ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ: ಮತ್ತೆ ಮಿಲಿಟರಿ ಆಡಳಿತ ಜಾರಿ!

By Suvarna News  |  First Published Feb 2, 2021, 10:38 AM IST

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ: ಮತ್ತೆ ಮಿಲಿಟರಿ ಆಡಳಿತ ಜಾರಿ| ಸೇನೆಯ ಕೃತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ| ಸೇನೆಯ ಆಡಳಿತ ಹಿಂಪಡೆಯದಿದ್ದರೆ ಕಠಿಣ ಕ್ರಮ: ಅಮೆರಿಕ


ನಯಾಪಿದಾವ್(ಫೆ.02):: ದಿಢೀರ್‌ ಬೆಳವಣಿಗೆಯೊಂದರಲ್ಲಿ ಪ್ರಜೆಗಳಿಂದ ಆಯ್ಕೆಯಾಗಿದ್ದ ‘ಮ್ಯಾನ್ಮಾರ್‌’ ಸರ್ಕಾರದ ವಿರುದ್ಧವೇ ಸೇನೆ ದಂಗೆಯೆದ್ದಿದೆ. ಕೊರೋನಾ ಬಿಕ್ಕಟ್ಟು, ಚುನಾವಣಾ ಅಕ್ರಮದ ಕಾರಣಗಳನ್ನು ಮುಂದಿಟ್ಟು ಸಂವಿಧಾನದ 417 ಅನುಚ್ಛೇದದ ಅಡಿ ತುರ್ತು ಪರಿಸ್ಥಿತಿ ಹೇರಲಾಗಿದ್ದು, ಮುಂದಿನ ಒಂದು ವರ್ಷದ ಅವಧಿವರೆಗೆ ದೇಶದಲ್ಲಿ ಮಿಲಿಟರಿ ಆಡಳಿತ ಇರಲಿದೆ ಎಂದು ತನ್ನದೇ ಒಡೆತನದ ಮಾಧ್ಯಮ ‘ಮ್ಯಾವಾಡಿ ಟೀವಿ’ ಮೂಲಕ ಸೇನೆ ಘೋಷಣೆ ಮಾಡಿದೆ. ಮ್ಯಾನ್ಮಾರ್‌ ಸೇನೆಯ ಈ ಕೃತ್ಯದ ಹಿಂದೆ ಚೀನಾ ಕೈವಾಡವಿದೆ ಎಂದು ಹೇಳಲಾಗಿದೆ.

ಮ್ಯಾನ್ಮಾರ್‌ ಪ್ರಜಾಪ್ರಭುತ್ವಕ್ಕಾಗಿ ಹಲವು ವರ್ಷಗಳ ಕಾಲ ಹೋರಾಡಿ ಬಂಧನಕ್ಕೂ ಒಳಗಾಗಿ ಕೊನೆಗೆ ನೊಬೆಲ್‌ ಪುರಸ್ಕಾರಕ್ಕೆ ಭಾಜನರಾದ ಮ್ಯಾನ್ಮಾರ್‌ನ ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಪಕ್ಷದ ನಾಯಕಿ ಆಂಗ್‌ ಸ್ಯಾನ್‌ ಸುಕಿ ಸೇರಿದಂತೆ ಇನ್ನಿತರ ನಾಯಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಗೃಹಬಂಧನದಲ್ಲಿಡಲಾಗಿದೆ. ರಾಜಧಾನಿ ನಯಾಪಿದಾವ್‌ನಲ್ಲಿ ಮೊಬೈಲ್‌ ಫೋನ್‌ ಹಾಗೂ ಇಂಟರ್ನೆಟ್‌ ಸೇವೆಯನ್ನು ತಡೆಹಿಡಿಯಲಾಗಿದೆ.

Tap to resize

Latest Videos

ಸೇನೆಯ ಈ ದಂಗೆಯನ್ನು ಜನ ವಿರೋಧಿಸಬೇಕು. ಸೇನೆಯ ಈ ಕೃತ್ಯವು ಅಸಮರ್ಥನೀಯ, ಸಂವಿಧಾನ ಮತ್ತು ಮತದಾರರ ತೀರ್ಪಿಗೆ ವಿರುದ್ಧವಾದದ್ದು ಎಂದು ನ್ಯಾಷನಲ್‌ ಲೀಗ್‌ ಫಾರ್‌ ಡೆಮಾಕ್ರಸಿ ಫೇಸ್‌ಬುಕ್‌ ಮೂಲಕ ಹೇಳಿಕೆ ನೀಡಿದೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕ ಹಾಗೂ ಆಸ್ಪ್ರೇಲಿಯಾ ಸೇರಿದಂತೆ ಇನ್ನಿತರ ಸರ್ಕಾರಗಳು, ದೇಶದ ಕಾನೂನುಗಳಿಗೆ ಗೌರವ ನೀಡುವಂತೆ ಸೂಚನೆ ನೀಡಿವೆ.

ಈ ಘಟನೆ ಬೆನ್ನಲ್ಲೇ ಸೋಮವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕ ಸರ್ಕಾರ, ಪ್ರಜಾಪ್ರಭುತ್ವಕ್ಕೆ ವಿರೋಧಿಯಾಗಿ ನಡೆಯುವ ಯಾವುದೇ ಚಟುವಟಿಕೆಯನ್ನು ನಾವು ವಿರೋಧಿಸುತ್ತೇವೆ. ಪ್ರಜಾಪ್ರಭುತ್ವದಿಂದ ಆಯ್ಕೆಯಾಗಿರುವ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸದೇ ಇದ್ದರೆ, ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

click me!