
ಇಸ್ಲಾಮಾಬಾದ್(ಫೆ.04): ಸದಾ ಭಾರತದ ವಿರುದ್ಧ ಯುದ್ಧೋತ್ಸಾಹ ಪ್ರದರ್ಶಿಸುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ. ಖಮರ್ ಜಾವೇದ್ ಬಜ್ವಾ, ಭಾರತದ ಕಡೆಗೆ ಸ್ನೇಹದ ಹಸ್ತ ಚಾಚುವ ಮೂಲಕ ಅಚ್ಚರಿಯ ಹೆಜ್ಜೆ ಇಟ್ಟಿದ್ದಾರೆ.
ಪಾಕಿಸ್ತಾನ ವಾಯುಪಡೆಯ ಕೆಡೆಟ್‌ಗಳ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಜ್ವಾ ‘ಪಾಕಿಸ್ತಾನ ಮತ್ತು ಭಾರತ, ಜಮ್ಮು ಹಾಗೂ ಕಾಶ್ಮೀರ ಸೇರಿದಂತೆ ಬಹುಕಾಲದ ತಮ್ಮೆಲ್ಲಾ ವಿವಾದಗಳನ್ನು ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಜಮ್ಮು ಮತ್ತು ಕಾಶ್ಮೀರದ ಜನರ ಆಕಾಂಕ್ಷೆಯ ರೀತಿಯಲ್ಲೇ ಬಗೆಹರಿಸಿಕೊಳ್ಳಬೇಕು. ಈ ಮೂಲಕ ಮಾನವ ಸಂಘರ್ಷವನ್ನು ಒಂದು ತಾರ್ಕಿಕ ಅಂತ್ಯ ಮುಟ್ಟಿಸಬೇಕು. ಪಾಕಿಸ್ತಾನವು ಪರಸ್ಪರ ಗೌರವ ಮತ್ತು ಶಾಂತಿಯುತವಾಗಿ ಸಹಬಾಳ್ವೆಗೆ ಮುಕ್ತವಾಗಿದೆ. ಎಲ್ಲಾ ದಿಕ್ಕುಗಳಲ್ಲೂ ಶಾಂತಿ ಮತ್ತು ಸ್ನೇಹದ ಹಸ್ತ ಚಾಚುವ ಸಮಯ ಇದು’ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯ ಬಳಿಕ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತದ ನಡೆಸಿದ ಸರ್ಜಿಕಲ್ ದಾಳಿಯ ಬಗ್ಗೆ ತಣ್ಣಗಾಗಿದ್ದ ಪಾಕ್‌ನಿಂದ ಇದೀಗ ಇಂಥ ಹೇಳಿಕೆ ವ್ಯಕ್ತವಾಗಿರುವುದು ಸಾಕಷ್ಟುಕುತೂಹಲಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಕೊರೋನಾ ಸೇರಿದಂತೆ ಎಲ್ಲಾ ವಿಷಯಗಳ ನಿರ್ವಹಣೆಯಲ್ಲಿ ಪಾಕ್ ಪ್ರಧಾನಿ ಇಮ್ರಾನ್‌ಖಾನ್ ವಿಫಲರಾಗಿದ್ದು, ಅವರ ರಾಜೀನಾಮೆಗೆ ವಿಪಕ್ಷಗಳಿಂದ ಆಗ್ರಹ ಹೆಚ್ಚಿರುವ ಬೆನ್ನಲ್ಲೇ ಇಂಥ ಹೇಳಿಕೆ ಬಿದ್ದಿರುವುದು ಕೂಡಾ ಗಮನಾರ್ಹ.
ಪಾಕ್‌ನ ಈ ಹೇಳಿಕೆ ಬಗ್ಗೆ ಭಾರತದ ಕಡೆಯಿಂದ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೆ ಹೆಸರು ಬಹಿರಂಗಕ್ಕೆ ನಿರಾಕರಿಸಿರುವ ಭದ್ರತಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ‘ಪಾಕ್ ಸೇನಾ ಮುಖ್ಯಸ್ಥರ ವರ್ತನೆಯಲ್ಲಿನ ಈ ದಿಢೀರ್ ಬದಲಾವಣೆಗೆ ಕಾರಣ ಏನು ಎಂಬುದನ್ನು ತಕ್ಷಣಕ್ಕೆ ಹೇಳಲಾಗದು. ಇದು ಕೇವಲ ಹಾರಿಕೆಯ ಮಾತೇ ಅಥವಾ ಶಾಂತಿಯು ಪ್ರಸ್ತಾಪದ ಕುರಿತು ಇನ್ನಷ್ಟುಸಂದೇಶಗಳು ರವಾನೆಯಾಗಲಿವೆಯೇ ಎಂಬುದನ್ನು ಕಾದುನೋಡಬೇಕು. ಏನೇ ಆದರೂ ಕೇವಲ ಬಾಯಿ ಮಾತಿನಿಂದ ಏನೂ ಆಗದು. ಶಾಂತಿಯ ಕುರಿತ ತನ್ನಮಾತನ್ನು ಪಾಕಿಸ್ತಾನದ ಜಾರಿಗೆ ತಂದಾಗ ಮಾತ್ರವೇ ಅದನ್ನು ನಂಬಬಹುದು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ