20 ವರ್ಷ ಬಳಿಕ ಆಫ್ಘಾನಿಸ್ತಾನ ಮತ್ತೆ ತಾಲಿಬಾನ್‌ ಉಗ್ರರ ವಶ!

By Suvarna News  |  First Published Aug 16, 2021, 7:38 AM IST

* 20 ವರ್ಷ ಬಳಿಕ ಆಷ್ಘಾನಿಸ್ತಾನ ಮತ್ತೆ ತಾಲಿಬಾನ್‌ ಉಗ್ರರ ವಶ

* ರಾಜಧಾನಿ ಕಾಬೂಲ್‌ಗೆ ಉಗ್ರರ ಲಗ್ಗೆ

* ಅಧ್ಯಕ್ಷ ಅಶ್ರಫ್‌ ಘನಿ ತಜಿಕಿಸ್ತಾನಕ್ಕೆ ಪಲಾಯನ


ಕಾಬೂಲ್‌(ಆ.16): ಅಮೆರಿಕ ತನ್ನ ಸೇನೆ ಹಿಂದಕ್ಕೆ ಪಡೆದರೆ ಆಷ್ಘಾನಿಸ್ತಾನದಲ್ಲಿ ಏನಾಗಬಹುದೆಂಬ ಆತಂಕ ಇತ್ತೋ ಅದು ನಿರೀಕ್ಷೆಗೂ ಮೊದಲೇ ನಿಜವಾಗಿದೆ. ಸತತ 2 ದಶಕಗಳ ಕಾಲ ಅಮೆರಿಕ ಮತ್ತು ನ್ಯಾಟೋ ಪಡೆಗಳನ್ನೇ ಕಂಗೆಡಿಸಿದ್ದ ತಾಲಿಬಾನ್‌ ಉಗ್ರರು ಭಾನುವಾರ ರಾಜಧಾನಿ ಕಾಬೂಲ್‌ ಅನ್ನು ವಶಪಡಿಸಿಕೊಳ್ಳುವ ಮೂಲಕ ಅಕ್ಷರಶಃ ಇಡೀ ದೇಶವನ್ನೇ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ 2 ದಶಕಗಳ ಬಳಿಕ ದೇಶ ಮತ್ತೆ ಕ್ರೂರಿಗಳ ಕೈವಶವಾಗಿದೆ.

ಕಳೆದೊಂದು ತಿಂಗಳಿನಿಂದ ದೇಶದ ಒಂದೊಂದೇ ಪ್ರದೇಶಗಳನ್ನು ತೆಕ್ಕೆಗೆ ತೆಗೆದುಕೊಳ್ಳುತ್ತಾ ಬಂದಿದ್ದ ತಾಲಿಬಾನ್‌ ಉಗ್ರರು, ಭಾನುವಾರ ಕಾಬೂಲ್‌ ವ್ಯಾಪ್ತಿಯ ಮೂರು ಜಿಲ್ಲೆಗಳನ್ನು ವಶಪಡಿಸಿಕೊಂಡರು. ಅದರ ಬೆನ್ನಲ್ಲೇ ಶಾಂತಿಯುತವಾಗಿ, ಬೇಷರತ್‌ ಅಧಿಕಾರ ಹಸ್ತಾಂತರಕ್ಕೆ ಸರ್ಕಾರಕ್ಕೆ ಸೂಚಿಸಿದ ಉಗ್ರರು, ಅರಮನೆ ಪ್ರವೇಶಿಸಿ ಸಂಧಾನ ಮಾತುಕತೆ ನಡೆಸಿದರು. ಅದಾದ ಕೆಲ ಹೊತ್ತಿನಲ್ಲೇ ಅಧ್ಯಕ್ಷ ಅಶ್ರಫ್‌ ಘನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಹಸ್ಯವಾಗಿ ನೆರೆಯ ತಜಿಕಿಸ್ತಾನಕ್ಕೆ ಪಲಾಯನ ಮಾಡಿದರು. ಅಧ್ಯಕ್ಷರ ಪಲಾಯನದ ಬೆನ್ನಲ್ಲೇ ಉಗ್ರರು ನಗರದ ಮತ್ತಷ್ಟುಒಳಪ್ರದೇಶಗಳನ್ನು ಹೊಕ್ಕಿದ್ದಾರೆ.

Tap to resize

Latest Videos

undefined

ಆಷ್ಘಾನಿಸ್ತಾನದ ಈ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅಮೆರಿಕ, ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳು ಕಾಬೂಲ್‌ನಲ್ಲಿರುವ ತಮ್ಮ ನಾಗರಿಕರು ಮತ್ತು ದೂತಾವಾಸ ಸಿಬ್ಬಂದಿಯನ್ನು ತವರಿಗೆ ಕರೆಸಿಕೊಳ್ಳಲು ಹರಸಾಹಸ ಆರಂಭಿಸಿವೆ. ಆದರೆ ಕಾಬೂಲ್‌ನ ಒಂದು ಏರ್‌ಪೋರ್ಟ್‌ ಮಾತ್ರವೇ ಬಳಕೆಗೆ ಲಭ್ಯವಿರುವ ಕಾರಣ ಅಲ್ಲಿಂದಲೇ ನೂರಾರು ವಿಮಾನ, ಕಾಪ್ಟರ್‌ಗಳು ಸಂಚಾರ ನಡೆಸಿದ್ದು, ನಿಲ್ದಾಣಕ್ಕೆ ಬಂದಿಳಿಯಲು ಹಲವು ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಕಮಾಂಡರ್‌ ಘನಿಗೆ ಅಧ್ಯಕ್ಷ ಹುದ್ದೆ:

ಆಷ್ಘಾನಿಸ್ತಾನದ ಮಾಜಿ ಸಚಿವ ಅಲಿ ಅಹಮದ್‌ ಜಲಾಲಿ ನೇತೃತ್ವದಲ್ಲಿ ದೇಶದಲ್ಲಿ ಹೊಸ ಮಧ್ಯಂತರ ಸರ್ಕಾರ ರಚನೆಯಾಗಬಹುದು ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ತಾಲಿಬಾನ್‌ನ ಕಮಾಂಡರ್‌ ಮುಲ್ಲಾ ಅಬ್ದುಲ್‌ ಘನಿ ಬರದರ್‌ಗೆ ಅಧ್ಯಕ್ಷ ಪಟ್ಟಕಟ್ಟಲಾಗುತ್ತದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ದೇಶದಲ್ಲಿ ಭಾರಿ ಆತಂಕ:

ಉಗ್ರರ ಕರಾಳ ಆಡಳಿತದ ಇತಿಹಾಸ ನೆನಪಿರುವ ಹಿನ್ನೆಲೆಯಲ್ಲಿ ಸಾವಿರಾರು ಜನರು ಭಾನುವಾರ ಬೆಳಗ್ಗೆಯಿಂದಲೇ ಕಾಬೂಲ್‌ ನಗರ ತೊರೆಯಲು, ನಗರದ ಗಡಿ ಪ್ರದೇಶಗಳತ್ತ ದೌಡಾಯಿಸಿದರು. ಸಾವಿರಾರು ಜನರು ಉಳಿಸಿದ್ದಷ್ಟುಹಣವನ್ನು ಎಟಿಎಂಗಳಿಂದ ತೆಗೆದುಕೊಳ್ಳಲು ಸರದಿಯಲ್ಲಿ ನಿಂತಿದ್ದ ದೃಶ್ಯ ಹಲವೆಡೆ ಕಂಡುಬಂತು. ಇನ್ನೊಂದೆಡೆ ಅಮೆರಿಕದ ದೂತಾವಾಸ ಕಚೇರಿಯು, ಹಲವು ರಹಸ್ಯ ದಾಖಲೆಗಳನ್ನು ತನ್ನ ಕಾಂಪೌಡ್‌ನಲ್ಲಿ ಸುಟ್ಟುಹಾಕಿದ ಪರಿಣಾಮ, ಕಾಂಪೌಂಡ್‌ನಿಂದ ದಟ್ಟಹೊಗೆ ಎದ್ದಿದ್ದು ಕಂಡುಬಂತು. ಜೊತೆಗೆ ಅಮೆರಿಕ ತನ್ನ ದೂತಾವಾಸ ಕಚೇರಿಯನ್ನು ವಿಮಾನ ನಿಲ್ದಾಣಕ್ಕೆ ವರ್ಗಾಯಿಸುವ ಮೂಲಕ ಯಾವುದೇ ಕ್ಷಣದಲ್ಲಿ ದೇಶ ತೊರೆಯುವ ಸುಳಿವು ನೀಡಿದೆ.

2 ದಶಕಗಳ ವಿಫಲ ಸಾಹಸ:

2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕಟ್ಟಡದ ದಾಳಿಯ ಹಿನ್ನೆಲೆಯಲ್ಲಿ, ಉಗ್ರರನ್ನು ಮಟ್ಟಹಾಕಲು ಅಮೆರಿಕ ಆಷ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ಸಾವಿರಾರು ಉಗ್ರರನ್ನು ಹತ್ಯೆ ಮಾಡಿತ್ತು. ತದನಂತರ ಸುಮಾರು 2 ದಶಕಗಳ ಕಾಲ ಅದು ತನ್ನ ಸಾವಿರಾರು ಸೈನಿಕರನ್ನು ಆಷ್ಘಾನಿಸ್ತಾನದಲ್ಲೇ ಇಟ್ಟು ದೇಶದಲ್ಲಿ ಶಾಂತಿ ಮರುಸ್ಥಾಪನೆಯ ಯತ್ನ ಮಾಡಿತ್ತು. ಇದಕ್ಕೆ ನ್ಯಾಟೋ ಪಡೆಗಳು ನೆರವು ನೀಡಿದ್ದವು. ಆದರೆ ನೂತನ ಅಧ್ಯಕ್ಷ ಜೈ ಬೈಡೆನ್‌, ತಮ್ಮ ಚುನಾವಣಾ ಪ್ರಚಾರದ ಭರವಸೆಯಿಂದ ಮೇ1-ಸೆ.11ರ ಅವಧಿಯಲ್ಲಿ ಆಷ್ಘಾನಿಸ್ತಾನದಿಂದ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಕರೆಸಿಕೊಳ್ಳುವ ನಿರ್ಧಾರ ಘೋಷಿಸಿದ್ದರು. ಅದರಂತೆ ಹಂತಹಂತವಾಗಿ ಕಳೆದ ಕೆಲ ತಿಂಗಳನಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಆರಂಭಿಸಿತ್ತು.

ಉಗ್ರರ ಪ್ರಾಬಲ್ಯ:

ಅದಾದ ಬೆನ್ನಲ್ಲೇ ತೆರೆಮರೆಯಲ್ಲಿದ್ದ ತಾಲಿಬಾನ್‌ ಉಗ್ರರು ಮತ್ತೆ ಒಗ್ಗೂಡಿ ದೇಶದ ಒಂದೊಂದೇ ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ಆರಂಭಿಸಿದ್ದರು. ಹೀಗಾಗಿ ಮುಂದಿನ 6 ತಿಂಗಳಲ್ಲಿ ದೇಶ ಮತ್ತೆ ತಾಲಿಬಾನ್‌ ಉಗ್ರರ ಕೈವಶವಾಗಬಹುದು ಎಂದೆಣಿಸಲಾಗಿತ್ತು. ಆದರೆ ಆಫ್ಘನ್‌ ಸೇನೆಯನ್ನು ಪೂರ್ಣ ಪ್ರಮಾಣದಲ್ಲಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಉಗ್ರರು, ಕೇವಲ ತಿಂಗಳಲ್ಲೇ ದೇಶವನ್ನು ಮತ್ತೆ ತಮ್ಮ ವಶಕ್ಕೆ ಪಡೆಯುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 2 ದಶಕಗಳ ಕಾಲ ಅಮೆರಿಕ ಸೇನೆಯಿಂದ ತರಬೇತಿ ಪಡೆದ ಹೊರತಾಗಿಯೂ, ಅಮೆರಿಕ ಸೇನೆಯಿಂದ ನಾನಾ ರೀತಿಯ ಶಸ್ತ್ರಾಸ್ತ್ರ ನೆರವು ಪಡೆದ ಹೊರತಾಗಿಯೂ ಇಷ್ಟುಸುಲಭವಾಗಿ ಆಫ್ಘನ್‌ ಸೇನೆ ಸೋತು ಸುಣ್ಣವಾಗಿದ್ದು ಕೂಡಾ ಅಚ್ಚರಿ ಮೂಡಿಸಿದೆ.

ಆಫ್ಘನ್‌ನಲ್ಲಿ ಆಗಿದ್ದೇನು?

2001ರಲ್ಲಿ ಅಮೆರಿಕದ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ ನಂತರ ಅವರ ಹುಟ್ಟಡಗಿಸಲು ಅಮೆರಿಕವು ಅಷ್ಘಾನಿಸ್ತಾನಕ್ಕೆ ತನ್ನ ಸೇನೆ ಕಳುಹಿಸಿತ್ತು. ಕ್ರಮೇಣ ಅಲ್ಲಿದ್ದ ತಾಲಿಬಾನ್‌ ಉಗ್ರರ ಆಡಳಿತವನ್ನು ಅಂತ್ಯಗೊಳಿಸಿ ಪ್ರಜಾಪ್ರಭುತ್ವ ಸ್ಥಾಪಿಸಲು ನೆರವು ನೀಡಿತ್ತು. ಸತತ 20 ವರ್ಷ ಅಮೆರಿಕ ಸೇನೆ ಕಾರ್ಯಾಚರಣೆ ನಡೆಸಿದರೂ ಉಗ್ರರ ನಿರ್ನಾಮ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕ ಈ ವರ್ಷ ತನ್ನ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಕರೆಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದೆ ಆ ಬಗ್ಗೆ ಘೋಷಣೆ ಮಾಡಿದ ಬೆನ್ನಲ್ಲೇ ತಾಲಿಬಾನ್‌ ಉಗ್ರರು ಮತ್ತೆ ಚಿಗಿತುಕೊಂಡು, ಆಫ್ಘನ್‌ನ ಒಂದೊಂದೇ ಪ್ರಾಂತ್ಯ ವಶಪಡಿಸಿಕೊಂಡು, ಈಗ ಇಡೀ ದೇಶವನ್ನು ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಮುಂದೇನಾಗಲಿದೆ?

ಅಷ್ಘಾನಿಸ್ತಾನದ ಹಾಲಿ ಅಧ್ಯಕ್ಷ ಅಶ್ರಫ್‌ ಘನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಪಕ್ಕದ ತಜಿಕಿಸ್ತಾನಕ್ಕೆ ವಿಮಾನದಲ್ಲಿ ಪಲಾಯನ ಮಾಡಿದ್ದಾರೆ. ಹೀಗಾಗಿ ದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಸಾಧ್ಯತೆ ಇದೆ. ಇಲ್ಲದೇ ಹೋದಲ್ಲಿ ತಾಲಿಬಾನ್‌ ಉಗ್ರರ ಕಮಾಂಡರ್‌ ಮುಲ್ಲಾ ಅಬ್ದುಲ್‌ ಘನಿ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಹೊಸ ಸರ್ಕಾರ ರಚನೆಯಾಗಬಹುದು. ಈ ಸರ್ಕಾರಕ್ಕೆ ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಮಾನ್ಯತೆ ನೀಡುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ.

click me!