವುದನ್ನು ಬೆಂಬಲಿಸಿದರೆ, ಅವರು ಅದನ್ನು ಸ್ವಾಗತಿಸುತ್ತಿದ್ದರು.

ಆದರೆ, ಇನ್ನೊಂದೆಡೆ, ಟ್ರಂಪ್ ಶಕ್ತಿಶಾಲಿ ದೇಶಗಳು ಸಹಜವಾಗಿಯೇ ಕೆಲವೊಂದು ಪ್ರದೇಶಗಳನ್ನು ನಿಯಂತ್ರಿಸಬೇಕು ಎಂದು ನಂಬಿದ್ದು, ವಾಸ್ತವವಾಗಿ ಅದು ತಪ್ಪು ಎನ್ನುವುದನ್ನು ನಿರ್ಲಕ್ಷಿಸಿದ್ದಾರೆ. ಇದನ್ನು ಪರಿಗಣಿಸದೆ, ಹಿಂದಿನ ಅಧ್ಯಕ್ಷರುಗಳು ಯಾವುದೋ ದೇಶದೊಡನೆ ಸಹಯೋಗ ಸಾಧಿಸಿರುವುದು ಅವಾಸ್ತವಿಕ ಮತ್ತು ಹಣ ವ್ಯರ್ಥ ಎಂದು ಟ್ರಂಪ್ ಭಾವಿಸಿದ್ದು, ಇಂತಹ ನಡೆ ಭಾವನೆಗಳನ್ನು ಆಧರಿಸಿದೆಯೇ ಹೊರತು, ಬುದ್ಧಿವಂತಿಕೆಯ ನಡೆಯಲ್ಲ ಎಂದಿದ್ದಾರೆ. ಟ್ರಂಪ್ ವಿದೇಶಾಂಗ ನೀತಿ ಅಮೆರಿಕಾದ ಭೂ ಪ್ರದೇಶದಲ್ಲಿ ಅದರ ಶಕ್ತಿಯನ್ನು ಹೆಚ್ಚಾಗಿ ಬಳಸುವುದಕ್ಕೆ ಆದ್ಯತೆ ನೀಡುತ್ತದೆಯೇ ಹೊರತು, ಉಕ್ರೇನ್ ಅಥವಾ ತೈವಾನಿನಂತಹ ದೂರದ ಪ್ರದೇಶಗಳ ಸ್ವಾತಂತ್ರ್ಯವನ್ನು ಕಾಪಾಡುವುದಕ್ಕಲ್ಲ. ಟ್ರಂಪ್ ಆದ್ಯತೆ ಅಮೆರಿಕಾಗೆ ನೇರವಾಗಿ ಲಾಭ ಗಳಿಸುವುದಾಗಿದ್ದು, ದೂರದ ಪ್ರದೇಶಗಳಲ್ಲಿ ಕದನದಲ್ಲಿ ಭಾಗಿಯಾಗುವುದು ಅವರಿಗೆ ಬೇಕಾಗಿಲ್ಲ.

ಪನಾಮಾ ಮತ್ತು ಗ್ರೀನ್ ಲ್ಯಾಂಡ್‌ಗಳು ಅಮೆರಿಕಾ್ ಹೆಚ್ಚಿನ ಪ್ರಭಾವ ಇರುವ ಪ್ರದೇಶದಲ್ಲಿದ್ದು, ಅವುಗಳ ಕುರಿತು ಅತಿಯಾದ ಬೇಡಿಕೆ ಇಡುವ ಹಕ್ಕು ತನಗೆ ಸಹಜವಾಗಿಯೇ ಇದೆ ಎಂದು ಟ್ರಂಪ್ ಭಾವಿಸಿದ್ದಾರೆ. ಅವರು ಉಕ್ರೇನ್ ಅನ್ನು ಸಹಜವಾಗಿಯೇ ರಷ್ಯಾದ ಪ್ರಭಾವಕ್ಕೆ ಒಳಗಾಗುವ ಪ್ರದೇಶ ಎಂದು ಭಾವಿಸಿರುವಂತಿದೆ. ಈ ಕಾರಣಕ್ಕಾಗಿಯೇ ಅವರು ಉಕ್ರೇನನ್ನು ಬೆಂಬಲಿಸುವ ಕುರಿತು ಅಸಮಾಧಾನ, ಹತಾಶೆ ವ್ಯಕ್ತಪಡಿಸಿರಬಹುದು. ಇದಕ್ಕೆ ಪುಟಿನ್ ಜೊತೆಗೆ ಟ್ರಂಪ್ ಸ್ನೇಹದಿಂದಿದ್ದಾರೆ ಎಂಬ ಸಾರ್ವಜನಿಕ ಅಭಿಪ್ರಾಯವಾಗಲಿ, ಅಥವಾ ಇನ್ನಾವುದೋ ರಹಸ್ಯ ಒಪ್ಪಂದ ಕಾರಣವಾಗಿರದೆ, ಕೇವಲ ಟ್ರಂಪ್ ಜಾಗತಿಕ ಶಕ್ತಿ ಮತ್ತು ಪ್ರಭಾವವನ್ನು ಪರಿಗಣಿಸಿದ್ದಾರೆ ಎನ್ನುವುದೇ ಕಾರಣವಾಗಿದೆ.

ಈಗ ಜಗತ್ತು ಅತ್ಯಂತ ವೇಗವಾಗಿ ಬದಲಾವಣೆ ಹೊಂದುತ್ತಿರುವುದರಿಂದ, ಹಳೆಯ ಜೀವನ ವಿಧಾನದಿಂದ ಏನೇನು ಮಾಯವಾಗುತ್ತಿದೆ ಎನ್ನುವುದನ್ನು ಗಮನಿಸುವುದು ಸುಲಭವಾಗಿದೆ. ಆದರೆ, ಭವಿಷ್ಯದಲ್ಲಿನ ಹೊಸದಾದ ಜೀವನ ವಿಧಾನ ಹೇಗಿರಬಹುದು ಎನ್ನುವುದನ್ನು ಊಹಿಸುವುದು ಬಹಳಷ್ಟು ಕಷ್ಟಕರ. ಒಂದು ವೇಳೆ ಟ್ರಂಪ್ ತನ್ನದೇ ಹಾದಿಯಲ್ಲಿ ಮುಂದುವರಿದರೆ, ದೇಶಗಳ ನಡುವಿನ ಸಂಬಂಧವೂ ಬಹುತೇಕ ಉದ್ಯಮ ಒಪ್ಪಂದಗಳ ರೂಪ ಪಡೆಯಲಿದೆ. ಪಶ್ಚಿಮ ಗೋಳಾರ್ಧದಲ್ಲಿರುವ ಅಮೆರಿಕಾದ ಮಾಮೂಲಿ ಸಹಯೋಗಿಗಳ ಮುಂದೆ ಇನ್ನು ಎರಡು ಆಯ್ಕೆಗಳು ಇರಲಿವೆ. ಅವೆಂದರೆ: ಹೆಚ್ಚು ಹೆಚ್ಚು ಸ್ವತಂತ್ರ, ಸ್ವಾವಲಂಬಿಗಳಾಗುವುದು, ಅಥವಾ ತಮ್ಮ ರಕ್ಷಣೆಗಾಗಿ ಅಮೆರಿಕಾಗೆ ಹಣ ಪಾವತಿಸುವುದು. ಚೀನಾ ಮತ್ತು ರಷ್ಯಾಗಳಂತಹ ದೊಡ್ಡ, ಶಕ್ತಿಶಾಲಿ ಸರ್ವಾಧಿಕಾರಿ ದೇಶಗಳ ಬಳಿ ಇರುವ ದೇಶಗಳು ಹೊಂದಾಣಿಕೆ ಮಾಡಿಕೊಂಡು, ಉದ್ವಿಗ್ನತೆ ತಪ್ಪಿಸಿಕೊಳ್ಳಲು ಅವುಗಳ ನಿಯಮಗಳನ್ನು ಪಾಲಿಸಬೇಕಾಗಿ ಬರಬಹುದು.

ಆದರೆ ಇಂತಹ ಒಂದು ಜಗತ್ತು ಸ್ಥಿರವಾಗಿರಲು ಸಾಧ್ಯವೇ? ಅಥವಾ ಇದರ ಪರಿಣಾಮವಾಗಿ ಯಾವುದಾದರೂ ಸರ್ವಾಧಿಕಾರಿ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿ, ಇನ್ನೊಂದು ಪ್ರಮುಖ ದೇಶದ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಆರಂಭಿಸಬಹುದೇ? ಇದರ ಪರಿಣಾಮವಾಗಿ, ಟ್ರಂಪ್ ತಾನು ತಡೆಯಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಿರುವ ಮೂರನೇ ಮಹಾಯುದ್ಧ ನಡೆದೇ ಹೋದೀತೇ? ಟ್ರಂಪ್ ಹೊಸದಾದ ವ್ಯವಸ್ಥೆಯನ್ನು ಕಟ್ಟುವ ಬದಲು, ಹಳೆಯ ವ್ಯವಸ್ಥೆಯನ್ನು ಸರಿಪಡಿಸುವುದು ಉತ್ತಮ ಆಯ್ಕೆಯಾಗಿದೆ. ಒಂದು ವೇಳೆ ಅಮೆರಿಕಾ ಏನಾದರೂ ಜಾಗತಿಕ ನಾಯಕನ ಸ್ಥಾನದಿಂದ ಹಿಂದೆ ಸರಿದರೆ, ಅದರ ಸ್ಥಾನವನ್ನು ತುಂಬಲು ಚೀನಾ ಸಿದ್ಧವಾಗಿದ್ದು, ಅದು ಜಗತ್ತನ್ನು, ಅದರಲ್ಲೂ ಪಶ್ಚಿಮ ಗೋಳಾರ್ಧದ ಹೊರಗಿನ ಪ್ರದೇಶಗಳನ್ನು ತನ್ನ ಹಿತಾಸಕ್ತಿಗಳಿಗೆ ಸೂಕ್ತವಾಗುವಂತೆ ಮರು ರೂಪಿಸಬಹುದು.

ಸು-57: ಭಾರತಕ್ಕೆ ಸೂಕ್ತವಾದ 5ನೇ ತಲೆಮಾರಿನ ವಿಮಾನವೇ?

ಹಾಗಾದರೆ, ಚೀನಾದ ನೇತೃತ್ವದಲ್ಲಿನ ಜಗತ್ತು (ಪ್ಯಾಕ್ಸ್ ಸಿನಿಕಾ - ಚೀನಾದ ಪ್ರಭಾವದಡಿ ಶಾಂತಿಯ ಅವಧಿ) ಹೇಗಿರಬಹುದು? ಅದು ಸ್ಥಿರವಾಗಿದ್ದೀತೇ? ಇಂತಹ ಹೊಸ ಜಾಗತಿಕ ವ್ಯವಸ್ಥೆಗೆ ಭಾರತ, ಬ್ರೆಜಿಲ್, ಯುನೈಟೆಡ್ ಕಿಂಗ್‌ಡಮ್‌ಗಳಂತಹ ದೇಶಗಳು ಹೇಗೆ ಹೊಂದಿಕೊಳ್ಳಲು ಸಾಧ್ಯವಾದೀತು?

ಭವಿಷ್ಯದಲ್ಲಿ ಉಕ್ರೇನಿಗೆ ಏನಾಗಲಿದೆ? ಯುರೋಪ್ ಮತ್ತು ಅಮೆರಿಕಾಗಳ ನಡುವಿನ ಬಾಂಧವ್ಯ ದುರ್ಬಲಗೊಂಡೀತೇ? ಅಥವಾ ಯುರೋಪ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಬೇಕಾದ ಶಕ್ತಿಯನ್ನು ಪಡೆಯಬಹುದೇ? ಟ್ರಂಪ್ ಸರ್ಕಾರ ಚೀನಾಗೆ ಪೂರ್ವ ಏಷ್ಯಾ ಮೇಲೆ ನಿಯಂತ್ರಣ ಸಾಧಿಸಲು ಅನುಮತಿಸೀತೇ? ಒಂದು ವೇಳೆ ಹಾಗಾದರೆ, ತೈವಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾಗಳ ಸ್ಥಿತಿ ಏನಾದೀತು? ಆಗ ಹೊಸ ಜಾಗತಿಕ ಚಿತ್ರಣ ಹೇಗಿರಬಹುದು? ಯಾಶ್ಚಾ ಮೌಂಕ್ ಅವರು ಸಹ ಇಂತಹ ಪ್ರಮುಖ ಪ್ರಶ್ನೆಗಳನ್ನೇ ಎತ್ತಿದ್ದಾರೆ. ಶಕ್ತಿಶಾಲಿ ರಾಷ್ಟ್ರಗಳು ಬಹಿರಂಗವಾಗಿ ತಮಗೆ ಬೇಕಾದಂತೆ ನಡೆದುಕೊಳ್ಳಬಲ್ಲವೇ, ಅಥವಾ ಹೊಸ ನಿಯಮಗಳು ಜಗತ್ತಿಗೆ ಸ್ಥಿರತೆ ತಂದು, ಜಾಗತಿಕ ವ್ಯವಹಾರಗಳಲ್ಲಿ ಕೋಲಾಹಲ ಉಂಟಾಗದಂತೆ ತಡೆಯಬಹುದೇ?

(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ