
ಯುವತಿಯರು ಹೈ ಹೀಲ್ ಧರಿಸಿ ಡಿಸೈನರ್ ಬಟ್ಟೆಗಳನ್ನು ಧರಿಸಿ ಸೌಂದರ್ಯ ಸ್ಪರ್ಧೆಗಳಲ್ಲಿ ಕ್ಯಾಟ್‌ವಾಕ್ ಮಾಡುವುದನ್ನು ನೋಡಬಹುದು. ಆದರೆ ಪ್ರಾಣಿಗಳಿಗೆ ಅದರಲ್ಲೂ ಎಮ್ಮೆಗಳಿಗಾಗಿ ಸೌಂದರ್ಯ ಸ್ಪರ್ಧೆ ಏರ್ಪಡಿಸುವುದನ್ನು ನೀವು ಎಲ್ಲಾದರು ಕೇಳಿದ್ದೀರಾ? ಇಲ್ಲೊಂದು ಕಡೆ ಎಮ್ಮೆಗಳಿಗೂ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇಲ್ಲಿ ಎಮ್ಮೆಗಳಿಗೆ ವಿವಿಧ ಸ್ಪರ್ಧೆಯನ್ನು ಏರ್ಪಡಿಸಿ ಕೆಲವು ಮಾನದಂಡಗಳ ಮೂಲಕ ವಿಜಯಶಾಲಿಯನ್ನು ಆಯ್ಕೆ ಮಾಡಲಾಗುತ್ತದೆ. ಇದೊಂದು ರೀತಿ ಕರಾವಳಿಯಲ್ಲಿ ಕಾಣ ಸಿಗುವ ಕಂಬಳದಂತೆಯೇ. ಅಲ್ಲಿ ಕೋಣಗಳನ್ನು ಕಂಬಳದ ಹೊಲದಲ್ಲಿ ಓಡಿಸಿದರೆ ಇಲ್ಲಿ ಎಮ್ಮೆಗಳನ್ನು ಸೊಗಸಾಗಿ ಅಲಂಕಾರ ಮಾಡಿ ಹಲವು ಸ್ಪರ್ಧೆಗಳನ್ನು ಮಾಡಲಾಗುತ್ತದೆ. ಹಾಗಂತ ಈ ಸ್ಪರ್ಧೆ ನಡೆಯುತ್ತಿರುವುದು ಭಾರತದಲ್ಲಿ ಎಂದು ಭಾವಿಸಿದರೆ ನಿಮ್ಮ ಊಹೆ ತಪ್ಪು, ಇದು ಏಷ್ಯಾ ಖಂಡದ ಮತ್ತೊಂದು ದೇಶವಾಗಿರುವ ಥೈಲ್ಯಾಂಡ್‌ನಲ್ಲಿ.
ಜನ ಥೈಲ್ಯಾಂಡ್‌ಗೆ ಅದರಲ್ಲೂ ಅದರ ರಾಜಧಾನಿ ಬ್ಯಾಂಕಾಕ್‌ಗೆ ಹೆಚ್ಚಾಗಿ ಪ್ರವಾಸ ಹೋಗ್ತಿರ್ತಾರೆ. ಆದರೆ ಈ ಎಮ್ಮೆಗಳ ಸೌಂದರ್ಯ ಸ್ಪರ್ಧೆ ನಡೆಯುವುದು ಬ್ಯಾಕಾಂಕ್‌ನಿಂದ ಕೆಲವೇ ಕೆಲವು ಕಿಲೋ ಮೀಟರ್ ದೂರ ಇರುವ ಚೋನ್‌ಬುರಿಯಲ್ಲಿ. ಈ ಹಬ್ಬವನ್ನು ಅಲ್ಲಿ11 ನೇ ಚಾಂದ್ರಮಾನ ಮಾಸದ ಕೊನೆಯಲ್ಲಿ ನಡೆಸಲಾಗುತ್ತದೆ. ಒಂದು ಕಾಲದಲ್ಲಿ ಥಾಯ್ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಎಮ್ಮೆಗಳ ಮೇಲಿನ ಜನರ ಪ್ರೀತಿ ಹಾಗೂ ಗೌರವದ ಕಾರಣಕ್ಕೆ ಈ ಹಬ್ಬವನ್ನು ಏರ್ಪಡಿಸಲಾಗುತ್ತದೆ. ಇಂದು ಎಮ್ಮೆಗಳ ಜಾಗವನ್ನು ಟ್ರ್ಯಾಕ್ಟರ್ ಟಿಲ್ಲರ್‌ನಂತಹ ಯಂತ್ರೋಪಕರಣಗಳು ಆವರಿಸಿದ್ದು, ಕೃಷಿಯಲ್ಲಿ ಅವುಗಳ ಬಳಕೆ ಇಳಿಕೆಯಾಗಿದೆ. ಹೀಗಾಗಿ ಎಮ್ಮೆಗಳ ಗತವೈಭವವನ್ನು ನೆನಪು ಮಾಡುವುದಕ್ಕಾಗಿ ಈ ಸೌಂದರ್ಯ ಸ್ಪರ್ಧೆಯನ್ನು ಅಲ್ಲಿ ಆಯೋಜಿಸಲಾಗಿದ್ದು, ಆಕ್ಟೋಬರ್ 6 ರಂದು ಈ ಕಾರ್ಯಕ್ರಮ ನಡೆಯಿತು.
ಥೈಲ್ಯಾಂಡ್ ಕೃಷಿಯ ಬೆನ್ನೆಲುಬಾಗಿದ್ದ ಎಮ್ಮೆಗಳಿಗೆ ಗೌರವ
ವಾಟರ್ ಬಫೆಲೋ ರೇಸಿಂಗ್ ಉತ್ಸವ ಎಂದು ಕರೆಯಲ್ಪಡುವ ಈ ಹಬ್ಬದಲ್ಲಿ ಮಾಲೀಕರು ತಮ್ಮ ಹೆಮ್ಮೆಯ ಎಮ್ಮೆಗಳನ್ನು ಕರೆತಂದು ಪ್ರದರ್ಶಿಸುತ್ತಾರೆ.. ಶಾಲಾ ಮಕ್ಕಳು ಸಾಂಪ್ರದಾಯಿಕ ನೃತ್ಯ ಮಾಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ತಲೆಮಾರುಗಳಿಂದ, ವಾಟರ್ ಬಫೆಲೋ ಅಥವಾ ಈ ನೀರೆಮ್ಮೆಗಳು ಥಾಯ್ ಕೃಷಿಯ ಬೆನ್ನೆಲುಬಾಗಿದ್ದವು, ಭತ್ತದ ಗದ್ದೆಗಳನ್ನು ಉಳುಮೆ ಮಾಡುತ್ತಿದ್ದವು ಮತ್ತು ಕೆಸರುಮಯ ಹೊಲಗಳಲ್ಲಿ ಉತ್ಪನ್ನಗಳನ್ನು ಸಾಗಿಸುತ್ತಿದ್ದವು. ಆದರೆ ಅವುಗಳ ಬದಲಿಗೆ ಟ್ರ್ಯಾಕ್ಟರ್‌ಗಳು ಯಂತ್ರೋಪಕರಣಗಳನ್ನು ಬಳಸಲು ಆರಂಭಿಸಿದಾಗ ಪ್ರಾಣಿಗಳ ಪ್ರಾಮುಖ್ಯತೆ ಕ್ಷೀಣಿಸಿತು ಮತ್ತು ಅನೇಕ ಪ್ರಾಣಿಗಳು ಮಾಂಸಕ್ಕಾಗಿ ಮಾರಾಟವಾದವು. ಆದರೆ ಚೋನ್‌ಬುರಿಯಲ್ಲಿ ನಡೆದ ಈ ಹಬ್ಬ ಅವುಗಳಿಗೆ ಹೊಸ ಉದ್ದೇಶವನ್ನು ನೀಡಿವೆ, ಅವುಗಳನ್ನು ಶ್ರಮದ ಸಾಧನ ಎಂದು ನೋಡುವ ಬದಲು ಹೆಮ್ಮೆಯ ಸಂಕೇತಗಳಾಗಿ ಪರಿವರ್ತಿಸಿವೆ.
ಥಾಯ್ ಸರ್ಕಾರವು 2017 ರಲ್ಲಿ ಬಫಲೋ ಸಂರಕ್ಷಣಾ ದಿನವನ್ನು ಸ್ಥಾಪಿಸಿತು ಮತ್ತು ಅಂದಿನಿಂದ ಸಂತಾನೋತ್ಪತ್ತಿ ಮತ್ತು ಆರೈಕೆ ಕಾರ್ಯಕ್ರಮಗಳನ್ನು ಸರ್ಕಾರ ಪ್ರೋತ್ಸಾಹಿಸಿದೆ. ರೈತರು ಈಗ ಆರೈಕೆ, ಪೋಷಣೆ ಮತ್ತು ಪ್ರಸ್ತುತಿಯ ಬಗ್ಗೆ ಮಾರ್ಗದರ್ಶನವನ್ನು ಪಡೆಯುತ್ತಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎಮ್ಮೆಗಳನ್ನು ಅವವುಗಳ ಮೈಕಟ್ಟು, ಕೊಂಬಿನ ಸಮ್ಮಿತಿ ಮತ್ತು ಗೊರಸಿನ ಮೃದುತ್ವವನ್ನು ಗಮನಿಸಿ ಆಯ್ಕೆ ಮಾಡಲಾಗುತ್ತದೆ. ಹಾಗೆಯೇ ಇಲ್ಲಿ ಮಣ್ಣಿನ ರಸ್ತೆಯಲ್ಲಿ ಎಮ್ಮೆಗಳಿಗೆ ನೂರು ಮೀಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತದೆ. ಎಮ್ಮೆಯ ಮೇಲೆ ಅದರ ಜಾಕಿ ಕುಳಿತಿರುತ್ತಾನೆ. ಪ್ರತಿಷ್ಠೆ ಲಾಭದ ಆಶಯದೊಂದಿಗೆ ಈಗ ಮಾಲೀಕರು ತಮ್ಮ ಪ್ರಾಣಿಗಳನ್ನು ಈ ಸ್ಪರ್ಧೆಗಾಗಿ ಸೊಗಸಾಗಿ ರೆಡಿ ಮಾಡ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ