
ಮುಂಬೈ: ಭಾರತದಿಂದ ಅಮೆರಿಕಕ್ಕೆ ತೆರಳುವ ವಿಮಾನಗಳ ದರದಲ್ಲಿ ಭಾರೀ ಇಳಿಕೆಯಾಗಿದೆ. ದೆಹಲಿ-ಅಮೆರಿಕ ವಿಮಾನ ದರ ಶೇ.10-15ರಷ್ಟು ಅಗ್ಗವಾಗಿದ್ದು, ಇಷ್ಟು ವರ್ಷಗಳ ಬೇಸಿಗೆಯಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದ ಇಳಿಕೆಯಾಗಿದೆ. ಟ್ರಂಪ್ ಆಡಳಿತ ನೀತಿಗಳಿಂದಾಗಿ ಅಮೆರಿಕಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾದ ಕಾರಣ ವಿಮಾನ ದರಗಳು ಅಗ್ಗವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಮೇ ಮಧ್ಯಭಾಗದಲ್ಲಿ ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುವ ಟಿಕೆಟ್‌ಗೆ 37,000 ರು. ಹಾಗೂ ನ್ಯೂಯಾರ್ಕ್‌ನಿಂದ ಮರಳುವ ಟಿಕೆಟ್‌ಗೆ 76,000 ರು. ಆಗಿದ್ದು, ಅತ್ಯಂತ ಕಡಿಮೆ ದರವನ್ನು ದಾಖಲಿಸಿವೆ. ‘ಬೇಸಿಗೆಯಲ್ಲಿ ರಜಾ ಇರುವುದರಿಂದ ಭಾರತೀಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಅಮೆರಿಕಕ್ಕೆ ಭೇಟಿ ನೀಡುತ್ತಾರೆ. ಈ ವರ್ಷ ಸ್ಯಾನ್ ಫ್ರಾನ್ಸಿಸ್ಕೊ, ನ್ಯೂಯಾರ್ಕ್ ಮತ್ತು ಲಾಸ್ ಏಂಜಲೀಸ್‌ಗೆ ದರಗಳು ಸರಾಸರಿ 1.15 ಲಕ್ಷ ರು.ಗಳಾಗಿವೆ. 2024ರಲ್ಲಿ ಇದೇ ದರ 1.20–1.25 ಲಕ್ಷ ರು.ಗಳಷ್ಟಿತ್ತು. ಬೋಸ್ಟನ್, ಒರ್ಲ್ಯಾಂಡೊ ಮತ್ತು ಮಿಚಿಗನ್‌ಗೆ ದರಗಳು 1.35 ಲಕ್ಷ ರು.ಗಳಾಗಿದ್ದು, ಕಳೆದ ವರ್ಷ 1.40–1.45 ಲಕ್ಷ ರು.ಗಳಷ್ಟಿತ್ತು’ ಎಂದು ಗ್ಲೋಬಲ್ ಬಿಸಿನೆಸ್ ಟ್ರಾವೆಲ್‌ನ ಅಧ್ಯಕ್ಷ ಇಂಡಿವರ್ ರಸ್ತೋಗಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಟ್ರಂಪ್ ವಿರುದ್ಧ ಮತ್ತೆ ಬೃಹತ್ ಪ್ರತಿಭಟನೆ
ವಾಷಿಂಗ್‌ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ನೀತಿಗಳ ವಿರುದ್ಧ ಶನಿವಾರ ಸಾವಿರಾರು ಪ್ರತಿಭಟನಾಕಾರರು 50 ರಾಜ್ಯಗಳಲ್ಲಿ 50 ರ್‍ಯಾಲಿ ನಡೆಸಿ ಶಕ್ತಿಪ್ರದರ್ಶನ ಮಾಡಿದರು. ಇದು ಟ್ರಂಪ್ ವಿರುದ್ಧ ನಡೆದ 2ನೇ ಬೃಹತ್ ಪ್ರತಿಭಟನೆ.ಶನಿವಾರ ‘50501’ ಎಂಬ ಹೋರಾಟಗಾರರ ಗುಂಪು ಪ್ರತಿಭಟನೆಯ ನೇತೃತ್ವ ವಹಿಸಿತ್ತು.
ಫಿಲಡೆಲ್ಫಿಯಾ. ಕ್ಯಾಲಿಫೋರ್ನಿಯಾ, ಮಿನ್ನೇಸೋಟ, ಮಿಚಿಗನ್, ಟೆಕ್ಸಾಸ್, ವಿಸ್ಕಾನ್ಸಿನ್, ಇಂಡಿಯಾನಾ ಮೊದಲಾದೆಡೆ ಪ್ರತಿಭಟನಾಕಾರರು ಅಧ್ಯಕ್ಷ ಟ್ರಂಪ್ ಮತ್ತು ಅವರ ಮುಖ್ಯ ಸಲಹೆಗಾರ ಎಲಾನ್ ಮಸ್ಕ್ ವಿರುದ್ಧ ಖಂಡನಾ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಸರ್ಕಾರಿ ನೌಕರರ ವಜಾಗೆ ಮುಂದಾಗಿರುವ ಮಸ್ಕ್ ಗಡೀಪಾರಿಗೂ ಅವರು ಆಗ್ರಹಿಸಿದರು. ‘ದೇಶಾದ್ಯಂತ ಇಂಥ 400ಕ್ಕೂ ಹೆಚ್ಚು ಪ್ರತಿಭಟನೆಗಳನ್ನು ಆಯೋಜಿಸಿದ್ದೇವೆ. ಟ್ರಂಪ್ ಸರ್ಕಾರದ ದುರಾಡಳಿತವನ್ನು ಖಂಡಿಸಲು ಇದನ್ನು ನಡೆಸುತ್ತಿದ್ದೇವೆ’ ಎಂದು ಆಯೋಜಕರು ತಿಳಿಸಿದ್ದಾರೆ.
ವರ್ಷಾಂತ್ಯಕ್ಕೆ ಎಲಾನ್ ಮಸ್ಕ್ ಭೇಟಿ
ವಿಶ್ವದ ನಂ.1 ಶ್ರೀಮಂತ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆತ್ಯಾಪ್ತ ಎಲಾನ್ ಮಸ್ಕ್ ಅವರು ಈ ವರ್ಷ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆಯ ಬಳಿಕ ಮಸ್ಕ್ ಈ ರೀತಿ ಹೇಳಿದ್ದಾರೆ. ಜೊತೆಗೆ ಮೋದಿ ಜೊತೆ ಮಾತುಕತೆ ಗೌರವದ ವಿಷಯ ಎಂದಿದ್ದಾರೆ. ಮೋದಿ ಹಾಗೂ ಮಸ್ಕ್ ನಡುವೆ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಸಹಯೋಗದ ಸಾಧ್ಯತೆಗಳ ಬಗ್ಗೆ ಮಾತುಕತೆ ನಡೆದಿದ್ದು, ಈ ಕ್ಷೇತ್ರಗಳಲ್ಲಿ ಅಮೆರಿಕ ಜೊತೆಗಿನ ಪಾಲುದಾರಿಕೆಯನ್ನು ಮುಂದುವರಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದರು.
ಇದನ್ನೂ ಓದಿ: ಜಮ್ಮುವಿನಲ್ಲಿ ಮೇಘಸ್ಫೋಟ: 3 ಸಾವು, 100ಕ್ಕೂ ಹೆಚ್ಚು ಜನರ ರಕ್ಷಣೆ,
ಚೀನಾ ಜತೆ ಡೀಲ್: ಟ್ರಂಪ್ ವಿಶ್ವಾಸ
ಚೀನಾ ಜತೆಗಿನ ಆಮದು ಸುಂಕ ಕದನದ ನಡುವೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಕದನ ವಿರಾಮದ ಸುಳಿವು ನೀಡಿದ್ದು, ಒಳ್ಳೆಯ ಡೀಲ್ ಕುದುರುವ ವಿಶ್ವಾಸ ಇದೆ ಎಂದು ಗುರುವಾರ ಹೇಳಿದ್ದಾರೆ. ಟ್ರಂಪ್ ಬುಧವಾರ ಚೀನಾ ಮೇಲಿನ ತೆರಿಗೆ ಸುಂಕವನ್ನು ಶೇ.245ಕ್ಕೆ ಹೆಚ್ಚಿಸಿದ್ದರು. ಇದರ ಬೆನ್ನಲ್ಲೇ ಈ ಸಂಘರ್ಷ ತಪ್ಪಿಸಲು ಅಮೆರಿಕದ ಜತೆ ಚೀನಾ ಸರ್ಕಾರ ಅಧಿಕಾರಿ ಮಟ್ಟದ ಮಾತುಕತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಬಂದಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ ಟೀಕೆ: ಬಿಜೆಪಿ ಸಂಸದರ ವಿರುದ್ಧ ಕಾಂಗ್ರೆಸ್ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ